ಕಳಚಿತು ಸಾಹಿತ್ಯದ ಮತ್ತೊಂದು ಕೊಂಡಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ

Source: sonews | By MV Bhatkal | Published on 10th June 2019, 8:02 PM | State News | Don't Miss |

ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ (81) ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. 
ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು. 
ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ 5 ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ತಂದೆಯ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.
ವಿದ್ಯಾಭ್ಯಾಸ: ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್‌ಶಿಪ್‌ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್‌ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.
ವಿದೇಶದಲ್ಲೂ ಕನ್ನಡ ನಾಟಕ ಮಾಡಿದ್ದರು:
ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರುತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.
ವರ ಕಾದಂಬರಿ ಆಧರಿತ ಹಾಗೂ ಪಟ್ಟಾಭಿರಾಮರೆಡ್ಡಿ ಅವರ ನಿರ್ದೇಶನದ "ಸಂಸ್ಕಾರ" ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರವಾಗಿದ್ದು, ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ ಮಾಡಿದ್ದರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.
ನಂತರ ಗಿರೀಶ್‌ ಕಾರ್ನಾಡ್‌ ಅವರು ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧರಿತ ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ತಂದುಕೊಟ್ಟಿತು.
ಮುಂದೆ "ತಬ್ಬಲಿಯು ನೀನಾದೆ ಮಗನೆ", "ಕಾಡು", "ಒಂದಾನೊಂದು ಕಾಲದಲ್ಲಿ" ಚಿತ್ರಗಳನ್ನು ನಿರ್ದೇಶಿಸಿದರು. "ಕಾಡು" ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ "ಉತ್ಸವ", "ಗೋಧೂಳಿ"ಎಂಬ ಹಿಂದಿ ಚಿತ್ರಗಳನ್ನೂ ನಿರ್ದೇಶಿಸಿದರು.
ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.

ಸರ್ಕಾರಿ ಗೌರವ, ಅಂತಿಮ ವಿಧಿವಿಧಾನವಿಲ್ಲದೆ ಗಿರೀಶ್ ಕಾರ್ನಾಡ್ ಪಂಚಭೂತಗಳಲ್ಲಿ ಲೀನ

ಮಧ್ಯಾಹ್ನ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅತ್ಯಂತ ಸರಳವಾಗಿ ಗಿರೀಶ್ ಕಾರ್ನಾಡ್ ಅವರ ಅಂತ್ಯಸಂಸ್ಕಾರ ನಡೆಯಿತು.
ಕಾರ್ನಾಡ್ ಅವರ ಕೊನೆಯ ಆಸೆಯಂತೆ ಹಿರಿಯ ಪುತ್ರ ರಘು ಕಾರ್ನಾಡ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅತ್ಯಂತ ಸರಳವಾಗಿ ಅಂತಿಮ ವಿಧಾನ ಮಾಡುವ ಮೂಲಕ ಕಾರ್ನಾಡ್ ಅವರ ಅಂತ್ಯಕ್ರಿಯೆಯನ್ನು ಕುಟುಂಬವರ್ಗ ನೆರವೇರಿಸಿತ್ತು. ಯಾವುದೇ ಸರ್ಕಾರಿ ಗೌರವ ಬೇಡ ಎಂದು ಕುಟುಂಬ ವರ್ಗದವರು ತಿಳಿಸಿದ್ದರು.
ಸರ್ಕಾರಿ ಗೌರವವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಸಚಿವ ಡಿಕೆ ಶಿವಕುಮಾರ್ ಅವರು ಮನವಿ ಮಾಡಿಕೊಂಡರೂ ಕೂಡಾ ಕುಟುಂಬ ವರ್ಗ ಅದಕ್ಕೆ ಒಪ್ಪದೆ, ಕಾರ್ನಾಡ್ ಅವರ ಅಂತಿಮ ಆಸೆಯಂತೆ ಸರಳವಾಗಿ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಕಚೇರಿ ಮಾಧ್ಯಮ ಪ್ರಕಟಣೆ ಮಾಡಿದ್ದು ಇಂದು ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ. ಮತ್ತು ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಾಗುವುದು ಎಂದು ತಿಳಿಸಿದೆ. 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...