ಯಾರ ಸಮುದ್ರ? ಯಾರ ಕರಾವಳಿ?

Source: sonews | By Staff Correspondent | Published on 19th March 2019, 10:55 PM | National News | Special Report | Don't Miss |

ಮೀನುಗಾರರ ಪುನರ್ವಸತಿಯೆಂಬುದು ಅವರ ಹಕ್ಕಿನಂತೆ ನಿರ್ವಹಿಸಲ್ಪಡಬೇಕೆ ವಿನಃ ಸಾಂಕೇತಿಕವಾಗಿಯಲ್ಲ.

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ಪೀಳಿಗೆಗಳಿಂದ ಅವಲಂಬಿಸಿಕೊಂಡು ಬಂದಿರುವ ಜೀವನೋಪಾಯಗಳಿಂದ ತಮ್ಮನ್ನು ಹೊರದಬ್ಬುತ್ತದೆ ಎಂಬ ಕಾರಣಕ್ಕೆ ವಿರೋಧಿಸುತ್ತಾ ಬಂದಿದ್ದಾರೆ. ನಗರದಲ್ಲಿ ಆಧುನಿಕ ನಗರವಾಸಿಗಳಿಗೂ ಮತ್ತು ಸಮಾಜದ ಅಂಚಿನಲ್ಲಿ ವಾಸ ಮಾಡುತ್ತಿರುವ ಸಮುದಾಯಗಳಿಗೂ ನಡುವೆ ಸಂಘರ್ಷವಾಗುತ್ತಿರುವುದು ಹೊಸದೇನಲ್ಲ. ೧೯೮೦ರ ದಶಕದಲ್ಲಿ ತಮ್ಮನ್ನು ಹೊರದಬ್ಬುತ್ತಿದ್ದ ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ ವಿರುದ್ಧ ಅಲ್ಲಿನ ಫುಟ್ಪಾತ್ ನಿವಾಸಿಗಳು ದಾವೆಯನ್ನು ಹೂಡಿದ್ದರು. ಓಲ್ಗಾ ಟೆಲ್ಲಿಸ್ ಮತ್ತು ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ ಪ್ರಕರಣವೆಂದು ಖ್ಯಾತವಾದ ದಾವೆಯಲ್ಲಿ ಸುಪ್ರೀಂ ಕೋರ್ಟು ಭಾರತದ ಸಂವಿಧಾನವು ಆರ್ಟಿಕಲ್ ೨೧ರಡಿ ನೀಡುವ ಜೀವಿಸುವ ಹಕ್ಕನ್ನು ಜೀವನೋಪಾಯಗಳ ಹಕ್ಕಾಗಿಯೂ ವಿಸ್ತರಿಸಬೇಕೆಂದೂ ಏಕೆಂದರೆ ಜೀವನೋಪಾಯವಿಲದ ವ್ಯಕ್ತಿ ಜೀವಿಸಲು ಸಾಧ್ಯವಿಲ್ಲವೆಂದು ವ್ಯಾಖ್ಯಾನಿಸಿ ಚಾರಿತ್ರಿಕ ತೀರ್ಮಾನ ನೀಡಿತ್ತು. ಆದರೆ ತೀರ್ಪು ಬಂದ ಕೇವಲ ಮೂರು ದಶಕಗಳ ತರುವಾಯ ದೇಶಾದ್ಯಂತ ಸಮುದ್ರಾಧರಿತ ಮೀನುಗಾರ ಸಮುದಾಯಗಳ ಸ್ಥಳೀಯ ಪರಿಸರದ ಮೇಲೆ ಅತಂತ್ರ ಮತ್ತು ಅಭದ್ರತೆಯ ಕಾರ್ಮೋಡಗಳು ಕವಿದಿರುವಾಗ ರಾಜ್ಯ ಸರ್ಕಾರಗಳಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಅವರ ಕಳವಳಗಳನ್ನು ಬಗೆಹರಿಸುವಂಥ ಯಾವುದೇ ವಾಸ್ತವಿಕ ಸ್ಪಷ್ಟನೆಗಳ ಮೂಲಕ ಮಧ್ಯಪ್ರವೇಶಿಸಿಲ್ಲ. ಹಾಗೆಯೇ ನ್ಯಾಯಾಲಯದ ಪ್ರತಿಕ್ರಿಯೆಯೂ ಸಹ ನಿರುತ್ಸಾಹದಾಯಕವಾಗಿದೆ.

ವೋರ್ಲಿ ಕೋಲಿವಾಡ ನಕ್ವಾ ಮತ್ತು ವೋರ್ಲಿ ಮಚ್ಚಿಮಾರ್ ಸರ್ವೋದಯ ಸಹಕಾರಿ ಸಮಾಜಗಳು ಯೋಜನೆಯ ಬಗ್ಗೆ ಬಾಂಬೆ ಹೈಕೋರ್ಟಿನಲ್ಲಿ ಹೂಡಿರುವ ದಾವೆಯ ವಿಚಾರಣೆಯ ಸಂದರ್ಭದಲ್ಲಿ ಮೀನುಗಾರರಿಗೆ ಯಾವುದೇ ಪರಿಹಾರ ಮತ್ತು ಪುನರ್ವಸತಿ ಯೋಜನೆಯನ್ನು ತಯಾರಿಸದ ಬಗ್ಗೆ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ದೋಷಿಯಾಗಿ ಪರಿಗಣಿಸಿತೇ ವಿನಃ  ಬಗೆಯ ಪುನರ್ವಸತಿಯನ್ನು ಅಗತ್ಯಗೊಳಿಸಿದ ಯೋಜನೆಯನ್ನು ಜನರ ಮೇಲೆ ಹೇರಿದ್ದಕ್ಕಾಗಿಯಲ್ಲ. ಆದರೆ ಜನರ ಮೇಲೆ ಮತ್ತು ಅವರ ಜೀವನೋಪಾಯಗಳ ಮೇಲೆ ಬಂಡವಾಳಶಾಹಿಯು ಆಕ್ರಮಣಕಾರಿ ಒತ್ತುವರಿಯನ್ನು ಮಾಡುತ್ತಿರುವಾಗ ಇಂದಿನ ಸಂದರ್ಭದಲ್ಲಿ ಅಗತ್ಯವಿದ್ದದ್ದು ಇಂಥಾ ಆಕ್ರಮಣಗಳನ್ನು ನಿಯಂತ್ರಣದಲ್ಲಿಡಬಲ್ಲ ಪ್ರಜಾತಾಂತ್ರಿಕ ಅಡೆ ಮತ್ತು ತಡೆಗಳ ಸಮತೋಲವನ್ನು ಕಾಯಬಲ್ಲ ಪ್ರಕ್ರಿಯೆಗಳದ್ದು. ಆದರೆ ಕೋರ್ಟುಗಳು ಕೇವಲ ಪರಿಹಾರ ಮತ್ತು ಪುನರ್ವಸತಿಯ ಅಂಶಗಳ ಮೇಲೆ ಮಾತ್ರ ಒತ್ತುಕೊಡುತ್ತಾ ಪರೋಕ್ಷವಾಗಿ ಇಂಥಾ ಬಂಡವಾಳಶಾಹಿ ಆಕ್ರಮಣಗಳಿಗೆ ಸಮ್ಮತಿಯ ಮುದ್ರೆಯನ್ನು ಒತ್ತುತ್ತಿವೆ. ಇದು ಪ್ರಜಾತಂತ್ರದ ಆಶಯಗಳ ಉಲ್ಲಂಘನೆಯಾಗಿದೆ. ಏಕೆಂದರೆ  ಪುನರ್ವಸತಿಯೆಂಬುದು ಸರ್ಕಾರಗಳು ಜನರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದರ ವಿರುದ್ಧದ ಸುರಕ್ಷೆಯೇ ವಿನಃ ಜನರ ಹಕ್ಕನ್ನು ಉಲ್ಲಂಘಿಸಲು ನೀಡುವ ಆಮಿಷವಲ್ಲ.

ಯೋಜನೆಗೆ ಕಿಮೀ. ಒಂದಕ್ಕೆ ೧೨೦೦ ಕೋಟಿ ರೂ. ವೆಚ್ಚವಾಗಲಿದ್ದು ಇದು  ದೇಶದಲ್ಲಿ ಅತ್ಯಂತ ದುಬಾರಿ ಮೂಲಭೂತ ಸೌಕರ್ಯ ಯೋಜನೆಯಾಗಿದೆ. ಆದರೆ ಚುನಾವಣಾ ಭಾಷಣಗಳನ್ನು ದಾಟಿ ಬೇರೇನೂ ಕಾರ್ಯಗತಗೊಂಡಿಲ್ಲವೆನ್ನುವುದು ಬೇರೆ ವಿಷಯ ಯೋಜನೆಯು ನಗರದ ವಾಹನ ದಟ್ಟಣೆಗೆ ನಿಜವಾದ ಪರಿಹಾರ ಒದಗಿಸುವುದೇನೂ ಖಚಿತವಲ್ಲ. ಏಕೆಂದರೆ ಯೋಜನೆಯು ಯಾವುದೇ ವೈಜ್ನಾನಿಕ ಮತ್ತು ವಿಸ್ತೃತ ಸಾರಿಗೆ ಸರ್ವೆಯನ್ನು ಆಧರಿಸಿಲ್ಲ. ವಾಹನ ದಟ್ಟಣೆಯನ್ನು ನಿವಾರಿಸುವುದೇ ಯೋಜನೆಯ ನಿಜವಾದ ಉದ್ದೇಶವಾಗಿದ್ದಲ್ಲಿ ನಗರಾದ್ಯಂತ ನಿಧಾನಗತಿಯಲ್ಲಿ ನಡೆಯುತ್ತಿರುವ ಮೆಟ್ರೋ ರೈಲು ಯೋಜನೆಯನ್ನೇಕೆ ತ್ವರಿತವಾಗಿ ಮುಗಿಸಬಾರದು? ಕರಾವಳಿ ರಸ್ತೆಯೊಂದೇ ನಗರದ ಬಹುವಿಧವಾದ ಮೂಲಭೂತ ಸೌಕರ್ಯಗಳಿಗೆ ಏಕಮಾತ್ರ ಪರಿಹಾರವಾಗಲಾರದು. ಏಕೆಂದರ ನಗರದ ಸಾರಿಗೆ ಅಗತ್ಯಗಳು ಭಿನ್ನವಾಗಿಯೂ ಇವೆ ಮತ್ತು ಒಂದಕ್ಕೊಂದು ತದ್ವಿರುದ್ಧವಾಗಿಯೂ ಇವೆ. ಉದಾಹರಣೆಗೆ ನಗರವಾಸಿಗಳು ಕರಾವಳಿ ರಸ್ತೆಯ ಮೂಲಕ ಸುಲಭ ಸಾಗಾಟದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರೆ ಸಹಜವಾಗಿ ನಗರದ ಅಲೆಯೇರಿಳಿತದ ಪರಿಸರದ ಅವನತಿಯಿಂದುಂಟಾಗುವ ಅನಾಹುತಗಳನ್ನು ಎದುರಿಸಲು ಸಿದ್ಧರಾಗಬೇಕು.

ಕಠಿಣತಮವಾದ ಆಯ್ಕೆಗಳನ್ನು ಅಬಿವೃದ್ಧಿ ಮಾರ್ಗದಲ್ಲಿ ಎದುರಾಗುವ ದ್ವಂದ್ವಗಳೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಕಳೆದೆರಡು ದಶಕಗಳ ಅದರಲ್ಲೂ ಕಳೆದ ಐದು ವರ್ಷಗಳ ಕರಾವಳಿ ಅಭಿವೃದ್ಧಿಯಲ್ಲಿ ಕರಾವಳಿ ಪರಿಸರವು ಬಲಿಯಾಗಿರುವುದಕ್ಕೆ  ಸರ್ಕಾರಗಳು ಏಕಪಕ್ಷೀಯವಾಗಿ ಕಾರ್ಪೊರೇಟ್ ಬಂಡವಾಳಿಗರ ಕಕ್ಷಿದಾರರಾಗಿರುವುದೇ ಕಾರಣವಾಗಿದೆ. ಗುಜರಾತಿನಿಂದ ಹಿಡಿದು ಕೇರಳದ ತನಕ ದೊಡ್ಡ ಮಟ್ಟದ ಕರಾವಳಿ ಭೂಮಿಯನ್ನು ವಿಶೇಷ ಅರ್ಥಿಕ ವಲಯ, ಕರಾವಳಿ ನಿಯಂತ್ರಣ ವಲಯ ಮತ್ತು ಕರಾವಳಿ ನಿರ್ವಹಣೆ ವಲಯಗಳ ಹೆಸರಿನಲ್ಲಿ ಎಲ್ಲಾ ಕಾನೂನುಗಳನ್ನು ಅತಿಕ್ರಮಿಸಿ ಕಾರ್ಪೊರೇಟ್ ಕಂಪನಿಗಳ ಪರಭಾರೆ ಮಾಡಲಾಗಿದೆ. ಒಂದೆಡೆ ಒತ್ತುವರಿಯಿಂದಾಗಿ ಮೀನುಗಾರರು ತಾವು ಪರಂಪರಾನುಗತವಾಗಿ ಜೀವಿಸಿಕೊಂಡು ಬಂದ ನೆಲದಿಂದ ಹೊರದೂಡಲ್ಪಡುತ್ತಿದ್ದಾರೆ ಮತ್ತೊಂದೆಡೆ ಅಲ್ಲಿ ತಲೆ ಎತ್ತುತ್ತಿರುವ ಬೃಹತ್ ಕಟ್ಟಡಗಳು ಮತ್ತು ಕೈಗಾರಿಕೆಗಳು ಅವರ  ಪಾರಂಪರಿಕ ಜೀವನೋಪಾಯಗಳ ಮೂಲಗಳನ್ನು ನಾಶಮಾದುತ್ತಿವೆ

ಅದೇ ಸಮಯದಲ್ಲಿ, ನೀಲಿ ಆರ್ಥಿಕತೆಯ ಪದಪುಂಜಗಳಡಿಯಲ್ಲಿ ಸಾಮುದಾಯಿಕವಾಗಿದ್ದನ್ನೆಲ್ಲಾ ಖಾಸಗೀಕರಿಸುತ್ತಿರುವ ಸರ್ಕಾರ ಮೀನುಗಾರಿಕೆಯ ನಿರ್ವಹಣೆಯಲ್ಲಿ ಜನಪರಂಪರೆಯು ಬೆಳೆಸಿಕೊಂಡು ಬಂದಿದ್ದ ಮೀನುಗಾರಿಕಾ ನಿರ್ವಹಣಾ ವ್ಯವಸ್ಥೆಯನ್ನು ಸಹ ನಾಶಗೊಳಿಸಿದೆ. ಸರ್ಕಾರಗಳ ಕಾರ್ಪೊರೇಟ್ ಸ್ನೇಹೀ ಆರ್ಥಿಕ ನೀತಿಗಳು ಸಮುದ್ರ ಮತ್ತು ಕರಾವಳಿಯನ್ನೂ ಸಹ ಒಂದು ಹೊಸ ಆರ್ಥಿಕ ಅವಕಾಶಗಳ ಕ್ಷಿತಿಜವನ್ನಾಗಿ ತೆರೆದಿಡುತ್ತಿದ್ದಂತೆ ಖಾಸಗಿ ಶಕ್ತಿಗಳೇ ಸಮುದ್ರ ಸಂಪತನ್ನು ವಶಮಾಡಿಕೊಳ್ಳುತ್ತಾ ಸ್ಥಳೀಯ ಮೀನುಗಾರ ಸಮುದಾಯವನ್ನು ಸ್ಥಳೀಯ ಮೀನುಗಾರಿಕಾ ನೆಲಗಳಿಂದ ಹೊರದಬ್ಬುತ್ತಿದೆ.

ಹಾಗಿದ್ದರೂ ಕರಾವಳಿ ನಿರ್ವಹಣಾ ವಲಯದಲ್ಲಿ, ಅಥವಾ ಸಾಗರಮಾಲ ಯೋಜನೆಗಳಲ್ಲಿ ಮತ್ತು ಮೀನುಗಾರಿಕೆಗೆ ಸಂಬಂಧಪಟ್ಟ ಸರ್ಕಾರದ ಎಲ್ಲಾ ಯೋಜನೆಗಳಲ್ಲೂ ನೀಲಿ ಆರ್ಥಿಕತೆಯ ಬಗ್ಗೆ ಒಂದಲ್ಲ ಒಂದು ಉಲ್ಲೇಖವನ್ನೂ ಮಾತ್ರ ಮಾಡಲಾಗುತ್ತದೆ. ಆದರೆ  ಯೋಜನೆಗಳಾಗಲೀ ಅಥವಾ ನೀತಿ ನಿರೂಪಣಾ ದಸ್ತಾವೇಜುಗಳಾಗಲೀ ಯಾವ ಬಗೆಯ ಅಭಿವೃದ್ಧಿಯನ್ನು ಸಾಧಿಸಬಯಸಲಾಗಿದೆಯೆಂಬ ಬಗ್ಗೆ ಯಾವುದೇ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುವುದಿಲ್ಲ. ಅಥವಾ ಅಂತರ್ಗತವಾಗಿರುವ ವಲಯದಲ್ಲಿನ ಬಹುತ್ವಗಳನ್ನೂ ಗುರುತಿಸುವುದಿಲ್ಲ. ಹಾಗೊಮ್ಮೆ ಗುರುತಿಸಿದಲ್ಲಿ ಅದು ಅಭಿವೃದ್ಧಿಯ ಹೆಸರಲ್ಲಿ ಪ್ರದೇಶದ ಮೂಲ ನಿವಾಸಿಗಳನ್ನು ಹೊರಹಾಕುತ್ತಿರುವುದೇಕೆಂಬ ಮುಜುಗರ ಹುಟ್ಟಿಸುವ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಇಂಥಾ ಸಂದರ್ಭದಲ್ಲೇ ನಾಗರಿಕರ ಮೂಲಭೂತ ಹಕ್ಕುಗಳನ್ನು ಖಾತರಿಗೊಳಿಸಲಾಗದ ವೈಫಲ್ಯಕ್ಕೆ ಸರ್ಕಾರವನ್ನು ಹೊಣೆಗಾರರನ್ನಾಗಿಸುವ  ಧ್ವನಿಗಳನ್ನು ಪುನರ್ವಸತಿಯ ಪ್ರಸ್ತಾಪಗಳು ಹತ್ತಿಕ್ಕುತ್ತವೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ಪ್ರತಿಭಟನೆ ಹತ್ತಿಕ್ಕಲು ಸರಕಾರಕ್ಕೆ ಯಾವುದೇ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ

ಹೊಸದಿಲ್ಲಿ: ಭಿನ್ನಮತದ ನಾಶ ಅಥವಾ ನಿರುತ್ತೇಜನ ಪ್ರಜಾಪ್ರಭುತ್ವದ ಮೇಲೆ ಘೋರ ಪರಿಣಾಮ ಬೀರುತ್ತದೆ. ಪ್ರತಿಭಟನೆ ಹಿಂಸಾಚಾರಕ್ಕೆ ...

ಎನ್.ಆರ್.ಸಿ ಎನ್.ಪಿ.ಆರ್ ಹಾಗೂ ಸಿಎಎ ವಿರುದ್ಧ ದೇಶದ ಶೇ50ಕ್ಕೂ ಹೆಚ್ಚು ಜನ ಬೀದಿಗಿಳಿದಿದ್ದಾರೆ-ಪ್ರತಿಭಾ ಉಭಾಲೆ

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ...

ಪ್ರಮಾಣಬದ್ಧ ಸಾಂವಿಧಾನಿಕತೆ

ಭಾರತದ ಸಂವಿಧಾನವೆಂಬುದು ಒಂದು ಪ್ರಮುಖವಾದ ನಿಯಮ-ನಿಯಂತ್ರಣಗಳ ದಾಖಲೆಯೆಂಬುದು ತೀರಾ ಇತ್ತೀಚಿನವರೆಗೂ ಒಂದು ಸಾಮಾನ್ಯ ಜ್ನಾನವೇ ...

ಪ್ರತಿಭಟನೆ ಹತ್ತಿಕ್ಕಲು ಸರಕಾರಕ್ಕೆ ಯಾವುದೇ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ

ಹೊಸದಿಲ್ಲಿ: ಭಿನ್ನಮತದ ನಾಶ ಅಥವಾ ನಿರುತ್ತೇಜನ ಪ್ರಜಾಪ್ರಭುತ್ವದ ಮೇಲೆ ಘೋರ ಪರಿಣಾಮ ಬೀರುತ್ತದೆ. ಪ್ರತಿಭಟನೆ ಹಿಂಸಾಚಾರಕ್ಕೆ ...