ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

Source: SO News | By Laxmi Tanaya | Published on 25th April 2024, 9:59 PM | State News | Don't Miss |

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆಗೆ ಗುರುವಾರ ಖುದ್ದು ಸಾಕ್ಷಿಯಾಗುವ ಮೂಲಕ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಹೋಮ್ ಬೇಸ್ಡ್ ವೋಟಿಂಗ್ ಪ್ರಕ್ರಿಯೆಗೆ ಚಾಲನೆ‌ ನೀಡಿದರು.

ಗುಲಬರ್ಗಾ ಉತ್ತರ ಕ್ಷೇತ್ರಕ್ಕೆ ಸೇರಿದ ಕಲಬುರಗಿ ನೆಹರು ಗಂಜ್ ಪ್ರದೇಶದ ಗಾಂಧಿ ನಗರದ ನಿವಾಸಿ ಶಾಂತಮ್ಮ (85) ಅವರ ಮನೆಗೆ ಚುನಾವಣಾ ಸಿಬ್ಬಂದಿ ಮತ್ತು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭುವನೇಶ ಪಾಟೀಲ ಅವರೊಂದಿಗೆ ತೆರಳಿ ಮನೆಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಿರಿಯ ಜೀವಿಗಳೊಂದಿಗೆ ಆರೋಗ್ಯ ಕುಶಲೋಪರಿ ವಿಚಾರಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಗುಲಬರ್ಗಾ ದಕ್ಷಿಣ ಕ್ಷೇತ್ರದ ಕಲಬುರಗಿ ನಗರದ ಜಯನಗರ ಮತಗಟ್ಟೆ ಸಂ.220ಕ್ಕೆ ಸೇರಿದ ಮತದಾರರ‌ ಮನೆಯಿಂದ ಮತದಾನ ಕಾರ್ಯ ವೀಕ್ಷಿಸಿದರು. ನಂತರ
ಇದೇ ಕ್ಷೇತ್ರದ ಮತಗಟ್ಟೆ ಸಂ.121ಕ್ಕೆ ಸೇರಿದ ರೆಹಮತ್‌ ನಗರ ನಿವಾಸಿ ಜುಬೇದಾ ಬೀ ಮತ ಚಲಾವಣೆ ಪ್ರಕ್ರಿಯೆಗೂ ಸಾಕ್ಷಿಯಾದರು.

ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಮತಗಟ್ಟೆ ಸಂ.207ಕ್ಕೆ ಸೇರಿದ ಕುಸನೂರ ತಾಂಡಾ ನಿವಾಸಿ ಶತಕದ ಅಂಚಿನಲ್ಲಿರುವ ಚಾಂದಿಬಾಯಿ ಖೂಬು (96) ಅವರು ಮನೆಯಿಂದ ಮತದಾನಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮತ್ತು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎ.ಸಿ. ರೂಪಿಂದರ್ ಕೌರ್ ಸಾಕ್ಷಿಯಾದರು.

ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ‌ ಸಂ.68ಕ್ಕೆ ಸೇರಿದ ಕಲಬುರಗಿ ನಗರದ ಹಳೇ ರಾಘವೇಂದ್ರ ಕಾಲೋನಿ‌ ನಿವಾಸಿ ವಿಮಲಾಬಾಯಿ (85) ಅವರು ಮತ ಚಲಾಯಿಸಿದರು. ಇತ್ತ ಚಿತ್ತಾಪುರ ಕ್ಷೇತ್ರದ ಲಾಡ್ಲಾಪುರ ಮತಗಟ್ಟೆ ಸಂ.199 ವ್ಯಾಪ್ತಿಗೆ ಸೇರಿದ ಪಾರ್ಶ್ವವಾಯು ಪೀಡಿತ ವಿಜ್ಜಮ್ಮ ಸಾಬಣ್ಣಾ ಲಾಡ್ಲಾಪುರ (75) ಅವರು ಮನೆಯಲ್ಲಿಯೆ ಮತದಾನ ಗಮನ ಸೆಳೆದರು. ಚುನಾವಣಾಧಿಕಾರಿ ನವೀನ್ ಯು. ಉಪಸ್ಥಿತರಿದ್ದರು.

ಅಫಜಲಪೂರ ಮತಕ್ಷೇತ್ರದ ಅಫಜಲಪೂರ ಪಟ್ಟಣದ ಮತಗಟ್ಟೆ ಸಂ.160ಕ್ಕೆ ಸೇರಿದ ಸ್ಥಳೀಯ ನಿವಾಸಿಯಾಗಿರುವ ಅಂಗವಿಕಲರ ಕಲ್ಯಾಣಕ್ಕೆ ಶ್ರಮಿಸುತ್ತಿರುವ ನಗರ ಪುನರ್ವಸತಿ ಕಾರ್ಯಕರ್ತ ಜಬ್ಬಾರ ಅಲಿ (45) ಅವರು ಮನೆಯಲ್ಲಿಯೆ ಮತದಾನ ಮಾಡಿದರು. ಶೇ.75 ಚಲನವಲನ‌ವ ಅಂಗವಿಕಲತೆ ಹೊಂದಿದ್ದ ಇವರು ಇತ್ತೀಚೆಗೆ ರಸ್ತೆ ಅಪಘಾತಕ್ಕೂ ತುತ್ತಾದ ಕಾರಣ ಮನೆಯಿಂದ ಮತದಾನಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಅಫಜಲಪೂರ ಕ್ಷೇತ್ರದ  ಮತಗಟ್ಟೆ ಸಂ.102ಕ್ಕೆ ಸೇರಿದ ಗೊಬ್ಬರವಾಡಿ ನಿವಾಸಿ 87 ವರ್ಷದ ವಯೋವೃದ್ದೇ ಭಾಗೀರತಿ ಮತ್ತು ಮತಗಟ್ಟೆ ಸಂ.134ಕ್ಕೆ ಸೇರಿದ ಚಿಣಮಗೇರಾ ಗ್ರಾಮದ ನಿವಾಸಿ 86 ವರ್ಷದ ವಯೋವೃದ್ದೆ ತಿಮ್ಮಬ್ಬ  ಅವರು ಸಹ ಸಂವಿಧಾನಬದ್ಧ ಮತದ ಹಕ್ಕು ಚಲಾಯಿಸಿದರು.

ಸೇಡಂ‌‌ ವಿಧಾನಸಭಾ ಕ್ಷೇತ್ರದ ಅಳ್ಳೊಳ್ಳಿ ಮತಗಟ್ಟೆ ಸಂ.159ಕ್ಕೆ ಸೇರಿದ ಅಂಗವಿಕಲೆ ವಿಜಯಲಕ್ಣ್ಮೀ ಸಾಬಣ್ಣ (45) ಮತ್ತು ನಾಡೆಪಲ್ಲಿ ಗ್ರಾಮದ ಮತಗಟ್ಟೆ ಸಂ. 206ಕ್ಕೆ ಸೇರಿದ 85 ವರ್ಷ ಮೇಲ್ಪಟ್ಟ ದೇವಮ್ಮಾ ನರಸಪ್ಪ ಮತ ಚಲಾಯಿಸಿದರು.

ಗುಲಬರ್ಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,233 ಹಿರಿಯ ನಾಗರೀಕರು ಮತ್ತು 22,123 ವಿಶೇಷ ಚೇತನರಿದ್ದು,
1,149 ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಸೇರಿದಂತೆ ಒಟ್ಟು 1,545 ಜನ ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಕ್ಷೇತ್ರವಾರು ನೋಡುವುದಾದರೆ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಕ್ರಮವಾಗಿ ಅಫಜಲಪೂರ 177 ಮತ್ತು 90, ಚಿತ್ತಾಪೂರ 24 ಮತ್ತು 15, ಗುಲಬರ್ಗಾ ದಕ್ಷಿಣ 149 ಮತ್ತು 28, ಗುಲಬರ್ಗಾ ಗ್ರಾಮೀಣ 151 ಮತ್ತು 43, ಗುಲಬರ್ಗಾ ಉತ್ತರ 121 ಮತ್ತು 20, ಜೇವರ್ಗಿ 164 ಮತ್ತು 74, ಸೇಡಂ 200 ಮತ್ತು 91 ಹಾಗೂ  ಗುರುಮಠಕಲ್ 163 ಮತ್ತು 35 ಜನ ಇದ್ದಾರೆ.

ಕಳೆದ‌ ವಿಧಾನಸಭಾ ಚುನಾವಣೆ‌ ಸಂದರ್ಭದಲ್ಲಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಆಟೋ ವ್ಯವಸ್ಥೆ, ಮತಗಟ್ಟೆಯಲ್ಲಿ ತ್ರಿಚಕ್ರ ವಾಹನ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಚುನಾವಣಾ ಆಯೋಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಮತದಾನ ಪ್ರಮಾಣ ಹೆಚ್ಚಿಸಲು ಮನೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ.

*ಸಕಲ ಸಿದ್ಧತೆ:*

ಜಿಲ್ಲೆಯಾದ್ಯಂತ ಇಂದಿನಿಂದ‌ ಎರಡು ದಿನಗಳ ಕಾಲ ನಡೆಯಲಿರುವ ಮನೆಯಿಂದ ಮತದಾನ ಪ್ರಕ್ರಿಯೆಗೆ ಜಿಲ್ಲೆಯಾದ್ಯಂತ ಸುಮಾರು 81 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದೊಂದಿಗೆ ಪಿ.ಆರ್.ಓ, ಎ.ಪಿ‌.ಆರ್.ಓ,  ಮೈಕ್ರೋ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಇರಲಿದ್ದು, ಮನೆ‌ ಮನೆಗೆ ಪೋಸ್ಟಲ್ ಬಾಕ್ಸ್ ನೊಂದಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ. ಇಲ್ಲಿ ಮತದಾನದ ಗೌಪ್ಯತೆ ಸಹ ಕಾಪಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...