ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ -ರಾಘವೇಂದ್ರ ಎಸ್. ಮಡಿವಾಳ

Source: sonews | By Staff Correspondent | Published on 11th November 2019, 12:20 AM | Coastal News | Special Report | Islam | Don't Miss |

 “ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿರುವ ಓರ್ವ ಅತ್ಯುನ್ನತ ವ್ಯಕ್ತಿಯ ಜೀವನದ ಉತ್ತಮ ಅಂಶಗಳನ್ನು ತಿಳಿಯಬಯಸಿದ್ದೆ. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟಿದ್ದು ಖಡ್ಗವಲ್ಲ. ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ಕಪಟರಹಿತ ಮನೋಭಾವ, ವಾಗ್ದಾನಗಳ ಕುರಿತು ಅತ್ಯಂತ ನಿಷ್ಠೆ, ತನ್ನ ಸ್ನೇಹಿತರು ಮತ್ತು ಸಹಾನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಸತ್ಯ ಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಈ ಗುಣಗಳೇ ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ಸೋಲಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ”. ಮಹಾತ್ಮಾ ಗಾಂಧೀಜಿಯವರು 1924ರಲ್ಲಿ “ಯಂಗ್ ಇಂಡಿಯಾ” ಪತ್ರಿಕೆಯಲ್ಲಿ ಸೃಷ್ಠಿಕರ್ತನಾದ ಅಂತಿಮ ಪ್ರವಾದಿ ಮುಹಮ್ಮದ್‍ರನ್ನು ಕುರಿತು ಈ ಮೇಲಿನಂತೆ ಉಲ್ಲೇಖಿಸಿರುವುದು, ಪ್ರಜಾಪ್ರಭುತ್ವದ ಶ್ರೇಷ್ಠ ಅಂಶಗಳಲ್ಲೊಂದಾದ ಸಮಾನತೆಯ ಕುರಿತಾಗಿ ಪ್ರವಾದಿಯವರಿಗಿದ್ದ ನೋಟವನ್ನು ಸಾಕ್ಷೀಕರಿಸುತ್ತದೆ.

ಬಹುತೇಕ ಇಸ್ಲಾಮೀ ಇತಿಹಾಸಕಾರರು “ವರ್ಗ, ವರ್ಣ, ಜನಾಂಗೀಯ ಆಧಾರಿತ ಮಾನವರ ವಿಭಜನೆಯನ್ನು ನಿರ್ಮೂಲಗೊಳಿಸಿದುದು ಇಸ್ಲಾಮಿನ ಶ್ರೇಷ್ಠ ಸಾಧನೆಗಳಲ್ಲೊಂದಾಗಿದೆ” ಎಂಬುದನ್ನು ಒಪ್ಪುತ್ತಾರೆ. ಈ ಕಾರಣದಿಂದಾಗಿಯೇ ಸಮಾಜದ ದುರ್ಬಲ ವರ್ಗ ಇಸ್ಲಾಮಿನೆಡೆಗೆ ವಿಶೇಷವಾಗಿ ಆಕರ್ಷಿತವಾಯಿತು. ಉನ್ನತ ಸ್ಥಾನ ಮಾನವನ್ನು ಗಳಿಸುವಲ್ಲಿಯೂ ಸಫಲವಾಯಿತು. ಈ ಸಫಲತೆಗೆ ಮುಖ್ಯ ಬುನಾದಿಯೇ ಪ್ರವಾದಿ ಮುಹಮ್ಮದ್(ಸ)ರು ಬೋಧಿಸಿದ ‘ಸಮಾನತೆ’ ಎಂಬ ತತ್ವ ಎಂಬ ಮಾತಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
 

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗೆ ಅರಬ್ಬರು ‘ಸೀರತ್’ ಎಂದು ಕರೆಯುತ್ತಾರೆ. ಆದರೆ ಮುಸ್ಲಿಂ ವಿದ್ವಾಂಸರು ಹೆಚ್ಚಾಗಿ ಪ್ರವಾದಿ(ಸ)ಯವರ ಜೀವನ ಚರಿತ್ರೆಗೆ ಮಾತ್ರ ‘ಸೀರತ್’ ಪದವನ್ನು ಬಳಸುತ್ತಾರೆ. ‘ಸೀರತ್’ ಪದದ ಅರ್ಥ ‘ಪಯಣ’ ಎಂದಾಗಿದೆ. ಅಂದರೆ ನಾವು ಅವರ ಜೀವನ ಚರಿತ್ರೆಯ ಅಧ್ಯಯನ ನಡೆಸುವಾಗ ಪ್ರವಾದಿ(ಸ)ಯವರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ ಅವರು ನಡೆಸಿದಂತಹ ಪಯಣವನ್ನೇ ಆದರ್ಶವಾಗಿಟ್ಟುಕೊಂಡು ನಮ್ಮ ಜೀವನದ ಪಯಣ ಸಾಗಿಸಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ನಮ್ಮ ಜೀವನದ ಪಯಣ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ.

ಪ್ರವಾದಿ ಮುಹಮ್ಮದ್(ಸ)ರ ಸಂದೇಶ : ಪ್ರವಾದಿ ಮುಹಮ್ಮದ್‍ರು ‘ಇಸ್ಲಾಮ್’ ಎಂಬ ಹೊಸ ಧರ್ಮವನ್ನೇನೂ ಸ್ಥಾಪಿಸಲಿಲ್ಲ. ಇಸ್ಲಾಮ್ ಎನ್ನುವುದು ಅರಬ್ಬೀ ಭಾಷೆಯ ಪದವಾಗಿದ್ದು ಇದರರ್ಥವು ‘ಶರಣಾಗತಿ’ ಹಾಗೂ ‘ದೇವನಿಗೆ ವಿಧೇಯರಾಗಿರುವುದು’ ಎಂದಾಗುತ್ತದೆ. ಪ್ರವಾದಿ ಮುಹಮ್ಮದ್‍ರು ಶರಣಾಗತಿಯ ಮತ್ತು ದೇವನಿಗೆ ವಿಧೇಯತೆಯ ಸಂದೇಶಕ್ಕೆ ಕೇವಲ ಮರುಜೀವವನ್ನಷ್ಟೇ ನೀಡಿದ್ದಾರೆ ಹೊರತಾಗಿ ಹೊಸ ಸಂದೇಶವೇನೂ ಬೋಧಿಸಲಿಲ್ಲ. 

ಸಮಾನತೆ ; ಇಸ್ಲಾಮ್ ಸಮಾನತೆಯನ್ನು ಬೋಧಿಸುವ ಧರ್ಮವಾಗಿದೆ. ಉಚ್ಛ-ನೀಚವೆಂಬ ಬೇಧ ಇಸ್ಲಾಮಿನಲ್ಲಿಲ್ಲ. ಬಡವ-ಬಲ್ಲಿದ, ಕರಿಯ-ಬಿಳಿಯ ಎಂಬ ಬೇಧವೂ ಇಲ್ಲ. ಮನುಷ್ಯರೆಲ್ಲರೂ ಆದಮನ ಮಕ್ಕಳು ಎಂದು ಇಸ್ಲಾಮ್ ಹೇಳುತ್ತದೆ. ಆರಾಧನಾ ಕರ್ಮಗಳಲ್ಲಾಗಲೀ, ವ್ಯಾವಹಾರಿಕ ರಂಗಗಳಲ್ಲಾಗಲೀ ಅಥವಾ ಶಿಕ್ಷಾನಿಯಮಗಳಲ್ಲಾಗಲೀ ಇಸ್ಲಾಮ್ ಯಾರ ಮಧ್ಯೆಯೂ ಬೇಧ ಕಲ್ಪಿಸುವುದಿಲ್ಲ. ಮನುಷ್ಯನಿಗಿರುವ ದೇವಭಕ್ತಿಗೆ ಅನುಗುಣವಾಗಿ ಇಸ್ಲಾಮ್ ಅವನಿಗೆ ಶ್ರೇಷ್ಠತೆಯನ್ನು ಕಲ್ಪಿಸುತ್ತದೆ. ಇಸ್ಲಾಮಿನಲ್ಲಿ ಗಂಡು ಮತ್ತು ಹೆಣ್ಣಿನ ಮಧ್ಯೆಯೂ ಸಮಾನತೆಯಿದೆ. ಆದರೆ ಹೆಣ್ಣಿನ ಮೇಲೆ ಹೇರುವ ಪುರುಷ ದಬ್ಬಾಳಿಕೆಯನ್ನು ಇಸ್ಲಾಮ್ ವಿರೋಧಿಸುತ್ತದೆ.

     ಅವರು ಬದುಕಿದರು

ಬಡವರಂತೆ ಜೀವಿಸಿದರು ಪಯಣಿಗನಂತೆ ಬದುಕಿದರು

ಪರಿಚಯನಮಗೆಲ್ಲರಿಗಾದರೂ ಅಪರಿಚಿತರಂತೆ ಬದುಕಿದರು

ಮಕ್ಕಾದ ಜನ ಕಲ್ಲೆಸೆದರೂ ಕ್ಷಮೆಯ ಹೂನಗೆ ಚೆಲ್ಲಿದರು

ಶತ್ರುವಿಗೂ ಒಳಿತುಮಾಡುತ ಮಿತ್ರನಂತೆ ಬದುಕಿದರು

ಎಲ್ಲೆಡೆಯೂ ಅಜ್ಞಾನದ ಅಂಧಕಾರವು ಹರಡಿರಲು

ಕತ್ತಲು ಹೋಗಲಾಡಿಸುತ  ಬೆಳಕಿನಂತೆ ಬದುಕಿದರು

ಮರಳುಗಾಡಿನಲಿ ಹುಟ್ಟಿ ಮದೀನವನು ಹಸಿರುಗೊಳಿಸಿ

ಪ್ರಳಯದಲೂ ಸಸಿನೆಟ್ಟು ಮಹಾತ್ವಕಾಂಕ್ಷಿಯಂತೆ ಬದುಕಿದರು

ಗುಲಾಮಗಿರಿಯ ಸಮಾಧಿ ಮಾಡಿ ಪ್ರಜಾಪ್ರಭುತ್ವದ ಧ್ವಜವು ಹಾರಿಸಿ

ಈ ಜಗದಲಿ ಮನುಕುಲದ ವಿಮೋಚಕನಂತೆ ಬದುಕಿದರು

ಎದ್ದೇಳಿ ಹಗಲುಗನಸು ಕಾಣುವ ಹುಚ್ಚಪ್ಪಗಳಿರಾ ಅವರು

ಕನಸನು ನನಸಾಗಿಸುವ ಪ್ರಜ್ಞಾವಂತರಂತೆ ಬದುಕಿದರು

ಉಮರ್ ಫಾರೂಖ್ ಮಾನ್ವಿ.

 

ಪ್ರವಾದಿಯರ ಸಮಾನತೆಯ ಬೋಧನೆ ; ಭೂಮಿಯಲ್ಲಿರುವ ಎಲ್ಲಾ ಮಾನವರು ಒಂದೇ ತಂದೆ-ತಾಯಿಯ ಮಕ್ಕಳು. ಅರಬ್ಬಿನ ಜನಾಂಗದವರು, ಅರಬೇತರರಿಂದ ಶ್ರೇಷ್ಠರಲ್ಲ. ಹಾಗೆಯೇ ಅರಬೇತರರು ಅರಬ್ಬಿನ ಜನರಿಗಿಂತ ಶ್ರೇಷ್ಠರಲ್ಲ. ಅದೇ ರೀತಿ ಬಿಳಿಯ ಜನರು ಕಪ್ಪು ಜನರಿಗಿಂತ ಶ್ರೇಷ್ಠರಲ್ಲ ಮತ್ತು ಕಪ್ಪು ಜನರು ಬಿಳಿಯರಿಗಿಂತ ಶ್ರೇಷ್ಠರಲ್ಲ. ಆದರೆ ದೇವ ಭಯ, ಧರ್ಮನಿಷ್ಠೆ ಮತ್ತು ಉತ್ತಮ ಕಾರ್ಯಗಳನ್ನು ಎಸಗುವವನೇ ಶ್ರೇಷ್ಠನು ಎಂದು ಪ್ರವಾದಿ ಮುಹಮ್ಮದ್‍ರು ಘೋಷಿಸಿದರು. ಅದರನುಗುಣವಾಗಿ ಮಾಜಿ ಕಪ್ಪು ಗುಲಾಮರಾಗಿದ್ದ ’ಬಿಲಾಲ್’ ಎಂಬ ಸಹವರ್ತಿಯನ್ನು ಇಸ್ಲಾಮಿನ ಶ್ರೇಷ್ಠ ಕರ್ತವ್ಯವಾದ ದಿನಕ್ಕೆ ಐದು ಬಾರಿ ನಮಾಜಿಗಾಗಿ ಜನರನ್ನು ಕೂಗಿ ಕರೆಯುವ ಕೆಲಸಕ್ಕಾಗಿ ಪ್ರವಾದಿಯರು ನೇಮಿಸಿದರು.

* ಇಸ್ಲಾಮ್ ಮಾನವಕುಲಕ್ಕೆ ಸಮಾನತೆಯ ಸಂದೇಶವನ್ನು ಸಾರಿತು. ವರ್ಗ, ವರ್ಣ, ಭಾಷೆ, ಜಾತಿ, ಜನಾಂಗೀಯ, ಆರ್ಥಿಕ ಅಸಮಾನತೆ, ರಾಷ್ಟ್ರೀಯ ಮೊದಲಾದ ಸಂಕುಚಿತ ಬೇಧಭಾವಗಳ ಬುನಾದಿಗೇ ಕೊಡಲಿಯೇಟು ಹಾಕಿತು. ಕಾನೂನಿನನ್ವಯವೂ ಎಲ್ಲಾ ಜನರಿಗೆ ಸಂಪೂರ್ಣ ಮತ್ತು ಸಮಾನ ಹಕ್ಕುಗಳನ್ನು ಇಸ್ಲಾಮ್ ನೀಡುತ್ತದೆ. ಪ್ರವಾದಿ ಮುಹಮ್ಮದ್(ಸ) ಸಮಾನತೆಯ ಈ ಉದಾತ್ತ ಸಿದ್ಧಾಂತಗಳನ್ನು ಕೇವಲ ಬೋಧನೆಗೆ ಸೀಮಿತಗೊಳಿಸಲಿಲ್ಲ. ತಮ್ಮ ಜೀವಿತಾವಧಿಯಲ್ಲಿಯೇ ಈ ತತ್ವಗಳ ಆಧಾರದಲ್ಲಿ ಒಂದು ಆದರ್ಶನಿಷ್ಠ ಸಮಾಜವನ್ನು ನಿರ್ಮಿಸಿ ಅದನ್ನು ಪ್ರಳಯ ಕಾಲದವರೆಗೆ ಮಾದರಿಯನ್ನಾಗಿಸಲು ಒದಗಿಸಿದ್ದಾರೆ. ಇಸ್ಲಾಮ್ ಕೇವಲ ಕಾನೂನನ್ನು ನೆಚ್ಚಿ ಕೊಳ್ಳುವುದಿಲ್ಲ. ಕಾನೂನನ್ನು ರೂಪಿಸುತ್ತದೆ. ಮೊಟ್ಟ ಮೊದಲು ಅದು ಜನರನ್ನು ಸಭ್ಯರನ್ನಾಗಿಸಲು ತರಬೇತಿ ನೀಡುತ್ತದೆ. ಕಾನೂನುಗಳು ರೂಪುಗೊಂಡಾಗ  ಜನರು ಸ್ವಇಚ್ಛೆಯಿಂದ ಕಾನೂನನ್ನು ಪಾಲಿಸಲು ಮುಂದಾಗುತ್ತಾರೆ. ಇದನ್ನು ಮಾನವಕುಲದ ಅತಿ ಶ್ರೇಷ್ಠ ಸಾಧನೆ ಎನ್ನಬಹುದು.

* ಅಲ್ಲಾಹನ ವಿಶೇಷ ಪ್ರೀತಿಗೆ ಪಾತ್ರವಾದ ರಾಷ್ಟ್ರ ಅಥವಾ ಜನಾಂಗದ ಕಲ್ಪನೆ ಇಸ್ಲಾಮಿನಲ್ಲಿಲ್ಲ. ಮುಕ್ತಿ ಮತ್ತು ಅಲ್ಲಾಹನ ಅನುಗ್ರಹ ನಿರ್ದಿಷ್ಠ ಜನಾಂಗಕ್ಕೆ ಸೀಮಿತವಾಗಿಲ್ಲ. ಅಲ್ಲಾಹನು ಹೇಳುತ್ತಾನೆ “ನೀವು ನನ್ನನ್ನು ಕರೆಯಿರಿ, ನಾನು ನಿಮ್ಮ ಕರೆಗೆ ಓಗೊಡುವೆನು. ನನ್ನ ಕರುಣೆಯು ಎಲ್ಲಾ ಸೃಷ್ಟಿಗಳನ್ನು ಆವರಿಸಿದೆ. ಯಾವ ಜೀವಿಗೂ ಅನ್ಯಾಯವಾಗಬಾರದೆಂಬ ಕಾರಣದಿಂದ ನಿರ್ಣಾಯಕ ದಿನದಂದು ನಾವು ತಕ್ಕಡಿಯನ್ನು ಸ್ಥಾಪಿಸುತ್ತೇವೆ.” ಎಂಬ ಕುರಾನಿನ ವೇದವಾಕ್ಯಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಂಬ ಪ್ರಜಾಪ್ರಭುತ್ವದ ಮೌಲ್ಯಗಳ ತೂಕವನ್ನು ಉನ್ನತೀಕರಿಸುತ್ತದೆ.

* ಗುಲಾಮ ಪದ್ಧತಿ ಪ್ರಾಕೃತಿಕವಾಗಿದ್ದು ಕೆಲವು ಜನಾಂಗಗಳು ದಾಸರಾಗಲಿಕ್ಕಾಗಿಯೇ ಸೃಷ್ಠಿಸಲ್ಪಟ್ಟಿವೆಯೆಂಬುದು ಅರಿಸ್ಟಾಟಲ್‍ನ ಸಿದ್ಧಾಂತವಾಗಿತ್ತು. ಆದರೆ ಇಸ್ಲಾಮ್ ಮಾನವ ಕುಲವನ್ನು ಇತಿಹಾಸದಲ್ಲಿ ಜಗತ್ತೆಂದೂ ಕಂಡರಿಯದ ಅತ್ಯಂತ ಶ್ರೇಷ್ಠ ಮಟ್ಟದ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟು ಗುಲಾಮತನದಿಂದ ಮೇಲೆತ್ತಿತು. ಮನುಷ್ಯರನ್ನು ಮಹೋನ್ನತ ಸ್ಥಾನಮಾನಗಳಿಗೆ ಏರಿಸಿ ಪವಾಡ ಸದೃಶ ಕಾರ್ಯಗಳನ್ನು ಮಾಡುವ ಪ್ರೇರಣೆ ನೀಡಿತು.

ವಿಶ್ವ ಬಾಂಧವ್ಯ ಮತ್ತು ಮಾನವ ಸಮಾನತೆಯ ಸಂದೇಶವು ಮಾನವಕುಲದ ಉನ್ನತಿಗೆ ಮುಹಮ್ಮದ್(ಸ) ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ವಾಸ್ತವದ ಕುರಿತು ಸರೋಜಿನಿ ನಾಯ್ಡು ಹೀಗೆ ಹೇಳಿದ್ದಾರೆ. “ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಆದಾನ್ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ, ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ ‘ಅಲ್ಲಾಹನೇ ವiಹಾನ್‍ನು’ ಎಂದು ಘೋಷಿಸುತ್ತಾ ಸಾಷ್ಟಾಂಗವೆರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ. “ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗನಿಸುವ ಇಸ್ಲಾಮಿನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರಮುಗ್ಧಗೊಳಿಸಿದೆ.”

ಬಹುತೇಕ ಇಸ್ಲಾಮೀ ಇತಿಹಾಸಕಾರರು “ವರ್ಗ, ವರ್ಣ, ಜನಾಂಗೀಯ ಆಧಾರಿತ ಮಾನವರ ವಿಭಜನೆಯನ್ನು ನಿರ್ಮೂಲಗೊಳಿಸಿದುದು ಇಸ್ಲಾಮಿನ ಶ್ರೇಷ್ಠ ಸಾಧನೆಗಳಲ್ಲೊಂದಾಗಿದೆ” ಎಂಬುದನ್ನು ಒಪ್ಪುತ್ತಾರೆ. ಈ ಕಾರಣದಿಂದಾಗಿಯೇ ಸಮಾಜದ ದುರ್ಬಲ ವರ್ಗ ಇಸ್ಲಾಮಿನೆಡೆಗೆ ವಿಶೇಷವಾಗಿ ಆಕರ್ಷಿತವಾಯಿತು. ಉನ್ನತ ಸ್ಥಾನ ಮಾನವನ್ನು ಗಳಿಸುವಲ್ಲಿಯೂ ಸಫಲವಾಯಿತು. ಈ ಸಫಲತೆಗೆ ಮುಖ್ಯ ಬುನಾದಿಯೇ ಪ್ರವಾದಿ ಮುಹಮ್ಮದ್(ಸ)ರು ಬೋಧಿಸಿದ ‘ಸಮಾನತೆ’ ಎಂಬ ತತ್ವ ಎಂಬ ಮಾತಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
 

ರಾಘವೇಂದ್ರ ಎಸ್. ಮಡಿವಾಳ
ಸಹಶಿಕ್ಷಕರು
ಸ.ಹಿ.ಪ್ರಾ.ಶಾಲೆ ಹೊನ್ನೆಮಡಿ
ಭಟ್ಕಳ (ಉ.ಕ.) 581320
ಸಂಪರ್ಕ ಸಂಖ್ಯೆ : 9739401944
 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...