ಭಟ್ಕಳದಲ್ಲಿ ನಡೆದ ಮದುವೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿಯ ನಿರ್ಬಂಧ; ಲೆಕ್ಕಕ್ಕೆ ಹೆದರಿ ಬರಬೇಕಾದವರು ಬರಲಿಲ್ಲ, ಬಂದವರು ನಿಲ್ಲಲಿಲ್ಲ !

Source: S O News service | By V. D. Bhatkal | Published on 27th April 2021, 2:07 PM | Coastal News |

ಭಟ್ಕಳ: ಕೊರೊನಾ ತಡೆ ಸರಕಾರದ ಮಾರ್ಗಸೂಚಿ ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಉತ್ಸಾಹ, ಸಂತಸವನ್ನೇ ನುಂಗಿ ಹಾಕಿದೆ. ಪೂರ್ವ ನಿಗದಿಯಂತೆ ಕೊರೊನಾ ಕಫ್ರ್ಯೂ ನಡುವೆ ತಾಲೂಕಿನಲ್ಲಿ ರವಿವಾರ 22 ಮದುವೆ ಕಾರ್ಯಗಳು ಜರುಗಿದ್ದು, ಎಲ್ಲೆಲ್ಲೂ ಅಧಿಕಾರಿಗಳ ಲೆಕ್ಕದ ಪಟ್ಟಿಯೇ ಸದ್ದು ಮಾಡಿದೆ.

ಕಳೆದ ವರ್ಷ ಕೊರೊನಾ ಆತಂಕ ಹೆಚ್ಚುತ್ತಿದ್ದಂತೆಯೇ ಹೆಚ್ಚಿನವರೆಲ್ಲ ತಮ್ಮ ಮದುವೆ ಕಾರ್ಯಗಳನ್ನು ಮುಂದೂಡಿದ್ದರು. ಆದರೆ ಈ ವರ್ಷ ಲಾಕ್‍ಡೌನ್ ನಿರೀಕ್ಷೆ ಇರದ ಕಾರಣ ಬಹುತೇಕ ಜನರು, ಮದುವೆಗೆ ತಿಂಗಳು ಇರುವಾಗಲೇ ಲಗ್ನಪತ್ರಿಕೆ ಮುದ್ರಿಸಿ ತಂದು ಊರೆಲ್ಲ ವಿತರಿಸಿ ಬಿಟ್ಟಿದ್ದರು. ಆದರೆ ಯಾವಾಗ ಸರಕಾರ ನೈಟ್ ಕಫ್ರ್ಯೂ, ವಿಕೆಂಡ್ ಕಫ್ರ್ಯೂ ಅಂತೆಲ್ಲ ಹೇಳುತ್ತ ಹೋಯಿತೋ, ಮದುವೆ ಮನೆಯವರು ಕಂಗಾಲಾಗಿದ್ದರು.

ನಮ್ಮ ಜೀವನದಲ್ಲಿ ಇದು ಮರೆಯಲಾಗದ ಘಟನೆ. ಆತ್ಮೀಯರ ಮದುವೆ ಕಾರ್ಯಕ್ಕೂ ನಾವು ಕದ್ದುಮುಚ್ಚಿ ಬರಬೇಕಾಗಿದೆ. ಮದುವೆ ಕಾರ್ಯಕ್ರಮಕ್ಕೆ 50 ಜನರು ದಾಟಿದರೆ ನಮ್ಮಿಂದಾಗಿ ಮದುವೆ ಮನೆಯವರಿಗೆ ಸುಮ್ಮನೇ ತೊಂದರೆ ಅಲ್ಲವೇ? ಅದಕ್ಕಾಗಿ ನಮಗೆ ಹೆಚ್ಚು ಹೊತ್ತು ನಿಲ್ಲಲು ಮನಸ್ಸಾಗದೇ ವಾಪಸ್ಸು ಹೋಗುತ್ತಿದ್ದೇವೆ.
  - ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಓರ್ವ ವ್ಯಕ್ತಿ

ಕೊನೆಗೆ ಸರಕಾರ ಮದುವೆ ಕಾರ್ಯಕ್ರಮಗಳಿಗೆ ತಲಾ 50 ಜನರ ಭಾಗವಹಿಸುವಿಕೆಗೆ ಸೀಮಿತಗೊಳಿಸಿ ನಿರ್ಬಂಧ ವಿಧಿಸಿದಾಗ, ಬೇರೆ ದಾರಿ ಇಲ್ಲದೇ ಮದುವೆಯಲ್ಲಿ ಭಾಗವಹಿಸುವ ಜನರ ಲೆಕ್ಕ ಹಾಕಲು ಆರಂಭಿಸಿದ್ದರು. ಅಂತೂ ರವಿವಾರ 22 ಮದುವೆ ಕಾರ್ಯಗಳು ಮುಗಿದು ಹೋಗಿದ್ದು, ಅಧಿಕಾರಿಗಳ ಆಗಮನ ಹಾಗೂ ಮದುವೆಗೆ ಬಂದ ಜನರ ಲೆಕ್ಕಾಚಾರ ಎಲ್ಲರ ಗಮನ ಸೆಳೆದಿದೆ.  

ಬರಬೇಕಾದವರು ಬರಲಿಲ್ಲ !:
ಕೊರೊನಾ ಮಾರ್ಗಸೂಚಿ ಹಾಗೂ ವಾರಾಂತ್ಯದ ಕಫ್ರ್ಯೂನಿಂದಾಗಿ ಬಹಳಷ್ಟು ಜನರು ಆತ್ಮೀಯರ, ಗೆಳೆಯರ, ಕುಟುಂಬ ಸದಸ್ಯರ ಮದುವೆಯಲ್ಲಿ ಪಾಲ್ಗೊಳ್ಳಲಾಗದೇ ಪರಿತಪಿಸಿದ್ದಾರೆ. ಪುರೋಹೀತರು, ಪೋಟೋಗ್ರಾಫರ್, ವಾದ್ಯದವರನ್ನು ಹೊರತುಪಡಿಸಿ, ನಿಗದಿಪಡಿಸಿದ 50ರಲ್ಲಿ ಯಾರಿಗೆ ಪಾಸ್ ನೀಡುವುದು ಎನ್ನುವುದು ವಧು, ವರರ ಕುಟುಂಬದವರಿಗೂ ತಲೆ ನೋವು ತಂದಿತ್ತು. ಕೆಲವರಂತೂ ಯಾವುದೇ ಪಾಸ್ ಇಲ್ಲದೇ ಕದ್ದು ಮುಚ್ಚಿ ಒಳದಾರಿಯಲ್ಲಿ ಸಭಾಗೃಹಕ್ಕೆ ಬಂದು ವಧು, ವರರ ಕೈಕುಲುಕಿ ಕ್ಷಣಮಾತ್ರದಲ್ಲಿ ಮರೆಯಾಗಿದ್ದಾರೆ! ಇನ್ನು ಕೆಲವರು ಮದುವೆ ಮಂಟಪದ ಬದಲಿಗೆ, ವಧು, ವರರ ಮನೆಗೆ ತೆರಳಿ ಶುಭ ಹಾರೈಸಲು ನಿರ್ಧರಿಸಿ ಮದುವೆಗೆ ಬಾರದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ರವಿವಾರ ತಾಲೂಕಿನಲ್ಲಿ ನಡೆದ ಹೆಚ್ಚಿನ ಎಲ್ಲ ಮದುವೆ ಕಾರ್ಯಗಳಲ್ಲಿ ಮಾಡಿಟ್ಟ ಅಡುಗೆ ಖರ್ಚಾಗದೇ ಹಾಗೆಯೇ ಉಳಿದಿರುವ ಬಗ್ಗೆ ಮಾಹಿತಿ ಲಭಿಸಿದೆ. ( ಜನರು ಬರುವುದಿಲ್ಲ ಎಂದು ಅಡುಗೆ ಕಡಿಮೆ ಮಾಡುವಂತೆಯೂ ಇಲ್ಲ!) ಜನರ ಕೊರತೆಯ ಪರಿಣಾಮ ಎಂಬಂತೆ ಆತ್ಮೀಯರಿಂದ ತುಂಬಿ ತುಳುಕಾಡಬೇಕಾಗಿದ್ದ ಮದುವೆ ಸಭಾಂಗಣ, ಸದ್ದು ಗದ್ದಲ ಇಲ್ಲದೇ ಶಾಂತಿ ಮಂತ್ರಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಮಾತ್ರ ಎರಡೆರಡು ಬಾರಿ ಸಭಾಗೃಹಕ್ಕೆ ಬಂದು ಜನರನ್ನು ಲೆಕ್ಕ ಹಾಕುವುದರಲ್ಲಿ ನಿರತರಾಗಿರುವುದು ಕಂಡು ಬಂದಿದೆ. 

Read These Next

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...