ಆರ್‌ಟಿಐ ತಿದ್ದುಪಡಿಗಳು ಮತ್ತು ಪ್ರಜಾತಂತ್ರ

Source: sonews | By Staff Correspondent | Published on 28th July 2019, 7:57 PM | National News | Special Report | Don't Miss |

ಪ್ರಭುತ್ವ ಮತ್ತು ನಾಗರಿಕರ ನಡುವೆ ಇರುವ ಮಾಹಿತಿ ಅಸಮತೆಯು ಪ್ರಜಾತಂತ್ರವು ಪಾರದರ್ಶಕವಾಗಿ ಕೆಲಸ ನಿರ್ವಹಿಸದಂತೆ ಮಾಡುತ್ತದೆ.

ಇತ್ತೀಚೆಗೆ ಸಂಸತ್ತಿನಲ್ಲಿ ಅನುಮೋದಿಸಲ್ಪಟ್ಟ ಮಾಹಿತಿ ಹಕ್ಕು ಕಾಯಿದೆ (ತಿದ್ದುಪಡಿ) ಮಸೂದೆಯು ಮಾಹಿತು ಹಕ್ಕು ಕಾಯಿದೆಯ ತಿರುಳಿನ ಮೇಲೆ ಪ್ರಹಾರ ಮಾಡುತ್ತಿದೆಯಲ್ಲದೆ ಕೇಂದ್ರೀಯ ಮಾಹಿತಿ ಅಯೋಗ (ಸೆಂಟ್ರಲ್ ಇನ್ಫರ್ಮೇಷನ್ ಕಮಿಷನ್-ಸಿಐಸಿ) ಸಾಂಸ್ಥಿಕ ಅಸ್ಥಿತ್ವವನ್ನೇ ಮೂಲೆಗುಂಪು ಮಾಡುತ್ತದೆ. ಮಸೂದೆಯನ್ನು ಮಂಡಿಸುವ ಮುನ್ನ ಸಾಂಪ್ರದಾಯಿಕವಾಗಿ ನಡೆಸುವ ಯಾವುದೇ ಶಾಸನಪೂರ್ವ ಚರ್ಚೆಗಳನ್ನು ಮಾಡದ ಸರ್ಕಾರವು ಹರಿಬರಿಯಲ್ಲಿ  ಮಸೂದೆಯನ್ನು ಮಂಡಿಸಿದ ರೀತಿಯು ಗಂಭೀರವಾದ ಅನುಮಾನಗಳನ್ನು ಹುಟ್ಟುಹಾಕುತ್ತದೆ. ತಿದ್ದುಪಡಿಗಳ ಬಗ್ಗೆ ಒಂದು ಗಂಭೀರವಾದ ಪರಿಶೀಲನೆ ನಡೆಯುವುದಕ್ಕೆ ಸರ್ಕಾರವು ಏಕೆ ಅಡ್ಡಿ ಮಾಡುತ್ತಿದೆ? ಮಸೂದೆಯನ್ನು ಸೆಲೆಕ್ಟ್ ಸಮಿತಿಯ ಪರಿಶೀಲನೆಗೆ ಕಳಿಸಬಾರದೆಂದು ಸರ್ಕಾರವೇಕೆ ಪಟ್ಟುಹಿಡಿದಿದೆ? ಸರ್ಕಾರವು ಮುಂದಿಟ್ಟಿರುವ ಸಲಹೆಗಳನ್ನು ಸಮೀಪದಿಂದ ಪರಿಶೀಲಿಸಿದರೆ, ಎಲ್ಲಾ ಸಂಸ್ಥೆಗಳಿಗೂ ಮಾಡಿಕೊಂಡು ಬಂದಿರುವಂತೆ ಇಲ್ಲಿಯೂ ಸಹ ಸರ್ಕಾರವು ಆರ್ಟಿಐ ಸಂಸ್ಥೆಯ ಅತ್ಯಗತ್ಯ ಸಾರವನ್ನೇ ತೆಗೆದುಹಾಕಿ ಕೇವಲ ಅದರ ಅಸ್ಥಿಪಂಜರವನ್ನು ಮಾತ್ರ ಔಪಚಾರಿಕವಾಗಿ ಉಳಿಸಿಕೊಳ್ಳಲು ಮಾಡುತ್ತಿರುವ ಹುನ್ನಾರವು ಎದ್ದು ಕಾಣುತ್ತದೆ.

೨೦೦೫ರ ಆರ್ಟಿಐ ಕಾಯಿದೆಯು ಆಡಳಿತದಲ್ಲಿ ಅಧಿಕಾರ ದುರುಪಯೋಗ ಮತ್ತು ರಹಸ್ಯಗಳನ್ನು ಪ್ರಶ್ನಿಸುವ ಅಧಿಕಾರವನ್ನು ನಾಗರಿಕರಿಗೆ ನೀಡುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿನ ಮಾಹಿತಿ ಅಯೋಗದ ಮೂಲಕ ಅಂಥಾ ಮಾಹಿತಿಗಳನ್ನು ಲಭ್ಯವಾಗಿಸಲಾಗುತ್ತದೆ. ಇಂಥಾ ಮಾಹಿತಿಗಳು ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಪಟ್ಟವಾದ್ದರಿಂದ ಮತ್ತು ಅವು ಒಂದು ಪಾರದರ್ಶಕ ಹಾಗೂ ಆರೋಗ್ಯಕರ ಪ್ರಜಾತಂತ್ರದ ಅಡಿಪಾಯವೂ ಆಗಿರುವುದರಿಂದ ಅವನ್ನು ಸಾರ್ವಜನಿಕ ಒಳಿತಿನ ಸರಕೆಂದೇ ಪರಿಗಣಿಸಬೇಕಾಗುತ್ತದೆ. ಆದರೆ ಆರ್ಟಿಐ ತಿದ್ದುಪಡಿ ಮಸೂದೆ (೨೦೧೯)ಯು ೨೦೦೫ರ ಆರ್ಟಿಐ ಕಾಯಿದೆಯ ೧೩, ೧೫ ಮತ್ತು ೨೭ನೇ ಕಲಮುಗಳಿಗೆ ತಿದ್ದುಪಡಿ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಹಿತಿ ಆಯುಕ್ತರ  ಸೇವಾವಧಿ, ವೇತನ ಮತ್ತು ಸೌಲಭ್ಯಗಳನ್ನು ನಿಗದಿ ಪಡಿಸುವ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುತ್ತದೆ. ಹೀಗಾಗಿ ಮಾಹಿತಿ ಅಯೋಗದ ಅಧಿಕಾರವನ್ನು ಕೇಂದ್ರ ಸರ್ಕಾರವು ನಿಯಂತ್ರಿಸಲು ಅವಕಾಶ ಮಾಡಿಕೊಡುವುದರಿಂದ ಮಾಹಿತಿ ಹಕ್ಕು ಆಯುಕ್ತರ ಸಾಂಸ್ಥಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಕಾಯಿದೆಯಲ್ಲಿ ಘೋಷಿಸಲಾದ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಕ್ಕೂ ಹಿನ್ನೆಡೆಯುಂಟಾಗುತ್ತದೆ.

ಇದಲ್ಲದೆ ತಿದ್ದುಪಡಿಗಳು ಆಯಾ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವುದರಿಂದ ಕೇಂದ್ರವು ಅನುಸರಿಸುತ್ತಿರುವ ದಮನಕಾರಿ ಒಕ್ಕೂಟತತ್ವಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಹಾಗೂ ಅಪ್ರಜಾತಾಂತ್ರಿಕವೂ ಆಗಿದೆ. ನಾಗರಿಕರು ಮತ್ತು ಪ್ರಭುತ್ವದ ನಡುವೆ ಇರುವ ಮಾಹಿತಿ ಅಸಮತೆಯನ್ನು ನಿವಾರಿಸಲು ಮತ್ತು ಒಂದು ಪ್ರಜಾತಂತ್ರದಲ್ಲಿ ಆಡಳಿತವು ಉತ್ತರದಾಯಿಯಾಗಿಯೂ ಮತ್ತು ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕವಾಗಿಯೂ ಇರಲು ಅತ್ಯಗತ್ಯವಾಗಿದ್ದ ಮಾಹಿತಿ ಅಯೋಗದ ಸಾಂಸ್ಥಿಕ ವಿಶ್ವಾಸಾರ್ಹತೆಗೇ ಪೆಟ್ಟುಕೊಡುವ ಮೂಲಕ  ತಿದ್ದುಪಡಿಗಳು ಗಂಭೀರವಾದ ಪರಿಣಾಮಗಳನ್ನು ಬೀರಲಿವೆ. ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಪಾರದರ್ಶಕತೆಯಿದೆಯೆಂಬುದು ಎಷ್ಟರ ಮಟ್ಟಿಗೆ ಆಯಾ ಸರ್ಕಾರಗಳು ಅಥವಾ ಸರ್ಕಾರಿ ಸಂಸ್ಥೆಗಳು ಆಯಾ ರಾಜ್ಯದ ಜನರ ಹಿತಾಸಕ್ತಿಗೆ ಬದ್ಧವಾಗಿವೆ ಎಂಬುದನ್ನು ಸೂಚಿಸುತ್ತದೆ. ಅಷ್ಟು ಮಾತ್ರವಲ್ಲದೆ ಅಂಥಾ ಮಾಹಿತಿಗಳು ಸಮಾಜದ ಒಟ್ಟಾರೆ ಹಿತಾಸಕ್ತಿಯನ್ನು ಕಾಪಾಡಬಲ್ಲ ಇನ್ನಿತರ ಉದ್ದೇಶಗಳನ್ನೂ ಸಹ ಈಡೇರಿಸುತ್ತವೆ.

ಆರ್ಟಿಐ ಕಾಯಿದೆಯಡಿ ಪ್ರತಿವರ್ಷ ಸುಮಾರು ೬೦ ಲಕ್ಷ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಹೀಗಾಗಿಯೇ  ಇದು ಜಾಗತಿಕವಾಗಿಯೇ ಜನರು ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶಾಸನವಾಗಿದೆ. ಕಾಯಿದೆಯಡಿ ತಮಗೆ ದಕ್ಕಬೇಕಿರುವ ಸೌಲಭ್ಯ ಮತ್ತು ಹಕ್ಕುಗಳನ್ನು ಒದಗಿಸುವಲ್ಲಿ ಸರ್ಕಾರವನ್ನು ಉತ್ತರದಾಯಿಗಳನ್ನಾಗಿ ಮಾಡುವ ವಿಷಯಗಳಿಂದ ಹಿಡಿದು ದೇಶದ ಅತ್ಯುನ್ನತ ಅಧಿಕಾರದ ಬಗೆಗಿನ ಮಾಹಿತಿಗಾಗಿ ಜನರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿ ಜನರು ಆಡಳಿತದಲ್ಲಿನ ಭ್ರಷ್ಟಾಚಾರವನ್ನು, ಮಾನವ ಹಕ್ಕು ಉಲ್ಲಂಘನೆಯನ್ನೂ ಒಳಗೊಂಡಂತೆ ಪ್ರಭುತ್ವದ ಹಲವಾರು ಪ್ರಮಾದಗಳನ್ನು ಬಯಲು ಮಾಡುವಂಥ ಹಾಗೂ ಅದೇ ಸಮಯದಲ್ಲಿ ಸರ್ಕಾರವು ಬಯಲುಗೊಳಿಸಲು ಇಷ್ಟಪಡದಂಥ ಮಾಹಿತಿಗಳನ್ನು ಕೇಳುತ್ತಿದ್ದಾರೆ. ಮಾಹಿತಿ ಆಯುಕ್ತರು ನಿರ್ದೇಶನವನ್ನು ನೀಡಿದ ನಂತರವೂ ಸರ್ಕಾರವು ಸಂಬಂಧಪಟ್ಟ ಮಾಹಿತಿಗಳನ್ನು ಕೊಡಲು ನಿರಾಕರಿಸಿದ ಹಲವು ಘಟನೆಗನ್ನು ಬಗ್ಗೆ ಸಂಸತ್ತಿನಲ್ಲಿ ಚರ್ಚೆಯು ನಡೆಯುತ್ತಿರುವ ಸಂದರ್ಭದಲ್ಲಿ ಸಂಸದರು ಪ್ರಸ್ತಾಪ ಮಾಡಿದರು

ಆದರೆ ಕೇಳಬೇಕಾದ ಮೂಲಭೂತ ಪ್ರಶ್ನೆಯೇನೆಂದರೆ : ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡ ಒಂದು ಸರ್ಕಾರ ತನ್ನನ್ನು ಆಯ್ಕೆಮಾಡಿದ ಜನರಿಗೆ ಮಾಹಿತಿಗಳನ್ನೇಕೆ ನಿರಾಕರಿಸುತ್ತದೆ? ಸಾರ್ವಜನಿಕ ಸಂಸ್ಥೆಗಳ ಸ್ವಚ್ಚ ಮತ್ತು ಪ್ರಜಾತಾಂತ್ರಿಕ ಆಡಳಿತವನ್ನು ಖಾತರಿಗೊಳಿಸಲು ಜಾಗೃತ ನಾಗರಿಕರಿಗೆ ಮಾಹಿತಿಗಳು ಸುಲಭವಾಗಿ ದಕ್ಕುವಂತಾಗಬೇಕು. ಮಾಹಿತಿ ಹಕ್ಕು ಕಾಯಿದೆಯು ಒಂದು ಸುಭದ್ರವಾದ ಪ್ರಜಾತಂತ್ರವನ್ನು ಕಟ್ಟುವ ಸಕ್ರಿಯ ಅವಕಾಶವನ್ನು ನಾಗರಿಕರಿಗೆ ಒದಗಿಸುತ್ತದೆ. ಆದರೆ ಹಾಲಿ ಆಡಳಿತರೂಢ ಸರ್ಕಾರವು ಮಾತ್ರ  ಜನರು ಸಕ್ರಿಯರಾಗಿರದೆ ಕೇವಲ ಪ್ರೇಕ್ಷಕರಾಗಿರುವುದನ್ನು ಅಪೇಕ್ಷಿಸುತ್ತದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವಂಥ ಸರ್ಕಾರದ ನೀತಿ, ನಿರ್ಣಯಗಳು ಮತ್ತು ಆಡಳಿತಾತ್ಮಕ ಕ್ರಮಗಳ ಬಗೆಗಿನ ಮಾಹಿತಿಗಳು ಸರ್ಕಾರದ ಉತ್ತರದಾಯಿತ್ವವನ್ನು ಖಾತರಿ ಪಡಿಸುವ ಸಾಧನಗಳಾಗಿವೆ. ಹೀಗಾಗಿ ರಾಜಕೀಯದ ಕೇಂದ್ರದಲ್ಲಿರಬೇಕಾದವರು ಜನರೇ ಹೊರತು ಆಳುವವರೋ ಅಥವಾ ನಾಯಕರೋ ಅಲ್ಲ.

ಮಾಹಿತಿ ಹಕ್ಕೆಂಬುದು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು  ಖಾತರಿ ಪಡಿಸುವ ಸಂವಿಧಾನದ ೧೯ ನೇ ಕಲಮು ಮತ್ತು ಜೀವಿಸುವ ಹಕ್ಕನ್ನು ಖಾತರಿ ಪಡಿಸುವ ೨೧ನೇ ಕಲಮಿನ ಮುಂದುವರೆಕೆಯಾಗಿದ್ದು ಒಂದು ಮೂಲಭೂತ ಹಕ್ಕೇ ಆಗಿದೆಯೆಂದು ಸುಪ್ರೀಂ ಕೋರ್ಟು ತನ್ನ ಹಲವಾರು ನ್ಯಾಯಾದೇಶಗಳಲ್ಲಿ ಸ್ಪಷ್ಟಪಡಿಸಿದೆ. ಆದರೆ ಹಾಲಿ ಸರ್ಕಾರವು ನಾಗರಿಕರನ್ನು ನಿಯಂತ್ರಿತವಾದ, ತಾನು ಆಯ್ಕೆ ಮಾಡುವ ಮತ್ತು ತಿರುಚಲ್ಪಟ್ಟ ಮಾಹಿತಿಗಳನ್ನು ಮಾತ್ರ ಪಡೆದುಕೊಳ್ಳುವ ಹಕ್ಕಿನ ಪ್ರಜ್ನೆಯಿಲ್ಲದ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಹಕ್ಕುಗಳಿಲ್ಲz ಪ್ರಜೆಗಳು ಆಳುವ ದೊರೆಗಳನ್ನು ಪ್ರಶ್ನಿಸಬಾರದೆಂದು ನಿರೀಕ್ಷಿಸಲಾಗುತ್ತದೆ. ಹಾಗೆಯೇ  ಮಾಹಿತಿಗಳ ಲಭ್ಯತೆಯನ್ನೇ ಸೀಮಿತಗೊಳಿಸುವ ಮೂಲಕ ಪ್ರಶ್ನಿಸುವ ಸಾಧ್ಯತೆಯನ್ನು ಸೀಮಿತಗೊಳಿಸಲಾಗುತ್ತಿದೆ. ಇದಲ್ಲದೆ ಇಲ್ಲಿಯವರೆಗೆ ಸತ್ಯವನ್ನು ಹೆಕ್ಕಿ ತೆಗೆಯಲು ಪತ್ರಕರ್ತರು ಮಾಹಿತಿ ಹಕ್ಕಿನ ಮೊರೆಹೋಗುತ್ತಿದ್ದರು. ಈಗ ಅಂಥಾ ತನಿಖಾ ಪತ್ರಿಕೋದ್ಯಮದ ಮೇಲೂ ತಿದ್ದುಪಡಿಗಳು ದುಷ್ಪರಿಣಾಮವನ್ನು ಬೀರುತ್ತದೆ. ಸರ್ಕಾರವು ಮಾಧ್ಯಮಗಳು ಕೇವಲ ಸರ್ಕಾರದ ತುತ್ತೂರಿಗಳಾಗಬೇಕೆಂದು ಬಯಸುತ್ತದೆ. ಹಾಗಿರುವಾU ತಿದ್ದುಪಡಿಗಳು ಸರ್ಕಾರವನ್ನು ಪ್ರಶ್ನಿಸುವ ಪತ್ರಿಕೋದ್ಯಮದ ಸಾಧ್ಯತೆಗಳನ್ನು ಮತ್ತಷ್ಟು ಕಿರಿದುಗೊಳಿಸುತ್ತದೆ. .

ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದೇ ಒಂದು ಸಾಮೂಹಿಕ ಚಳವಳಿಯ ಮೂಲಕ. ಅದರ ಮುಂದುವರಿಕೆ ಮತ್ತದರ ಪರಿಣಾಮಕತೆಯೂ ಕೂಡಾ ಸರ್ಕಾರದ ಉತ್ತರದಾಯಿತ್ವವನ್ನು ಹೆಚ್ಚಿಸಲು ಅದನ್ನು ಒಂದು ಸಾಮೂಹಿಕ ಸಾಧನವಾಗಿ ಬಳಸಬಲ್ಲ ಸಾಧ್ಯತೆಯನ್ನೇ ಆಧರಿಸಿದೆ. ಸಾಮಾಜಿಕ ಚಳವಳಿಗಳು ಮಾತ್ರವಲ್ಲದೆ ಹಲವಾರು ಬಾರಿ ಬಿಡಿಬಿಡಿ ವ್ಯಕ್ತಿಗಳು ಸಹ ಮಾಹಿತಿ ಹಕ್ಕನ್ನು ಬಳಸಿ ನ್ಯಾಯವನ್ನು ಪಡೆದುಕೊಂಡಿರುವುದು ಕಾಯಿದೆಯ ಹಿಂದಿನ ಪ್ರೇರಣೆಯ ಸಿಂಧುತ್ವವನ್ನು ಸಾಬೀತುಮಾಡುತ್ತದೆ. ನೂರಾರು ಆರ್ಟಿಐ ಕಾರ್ಯಕರ್ತರನ್ನು ಕೊಲ್ಲಲಾಗಿದೆ, ಚಿತ್ರಹಿಂಸೆ ಮಾಡಲಾಗಿದೆ, ಬೆದರಿಸಲಾಗಿದೆ. ಇಂಥಾ ದಾಳಿಗಳು ವ್ಯವಸ್ಥಿತವಾಗಿ ನಡೆಯುತ್ತಿರುವಾಗ ಅದನ್ನು ವ್ಯಕ್ತಿಗತ ನೆಲೆಯಲ್ಲಿ ಎದುರಿಸುವುದು ಕಷ್ಟ. ಅತ್ಯಂತ ಕಷ್ಟಪಟ್ಟು ಗಳಿಸಿಕೊಂಡ ಹಕ್ಕನ್ನು ರಕ್ಷಿಸಿಕೊಳ್ಳಬೇಕಿದೆಜನತೆಯು ದೊಡ್ಡ ಚಳವಳಿಗಳನ್ನು ಮಾಡುವ ಮೂಲಕ ಮಾತ್ರ  ಮಾರಕ ತಿದ್ದುಪಡಿಗಳನ್ನು ಹಿಂಪಡೆದುಕೊಳ್ಳುವಂತೆ ಮಾಡಿ  ಮಾಹಿತಿ ಹಕ್ಕನ್ನು ಮತ್ತೆ ದಕ್ಕಿಸಿಕೊಳ್ಳಲು ಸಾಧ್ಯ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಬೇಕಿದೆ: ದಿಲ್ಲಿ ಸಿಎಂ

ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಶುಕ್ರವಾರ ತಿಹಾರ್ ಜೈಲಿನಿಂದ ...

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...