ಕಾಪುವಿನಲ್ಲಿ ಮನೆಮನೆಗೆ ತೆರಳಿ ಅನಧಿಕೃತ ಮಾಹಿತಿ ಸಂಗ್ರಹ! ! ವಿವಾದದ ಬೆನ್ನಲ್ಲೇ ಅಭಿಯಾನ ನಿಲ್ಲಿಸಿದ ಪೊಲೀಸರು

Source: Vb | By I.G. Bhatkali | Published on 4th December 2022, 12:37 PM | Coastal News | Don't Miss |

ಮಂಗಳೂರು: ಕಾಪು ತಾಲೂಕು ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಅನಧಿಕೃತವಾಗಿ ಮನೆಮನೆಗೆ ತೆರಳಿ ಮನೆಮಂದಿಯ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಸಂಗ್ರಹಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತ ವೀಡಿಯೊವೊಂದು ವೈರಲ್ ಆಗಿ ವಿವಾದದ ರೂಪ ಪಡೆಯುತ್ತಲೇ ಸ್ಥಳೀಯ ಪೊಲೀಸರ ಮೂಲಕವೇ ನಡೆದಿದ್ದ ಈ ಮಾಹಿತಿ ಸಂಗ್ರಹ ಚಟುವಟಿಕೆಯನ್ನು ನಿಲ್ಲಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ಮಹಿಳೆಯೊಬ್ಬರು ಮಾತಾಡಿದ ವೀಡಿಯೊ ಹಾಗೂ ವಿವರಗಳ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಉಚ್ಚಿಲದಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮನೆಮಂದಿಯ ಸಂಪೂರ್ಣ ಮಾಹಿತಿ ಭರ್ತಿ ಮಾಡುವ ಫಾರ್ಮ್ ನೀಡಿದ್ದು, ಈ ವೇಳೆ ಕೆಲವು ಮನೆಯವರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರಕಾರದ ಯಾವುದೇ ಲೆಟರ್ ಹೆಡ್ ಹಾಗೂ ಅಧಿಕೃತ ಸೀಲ್ ಇಲ್ಲದ ಫಾರ್ಮ್ ಹಿಡಿದುಕೊಂಡು ಬಂದಿರುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದಾಗ, ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ, ಗೊಂದಲ ಉಂಟು ಮಾಡಿದೆ.

“ಆಶಾ ಕಾರ್ಯಕರ್ತೆಯರು ಮನೆಗೆ ಬಂದಾಗ ನಾವು ಮಾಹಿತಿ ಕೊಡಲು ಹಿಂದೇಟು ಹಾಕಿದ್ದಕ್ಕೆ ಕೊಡದೇ ಇದ್ದರೆ ಪೊಲೀಸರೇ ಬಂದು ಅದನ್ನು ಪಡೆಯುತ್ತಾರೆ ಎಂದು ಬೆದರಿಕೆ ಕೂಡ ಹಾಕಲಾಗಿದೆ. ವೈಯಕ್ತಿಕವಾಗಿ ಪಾಸ್ ಪೋರ್ಟ್ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಕೇಳಿದಾಗ ನಮಗೆ ಈ ಬಗ್ಗೆ ಸಂಶಯ ಮೂಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆಶಾ ಕಾರ್ಯಕರ್ತೆಯರು ಸಮರ್ಪಕವಾಗಿ ಉತ್ತರ ನೀಡಿಲ್ಲ'' ಎಂದು ಉಚ್ಚಿಲದ ಮಹಿಳೆಯೊಬ್ಬರು ದೂರಿದ್ದಾರೆ.

“ಮೊದಲು ಬಂದು ಆಧಾರ್ ಕಾರ್ಡ್ ನಂಬರ್ ಮಾತ್ರ ಕೇಳಿದರು. ನಂತರ ಒಂದೊಂದೇ ಮಾಹಿತಿ ಕೇಳಲು ಆರಂಭಿಸಿದರು. ಆ ಬಗ್ಗೆ ಮಾಹಿತಿ ಕೊಡುವುದಿಲ್ಲ ಎಂದು ಹೇಳಿದ್ದೇವೆ.”

ಅದಕ್ಕೂ ಅವರು ಪೊಲೀಸರ ಹೆಸರಿನಲ್ಲಿ ಬೆದರಿಸಿದ್ದಾರೆ. ಈ ಸಂಬಂಧ ಸ್ಥಳೀಯ ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿದೆವು. ಅವರು ಯಾವುದೇ ಮಾಹಿತಿ ಸಂಗ್ರಹಕ್ಕೆ ಸೂಚಿಸಿಲ್ಲ ಎಂದು ಉತ್ತರ ನೀಡಿದ್ದಾರೆ. ಹಾಗಾದರೆ ಇವರು ಸಂಗ್ರಹಿಸಿರುವ ಮಾಹಿತಿ ಯಾರಿಗೆ ಹೋಗುತ್ತದೆ ? ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ಅವರನ್ನು ಸಂಪರ್ಕಿಸಿದಾಗ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಈ ರೀತಿ ಮಾಹಿತಿ ಸಂಗ್ರಹಿಸುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಪತ್ರದಲ್ಲಿದ್ದ ಮಾಹಿತಿಗಳ ವಿವರ: ಹೆಸರು, ವಿಳಾಸ, ಮನೆಯ ಪ್ರತಿ ಸದಸ್ಯರ ಮೊಬೈಲ್ ನಂಬರ್‌, ಆಧಾರ್ ನಂಬರ್, ಇಮೇಲ್ ಐಡಿ, ಸ್ಥಿರ ದೂರವಾಣಿ ಸಂಖ್ಯೆ, ಮನೆಯವರ ಬಗ್ಗೆ ಮಾಹಿತಿ, ವಾಹನಗಳ ವಿವರ, ಮನೆಯ ಗ್ಯಾಸ್ ಕಂಪೆನಿ ಮತ್ತು ಗ್ಯಾಸ್ ನಂಬರ್, ಪಾನ್ ಕಾರ್ಡ್ (ಪ್ರತಿ ಸದಸ್ಯರದ್ದು), ಚುನಾವಣೆ ಗುರುತಿನ ಚೀಟಿ ನಂಬರ್ (ಪ್ರತಿ ಸದಸ್ಯರದ್ದು), ಪಾಸ್‌ಪೋರ್ಟ್‌ ನಂಬರ್, ಹಳೆಯ ಪಾಸ್‌ಪೋರ್ಟ್ ನಂಬರ್, ಮಕ್ಕಳ ವಿವರಗಳು ಹಾಗೂ ಕಲಿಯುತ್ತಿರುವ ಶಾಲೆಗಳ ವಿವರ, ಸಸ್ಯಾಹಾರಿ ಅಥವಾ ಮಾಂಸಹಾರಿ, ಜಾತಿ, ಮನೆಯವರ ಆರೋಗ್ಯ ಬಗ್ಗೆ ಮಾಹಿತಿ, ಕೋವಿಡ್ ಲಸಿಕೆ ಪಡೆದ ಬಗ್ಗೆ ಮಾಹಿತಿ, ಬೇರೆ ಯಾವುದೇ ಚುಚ್ಚುಮದ್ದು ತೆಗೆದುಕೊಂಡಲ್ಲಿ ಅದರ ಮಾಹಿತಿ, ಬ್ಯಾಂಕ್ ಅಕೌಂಟ್ ಎಷ್ಟಿದೆ, ಯಾವ ಬ್ಯಾಂಕ್ ಹಾಗೂ ಖಾತೆ ನಂಬರ್, ಅಂಚೆ ಕಚೇರಿಯಲ್ಲಿರುವ ಖಾತೆಗಳ ಹಾಗೂ ಉಳಿತಾಯ ಖಾತೆಗಳ ವಿವರಗಳು, ಮನೆಯ ಪ್ರತೀ ಸದಸ್ಯರ ವಿದ್ಯಾಭ್ಯಾಸ, ವಿಧ್ಯಾಭ್ಯಾಸ ಮಾಡಿರುವ ಶಾಲೆಯ ಹೆಸರು ಮತ್ತು ವಿಳಾಸ, ಜನ್ಮ ಸ್ಥಳ ಮತ್ತು ದಿನಾಂಕದ ಮಾಹಿತಿಗಳನ್ನು ಕೇಳಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...