ದ್ವೇಷ ಮುಕ್ತ ಭಾರತಕ್ಕಾಗಿ ನನ್ನ ಪ್ರಾರ್ಥನೆ

Source: sonews | By Staff Correspondent | Published on 27th April 2020, 4:39 PM | Gulf News | Special Report | Don't Miss |

"ನಾನು ಭಾರತದ ಬಗ್ಗೆ ಇಷ್ಟೊಂದು ಪ್ರೀತಿಯಿಂದ ಮಾತಾಡಿದ್ದಕ್ಕೆ ಕ್ಷಮೆಯಿರಲಿ. ಅದು ಹಾಲು ಮತ್ತು ಜೇನಿನ ಭೂಮಿ. ನಮ್ಮ ಸಂಸ್ಕೃತಿಯಲ್ಲಿ ನೀವು ಭಾರತದ ಹಾಲು ಕುಡಿದಿದ್ದರೆ ಭಾರತ ನಿಮ್ಮ ತಾಯಿಯಾಗುತ್ತದೆ. "

ಭಗವಾನ್ ವಿಷ್ಣುವಿನ ಕಿಬ್ಬೊಟ್ಟೆಯಿಂದ ಹೊರಟ ಆ ಕಮಲದ ಹೂವಿನಲ್ಲಿ ಬ್ರಹ್ಮ ಕುಳಿತಿದ್ದ. ಬ್ರಹ್ಮ ಆ ಹೂವನ್ನು ಮೂರು ಭಾಗಗಳಾಗಿ ವಿಂಗಡಿಸಿದ: ಸ್ವರ್ಗ, ಭೂಮಿ ಮತ್ತು ಆಕಾಶ ಈ ಮೂರು ಭಾಗಗಳು. ಕೊನೆಗೆ ಏಕಾಂಗಿತನ ಕಾಡಿದಾಗ ತನ್ನನ್ನೇ ತಾನು ವಿಭಜಿಸಿಕೊಂಡು ಒಬ್ಬ ಪುರುಷ ಹಾಗು ಒಬ್ಬ ಮಹಿಳೆಯನ್ನು ಸೃಷ್ಟಿಸುತ್ತಾನೆ. ಅವುಗಳಿಂದ ಎಲ್ಲ ಜೀವಿಗಳ ಸೃಷ್ಟಿಯಾಗುತ್ತದೆ.

ಆ ಬೃಹತ್ ಕಮಲದ ಹೂವಿನ ಆಕಾರದ ಸಭಾಂಗಣದಲ್ಲಿ ನಾನು ಇಸ್ರೇಲಿ ಸೆನೆಟರ್ ಒಬ್ಬರ ಪಕ್ಕದಲ್ಲಿ ಕುಳಿತಿದ್ದೆ. ಅವರು Tears of a Jewish Woman ಕೃತಿಯ ಲೇಖಕರು. ಅದಕ್ಕಿಂತ ಮೊದಲು ನಾನು ಇಸ್ರೇಲಿ ಸಂಸತ್ತಿನ ಸದಸ್ಯ ಬಿಡಿ ಒಬ್ಬ ಸಾಮಾನ್ಯ ಯಹೂದಿಯನ್ನೂ ಭೇಟಿಯಾಗಿರಲಿಲ್ಲ. ಹಾಗಾಗಿ ನನಗೆ ಆಕೆಯ ಬಗ್ಗೆ ತೀವ್ರ ಕುತೂಹಲವಿತ್ತು. ಆದರೆ ನಾನು ಶಾಂತ ಹಾಗು ಸಮಚಿತ್ತದಿಂದ ಇದ್ದೆ. ಬೆಂಗಳೂರಿನ ಆ ಆಶ್ರಮದಲ್ಲಿ ( ಹರ್ಮಿಟೆಜ್ ) ಮೊದಲ ಬಾರಿ ಯೋಗ ಬಗ್ಗೆ ತಿಳಿದುಕೊಳ್ಳಲು ಸೇರಿದ್ದ ನಾವು ಸಂಕ್ಷಿಪ್ತವಾಗಿ ಮಾತಾಡಿಕೊಂಡೆವು. ಬಳಿಕ ಆಕೆ ನನಗೆ ಆಕೆಯ ದೇಶಕ್ಕೆ ಬರುವಂತೆ ಆಹ್ವಾನ ನೀಡಿದರು. ಮತ್ತೊಮ್ಮೆ ಆಕೆಯ ಭೇಟಿಯನ್ನು ನಾನು ಎದುರು ನೋಡುತ್ತಿದ್ದೇನೆ.

ಅಲ್ಲಿ ನನಗೆ ವಿಶ್ವದ ವಿವಿಧೆಡೆಗಳಿಂದ ಕೇವಲ ಯೋಗ ಕಲಿಯುವ ಆಸಕ್ತಿಯಿಂದಲೇ ಬಂದು ಸೇರಿದ್ದ ಜನರನ್ನು ಭೇಟಿಯಾಗಿ ಬಹಳ ಖುಷಿಯಾಗಿತ್ತು. ಅಲ್ಲಿರುವಷ್ಟು ಸಮಯ ನಾವೆಲ್ಲರೂ ಸಸ್ಯಾಹಾರಿಗಳಾಗಿದ್ದೆವು. ನಾನು ಮೊದಲೇ ತೀರಾ ಕಠೋರ ಮಾಂಸಾಹಾರಿಯಲ್ಲದೇ ಇದ್ದುದರಿಂದ ನನಗೇನೂ ಸಮಸ್ಯೆಯಾಗಲಿಲ್ಲ. ಆದರೆ ಹಾಲಿನ ಜೊತೆ ಸೇವಿಸುವ ಧಾನ್ಯಗಳು ಹಾಗು ಆಗಾಗ ರುಚಿ ನೋಡುವ ಸಿಗಡಿಯ ಕಾಕ್ ಟೇಲ್ ಮಾತ್ರ ಮಿಸ್ ಮಾಡಿಕೊಂಡೆ. ನನ್ನ ಹಾರ್ವರ್ಡ್ ಪದವೀಧರ ವೈದ್ಯ ಮಿತ್ರರೂ ಅಲ್ಲಿಗೆ ಬಂದಿದ್ದು ನಾವಿಬ್ಬರೂ ಅಲ್ಲಿನ ಸೀರೆಯ ಮಾರ್ಕೆಟ್, ಬಿಂದಿ, ಸಿಂಧೂರ ಇತ್ಯಾದಿಗಳ ಖರೀದಿಯಲ್ಲಿ ಸಂತಸದ ಕ್ಷಣಗಳನ್ನು ಹಂಚಿಕೊಂಡೆವು. 

ನಾನು ಪ್ರತಿಬಾರಿ ನನ್ನ ಪರಿಚಯ ಹೇಳಿದಾಗ ಜನರು ನಗುತ್ತಿದ್ದುದು ನನಗೆ ನೆನಪಿದೆ. ಅಲ್ಲಿ ಪ್ರತಿಯೊಬ್ಬರಿಗೂ ಹಿಂದ್ ಹೆಸರಿನ ಅರಬ್ ಮಹಿಳೆಯನ್ನು ಭೇಟಿಯಾಗುವಾಗ ಒಂದು ರೀತಿಯ ಖುಷಿಯಾಗುತ್ತಿತ್ತು. "ಅಂದರೆ ಜೈ ಹಿಂದ್ ಎಂದೇ ?" ಎಂದು ಅವರು ನನ್ನನ್ನು ಕೇಳುತ್ತಿದ್ದರು, ನಾನು ಹೌದು ಎಂದು ನಗುತ್ತಿದ್ದೆ. ಮುಂಜಾನೆ ಎದ್ದು ನಾವು ಆ ಬೃಹತ್ ಸಭಾಂಗಣದಲ್ಲಿ ಯೋಗ ತರಗತಿಗೆ ಸೇರುತ್ತಿದ್ದೆವು. ಅದೊಂದು ರೀತಿ ಆಧ್ಯಾತ್ಮಿಕ ಯಾತ್ರೆಯಂತಿತ್ತು. ನಾವು ಎಷ್ಟು ಸರಳವಾಗಿ ಜೀವಿಸಬಹುದು ಎಂದು ಕಲಿಸುವ ಪ್ರಯಾಣದಂತಿತ್ತು ಆ ದಿನಗಳು. ನಾವು ಸರಳ ಸ್ಲಿಪ್ಪರ್ ಗಳನ್ನು ಹಾಕಿಕೊಂಡು, ಹಗುರವಾದ ಹತ್ತಿಯ ಬಟ್ಟೆ ಧರಿಸುತ್ತಿದ್ದೆವು. ಆದರೆ ನಾನು ಆಗಲೂ ನನ್ನ ಕಾಜಲ್, ಬಿಂದಿ ಮತ್ತು ಅರೇಬಿಕ್ ಸುಗಂಧ ದ್ರವ್ಯ ಬಳಸುತ್ತಿದ್ದೆ. ಆ ಗ್ರಾಮದಲ್ಲಿ ಆಗ ವಿಶ್ವದೆಲ್ಲೆಡೆಯ ನೂರಾರು ಮಂದಿ ಬಂದು ಸೇರಿದ್ದರು. ಅಲ್ಲಿ ಒಂದು ಅನಾಥಾಶ್ರಮ ಈ ಯೋಗ ಸದಸ್ಯರ ದೇಣಿಗೆಯಿಂದಲೇ ನಡೆಯುತ್ತಿತ್ತು. ಐಟಿ, ಸೇವೆಗಳು ಹಾಗು ಸ್ಪಾ ಸಹಿತ ರೆಸಾರ್ಟ್ ಗೆ ಅಲ್ಲಿ ಬೇರೆ ಬೇರೆ ಕಟ್ಟಡಗಳಿದ್ದವು.

ಈ ವೈವಿಧ್ಯತೆಯ ಸಮ್ಮಿಲನದಲ್ಲಿ ನಾನು ಮತ್ತು ನನ್ನ ಅಮೇರಿಕನ್ ಸ್ನೇಹಿತೆ ಆಗಾಗ ಭೇಟಿಯಾಗಿ ನಾವು ಭೇಟಿಯಾದ ಜನರು ಹಾಗು ಅವರ ಬದುಕಿನ ಬಗ್ಗೆ ಚರ್ಚಿಸುತ್ತಿದ್ದೆವು. ಅಲ್ಲಿ ಯಾವತ್ತೂ ಭೇದ ಭಾವದ ಒಂದೂ ಕ್ಷಣವೂ ಇರಲಿಲ್ಲ. ನಾವೆಲ್ಲರೂ ಬಯಸುವ ಒಂದು ಪರಿಪೂರ್ಣ ಜಗತ್ತಿನ ಮಾದರಿಯಂತಿತ್ತು ಆ ಜಾಗ. ಅಲ್ಲಿ ನಾನು ಗುರುವನ್ನು, ಹಲವು ರಾಯಭಾರಿಗಳನ್ನು, ಅವರ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅವರೆಲ್ಲರೂ ಧರ್ಮ ಯಾವುದೆಂಬುದು ಮುಖ್ಯವಲ್ಲ , ಎಲ್ಲರೂ ಸೌಹಾರ್ದದಿಂದ ಬಾಳುವ ಬಗೆಯನ್ನು ಅರಿತುಕೊಳ್ಳುವುದೇ ಇಲ್ಲಿ ಮುಖ್ಯ ಎನ್ನುತ್ತಿದ್ದರು.

ನಮಗಿಂತ ಬೇರೆ ಧರ್ಮ, ಜನಾಂಗ, ಪ್ರಾದೇಶಿಕತೆಗಳ ಜನರೊಂದಿಗೆ ಹೀಗೆ ಬೆರೆತು ಬಾಳುವ ಕನಸೊಂದು ಅಲ್ಲಿ ಸಾಕ್ಷಾತ್ಕಾರವಾಗಿತ್ತು. ಅಲ್ಲಿ ನಾನು ಅಷ್ಟು ಸಂತುಷ್ಟಳಾಗಿದ್ದೆ. ಒಂದು ನಿರಾಳತೆಯ ಭಾವ ನನ್ನಲ್ಲಿ ಬಂದಿತ್ತು. ಯಾವುದೇ ಭೇದ ಅಥವಾ ದ್ವೇಷವಿಲ್ಲದ ಅಂತಹ ಒಂದು ದಿನ ಕಳೆಯಲು ನಾನು ಪ್ರತಿಯೊಬ್ಬರಿಗೂ ಶಿಫಾರಸು ಮಾಡುತ್ತೇನೆ. ಬೇರೆ ಯಾವುದೇ ಮನರಂಜನಾ ಕಾರ್ಯಕ್ರಮ ನೀಡುವುದಕ್ಕಿಂತ ಹೆಚ್ಚಿನ ಚೈತನ್ಯ ಅಲ್ಲಿ ಸಿಗುತ್ತದೆ. ಅಲ್ಲಿ ನನಗೆ ಪ್ರೀತಿಯ ಚಟ ಬೆಳೆಯಿತು. ನಿಮ್ಮ ಮನಸ್ಸು ತೆರೆದುಬಿಟ್ಟಾಗ ಅಲ್ಲಿ ದ್ವೇಷಕ್ಕೆ ಸ್ಥಳವಿರುವುದಿಲ್ಲ. ಸಿಟ್ಟು ಬಂದರೂ ಅಲ್ಲಿ ಅದು ಉಳಿಯುವುದಿಲ್ಲ. ಮರೆತುಬಿಡುವುದು, ಕ್ಷಮಿಸಿ ಬಿಡುವುದೇ ಜೀವನ ನಡೆಸುವ ಅತ್ಯುತ್ತಮ ಕಲೆ.  ನಾವು ಹೋರಾಡಲೇ ಬೇಕಾದ ಕೆಲವು ವಿಷಯಗಳಿರುತ್ತವೆ. ಆದರೆ ಉದ್ಯಮ ರಂಗದ ವ್ಯಕ್ತಿಯಾಗಿ ನಾನು ಪ್ರತಿಯೊಂದರಲ್ಲೂ ಪರಿಹಾರ ಹುಡುಕುತ್ತೇನೆ ಮತ್ತು ಮುಂದೂಡುವುದನ್ನು ಮತ್ತು ನಿರಾಶರಾಗುವುದನ್ನು ನಾನು ದ್ವೇಷಿಸುತ್ತೇನೆ. ಉತ್ತರ ಪಡೆಯಲು ಪ್ರಯತ್ನಿಸುವುದು ನನಗಿಷ್ಟ. ದ್ವೇಷ ಮತ್ತು ಆಳವಾಗಿ ಬೇರೂರಿರುವ ಪೂರ್ವಗ್ರಹ ಪೀಡಿತ ಭಾವನೆ ಮುಳುಗುವ ಹಡಗಿನ ಲಂಗರಿನಂತೆ.

ನಾನು ಈಗ ಅಭಿವೃದ್ಧಿಶೀಲ ದೇಶಗಳಲ್ಲಿ ಸುಸ್ಥಿರತೆ ಬಗ್ಗೆ ಪಿಎಚ್ ಡಿ ಮಾಡುತ್ತಿದ್ದೇನೆ. ಅದರಲ್ಲಿ ದೇಶಗಳು ತಮ್ಮ ಸತ್ಯ ಏನು ಎಂಬುದನ್ನು ಮೊದಲು ಒಪ್ಪಿಕೊಳ್ಳುವ, ತಮ್ಮ ಸಾಮರ್ಥ್ಯವನ್ನು ಗುರುತಿಸುವ , ತಮ್ಮ ದೌರ್ಬಲ್ಯಗಳನ್ನು ತಿದ್ದಿಕೊಳ್ಳುವ ಹಾಗು ತಮಗಿರುವ ಬೆದರಿಕೆಗಳನ್ನು ತಟಸ್ಥಗೊಳಿಸುವ ಪ್ರಯತ್ನದ ಕುರಿತು ಅಧ್ಯಯನ ಮಾಡುತ್ತಿದ್ದೇನೆ. ಅಂತಹ ದೇಶಗಳಲ್ಲಿ ಒಂದು ಭಾರತ. ಒಂದು ಬಡ ಕೃಷಿಕ, ವಸಾಹತುಶಾಹಿಯ ಭಾಗವಾಗಿದ್ದ ಭಾರತ ಇಂದು ಸೂಪರ್ ಪವರ್ ಆಗಿರುವ ದೇಶ ಅದು. ಸಿಂಗಾಪುರ್, ದಕ್ಷಿಣ ಕೊರಿಯಾ, ಜರ್ಮನಿ ಹಾಗು ಜಪಾನ್ ಗಳೂ ಆ ಪಟ್ಟಿಯಲ್ಲಿವೆ. ನನ್ನ ಪ್ರೀತಿಯ ಮಾತ್ರದೇಶ ಯುಎಇ ಕೂಡ ಅದರಲ್ಲಿ ಸೇರಿದೆ. ಒಂದು ಕಾಲದಲ್ಲಿ ಸಣ್ಣಪುಟ್ಟ ಹಳ್ಳಿಗಳ ಈ ದೇಶ ತನಗೆ ಸಿಕ್ಕಿದ ತೈಲ ಸಂಪತ್ತನ್ನು ಶಿಕ್ಷಣಕ್ಕೆ ಹಾಗು ಹೊಸ ದೇಶ ನಿರ್ಮಾಣಕ್ಕೆ ಬಳಸಿತು. ಅದರಿಂದಾಗಿ ಇವತ್ತೊಂದು ಸಮೃದ್ಧ, ಸಂತೃಪ್ತಿಯ ದೇಶ ಬೆಳೆದು ನಿಂತಿದೆ. ಅದರಲ್ಲಿ 33 ಲಕ್ಷ ಭಾರತೀಯರಿಗೆ ಅದು ಆಶ್ರಯ ನೀಡಿದೆ. ಅವರು ಪ್ರತಿವರ್ಷ ತಮ್ಮ ದೇಶಕ್ಕೆ 17 ಬಿಲಿಯನ್ ಡಾಲರ್ ( ಸುಮಾರು 1.3 ಲಕ್ಷ ಕೋಟಿ ರೂಪಾಯಿ) ಹಣ ಕಳಿಸುತ್ತಿದ್ದಾರೆ.

ಉನ್ನತ ಮಟ್ಟದ ಧಾರ್ಮಿಕ ಸಹಿಷ್ಣುತೆ

ಈ ಎಲ್ಲ ದೇಶಗಳು ಸೂಕ್ತ ಮಾರ್ಗದರ್ಶನವಿಲ್ಲದೆ ಬೆಳೆಯಲಿಲ್ಲ. ಪ್ರತಿ ದೇಶಕ್ಕೂ ಒಬ್ಬೊಬ್ಬ ದೂರದೃಷ್ಟಿಯ ನಾಯಕನಿದ್ದರು. ಅವರು ಬಿತ್ತಿದ ಬೀಜದ ಫಲವನ್ನು ಎರಡು ಪೀಳಿಗೆಯ ಬಳಿಕ ನಾವು ಉಣ್ಣುತ್ತಿದ್ದೇವೆ. ಈ ಪೈಕಿ ಉನ್ನತ ಮಟ್ಟದ ಧಾರ್ಮಿಕ ಸಹಿಷ್ಣುತೆ ಈ ಭಾರೀ ಅಭಿವೃದ್ಧಿಗೆ ಕಾರಣವಾಯಿತು ಎಂಬ ಅಭಿಪ್ರಾಯವಿದೆ. ಇವತ್ತು ಶಿಕ್ಷಣ, ಅರೋಗ್ಯ, ಸಾಮಾಜಿಕ ಸ್ಥಿರತೆ, ಸುರಕ್ಷತೆ, ರಕ್ಷಣೆ, ಅವಕಾಶ , ಆರ್ಥಿಕತೆ ಹಾಗು ಉದ್ಯಮಶೀಲತೆ ಯಾವುದೇ ದೇಶದ ಯಶಸ್ಸಿನ ಸೂತ್ರದ ಅವಿಭಾಜ್ಯ ಅಂಗಗಳಾಗಿವೆ. 

ಗಾಂಧೀಜಿಯ ಮ್ಯೂಸಿಯಂ ಗೆ ಭೇಟಿ ನೀಡಿದಾಗ ಅವರು ಯುದ್ಧ ನಿಲ್ಲಿಸುವಂತೆ ಹಿಟ್ಲರ್ ಗೆ ಬರೆದ ಪತ್ರವೊಂದನ್ನು ಓದಿದೆ. ಆಗ ಅವರ ಆತ್ಮಕತೆಯನ್ನು ನಾನು ಖರೀದಿಸಿದೆ. ಗಾಂಧೀಜಿ ಭಾರತದಲ್ಲಿ ಶಿಕ್ಷಣ ಮತ್ತು ಶೌಚಾಲಯಗಳ ಮಹತ್ವವನ್ನು ಒತ್ತಿ ಹೇಳಿದರು. ಅವು ಅಲ್ಲಿನ ಮಹಿಳೆಯರ ಅರೋಗ್ಯ ಮತ್ತು ಸುರಕ್ಷತೆಗೆ ನೇರವಾಗಿ ಸಂಬಂಧಿಸಿದವುಗಳು. ಹಾಗೆಯೇ ಆಮದಿತ ವಸ್ತುಗಳ ಬದಲಿಗೆ ಭಾರತೀಯ ಹತ್ತಿ ಮತ್ತು ಜವಳಿಯನ್ನೇ ಬಳಸುವಂತೆ ಅವರು ಕರೆ ನೀಡಿದರು. ಅದು ಉದ್ಯಮಶೀಲತೆಯನ್ನು ಬೆಳೆಸಿತು ಮತ್ತು ಆರ್ಥಿಕತೆಗೆ ಬಲ ತುಂಬಿತು.  ಆ ದೂರದೃಷ್ಟಿಗೆ ಸಲಾಂ. ಅದರ ಬಳಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ಇರುವುದು ಆಡಳಿತದ ಗುಣಮಟ್ಟಕ್ಕೆ. ರೋಮ್ ಒಂದೇ ದಿನದಲ್ಲಿ ಎದ್ದು ನಿಲ್ಲಲಿಲ್ಲ. ಹಾಗೆಯೇ ಗಾಂಧೀಜಿಯ ದೂರದೃಷ್ಟಿಯ ಫಲ ಒಂದು ಪೀಳಿಗೆಯ ನಂತರವೇ ನೋಡಲು ಸಿಕ್ಕಿತು. ನೆಲ್ಸನ್ ಮಂಡೇಲಾ ಕೂಡ ಶಾಂತಿ ಕಾಪಾಡುವಲ್ಲಿ ಗಾಂಧೀಜಿ ಅವರಿಂದಲೇ ಪ್ರೇರಿತರಾಗಿದ್ದರು ಎಂಬುದನ್ನು ನಾವು ಮರೆಯದಿರೋಣ. ಗಾಂಧೀಜಿ ಭಾರತಕ್ಕೆ ಗುಲಾಮಗಿರಿಯಿಂದ ಮೋಕ್ಷ ಕೊಟ್ಟರು ಎಂಬುದನ್ನು ಯಾರೂ ನಿರಾಕರಿಸಲಾಗದು. ನಾನು ಭಾರತದ ಬಗ್ಗೆ ಇಷ್ಟೊಂದು ಪ್ರೀತಿಯಿಂದ ಮಾತಾಡಿದ್ದಕ್ಕೆ ಕ್ಷಮೆಯಿರಲಿ. ಅದು ಹಾಲು ಮತ್ತು ಜೇನಿನ ಭೂಮಿ. ನಮ್ಮ ಸಂಸ್ಕೃತಿಯಲ್ಲಿ ನೀವು ಭಾರತದ ಹಾಲು ಕುಡಿದಿದ್ದರೆ ಭಾರತ ನಿಮ್ಮ ತಾಯಿಯಾಗುತ್ತದೆ.  

ಹೆಚ್ಚಿನವರು ಅರ್ಥಮಾಡಿಕೊಳ್ಳಲಾಗದ ಒಂದು ಬೇರ್ಪಡಿಸಲಾಗದ ಬಂಧ ಅರಬರು ಹಾಗು ಭಾರತೀಯರ ನಡುವೆ ಇದೆ. ನಾವು ಬೆಳೆಯುವಾಗ ನಮ್ಮ ಸುತ್ತಮುತ್ತಲು ಅರಬರಿಗಿಂತ ಹೆಚ್ಚು ಭಾರತೀಯರೇ ಇದ್ದರು. ಹಾಗಾಗಿ ಭಾರತೀಯರ ಬಗ್ಗೆ ನಮ್ಮ ವಂಶವಾಹಿಯಲ್ಲೇ ಒಂದು ಅನುಬಂಧ ಬೆಳೆದು ಬಂದಿದೆ. ನಮ್ಮ ಪ್ರತಿದಿನದ ಬಳಕೆಯ ಭಾಷೆಯ ಮೇಲೂ ಭಾರತೀಯರ ಪ್ರಭಾವ ಬಹಳ ದೊಡ್ಡದು.  

ಭಾರತದ ಈ ಸ್ವರೂಪವನ್ನೇ ನೋಡಿದ್ದ ನಮ್ಮಂತವರಿಗೆ ಅಲ್ಲಿನ ಈಗಿನ ಸ್ಥಿತಿ ನೋಡುವಾಗ ಆಘಾತವಾಗುತ್ತದೆ. ದ್ವೇಷ, ಇಸ್ಲಾಂ ವಿರುದ್ಧದ ಹಗೆತನ, ನಿಯಮಿತವಾಗಿ ನಡೆಯುತ್ತಿರುವ ಹಿಂಸಾಚಾರ ಹಾಗು ಈಗ ಕೊರೊನ ನಡುವೆಯೇ ಸೃಷ್ಟಿಸಲಾಗಿರುವ ಹೊಸ ಸಾಂಕ್ರಾಮಿಕ 'ಕುರಾನೋ ವೈರಸ್'. ನಾವು ಅವತ್ತು ಆ ಸಭಾಂಗಣದಲ್ಲಿ ಕಂಡಿದ್ದ ಶಾಂತಿಯ ಸುವಾಸನೆಯನ್ನು ನಾವು ಅಲ್ಲಿಂದ ವಾಪಸ್ ತಂದು ಬಿಟ್ಟೆವು ಎಂದು ನನಗೆ ಅನಿಸುತ್ತಿದೆ. 

ಜಗತ್ತಿಗೆ ಇನ್ನೊಬ್ಬ ಹಿಟ್ಲರ್ ಬೇಕಾಗಿಲ್ಲ

ಈ ಯಶಸ್ವಿ, ಪ್ರಭಾವಿಗಳು ಎನ್ನಲಾದ ಮಿಲಿಯನೇರ್ ಗಳಿಗೆ ದ್ವೇಷ ಭಾಷಣ ನರಮೇಧದ ಪೀಠಿಕೆ ಎಂದು ಗೊತ್ತಿಲ್ಲವೇ? ,ನಾಝಿ ತತ್ವ ಒಂದೇ ದಿನದಲ್ಲಿ ಹುಟ್ಟಲಿಲ್ಲ. ಅದನ್ನು ಒಂದು ಕಲೆಯಂತೆ ಬೆಳೆಯಲು ಬಿಡಲಾಯಿತು. ಜನರು ಅದನ್ನು ನಿರ್ಲಕ್ಷಿಸಿದರು. ಮತ್ತು ಅದು ಅದೇ ಮೌನವೆಂಬ ದೌರ್ಬಲ್ಯವನ್ನು ಬಳಸಿಕೊಂಡು ಬೆಳೆಯಿತು. 18.2 ಕೋಟಿ ಮುಸ್ಲಿಮರಿರುವ ಭಾರತದಲ್ಲಿ ಅವರ ವಿರುದ್ಧ ಬಹಿರಂಗವಾಗಿಯೇ ದ್ವೇಷ ಹರಡಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿ ಹಾಗು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ರಾಜೇಶ್ವರ್ ಸಿಂಗ್ "ಮುಸ್ಲಿಮರು ಹಾಗು ಕ್ರೈಸ್ತರನ್ನು ಡಿಸೆಂಬರ್ 31, 2021ರೊಳಗೆ ಭಾರತದಿಂದ ನಿರ್ಮೂಲನೆ ಮಾಡಲಾಗುವುದು" ಎಂದು ದ್ವೇಷ ಭಾಷಣ ಮಾಡುತ್ತಾರೆ. 

ಜಗತ್ತಿಗೆ ಇವತ್ತು ಇನ್ನೊಬ್ಬ ಹಿಟ್ಲರ್ ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ಇನ್ನೊಬ್ಬ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅಥವಾ ಗಾಂಧಿ. ನಿಮ್ಮ ಸೋದರರನ್ನು ಕೊಲ್ಲುವುದು ನಿಮ್ಮನ್ನು ಹೀರೊ ಮಾಡುವುದಿಲ್ಲ. ಅದು ನಿಮ್ಮನ್ನು ಸರ್ವಾಧಿಕಾರಿ ಮತ್ತು ಕೊಲೆಗಡುಕನಾಗಿ ಮಾಡುತ್ತದೆ. ಈಗ ಒಂದು ಆಂದೋಲನ ಪ್ರಾರಂಭವಾಗಿದೆ. ಅದರ ಪ್ರತಿಧ್ವನಿ ಇಡೀ ಅರಬ್ ಜಗತ್ತಿನಲ್ಲಿ ಕೇಳಿಸಿದೆ. ಜನರು ಇದನ್ನು ಗುರುತಿಸಿದ್ದಾರೆ ಮತ್ತು ರಮಝಾನ್ ನಲ್ಲಿ ಪ್ರತಿಯೊಬ್ಬ ಮುಸ್ಲಿಂ ಮನಸ್ಸು ಕೂಡ ಈ ದ್ವೇಷದ ಕಿಡಿಗಳು ಒಂದು ದೇಶವನ್ನು ನಾಶ ಮಾಡದಂತೆ ಪ್ರಾರ್ಥಿಸುತ್ತವೆ. ಈ ದ್ವೇಷ ಇಲ್ಲಿಗೇ ನಿಲ್ಲಬೇಕು. ಅದು ಯಾರಿಗೂ ಬೇಡ. 

ಯುಎಇ ಯಲ್ಲಿ ದ್ವೇಷ ಹರಡುವುದು ಕಾನೂನುಬಾಹಿರ. ಜನರಿಗೆ ಇಂತಹದೊಂದು ಕಾನೂನು ಇರುವುದು ತಮಾಷೆಯಾಗಿ ಕಾಣಬಹುದು. ಆದರೆ ಸಂಕಷ್ಟದ ಸಂದರ್ಭಗಳಲ್ಲಿ ಆ ಕಾನೂನು ಈ ನೆಲದಲ್ಲಿ ಶಾಂತಿಯನ್ನು ಕಾಪಾಡುತ್ತದೆ. ಒಂದು ದ್ವೇಷವನ್ನು ನಿರ್ಮಾಣ ಮಾಡುವ ಅವಕಾಶ ಇರುವಾಗ ಅದರ ವಿನಾಶದಂಚಿಗೆ ತೆಗೆದುಕೊಂಡು ಹೋಗುವುದು ಏಕೆ ?, ಈ ಕಾನೂನು ದೇಶದಲ್ಲಿ ಉಳಿಸುವ ಶಾಂತಿ ಹಾಗು ತರುವ ಸಮೃದ್ಧಿಯನ್ನು ನೋಡಿದ ಯಾವುದೇ ನಾಯಕ ಇದನ್ನು ತನ್ನ ದೇಶದಲ್ಲೂ ಜಾರಿಗೆ ತರಬಹುದು ಎಂಬ ಆಶಾವಾದ ನನಗಿದೆ. 

‘ವಸುದೈವ ಕುಟುಂಬಕಂ’ ಅಂದರೆ ಜಗತ್ತೇ ಒಂದು ಕುಟುಂಬ ಎಂಬುದು ಭಾರತೀಯ ಸಮಾಜದ ಅತ್ಯಂತ ಮಹತ್ವದ ಮೌಲ್ಯ. ಮಹಾ ಉಪನಿಷತ್ತಿನ ಈ ವಾಕ್ಯವನ್ನು  ಭಾರತದ ಸಂಸತ್ತಿನ ಪ್ರವೇಶ ಸಭಾಂಗಣದಲ್ಲೇ ಕೆತ್ತಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದನ್ನು ನೆನಪಿಸಿದ್ದಾರೆ, ಗಾಂಧೀಜಿ ಅದನ್ನು ಜಾರಿಗೆ ತಂದಿದ್ದಾರೆ. ನಾನು ಭಾರತದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಮರಣದ ನೆರಳು ಇನ್ನಷ್ಟು ಚಾಚುತ್ತಾ ಹೋಗದಂತೆ ತಡೆಯಲು ಮತ್ತು ನಮ್ಮ ಆರ್ಥಿಕತೆ ಹಾಗು ಸಮಾಜ ಸಂಪೂರ್ಣ ಕುಂಠಿತವಾಗದಂತೆ ತಡೆಯಲು ಜನರು ಮನೆಯೊಳಗೇ ಇರಬೇಕಾದ  ಸಾಂಕ್ರಾಮಿಕದ  ಈ ವಿಶೇಷ  ಸಂದರ್ಭದಲ್ಲಿ  ಇದಕ್ಕಾಗಿ ಹೆಚ್ಚು ಪ್ರಾರ್ಥಿಸುತ್ತೇನೆ.  

-ಹಿಂದ್ ಅಲ್ ಖಾಸಿಮಿ, ಅರಬ್ ಲೇಖಕಿ, ಉದ್ಯಮಿ ಹಾಗು ವೆಲ್ವೆಟ್ ಮ್ಯಾಗಝಿನ್ ಸಂಪಾದಕಿ  gulfnews.comಗೆ ಬರೆದ ವಿಶೇಷ ಲೇಖನ

ಕೃಪೆ:vbnewsonline.in

Read These Next

ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು

ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ...

ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ...

ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ !

ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ...

ಉತ್ತರಕನ್ನಡ ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ

ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ...

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉಪನ್ಯಾಸಕ ಹುದ್ದೆ ಭರ್ತಿ ಮಾಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಮಂಗಳೂರು : ರಾಜ್ಯ ಸರ್ಕಾರ ಖಾಲಿ‌ ಇರುವ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ಕೂಡಲೇ ನೇಮಿಸುವಂತೆ ಆಗ್ರಹಿಸಿ ಎಬಿವಿಪಿ ...

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ಕೇಂದ್ರಗಳಲ್ಲಿ ಕೋವಿಡ್ ಲಸಿಕೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಚಾಲನೆ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 6 ಕೇಂದ್ರಗಳಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ನೀಡುವ ಕಾರ್ಯಕ್ರಮ ಸರ್ಕಾರಿ ವೆನ್ಲಾಕ್ ...

ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ

ಹುಬ್ಬಳ್ಳಿ :‌ ಕೋವಿಡ್ ತಡೆಯಲು ಇಂದಿನಿಂದ ದೇಶದಾದ್ಯಂತ ಪ್ರಾರಂಭವಾದ ಕೋವಿಶೀಲ್ಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ ...