ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

Source: Vb | By I.G. Bhatkali | Published on 11th May 2024, 8:49 AM | National News |

ಹೊಸದಿಲ್ಲಿ: ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್‌ರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಜೂನ್ ಒಂದರವರೆಗೆ ಊರ್ಜಿತವಾಗಿರುತ್ತದೆ. ಜಾಮೀನು ಅವಧಿಯಲ್ಲಿ ಅವರು ಲೋಕಸಭಾ ಚುನಾವಣೆಗಾಗಿ ಪ್ರಚಾರ ನಡೆಸಬಹುದಾಗಿದೆ.

ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21ರಂದು ಬಂಧಿಸಿತ್ತು.

“ಅರವಿಂದ ಕೇಜ್ರವಾಲ್‌ರಿಗೆ ಜೂನ್ ಒಂದರವರೆಗೆ ಮಧ್ಯಂತರ ಜಾಮೀನು ನೀಡುವ ಆದೇಶವೊಂದನ್ನು ನಾವು ನೀಡುತ್ತಿದ್ದೇವೆ ಎಂದು ಇಬ್ಬರು ನ್ಯಾಯಾಧೀಶರ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದರು. ದೀಪಂಕರ್ ದತ್ತ ನ್ಯಾಯಪೀಠದ ಇನ್ನೋರ್ವ ನ್ಯಾಯಾಧೀಶರಾಗಿದ್ದಾರೆ. ಮಧ್ಯಂತರ ಜಾಮೀನಿನ ಅವಧಿ ಮುಗಿದ ಬಳಿಕ, ಜೂನ್ 2ರಂದು ಕೇಜ್ರವಾಲ್ ಜೈಲಿಗೆ ಮರಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅದೇ ವೇಳೆ, ಸುಪ್ರೀಂ ಕೋರ್ಟ್ ಕೇಜ್ರವಾಲ್‌ರಿಗೆ ಕೆಲವು ಶರತ್ತುಗಳನ್ನು ವಿಧಿಸಿದೆ. ಮೊದಲನೆಯದಾಗಿ, ಅವರು ಮುಖ್ಯಮಂತ್ರಿ ಕಚೇರಿಗೆ ಮತ್ತು ದಿಲ್ಲಿ ಸರಕಾರದ ಕಾರ್ಯಾಲಯಕ್ಕೆ ಹೋಗಬಾರದು. ಎರಡನೆಯದಾಗಿ, ಈ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಬಾರದು ಮತ್ತು ಕೊನೆಯದಾಗಿ, ಪ್ರಕರಣದ ಸಾಕ್ಷಿಗಳೊಂದಿಗೆ ಕೇಜ್ರವಾಲ್ ಯಾವುದೇ ಸಂಪರ್ಕ ಹೊಂದಬಾರದು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಕಡತಗಳನ್ನು ನೋಡಲು ಅವರಿಗೆ ಬಿಡಬಾರದು.

ಶುಕ್ರವಾರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಜಾರಿ ನಿರ್ದೇಶನಾಲಯದ ಪರವಾಗಿ ನ್ಯಾಯಾ ಲಯದಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, “ಈಗಷ್ಟೇ ಅಮೃತಪಾಲ್ ಸಿಂಗ್ ಎಂಬ ವ್ಯಕ್ತಿ ನಮ್ಮನ್ನು ಸಂಪರ್ಕಿಸಿದ್ದಾನೆ. ಇದು ಕಳವಳದ ವಿಷಯವಾಗಿದೆ'' ಎಂದು ಹೇಳಿದರು.

ವಾರಿಸ್ ಪಂಜಾಬ್ ದೆ' ಎಂಬ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತಪಾಲ್ ಸಿಂಗ್‌ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದ್ದು, ಪ್ರಸ್ತುತ ಅಸ್ಸಾಮಿನ ದಿಬ್ರೂಗಢ ಜೈಲಿನಲ್ಲಿದ್ದಾನೆ.

ಅದು ಸಂಪೂರ್ಣ ಬೇರೆ ವಿಚಾರ. ಅದಕ್ಕೂ ಇದಕ್ಕೂ ಹೋಲಿಕೆ ಮಾಡುವಂತಿಲ್ಲ' ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದರು.

ಕೇಜ್ರವಾಲ್ ಪರವಾಗಿ ಹಾಜರಾದ ಹಿರಿಯ ವಕೀಲ ಎ.ಎಮ್. ಸಿಂಫ್ಟಿ, ಜಾಮೀನು ಅವಧಿಯನ್ನು ಹೆಚ್ಚಿಸಲು ಸಾಧ್ಯವಿಲ್ಲವೇ ಎಂದರು. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುವುದು ಜೂನ್ 4ರಂದು ಎಂದು ಅವರು ಹೇಳಿದರು. ಆದರೆ, ಜಾಮೀನು ಅವಧಿಯನ್ನು ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿತು. "ಇಲ್ಲ, ಇಲ್ಲ. ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸಂಬಂಧಿಸಿದ ವಾದಗಳನ್ನು ಮುಂದಿನ ವಾರ ಮುಕ್ತಾಯಗೊಳಿಸಲು ನಾವು ಪ್ರಯತ್ನಿಸುತ್ತೇವೆ ಮತ್ತು ಸಾಧ್ಯವಾದರೆ ತೀರ್ಪು ನೀಡಲು ಪ್ರಯತ್ನಿಸುತ್ತೇವೆ' ಎಂದು ನ್ಯಾಯಾಲಯ ಹೇಳಿತು. ಮೇ 20ರಂದು ನ್ಯಾಯಾಲಯಕ್ಕೆ ಬೇಸಿಗೆ ರಜೆ ಆರಂಭಗೊಳ್ಳುವ ಮುನ್ನ ಅವರ ಅರ್ಜಿಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸುವುದಾಗಿ ನ್ಯಾಯಪೀಠ ಹೇಳಿತು. ಮಧ್ಯಂತರ ಜಾಮೀನಿನ ಅವಧಿ ಮುಕ್ತಾಯಗೊಂಡಾಗ ಕೇಜ್ರವಾಲ್ ಜೈಲಿಗೆ ಮರಳಬೇಕು ಎಂದು ಮೆಹ್ರಾ ಹೇಳಿದರು. “ಅವರು ಶರಣಾಗುತ್ತಾರೆ' ಎಂದು ನ್ಯಾ. ಖನ್ನಾ ಹೇಳಿದರು.

Read These Next

ಡೆಹ್ರಾಡೂನ್: ಕ್ರೈಸ್ತ ಪ್ರಾರ್ಥನಾ ಸಭೆಯ ಮೇಲೆ ಸಂಘ ಪರಿವಾರದಿಂದ ದಾಳಿ; ಏಳು ಜನರಿಗೆ ಹಲ್ಲೆ

ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ರವಿವಾರ ಇಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದೆ. ಕನಿಷ್ಠ ...

ಲೋಕಸಭಾ ಚುನಾವಣೆಯ ಬಳಿಕ ಮುಸ್ಲಿಮರ ವಿರುದ್ಧ ಗುಂಪು ದಾಳಿ ಪ್ರಕರಣದಲ್ಲಿ ಹೆಚ್ಚಳ; ಜಮಾಅತೆ ಇಸ್ಲಾಮೀ ಹಿಂದ್ ಕಳವಳ

ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅಧಿಕಗೊಂಡಿದ್ದು, ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ...

ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ತಿತ್ವ ...