ದುಬೈ:ಕನ್ನಡ ಕೋಗಿಲೆಗಳ ಸಂಗೀತ ಸಂಗಮ-ದೀಪಾವಳಿಯ ಸಂಜೆಯನ್ನು ರಂಗೇರಿಸಿದ ಸುಂದರ ಕಾರ್ಯಕ್ರಮ

Source: arshad | By Arshad Koppa | Published on 24th October 2017, 12:10 AM | Gulf News | Special Report | Tour |

ದುಬೈ, ಅ ೨೧: ಈ ವರ್ಷದ ದೀಪಾವಳಿ ಹಬ್ಬದ ಸಡಗರವನ್ನು ಯು.ಎ.ಇ.ಯಲ್ಲಿರುವ ಕನ್ನಡಿಗರು ತಮ್ಮ ನೆಚ್ಚಿನ ಗಾಯಕ ಗಾಯಕಿಯರೊಂದಿಗೆ ಸುಂದರ ಕನ್ನಡ ಸಂಗೀತ ಸಂಜೆಯ ರಾಗಲಹರಿಯಲ್ಲಿ ಮಿಂದು ಪುಳಕಿತರಾಗುವ ಮೂಲಕ ಆಚರಿಸಿದರು. 

ಅ. ೨೦ ರ ಶುಕ್ರವಾರದ ಸಂಜೆ ನಗರದ ಶೇಖ್ ರಾಶಿದ್ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ’ಕನ್ನಡ ಕೋಗಿಲೆಗಳ ಸಂಗೀತ ಸಂಗಮ’ ಕಾರ್ಯಕ್ರಮ ಸಾಂಸ್ಕೃತಿಕ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಎಸ್ಸೆಲ್ ಈವೆಂಟ್ಸ್ ಹಾಗೂ ವೆಂಚುರಾ ರಿಸೋರ್ಸಸ್ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಾಡಿನಿಂದ ಆಗಮಿಸಿದ್ದ ಕನ್ನಡದ ಪ್ರಮುಖ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್, ಶ್ರೀ ಹೇಮಂತ್ ಕುಮಾರ್ ಶಾಸ್ತ್ರಿ, ಗಾಯಕಿಯರಾದ ಶ್ರೀಮತಿ ಮಾನಸ ಹೊಳ್ಳ, ಕರ್ನಾಟಕದ ಏಕಮಾತ್ರ ಬೇಸ್ ಗಿಟಾರ್ ವಾದಕಿ ಪ್ರಾರ್ಥನಾ ಕಿರಣ್, ಯುವ ಗಾಯಕಿ ಸುಪ್ರಿಯಾ ಜೋಶಿ, ಕಾಮೆಡಿ ಕಿಲಾಡಿಗಳು ತಂಡದ ಸದಸ್ಯರಾದ ಗೋವಿಂದೇಗೌಡ, ಅನೀಶ್, ನಯನ ಹಾಗೂ ಬಹುಮುಖ ಪ್ರತಿಭೆ ಹಾಗೂ ಕನ್ನಡದ ವಿವಿಧ ನಟರ ಧ್ವನಿಯನ್ನು ಯಥಾವತ್ತಾಗಿ ಅನುಸರಿಸುವ ಶ್ರೀ ರವಿ ಸಂತೋಷ್ ಈ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ಈ ಸಂಜೆಯನ್ನು ಸ್ಮರಣೀಯವಾಗಿಸಿದರು. ಇವರೊಂದಿಗೆ ದುಬೈಯ ಪ್ರಮುಖ ಉದ್ಯಮಿ ಹಾಗೂ ಮಾರ್ಚ್ ೨೨ ಚಿತ್ರದ ನಿರ್ಮಾಪಕರಾದ ಶ್ರೀ ಹರೀಶ್ ಶೇರಿಗಾರ್ ಉಪಸ್ಥಿತರಿದ್ದು ಹಲವು ಹಾಡುಗಳಿಗೆ ತಮ್ಮ ಮಧುರದನಿಯನ್ನು ನೀಡಿದರು. ಹಿರಿಯ ಕಲಾವಿದ ನಾಗೇಶ್ವರ್ ವಿಜಾಪುರ್ ರವರೂ ಈ ಕಾರ್ಯಕ್ರಮದ ಯಶಸ್ಸಿಗೆ ನೆರವಾದರು. 

ಸಂಗೀತ ಕಾರ್ಯಕ್ರಮವೇ ಆದರೂ ನಡುನಡುವೆ ರೀವಾ ಡಾನ್ಸ್ ಮತ್ತು ಮ್ಯೂಸಿಕ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಕಲಾವಿದರು ಕೆಲವಾರು ಕನ್ನಡ ಹಾಡುಗಳಿಗೆ ಸುಂದರವಾಗಿ ನರ್ತಿಸಿ ನೋಡುಗರ ಮನಸೂರೆಗೊಂಡರು. ಇವರೊಂದಿಗೆ ಸಹೋದರಿಯರಾದ ಶಾಲಿನಿ ಮಾಲಿನಿಯವರು ತಮ್ಮ ಭರತನಾಟ್ಯ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಯಾವುದೇ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಲು ಸಂಗೀತಗಾರರ ತಂಡದ ಪ್ರದರ್ಶನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ತಂಡದಲ್ಲಿ ಅತ್ಯಂತ ಪ್ರತಿಭಾವಂತ ಸಂಗೀತಗಾರರ ದಂಡೇ ಉಪಸ್ಥಿತರಿದ್ದು ಸಂಗೀತದ ಮಜಲನ್ನು ಪೂರ್ಣವಾಗಿ ಆಸ್ವಾದಿಸಲು ನೆರವಾಯಿತು. ಕೀಬೋರ್ಡ್ ನಲ್ಲಿ ಶ್ರೀ ದೀಪಕ್, ನುಡಿಸಲು ಅತ್ಯಂತ ಕಷ್ಟವಾದ ಸಂಗೀತ ಉಪಕರಣವಾದ ಸ್ಯಾಕ್ಸೋಫೋನ್ ಹಾಗೂ ಕೊಳಲನ್ನು ಸುಶ್ರಾವ್ಯವಾಗಿ ನುಡಿಸಿದ ಶ್ರೀ ಸಂದೀಪ್, ಲೀಡ್ ಗಿಟಾರ್ ನಲ್ಲಿ ಶ್ರೀ ಕಾರ್ತಿಕ್, ಕರ್ನಾಟಕದ ಏಕಮಾತ್ರ ಬೇಸ್ ಗಿಟಾರ್ ವಾದಕಿ ಎಂಬ ಹೆಗ್ಗಳಿಕೆ ಪಡೆದ ಪ್ರಾರ್ಥನಾ ಕಿರಣ್, ಡ್ರಂ ಉಪಕರಣಗಳನ್ನು ತನ್ನ ಬೆರಳಿನ ತುದಿಯಿಂದ ಆಡಿಸುತ್ತಿದ್ದ ಶ್ರೀ ಅಭಿಶೇಕ್, ಹಂಸಲೇಖ, ಎಸ್ಪಿ ಬಾಲಸುಬ್ರಹ್ಮಣ್ಯಂ ಸಹಿತ ಹಲವು ಖ್ಯಾತ ಸಂಗೀತ ನಿರ್ದೇಶಕ-ಗಾಯಕರ ಗಾಯನಗಳಿಗೆ ತಬಲಾ ವಾದಿಸಿದ ಶ್ರೀ ಪ್ರದ್ಯುಮ್ನ ಹಾಗೂ ಇವರೆಲ್ಲರ ಸಂಗೀತದ ಸಂಯೋಜನೆಯನ್ನು ಅತ್ಯಂತ ಸುಂದರವಾಗಿ ನಿರ್ವಹಿಸುತ್ತಿದ್ದ ಶ್ರೀ ರಾಮು ಸಂಗೀತ ಕಾರ್ಯಕ್ರಮದ ಯಶಸ್ವಿಯ ರೂವಾರಿಯಾದರು. 

ಶ್ರೀ ಹರೀಶ್ ಶೇರಿಗಾರ್ ರವರು ’ಆಕಾಶದಿಂದ ಧರೆಗಿಳಿದ ರಂಭೆ’ ಎಂಬ ಹಳೆಯ ಹಾಡುಗಳಿಂದ ಹಿರಿಯರನ್ನು ರಂಜಿಸಿದರೆ ರಾಜೇಶ್ ಕೃಷ್ಣನ್ ರವರು ತಮ್ಮ ನವೀನ ಗಾನಗಳಿಂದ ಯುವಕರನ್ನು ರಂಜಿಸಿದರು. ಹೇಮಂತ್ ಶಾಸ್ತ್ರಿಯವರು ತಮ್ಮ ’ಪ್ರೀತ್ಸೆ ಪ್ರೀತ್ಸೆ’ ಹಾಡಿನ ಪಲ್ಲವಿಯ ಕಡೆಯ ಪದವಾದ ’ಪ್ರೀತ್ಸೆ’ ಪದವನ್ನು ಸಭಿಕರಿಂದಲೇ ಹಾಡಿಸಿ ಈ ಹಾಡಿಗೊಂದು ಹೊಸ ಆಯಾಮವನ್ನೇ ನೀಡಿದರು. ಬುಲ್ ಬುಲ್ ಮಾತಾಡಕಿಲ್ವಾ, ಒಮ್ಮೆ ಹೇಳುತೈತಿ, ಮತ್ತೆ ಹೇಳುತೈತೆ ಮೊದಲಾದ ತೀವ್ರಗತಿಯ ಹಾಡುಗಳನ್ನೂ ಹಾಡಲಾಯಿತು.  ಹರೀಶ್ ಶೇರಿಗಾರ್ ಹಾಗೂ ಮಾನಸ ರವರ ’ಒಂದೇ ಒಂದು ಆಸೆಯು’ ಹಾಡು ಸಹಾ ಮನಸೆಳೆಯಿತು.

ಹೇಮಂತ್, ಮಾನಸ ಹೊಳ್ಳ ಹಾಗೂ ಸುಪ್ರಿಯಾರವರು ಹಾಡಿದ ಒಂದು ಹಾಡಿನಲ್ಲಿ ಎಲ್ಲಾ ಹಬ್ಬಗಳ ಮಹತ್ವವನ್ನು ಸಾರುವ ವಾಕ್ಯಗಳನ್ನು ಒಳಗೊಂಡು ಹೊಸದಾದ ಅನುಭವ ನೀಡಿತು. ’ಸಂಕ್ರಾತಿ ಬಂತೋ-ರತ್ತೋ ರತ್ತೋ’ ಪಲ್ಲವಿಯಿಂದ ಪ್ರಾರಂಭವಾದ ಗಾಯನ ಯುಗಯುಗಾದಿ ಕಳೆದರೂ ಎಂದು ಮುಂದುವರೆದು ದೀಪಾವಳಿಯ ಸಂಭ್ರಮದವರೆಗೆ ಮುಂದುವರೆಯಿತು.

ನಂತರ ರೇವಾ ಡಾನ್ಸ್ ಗ್ರೂಪ್ ನ ನಿರೂಪಕಿ ಡಾ. ರಶ್ಮಿಯವರ ನಿರ್ದೇಶನದಲ್ಲಿ ಜೀವನದಲ್ಲಿ ಒಳ್ಳೆಯದ್ದೂ ಕೆಟ್ಟದ್ದೂ ಇರುವುದನ್ನು ಸಮತೋಲನದಿಂದ ಸ್ವೀಕರಿಸಬೇಕೆಂಬ ಸಂದೇಶವಿರುವ ನೃತ್ಯರೂಪಕವನ್ನು ತಂಡದ ಕಲಾವಿದರು ನೆರವೇರಿಸಿಕೊಟ್ಟರು. ಈ ತಂಡದಲ್ಲಿದ್ದ ಪುಟಾಣಿ ಮಕ್ಕಳೂ ಸಂಗೀತಕ್ಕೆ ಮಧುರವಾಗಿ ನರ್ತಿಸಿ ಮನ ಸೆಳೆದರು.

ಸಂಗೀತ ಕಲಾವಿದರ ನಿಜವಾದ ಪ್ರತಿಭೆ ಅವರ ಉಪಕರಣಗಳನ್ನು ಅತಿ ಕಷ್ಟದ ಸಂಗೀತವನ್ನು ನುಡಿಸುವುದಾಗಿರುತ್ತದೆ. ಮುಂದಿನ ಏಳು ನಿಮಿಷಗಳವರೆಗೆ ಸಂಗೀತದ ಎಲ್ಲಾ ಕಲಾವಿದರು ತಮ್ಮ ಉಪಕರಣಗಳನ್ನು ಗರಿಷ್ಟ ಉಪಯೋಗಿಸುವ ಮೂಲಕ ಅಷ್ಟೂ ಹೊತ್ತು ಸಭಿಕರು ಉಸಿರು ಹಿಡಿದು ಸಂಗೀತದ ಭಾಗವಾಗುವಂತೆ ಮಾಡಿದರು. 

ಬಳಿಕ ’ಬಾಳಾ ಬಂಗಾರ ನೀನು’ ಹಾಡಿಗೆ ಮಾಲಿನಿ ಶಾಲಿನಿ ಸಹೋದರಿಯರು ನರ್ತಿಸುವ ಮೂಲಕ ನೆರೆದವರನ್ನು ರಂಜಿಸಿದರು. 

ಸುಂಟರ ಗಾಳಿ ಹಾಡನ್ನು ಹಾಡುವಾಗ ಸಭಿಕರು ಹುಚ್ಚೆದ್ದು ನರ್ತಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ನೀಡಿತು.

ಕನ್ನಡದ ನೂರಾರು ಹಾಡುಗಳಿಗೆ ತಮ್ಮ ಮಧುರ ಸ್ವರವನ್ನು ನೀಡಿ ಕನ್ನಡ ಸಂಗೀತದ ಭಂಡಾರವನ್ನು ಶ್ರೀಮಂತನಾಗಿಸಿದ ಗಾಯಕ ಶ್ರೀ ರಾಜೇಶ್ ಕೃಷ್ಣನ್ ರಿಗೆ ’ಸ್ವರಮಾಧುರ್ಯ ಸಾರ್ವಭೌಮ’ ಬಿರುದನ್ನು ನೀಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾಮೆಡಿ ಕಿಲಾಡಿಗಳು ತಂಡದ ಸದಸ್ಯರಾದ ಗೋವಿಂದೇಗೌಡ, ಅನೀಶ್, ನಯನ ರವರು ತಮಗೆ ಲಭಿಸಿದ ಅವಕಾಶದಲ್ಲಿ ನಾಟಕ ಕಲಾವಿದರನ್ನು ಆಯ್ಕೆ ಮಾಡಲು ನಡೆಸುವ ಆಡಿಶನ್ ಒಂದನ್ನು ನಡೆಸುವ ಸಂದರ್ಭವನ್ನು ನಾಟಕೀಯ ರೂಪದಲ್ಲಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

ನಾಟಕ ಕಲಾವಿದರಾಗಲು ಆಗಮಿಸುವ ಕುಡುಕನಾಗಿ ಅನೀಶ್, ಭಿಕ್ಷುಕಿಯಾಗಿ ನಯನ ಹಾಗೂ ನಿರ್ದೇಶಕನಾಗಿ ಗೋವಿಂದೇಗೌಡ ಉತ್ತಮವಾದ ಪ್ರದರ್ಶನ ನೀಡಿದರು. 

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಈ ಕಾರ್ಯಕ್ರಮದ ರೂವಾರಿಗಳಾದ ಶ್ರೀ ಅರುಣ ಮುತ್ತುದರೂರು ರವರಿಗೆ ’ಕನ್ನಡ ಸೇವಕ’ ಹಾಗೂ ಚನ್ನಗಿರಿ ಪ್ರಸಾದ್ ಶೆಟ್ಟಿ ಮತ್ತು ಶ್ರೀ ರುದ್ರಯ್ಯ ರವರಿಗೆ ’ಕನ್ನಡ ಆರಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಲ್ಲರಿಗೂ ಪ್ರಶಸ್ತಿಫಲಕಗಳನ್ನು ನೀಡಿ ಸನ್ಮಾನಿಸಲಾಯಿತು. 

ಕಾರ್ಯಕಮದ ಪ್ರಮುಖ ಪ್ರಾಯೋಜಕರಾದ ’ಧಮ್ಮನಾಗಿ ಡೆವೆಲಪರ್ಸ್’ ಸಂಸ್ಥೆ ಹಾಗೂ ಸಹಪ್ರಾಯೋಜಕರು, ಎಲ್ಲಾ ಕಲಾವಿದರಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರವಿ ಸಂತೋಷ್ ರವರು ವಹಿಸಿದ್ದು ತಮ್ಮ ವಿವಿಧ ನಟರನ್ನು ಅನುಕರಣೆ ಮಾಡುವ ಪ್ರತಿಭೆಯನ್ನು ಧಾರಾಳವಾಗಿ ಬಳಸಿಕೊಂಡರು. 

ಶ್ರೀ ರುದ್ರಯ್ಯ ರವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.


ಚಿತ್ರ, ವರದಿ: ಅರ್ಶದ್ ಹುಸೇನ್, ಎಂ.ಹೆಚ್, ದುಬೈ

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...

ಕೋಲಾರ:ವಿವಿಧ ಸಂಘಟನೆಗಳ ವತಿಯಿಂದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ

 ಪ್ರತಿ ಹಳ್ಳಿಗಳಲ್ಲಿರುವ ಕಲಾವಿದರುಗಳನ್ನು ಇಲಾಖೆ ಮತ್ತು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ - ಜಿ. ಮುನಿಕೃಷ್ಣ