ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

Source: Vb | By I.G. Bhatkali | Published on 1st May 2024, 10:15 AM | National News |

ಹೊಸದಿಲ್ಲಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ವು ಮಂಗಳವಾರ ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.

ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್‌ರಿಗೆ ಪತ್ರವೊಂದನ್ನು ಬರೆದಿರುವ ಆಯೋಗವು, ಜಾತ್ಯತೀತ ಜನತಾ ದಳದ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ತೋರಿಸುತ್ತದೆ ಎನ್ನಲಾಗಿರುವ ವೀಡಿಯೊವೊಂದು ಪೆನ್‌ಡ್ರೈವ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎನ್ನುವ ವರದಿಗಳ ಬಗ್ಗೆ ಗಮನ ಸೆಳೆದಿದೆ.

ಆರೋಪಿಯನ್ನು ಬಂಧಿಸಲು ಪ್ರಾಮಾಣಿಕ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯೋಗವು ಪೊಲೀಸರನ್ನು ಒತ್ತಾಯಿಸಿದೆ. ಆರೋಪಿ ಪ್ರಜ್ವಲ್ ರೇವಣ್ಣ ಶನಿವಾರ ಮುಂಜಾನೆ ಜರ್ಮನಿಗೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವ ಹಾಗೂ ಮಹಿಳೆಯರ ವಿರುದ ಅಗೌರವ ಮತ್ತು ಹಿಂಸೆಯನ್ನು ಹುರಿದುಂಬಿಸುವ ಸಂಸ್ಕೃತಿಗೆ ತಡೆಹಾಕುವ ಅಗತ್ಯವನ್ನು ಆಯೋಗವು ಪ್ರತಿಪಾದಿಸಿದೆ.

"ಮಹಿಳೆಯರ ಮೇಲಿನ ಲೈಂಗಿಕ ದಬ್ಬಾಳಿಕೆಯನ್ನು ಕಂಡು ಆಯೋಗವು ಆಘಾತಗೊಂಡಿದೆ ಹಾಗೂ ಈ ಘಟನೆಯನ್ನು ಅದು ಬಲವಾಗಿ ಖಂಡಿಸುತ್ತದೆ'' ಎಂದು ಪತ್ರದಲ್ಲಿ ಹೇಳಲಾಗಿದೆ.

"ಇಂಥ ಘಟನೆಗಳು ಮಹಿಳೆಯರ ಸುರಕ್ಷತೆಯನ್ನು ಅಪಾಯಕ್ಕೊಡ್ಡುವುದು ಮಾತ್ರವಲ್ಲ, ಮಹಿಳೆಯರನ್ನು ಅಗೌರವಯುತವಾಗಿ ಕಾಣುವ ಮತ್ತು ಅವರ ಮೇಲೆ ದಬ್ಬಾಳಿಕೆಗೈಯುವ ಪ್ರವೃತ್ತಿಗೆ ಉತ್ತೇಜನ ನೀಡುತ್ತವೆ. ದೇಶದಿಂದ ಪಲಾಯನಗೈದಿರುವ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಸಂಬಂಧಪಟ್ಟ ಪೊಲೀಸ್ ಪ್ರಾಧಿಕಾರವು ಪ್ರಾಮಾಣಿಕ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ'' ಎಂದು ಪತ್ರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಬರೆದಿದೆ.

ಪೊಲೀಸರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರವಾದ ವರದಿಯೊಂದನ್ನು ಮೂರು ದಿನಗಳ ಒಳಗೆ ಆಯೋಗಕ್ಕೆ ಸಲ್ಲಿಸುವಂತೆ ಅದು ಸೂಚಿಸಿದೆ.

ರವಿವಾರ ಪೊಲೀಸರು ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಹಾಗೂ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಮೊಕದ್ದಮೆಯೊಂದನ್ನು ದಾಖಲಿಸಿದ್ದಾರೆ. ಎಚ್‌.ಡಿ. ರೇವಣ್ಣರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ದೂರಿನ ಆಧಾರದಲ್ಲಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ.

ಮೂವತ್ತಮೂರು ವರ್ಷದ ಪ್ರಜ್ವಲ್ ರೇವಣ್ಣ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಅಲ್ಲಿ ಚುನಾವಣೆ ಎಪ್ರಿಲ್ 26ರಂದು ನಡೆದಿದೆ.

Read These Next

ಒಡಿಶಾದ ಮುಖ್ಯಮಂತ್ರಿಯಾಗಿ ಮಾಝಿ ಪ್ರಮಾಣ; ಡಿಸಿಎಂಗಲಾಗಿ ಕೆ ವಿ ಸಿಂಗ್ ದೇವ್ ಪಾರ್ವತಿ ಪರಿದಾ

ಬಿಜೆಪಿಯ ಹಿರಿಯ ಬುಡಕಟ್ಟು ನಾಯಕ ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದ ಮೋಹನ್ ಚರಣ್ ಮಾಝಿ ಅವರು ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ...

ಲೋಕಸಭಾ ಸ್ಥಾನ: ಕಾಂಗ್ರೆಸ್ ಶತಕ

ಲೋಕಸಭಾ ಚುನಾವಣೆಗಳಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದರೂ ಶತಕ ವಂಚಿತಗೊಂಡಿದ್ದ ಕಾಂಗ್ರೆಸ್ ಗುರುವಾರ ಲೋಕಸಭೆಯಲ್ಲಿ ತನ್ನ ...