ನಾವೇ ಸಾಕುತ್ತಿರುವ ಹದ್ದುಗಳು

Source: sonews | By Staff Correspondent | Published on 28th August 2017, 5:16 PM | State News | National News | Special Report | Guest Editorial | Don't Miss |

ನಾವು ಸಾಕಿರುವುದು ರಣಹದ್ದುಗಳನ್ನೇ ಎಂದ ಮೇಲೆ, ಅದು ಸಮಾಜವನ್ನು ಕುಕ್ಕಿ ತಿನ್ನುವಾಗ ಇನ್ನಾರನ್ನೋ ಹೊಣೆ ಮಾಡುವಂತಿದೆಯೆ? ಬಾಬಾ ಗುರ್ಮೀತ್ ಸಿಂಗ್ ಪ್ರಕರಣದಿಂದ ಒಂದಂತೂ ಸಾಬೀತಾಗಿದೆ. ಮುಂದಿನ ದಿನಗಳಲ್ಲಿ, ಈ ದೇಶಕ್ಕೆ ಅತೀ ದೊಡ್ಡ ಸವಾಲು ಯಾವುದೇ ಹೊರಗಿನ ಭಯೋತ್ಪಾದಕ ಸಂಘಟನೆಗಳಲ್ಲ. ನಾವೇ ಸಾಕುತ್ತಿರುವ ಸ್ವಯಂಘೋಷಿತ ಸ್ವಾಮೀಜಿಗಳು, ಬಾಬಾಗಳು, ದೇವಮಾನವರೇ ದೇಶದ ಆಂತರಿಕ ಭದ್ರತೆಯ ಬಹುದೊಡ್ಡ ಶತ್ರುಗಳಾಗಿ ಪರಿಣಮಿಸಲಿದ್ದಾರೆ. ಹರ್ಯಾಣದಲ್ಲಿ ನಡೆದಿರುವುದು ಕೇವಲ ಹಿಂಸಾಚಾರ, ಸಂಘರ್ಷಗಳಲ್ಲ.

 

‘ನಮ್ಮ ಬಾಬಾ ಅಪರಾಧ ಮಾಡಿರಲಿ, ಮಾಡದಿರಲಿ ಅವರನ್ನು ಶಿಕ್ಷಿಸುವ ಅಧಿಕಾರ ಈ ದೇಶದ ಸಂವಿಧಾನಕ್ಕಿಲ್ಲ’ ಎನ್ನುವ ಮೂಲಕ ಭಾಬಾ ಭಕ್ತರು ನಮ್ಮ ದೇಶದ ವಿರುದ್ಧ ಯುದ್ಧವನ್ನು ಘೋಷಿಸಿದರು. ಈ ಯುದ್ಧ ಘೋಷಣೆಯ ಸೂಚನೆ ನಮ್ಮ ಸರಕಾರಕ್ಕೆ ಅನಿರೀಕ್ಷಿತ ಆಗಿರಲಿಲ್ಲ. ಎರಡು ದಿನಗಳ ಮೊದಲೇ ಇಂತಹದೊಂದು ಸೂಚನೆಯನ್ನು ಸ್ವಯಂಘೋಷಿತ ಬಾಬಾ ಗುರ್ಮೀತ್ ಸಿಂಗ್ ಭಕ್ತರು ನೀಡಿದ್ದರು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನೂ ಸ್ವತಃ ರಾಜ್ಯ ಸರಕಾರವೇ ನಿರ್ಮಿಸಿಕೊಟ್ಟಿತ್ತು. ಹರ್ಯಾಣದಲ್ಲಿ ನಡೆದಿರುವ ಹಿಂಸಾಚಾರದ ಹಿಂದೆ ಶೇ. 50ರಷ್ಟು ಭಕ್ತರ ಕೈವಾಡವಿದ್ದರೆ, ಉಳಿದ ಶೇ. 50ರಷ್ಟು ಸರಕಾರದ ಪಾಲಿದೆ. ಇಲ್ಲಿ ಸಂಭವಿಸಿರುವುದು ಯಾವುದೂ ಆಕಸ್ಮಿಕವಾಗಿರಲಿಲ್ಲ. ಇಂತಹದೊಂದು ಸಮಸ್ಯೆ ಎದುರಾಗಬಹುದೆಂದು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲು ಸರಕಾರಕ್ಕೆ ಸೂಚನೆಯಿತ್ತು. ಆದರೂ ಭಕ್ತರ ಹಿಂಸಾಚಾರವನ್ನು ತಡೆಯಲು ಹರ್ಯಾಣ ಸರಕಾರ ವಿಫಲವಾಯಿತು. ತನ್ನ ದೇಶದ ಒಳಗಿನ ವಿದ್ರೋಹಿ ಶಕ್ತಿಗಳನ್ನು ನಿಗ್ರಹಿಸಲು ವಿಫಲವಾಗಿರುವ ಅಥವಾ ಪರೋಕ್ಷವಾಗಿ ಅವರೊಂದಿಗೆ ಶಾಮೀಲಾಗಿರುವ ಸರಕಾರ ಮತ್ತು ರಾಜಕೀಯ ನಾಯಕರನ್ನು ಕಟ್ಟಿಕೊಂಡು ನಾವು ಚೀನಾದಂತಹ ಹೊರಗಿನ ಶತ್ರುಗಳನ್ನು ನಿಭಾಯಿಸಲು ಸಾಧ್ಯವೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ.

ಲಜ್ಜೆಯೆನ್ನುವ ಸಣ್ಣದೊಂದು ಅಂಶ ಪ್ರಧಾನಿ ಮೋದಿಯವರಲ್ಲಿ ಇದ್ದಿದ್ದರೆ ಹರ್ಯಾಣ ಹಿಂಸಾಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಹಾಕಿದ ಛೀಮಾರಿಯ ಮರು ಕ್ಷಣವೇ ಹರ್ಯಾಣಕ್ಕೆ ದಾವಿಸಿ, ಜನರನ್ನ ಸಂತೈಸಬೇಕಾಗಿತ್ತು. ಪರಿಸ್ಥಿತಿಯ ಕುರಿತಂತೆ ಕನಿಷ್ಟ ಹರ್ಯಾಣ ಮುಖ್ಯಮಂತ್ರಿಯ ಜೊತೆಗಾದರೂ ಮಾತುಕತೆ ನಡೆಸಬೇಕಾಗಿತ್ತು. ರಾಜ್ಯ ಗೃಹ ಸಚಿವರ ರಾಜೀನಾಮೆಯನ್ನು ಬೇಡಬೇಕಾಗಿತ್ತು. ಆದರೆ ಏನೂ ಸಂಭವಿಸಿಲ್ಲ ಎಂಬಂತೆ ನರೇಂದ್ರ ಮೋದಿಯವರು, ತನ್ನ ‘ಮಂಕೀ’ ಬಾತ್‌ನ್ನು ಈ ಬಾರಿಯೂ ಮುಂದುವರಿಸಿದ್ದಾರೆ. ಹರ್ಯಾಣದ ಕುರಿತ ಅವರ ವೌನ, ಗುರ್ಮೀತ್ ಭಕ್ತರ ಕೃತ್ಯವನ್ನು ಸಮರ್ಥಿಸುವಂತಿದೆ. ಮತ್ತು ಅವರಿಗೆ ಇನ್ನಷ್ಟು ಕುಮ್ಮಕ್ಕನ್ನು ನೀಡುವಂತಿದೆ. ಕಾನೂನು ಇಲಾಖೆಗಾಗಲಿ, ಜನರಿಗಾಗಲಿ ನೇರ ಸೂಚನೆ, ಸಾಂತ್ವನಗಳನ್ನು ಹೇಳದೇ ಇರುವ ಪ್ರಧಾನಮಂತ್ರಿಯ ವರ್ತನೆ, ಬಾಬಾ ಗುರ್ಮೀತ್ ಸಿಂಗ್ ಬಗ್ಗೆ ಅವರೆಷ್ಟು ಮೃದುವಾಗಿದ್ದಾರೆ ಎನ್ನುವುದನ್ನು ಹೇಳುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರಕಾರ ಬಾಬಾ ಗುರ್ಮೀತ್‌ನ ಪಾಪಾದ ಚೀಲವನ್ನು ಹೇಗೆ ಹೊತ್ತುಕೊಂಡಿದೆ ಎನ್ನುವುದಕ್ಕೆ ರೂಪಕವಾಗಿದ್ದಾರೆ, ಹರ್ಯಾಣದ ಉಪ ಅಡ್ವೊಕೇಟ್‌ಜನರಲ್. ಬಾಬಾ ಜೈಲಿನ ಕಡೆಗೆ ಸಾಗುತ್ತಿರುವಾಗ ಅವರ ಬ್ಯಾಗ್‌ನ್ನು ಈ ಹಿರಿಯ ಅಧಿಕಾರಿ ಹೊತ್ತುಕೊಂಡಿದ್ದರು. ಮಾಧ್ಯಮಗಳಲ್ಲಿ ಇದು ಚರ್ಚೆಯಾಗುತ್ತಿದ್ದಂತೆಯೇ ಈತನನ್ನು ವಜಾಗೊಳಿಸುವ ನಾಟಕ ನಡೆಯಿತು. ನಿಜಕ್ಕೂ ಬಾಬಾನ ಚೀಲ ಹೊತ್ತುಕೊಂಡಿರುವುದು ದೇಶದ ಪ್ರಧಾನಿಯೇ ಆಗಿದ್ದಾರೆ. ಆದುದರಿಂದಲೇ, ಹಿಂಸಾಚಾರಕ್ಕೆ ಭಕ್ತರನ್ನು ನೇರವಾಗಿ ಹೊಣೆ ಮಾಡುವುದರಿಂದ ನಾವು ಏನನ್ನೂ ಸಾಧಿಸಿದಂತಾಗುವುದಿಲ್ಲ.

ಹರ್ಯಾಣದಲ್ಲಿ ಹಿಂಸಾಚಾರ ನಡೆಸಿದವರು ಮತ್ತು ಹಿಂಸಾಚಾರಕ್ಕೆ ಬಲಿಯಾದವರು ಕಾಣದ ಕೈಗಳ ಬಲಿಪಶುಗಳು. ಗುರ್ಮೀತ್ ಸಿಂಗ್‌ನ ಇತಿಹಾಸವನ್ನು ಒಂದಿಷ್ಟು ಬಿಡಿಸಿದರೂ ಸಾಕು, ಇಂದಿನ ಹಿಂಸಾಚಾರದ ನಿಜವಾದ ಪಾತ್ರಧಾರಿಗಳು ಯಾರು ಎನ್ನುವುದನ್ನು ನಾವು ಸ್ಪಷ್ಟ ಮಾಡಿಕೊಳ್ಳಬಹುದು. ಬೇರೆ ಬೇರೆ ಪಕ್ಷದ ನಾಯಕರು ಗುರ್ಮೀತ್ ಸಿಂಗ್‌ನನ್ನು ಬೆಳೆಸಿದ್ದಾರೆ. ಬಿಜೆಪಿಯಂತೂ ಈತನ ಬೆಳವಣಿಗೆಯಲ್ಲಿ ನೇರ ಪಾತ್ರವನ್ನು ವಹಿಸಿದೆ. ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ದಿನಗಳಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಈತನ ಜೊತೆಗೆ ಗುರುತಿಸಿಕೊಂಡು, ಸ್ವಚ್ಛತಾ ಆಂದೋಲನಕ್ಕೆ ಈತನ ಕೊಡುಗೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ವೈಯಕ್ತಿಕ ಚಾರಿತ್ರವನ್ನೇ ಶುಚಿಯಾಗಿಟ್ಟುಕೊಳ್ಳದ ಮನುಷ್ಯನ ಜೊತೆಗೆ ಗುರುತಿಸಿಕೊಂಡು ಸಮಾಜವನ್ನು ಶುಚಿಗೊಳಿಸುತ್ತೇನೆ ಎಂದು ಹೊರಟಿರುವ ನಮ್ಮ ಪ್ರಧಾನಿಯ ಸ್ವಚ್ಛತಾ ಆಂದೋಲನದ ಟೊಳ್ಳುತನವನ್ನು ಇದು ಹೇಳುತ್ತದೆ.

ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯೊಂದಿಗೆ ಪ್ರಧಾನಿಯೊಬ್ಬರು ವೇದಿಕೆ ಹಂಚಿಕೊಳ್ಳುವುದು ಪರೋಕ್ಷವಾಗಿ ನ್ಯಾಯ ವ್ಯವಸ್ಥೆಯ ಮೇಲೆ ಒತ್ತಡ ಬೀರುತ್ತದೆ ಎನ್ನುವುದು ನರೇಂದ್ರ ಮೋದಿಯಂತಹ ಮುತ್ಸದ್ದಿಗೆ ತಿಳಿಯದ ಸಂಗತಿಯೆ? ರಾಜ್ಯ ಸಚಿವರೊಬ್ಬರು ಕೋಟಿಗಟ್ಟಲೆ ಹಣವನ್ನು ಗುರ್ಮೀತ್ ಆಶ್ರಮಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅದನ್ನು ಸಮರ್ಥಿಸಿಕೊಳ್ಳುತ್ತಾ ‘‘ನನಗೆ ಇನ್ನಷ್ಟು ಅಧಿಕಾರವಿದ್ದರೆ, ಇನ್ನೂ ಅಧಿಕ ಹಣ ಬಿಡುಗಡೆ ಮಾಡುತ್ತಿದ್ದೆ’’ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ, ನ್ಯಾಯವ್ಯವಸ್ಥೆ ಮತ್ತು ಸಂವಿಧಾನದ ವಿರುದ್ಧ ಗುರ್ಮೀತ್ ಭಕ್ತರ ಯುದ್ಧದಲ್ಲಿ ಇಡೀ ರಾಜ್ಯ ಸರಕಾರವೇ ಬಹಿರಂಗವಾಗಿ ಕೈಜೋಡಿಸಿದಂತಾಗಲಿಲ್ಲವೇ? ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಪ್ರಧಾನಿ ಮೋದಿ ಅವರು ರವಿವಾರ ಮತ್ತೆ ತಮ್ಮ ಎಂದಿನ ‘ಹರಿಕಥೆ’ ಮಾಲಿಕೆಯಾಗಿರುವ ‘ಮನ್‌ಕೀ ಬಾತ್’ನಲ್ಲಿ ಕಾಣಿಸಿಕೊಂಡು ಉಪನ್ಯಾಸ ಮುಂದುವರಿಸಿದರು.

ಅವರೊಳಗೆ ಒಂದಿಷ್ಟು ಲಜ್ಜೆಯಾದರೂ ಉಳಿದಿದ್ದರೆ, ಮುಖದ ಮೇಲಿರುವ ಹೈಕೋರ್ಟ್‌ನ ಉಗುಳನ್ನು ಒರೆಸಿಕೊಳ್ಳುವುದಕ್ಕಾದರೂ ತನ್ನ ‘ಉಪನ್ಯಾಸ’ವನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಮನ್‌ಕೀಬಾತ್‌ನಲ್ಲಿ ಗೋರಖ್‌ಪುರದ ಮೃತ ಮಕ್ಕಳಿಗಾಗಲಿ, ಹರ್ಯಾಣದ ಮೃತ ನಾಗರಿಕರಿಗಾಗಲಿ ಎಳ್ಳಷ್ಟೂ ಸ್ಥಾನವಿರಲಿಲ್ಲ. ಈ ದೇಶದಲ್ಲಿ ಗುರ್ಮೀತ್ ಸಿಂಗ್ ಕೊನೆಯ ವ್ಯಕ್ತಿಯಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ತನ್ನದೇ ಪರ್ಯಾಯ ಸರಕಾರವೊಂದನ್ನು ಹರ್ಯಾಣದಲ್ಲಿ ರಚಿಸಿಕೊಂಡ ಗುರ್ಮೀತ್‌ಗಿಂತಲೂ ಅಪಾಯಕಾರಿಯಾಗಿರುವ ಬಾಬಾಗಳು ಈ ದೇಶಾದ್ಯಂತ ಇನ್ನೂ ಅಸ್ತಿತ್ವದಲ್ಲಿದ್ದಾರೆ ಮತ್ತು ಅವರು ಬೇರೆ ಬೇರೆ ವೇಷಗಳಲ್ಲಿ ದೇಶವನ್ನು ಮತ್ತು ನಮ್ಮನ್ನಾಳುವ ಸರಕಾರವನ್ನು ಆವರಿಸಿಕೊಂಡಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ಬಾಬಾ ರಾಮ್‌ದೇವ್ ರಾಮ್‌ಲೀಲಾ ಮೈದಾನದಲ್ಲಿ ರಾಜಕೀಯ ಆಟ ಆಡಲು ಹೋಗಿ ಮುಖಭಂಗ ಅನುಭವಿಸಿದ್ದು ಇನ್ನೂ ಹಸಿಯಾಗಿದೆ. ಅಂದು ರಾತ್ರೋರಾತ್ರಿ ಪೊಲೀಸರನ್ನು ನುಗ್ಗಿಸಿ ಆತನ ಪಡೆಯನ್ನು ಅಲ್ಲಿಂದ ತೊಲಗಿಸದೇ ಇದ್ದಿದ್ದರೆ, ಚೂಡಿದಾರದ ಮರೆಯಲ್ಲಿ ಅಡಗಿದ್ದ ರಾಮ್‌ದೇವ್ ಭಾರೀ ಅನಾಹುತವನ್ನು ನಡೆಸಿ ಬಿಡುತ್ತಿದ್ದ. ಆ ಸಂದರ್ಭದಲ್ಲಿ ರಾಮ್‌ದೇವ್ ‘‘ನಾನು ಪ್ರತ್ಯೇಕ ಸೇನೆಯನ್ನು ಕಟ್ಟುತ್ತೇನೆ, ರಾಮ್‌ಲೀಲಾ ಮೈದಾನವನ್ನು ರಾವಣಲೀಲಾ ಮಾಡುತ್ತೇನೆ’’ ಎಂದು ಸರಕಾರಕ್ಕೆ ಬೆದರಿಕೆ ಒಡ್ಡಿದ್ದ. ಆ ಘಟನೆಯನ್ನು ನಾವು ಮರೆತಿರಬಹುದಾದರೂ, ರಾಮ್‌ದೇವ್ ಮರೆತಂತೆ ಕಾಣುತ್ತಿಲ್ಲ. ಇದೀಗ ‘ಪರಾಕ್ರಮ್ ಸುರಕ್ಷಾ’ ಎನ್ನುವ ಹೆಸರಿನಲ್ಲಿ ಭದ್ರತಾ ಪಡೆಗಳನ್ನು ನಿರ್ಮಾಣ ಮಾಡುತ್ತಿದ್ದಾನೆ. ಆತನ ಆಶ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳು ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಪಡೆಗಳು ಒಂದಲ್ಲ ಒಂದು ದಿನ ಈ ದೇಶದ ಪ್ರಜಾಸತ್ತೆಯ ವಿರುದ್ಧ ನಿಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ. ಆಗ ನಾವು ಅದಕ್ಕಾಗಿ ಯಾರನ್ನು ಹೊಣೆ ಮಾಡಬೇಕು? ಇಂದು ಈತನನ್ನು ಹಾಲುಕೊಟ್ಟು ಸಾಕುತ್ತಿರುವ ಸರಕಾರವನ್ನೇ ಅಲ್ಲವೇ? ಕಾನ್ಪುರದಲ್ಲಿ ಪ್ರತ್ಯೇಕ ದೇಶವನ್ನು ಕಟ್ಟಿಕೊಂಡಿದ್ದ ನೇತಾಜಿ ಪಡೆಯನ್ನು ಬಗ್ಗು ಬಡಿಯುವ ಸಂದರ್ಭದಲ್ಲಿ ನಾವು ಅದೆಷ್ಟೋ ಪೊಲೀಸರನ್ನು ಕಳೆದುಕೊಂಡೆವು. ಆದರೆ ನಮ್ಮದೇ ದೇಶದೊಳಗೆ ಇನ್ನೊಂದು ದೇಶವನ್ನು ಸೃಷ್ಟಿಸಲು ನಮ್ಮ ಸರಕಾರದ ಬೆಂಬಲವಿರದೇ ಸಾಧ್ಯವಾಗುತ್ತದೆಯೇ? ಹೀಗೆ ಇಂತಹ ನಕಲಿಬಾಬಾಗಳಿಗೆ, ದೇವಮಾನವರಿಗೆ, ಅಭಿನವಭಾರತದಂತಹ ಉಗ್ರವಾದಿ ಸಂಘಟನೆಗಳಿಗೆ ಪ್ರತ್ಯೇಕ ಸೇನೆಕಟ್ಟಲು ಅವಕಾಶ ಕೊಡುವ ಸರಕಾರ, ಮಗದೊಂದೆಡೆ ಕಾಶ್ಮೀರ ಪ್ರತ್ಯೇಕವಾದಿಗಳ ಜೊತೆಗೆ ಯಾವ ಮುಖ ಹೊತ್ತು ಸಂವಾದ ನಡೆಸುತ್ತದೆ?

ಕೊನೆಯ ಮಾತು; ಬಾಬಾ ಗುರ್ಮೀತ್ ಸಿಂಗ್‌ನ ವಿಷಯದಲ್ಲಿ ತಲೆಕೆಟ್ಟ ಭಕ್ತರು ಹಿಂಸಾಚಾರ ನಡೆಸಿದರು. ಆದರೆ ಈ ದೇಶದಲ್ಲಿ ನಕಲಿ ಬಾಬಾಗಳು ಶೂದ್ರ ಹಿನ್ನೆಲೆಯಿಂದ ಬಂದವರಾಗಿದ್ದರೆ ಮಾತ್ರ ಅವರ ವಿರುದ್ಧ ಮಾತನಾಡುವುದಕ್ಕೆ ನ್ಯಾಯವ್ಯವಸ್ಥೆ ಧೈರ್ಯ ತೋರಿಸುತ್ತದೆ. ನಿತ್ಯಾನಂದ ಸ್ವಾಮಿ, ಗುರ್ಮೀತ್ ಸಿಂಗ್‌ನಂತಹ ಬಾಬಾಗಳ ಬಗ್ಗೆ ಇರುವ ಆಸಕ್ತಿ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಸ್ವಾಮೀಜಿಗಳ ಕುರಿತು ಯಾಕಿಲ್ಲ? ಗುರ್ಮೀತ್ ಪ್ರಸಂಗವನ್ನೇ ಹೋಲುವ ರಾಘವೇಶ್ವರ ಸ್ವಾಮೀಜಿಯ ಅತ್ಯಾಚಾರ ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಪ್ರಕರಣದ ವಿಚಾರಣೆಯಿಂದ ನ್ಯಾಯಾಧೀಶರೇ ಹಿಂದೆ ಸರಿದರು. ಬಾಬಾ ಗುರ್ಮೀತ್ ಸಿಂಗ್ ಭಕ್ತರಿಗಿಂತ ಈ ನ್ಯಾಯಾಧೀಶರು ಹೇಗೆ ಭಿನ್ನರಾಗುತ್ತಾರೆ? ನ್ಯಾಯವ್ಯವಸ್ಥೆಯನ್ನು ನಿಯಂತ್ರಿಸುವ ಇಂತಹ ಸಂವಿಧಾನ ತಜ್ಞರೇ ಒಬ್ಬ ಸನ್ಯಾಸಿಯ ಸೆರಗು ಹಿಡಿಯಬಲ್ಲರಾದರೆ, ಹರ್ಯಾಣದ ಅವಿದ್ಯಾವಂತ ನಾಗರಿಕರ ಬಗ್ಗೆ ನಾವು ಚರ್ಚಿಸುವುದಕ್ಕೆ ಏನು ಉಳಿಯುತ್ತದೆ?

ಕೃಪೆ: ವಾರ್ತಾಭಾರತಿ ಸಂಪಾದಕೀಯ

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...