ಪರೇಶ್ ಮೇಸ್ತಾನ ಅಕಸ್ಮಿಕ ಸಾವು; ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾದ ಅಮಾಯಕ ಹಿಂದೂಗಳು

Source: S O news | By Staff Correspondent | Published on 27th January 2023, 3:48 PM | Coastal News | State News |

•  ಬಿಜೆಪಿಯನ್ನು ನಂಬಿ ಕೋರ್ಟ ಅಲೆಯುತ್ತಿರುವ ಅಮಾಯಕರ ಅಳಲು

ಭಟ್ಕಳ: ಕಳೆದ ವಿಧಾನಸಭಾ ಚುನಾವಣೆಗೂ ಪೂರ್ವ ನಡೆದ ಹೊನ್ನಾವರದ ಪರೇಶ್ ಮೇಸ್ತಾನ ಅಕಸ್ಮಿಕ ಸಾವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದ ದಿನಕರ್ ಶೆಟ್ಟಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಅಮಾಯಕ ಹಿಂದೂಗಳು ನಿಮ್ಮನ್ನು ನಂಬಿ ನಾವು ಇದುವರೆಗೂ ಕೋರ್ಟ್ ಕಚೇರಿಗಳಿಗೆ ಅಲೆಯುತ್ತಿದ್ದೇವೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಳ್ಳೂತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಬೆಂಗಳೂರು, ಚೆನ್ನೈ ಮತ್ತಿತರ ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವ ನಾವು ಪ್ರತಿ ತಿಂಗಳು ಕೋರ್ಟಗೆ ಹಾಜಾರಾಗುತ್ತಿದ್ದೇವೆ. ನಮಗೆ ಸಂಬಂಧವಿಲ್ಲದ ಪ್ರಕರಣವೊಂದರಲ್ಲಿ ನಾವು ಇಷ್ಟೊಂದು ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಪ್ರತಿ ತಿಂಗಳು ಹೊನ್ನಾವರಕ್ಕೆ ಬಂದು ಹೋಗಲು ನಮಗೆ ಯಾರು ದುಡ್ಡುಕೊಡುತ್ತಾರೆ ಎಂದು ವಿಡಿಯೋದಲ್ಲಿ ಅಮಾಯಕರು ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ಕಂಡು ಬಂದಿದೆ.  

ಮನೆಯಲ್ಲಿ ತಾಯಿಗೆ ಹುಷಾರಿಲ್ಲ. ತಮ್ಮನಿಗೆ ಪ್ರತಿ ವಾರಕ್ಕೆ ಮೂರು ನೂರು ರೂಪಾಯಿ ಔಷಧಿ ಬೇಕು. ದುಡಿದು ತಿನ್ನುವವ ನಮ್ಮಂಥವರಿಗೆ ಇದು ಸಾಧ್ಯವೇ? ಈ ದುಡ್ಡು ದಿನಕರ ಶೆಟ್ಟಿ ಕೊಡುತ್ತಾರಾ ಎಂದು ಮತ್ತೊಬ್ಬ ವ್ಯಕ್ತಿ ಪ್ರಶ್ನಿಸುತ್ತಿದ್ದಾರೆ. 

ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದರೂ ಅದರ ಕಾವು ಮಾತ್ರ ಇನ್ನೂ ಆರಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಇನ್ನೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದು, ಈಗ ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಹೊನ್ನಾವರದ ಶರಾವತಿ ಸರ್ಕಲ್‌ನಲ್ಲಿ ಸೇರಿದ ಹಿಂದು ಕಾರ್ಯಕರ್ತರು, ಬಿಜೆಪಿ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಇಲ್ಲಿನ ಮೀನುಗಾರರು, ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ವಿವಿಧ ಧರ್ಮದ, ಜಾತಿಗಳ ಯುವಕರು ಕಳೆದ ಐದು ವರ್ಷಗಳಿಂದ ಕೋರ್ಟ್ಗೆ ಅಲೆದಾಡುತ್ತಲೇ ಇದ್ದೇವೆ. ಹಿಂದುತ್ವ ಎಂದು ನಮ್ಮನ್ನು ಹುರಿದುಂಬಿಸಿ ಕೊನೆಗೆ ನಮ್ಮನ್ನು ಕೈಬಿಟ್ಟಿದ್ದಾರೆ. ಬಿಜೆಪಿ ಅಧಿಕಾರವನ್ನು ಅನುಭವಿಸಿ ನಮಗೆ ಏನು ಮಾಡಿದ್ದೀರಿ? ನಿಮಗೆ ಬೇಕಾದವರ ಕೇಸ್‌ಗಳನ್ನು ವಜಾ ಮಾಡಿಸಿಕೊಂಡಿರಿ, ಆದರೆ, ನಾವು ಮಾತ್ರ ಕೋರ್ಟ್ಗೆ ಇಂದಿನವರೆಗೂ ಅಲೆದಾಡುತ್ತಿದ್ದೇವೆ. ಒಬ್ಬ ಬಿಜೆಪಿ ನಾಯಕರು ನಮ್ಮ ಸಮಸ್ಯೆಯನ್ನು ಆಲಿಸಲು ಬಂದಿದ್ದೀರಾ? ಎಂದು ಪ್ರಶ್ನಿಸುತ್ತಿದ್ದಾರೆ. 

ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ೯೫ ಮಂದಿ ಮೇಲೆ ದೂರು ದಾಖಲಾಗಿತ್ತು. ಶಾಸಕ ದಿನಕರ ಶೆಟ್ಟಿ ಮೇಲೂ ಸಹ ದೂರು ದಾಖಲಾಗಿತ್ತು. ಆದರೆ, ನಮಗೆ ಓಡಾಡಲು ಸಮಸ್ಯೆಯಾಗುತ್ತಿದೆ. ನಿಮ್ಮನ್ನು ನಂಬಿ ಸಮಸ್ಯೆಗೆ ಸಿಲುಕಿದ್ದೇವೆ. ಕಾಂಗ್ರೆಸ್ ಪಕ್ಷವನ್ನೂ ಸಹ ವಿರೋಧ ಕಟ್ಟಿಕೊಂಡಿದ್ದೇವೆ. ಆದರೆ, ನಮ್ಮ ರಕ್ಷಣೆಗೆ ಮಾತ್ರ ಯಾರೂ ಬರುತ್ತಿಲ್ಲ ಎಂದು ಹಿಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

೨೦೧೭ರ ಡಿಸೆಂಬರ್ ೬ರಂದು ನಾಪತ್ತೆಯಾಗಿದ್ದ ಯುವಕ ಪರೇಶ್ ಮೇಸ್ತಾ, ಡಿಸೆಂಬರ್ ೮ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದರೆ, ಆತನ ಮೃತ ದೇಹವು ಗಾಯಗೊಂಡ ಸ್ಥಿತಿಯಲ್ಲಿದ್ದರಿಂದ ಇದನ್ನು ಕೊಲೆ ಎಂದು ಭಾವಿಸಲಾಗಿತ್ತು. ಅನ್ಯ ಕೋಮಿನ ಯುವಕರು ಕೊಲೆ ಮಾಡಿ ಹಾಕಿದ್ದಾರೆಂದು ಅನುಮಾನಿಸಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಡಿಐಜಿ ಕಾರು ಸೇರಿದಂತೆ ಹಲವು ಅಂಗಡಿಗಳನ್ನು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಡಲಾಗಿತ್ತು.  ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ಪರೇಶ್ ಮೇಸ್ತಾ ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದ್ದ ಬೆನ್ನಲ್ಲೇ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಪ್ರಕರಣ ಬೇರೆಯೇ ಇದ್ದು, ಸಿಬಿಐ ಮರು ತನಿಖೆ ನಡೆಸಬೇಕು. ಈ ಬಗ್ಗೆ ತಾವು ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಅನೇಕ ಬಿಜೆಪಿ ಮುಖಂಡರು ಸಿಬಿಐ ವರದಿಯನ್ನು ಅಲ್ಲಗಳೆದಿದ್ದರು. ಆದರೆ, ಕಾಂಗ್ರೆಸ್ ಈ ವರದಿಯನ್ನು ಸ್ವಾಗತ ಮಾಡಿತ್ತು. ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ ಎಂಬ ಆರೋಪವನ್ನೂ ಮಾಡಿತ್ತು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...