ಏ.29 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ -2 : ಸಕಲ ಸಿದ್ದತೆಗೆ ಸೂಚನೆ

Source: SO News | By Laxmi Tanaya | Published on 25th April 2024, 9:38 PM | State News | Don't Miss |

ಶಿವಮೊಗ್ಗ :      ಜಿಲ್ಲೆಯಲ್ಲಿ ಏಪ್ರಿಲ್ 29 ರಿಂದ ಮೇ 16 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ನಡೆಯಲಿದೆ. ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅವಶ್ಯಕವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಜಿಲ್ಲೆಯ ಶಿವಮೊಗ್ಗದ 02 ಮತ್ತು ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ ತಾಲ್ಲೂಕುಗಳಲ್ಲಿನ 01 ಪರೀಕ್ಷಾ ಕೇಂದ್ರ ಸೇರಿ ಒಟ್ಟು 08 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 3531 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

     ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ದಿನಾಂಕ 16.05.2024 ರಂದು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 02.15 ರಿಂದ ಸಂಜೆ 04.30 ರವರೆಗೆ ನಡೆಯಲಿದೆ.

     ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು ತ್ರಿಸದಸ್ಯ ಸಮಿತಿ ನೇಮಿಸಲಾಗಿದೆ, ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರ ನೇಮಕವಾಗಿದೆ. ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸಹ ಮುಖ್ಯ ಅಧೀಕ್ಷಕರು ಮತ್ತು ಜಾಗೃತ ದಳದ ಸದಸ್ಯರನ್ನು ನೇಮಿಸಲಾಗಿದೆ.

    ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ.

    ಪೊಲೀಸ್ ಇಲಾಖೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು. ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು , ಅವರು ತಮ್ಮ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡುವಂತೆ ತಿಳಿಸಿದರು.

   ಪರೀಕ್ಷೆಯು ದ್ವಿತೀಯ ಪಿಯುಸಿ ಪರೀಕ್ಷೆ ನಡೆದ ಮಾದರಿಯಲ್ಲೇ ನಡೆಯಲಿದೆ. ಆದರೆ ಈ ಬಾರಿ ಪರೀಕ್ಷೆ ನಡೆಯುವುದನ್ನು ವೆಬ್ ಕ್ಯಾಮೆರಾ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

   ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

    ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ ಅವರು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪ್ರಭಾರ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಜರಿದ್ದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...