ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

Source: S.O. News Service | Published on 19th May 2024, 5:45 PM | Coastal News |

ಕುಂದಾಪುರ: ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ವಿಕಲಚೇತನ ಮಗಳು ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮೂಡು ಗೋಪಾಡಿಯ ದಾಸನಹಾಡಿ ಎಂಬಲ್ಲಿ ನಡೆದಿದೆ.

ದಾಸನಹಾಡಿ ನಿವಾಸಿ ಜಯಂತಿ ಶೆಟ್ಟಿ (62) ಹಾಗೂ ಅವರ ಪುತ್ರಿ ಪ್ರಗತಿ ಶೆಟ್ಟಿ(32) ಮೃತಪಟ್ಟವರು. ಹೆಂಗವಳ್ಳಿ ಮೂಲದ ಇವರು ಕಳೆದ ಒಂದೂವರೆ ದಶಕಗಳಿಂದ ಮೂಡುಗೋಪಾಡಿಯಲ್ಲಿ ನೆಲೆಸಿದ್ದು, ಜಯಂತಿಯ ಪತಿ ನಿಧನರಾದ ಬಳಿಕ ತಾಯಿ-ಮಗಳು ಇಬ್ಬರೇ ವಾಸವಿದ್ದರು. ಜಯಂತಿ ಶೆಟ್ಟಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಮಗಳು ಹುಟ್ಟಿನಿಂದಲೇ ಬುದ್ಧಿಮಾಂದ್ಯರಾಗಿದ್ದರು. ಇತ್ತೀಚೆಗೆ ಮಧುಮೇಹ ಕಾಯಿಲೆಗೆ ತುತ್ತಾಗಿದ್ದ ಪ್ರಗತಿ ಶೆಟ್ಟಿ, ಇದೇ ಕಾರಣಕ್ಕೆ ಒಂದು ಕಾಲನ್ನು ಕಳೆದುಕೊಂಡಿದ್ದರು.

ಜಯಂತಿ ಶೆಟ್ಟಿ ಮೇ 12ರಂದು ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ತೆರಳಿ ಮಗಳ ಆರೋಗ್ಯ ಚೇತರಿಕೆಗಾಗಿ ವಿಶೇಷ ಸೇವೆಗಳನ್ನು ಮಾಡಿಸಿದ್ದರು. ಮೇ 13ರಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಸ್ಥಳೀಯ ಆಟೊ ರಿಕ್ಷಾ ಚಾಲಕನೊಬ್ಬನನ್ನು ಬರಲು ಹೇಳಿದ್ದರು. ಅದರಂತೆ ಆ ಆಟೊ ಚಾಲಕ ಮೇ 13ರಂದು ದೇವಳಕ್ಕೆ ತೆರಳುವ ಬಗ್ಗೆ ವಿಚಾರಿಸಲು ಜಯಂತಿಯವರಿಗೆ ಕರೆ ಮಾಡಿದ್ದರೆನ್ನಲಾಗಿದೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಆತ ಜಯಂತಿ ಮನೆಗೆ ತೆರಳಿರಲಿಲ್ಲ ಎಂದು ತಿಳಿದು ಬಂದಿದೆ.

ಬಳಿಕ ಮೂರು ದಿನ ಕಳೆದರೂ ಜಯಂತಿ ಶೆಟ್ಟಿಯ ಮನೆಯ ಗೇಟ್ ಸೇರಿದಂತೆ ಬಾಗಿಲುಗಳು ಮುಚ್ಚಿಕೊಂಡಿರುವುದನ್ನು ಹಾಗೂ ಮನೆಯ ಎಲ್ಲಾ ಕೊಠಡಿಗಳ ದೀಪಗಳು ಹಗಲಲ್ಲೂ ಉರಿಯುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಮನೆಯವರು ಹೊರಗೆಲ್ಲೋ ಹೋಗಿರಬಹುದು ಎಂದು ಭಾವಿಸಿ ಸ್ಥಳೀಯರು ಸುಮ್ಮನಿದ್ದರು.

ಆದರೆ ಮೇ 17ರಂದು ರಾತ್ರಿ ವೇಳೆ ಮನೆ ಸಮೀಪ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆ ಹೊರೆಯವರು ಜಯಂತಿ ಶೆಟ್ಟಿಯ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಮನೆಯಲ್ಲಿ ರಿಂಗಣಿಸುವುದು ಕೇಳಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು  ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಸುರೇಶ್ ಶೆಟ್ಟಿ ಸ್ಥಳೀಯರೊಂದಿಗೆ ಮನೆಯ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಪ್ರಗತಿ ಶೆಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡುಬಂತೆನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಮನೆಯ ಬಾಗಿಲನ್ನು ಸ್ಥಳೀಯರ ಸಹಕಾರ ದಿಂದ ಒಡೆದು ಒಳಪ್ರವೇಶಿಸಿದ್ದಾರೆ. ಈ ವೇಳೆ ಜಯಂತಿ ಶೆಟ್ಟಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ತೀವ್ರ ನಿತ್ರಾಣಗೊಂಡ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಗತಿ ಶೆಟ್ಟಿಯನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಪ್ರಗತಿ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಬಳಿಕ ಮೃತರ ಸಂಬಂಧಿಕರನ್ನು ಪತ್ತೆ ಹಚ್ಚಿ, ಕಾನೂನು ಪ್ರಕ್ರಿಯೆ ಮುಗಿಸಿ, ಶುಕ್ರವಾರ ಜಯಂತಿ ಹಾಗೂ ಶನಿವಾರ ಪ್ರಗತಿಯವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

Read These Next

ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ;ಪೊಕ್ಲೆನ್ ಯಂತ್ರ ಬಳಸಿ ಕಾರ್ಯಾಚರಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ...