ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

Source: sonews | By Staff Correspondent | Published on 10th August 2019, 11:47 PM | National News | Special Report | Don't Miss |

ಸಂವಿಧಾನದ ವಿರುದ್ಧ ಮೋದಿ ಸರಕಾರ ಮಾಡಿದ ಈ ಕ್ಷಿಪ್ರಕ್ರಾಂತಿಯ ರೀತಿಯು ಈಗ ದೇಶದಲ್ಲಿ ಪ್ರತಿಷ್ಠಾಪನೆಯಾಗಿರುವ ಸರ್ವಾಧಿಕಾರಶಾಹಿ ಆಳ್ವಿಕೆಯ ಸಂಕೇತವಾಗಿದೆ. 370ನೇ ವಿಧಿಯನ್ವಯ ಒಂದು ರಾಷ್ಟ್ರಪತಿ ಆದೇಶದ ಮೂಲಕ ಸಂವಿಧಾನದ ಇನ್ನೊಂದು ವಿಧಿಯನ್ನು ಅಂದರೆ 367ನೇ ವಿಧಿಯನ್ನು ಬದಲಾಯಿಸಲು ಬಳಸಲಾಯಿತು. 370ನೇ ವಿಧಿಯ ಸಾರವನ್ನೇ ಹಿಂಪಡೆಯಲು ಅದನ್ನು ಬಳಸಲಾಯಿತು. ಈ ಕುತಂತ್ರದ ಮೂಲಕವಾಗಿ, ರಾಷ್ಟ್ರಪತಿ ಶಾಸನದಲ್ಲಿರುವ ರಾಜ್ಯದ ಶಾಸಕಾಂಗದ ಅಧಿಕಾರವನ್ನು ಕಸಿಯಲಾಯಿತು. ಆ ರಾಜ್ಯವನ್ನೇ ಕಳಚಿ ಹಾಕಲಾಯಿತು.

ಬಿಜೆಪಿ ಸರಕಾರದ ಈ ಕ್ರಮಕ್ಕೆ ವಿವಿಧ ಜನವಿಭಾಗಗಳಿಂದ ಬೆಂಬಲ ವ್ಯಕ್ತವಾಗಿದೆ. ಇದು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕಲು ನಿರ್ಣಾಯಕವಾದ ಮಾರ್ಗವೆಂದು ಕಾಣಲಾಗುತ್ತಿದೆ. ಮೋದಿ ಸರಕಾರ ಪ್ರಚುರಪಡಿಸುತ್ತಿರುವ ಈ ಅಧಿಕೃತ ಕಥನಕ್ಕೆ ಹಲವರು ಮಾರುಹೋಗಿದ್ದಾರೆ. ಆದರೆ ಇದರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಇಡಿಯಾಗಿ ದೇಶದ ಮೇಲೆ ದೀರ್ಘಕಾಲದಲ್ಲಾಗುವ ಅಪಾಯಕಾರಿ ಪರಿಣಾಮ ಏನೆಂಬುದು ಜನರ ಮುಂದೆ ಬಂದಿಲ್ಲ.
******************
ಮೋದಿ ಸರಕಾರ ಸಂವಿಧಾನ ಮತ್ತು ಒಕ್ಕೂಟ ತತ್ವದ ಮೇಲೆ ಒಂದು ಮಿಂಚಿನ ದಾಳಿ ನಡೆಸಿದೆ. ಮೋದಿ-ಷಾ ಜೋಡಿಯ ನೇತೃತ್ವದಲ್ಲಿ ಸಂವಿಧಾನದ 370ನೇ ವಿಧಿಯನ್ನು ಸಿಗಿದು ಹಾಕಲಾಗಿದೆ ಮತ್ತು ಅದರಿಂದ ಹೊಮ್ಮುವ ಉಪ ಅಂಶವಾದ 35ಎ ವಿಧಿಯನ್ನು ನಿರರ್ಥಕಗೊಳಿಸಲಾಗಿದೆ. ಅದಾದ ಮೇಲೆ ಮುಂದುವರೆದು ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವದ ಮೇಲೆಯೇ ಒಂದು ನಗ್ನ ದಾಳಿ ನಡೆಸಿದ್ದಾರೆ.

ಇವನ್ನೆಲ್ಲಾ ತುಂಬಾ ಕಳ್ಳಾಟಿಕೆಯಿಂದ ಹಾಗೂ ಜಮ್ಮು ಮತ್ತು ಕಾಶ್ಮೀರ ದ ಜನರನ್ನು ಬಂಧಿಯಾಗಿಸಿ ಮತ್ತು ಬಲವಂತದಿಂದ ಮಾಡಲಾಗಿದೆ. ರಾಷ್ಟçಪತಿ ಆದೇಶ, 370ನೇ ವಿಧಿಯನ್ನು ತೆಗೆದುಹಾಕುವ ಮತ್ತು ಜಮ್ಮ ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕುವ ಸಂಬಂಧದ ನಿರ್ಣಯಗಳು ಮತ್ತು ಮಸೂದೆಗಳನ್ನು ಕಪಟೋಪಾಯದಿಂದ ಮಂಡಿಸಿದ ರೀತಿ ಕೂಡ ಸಂವಿಧಾನದ ಮೇಲೆ ಮಾಡಿರುವ ಮೋಸವಾಗಿದೆ.

2019 ಆಗಸ್ಟ್ 6ರವರೆಗೆ ಭಾರತ ಒಕ್ಕೂಟದಲ್ಲಿ 29 ರಾಜ್ಯಗಳಿದ್ದವು. ಸಂಸತ್ತಿನ ಉಭಯ ಸದನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ ಮಸೂದೆ ಅಂಗೀಕಾರವಾಗುವ ಮೂಲಕ ಅವುಗಳ ಸಂಖ್ಯೆ 28ಕ್ಕೆ ಇಳಿದಿದೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಅಭೂತಪೂರ್ವವಾದ ವಿದ್ಯಮಾನವಾಗಿದೆ. ಹಾಲಿ ರಾಜ್ಯಗಳ ಗಡಿಗಳನ್ನು ಬದಲಾಯಿಸುವ ಅಥವಾ ಹೊಸದನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ ಸಂವಿಧಾನದ ನಿಯಮವಾದ 3ನೇ ವಿಧಿಯನ್ನು ಬಿಜೆಪಿ ಸರಕಾರ ಉಲ್ಲಂಘಿಸಿದೆ. ರಾಜ್ಯದ ಶಾಸಕಾಂಗದ ಅಭಿಪ್ರಾಯಗಳನ್ನು ಪಡೆಯದೆ ಅದು ಹೀಗೆ ಮಾಡಿದೆ. ರಾಜ್ಯದ ಹಕ್ಕುಗಳು ಮತ್ತು ಒಕ್ಕೂಟ ತತ್ವದ ಮೇಲೆ ಈ ರೀತಿಯ ನಗ್ನ ದಾಳಿ ಹಿಂದೆ ಎಂದೂ ಆಗಿರಲಿಲ್ಲ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಸಂವಿಧಾನ ಸಭೆಯು ಸಂವಿಧಾನದಲ್ಲಿ ಸೇರಿಸಿತ್ತು. ಭಾರತ ಒಕ್ಕೂಟದ ಇತರ ರಾಜ್ಯಗಳಿಗಿಂತ ಭಿನ್ನವಾದ ಸ್ಥಾನಮಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಈ ವಿಧಿ ಒದಗಿಸಿತ್ತು. ಅದರದ್ದೇ ಆದ ಸಂವಿಧಾನ ಹೊಂದಲು ಅವಕಾಶ ಕಲ್ಪಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವ್ಯಾಪಕ ಸ್ವಾಯತ್ತತೆಯನ್ನು ನೀಡಲಾಗಿತ್ತು. ಹಾಗೂ ರಾಜ್ಯ ಶಾಸಕಾಂಗವು ರಚನೆಯಾದ ನಂತರದಲ್ಲಿ, ಸಂಸತ್ತು ರಚಿಸುವ ಕಾನೂನುಗಳ ಪೈಕಿ ಯಾವುದು ರಾಜ್ಯದಲ್ಲಿ ಅನ್ವಯವಾಗಬಹುದು ಎನ್ನುವುದನ್ನು ನಿರ್ಧರಿಸಬಹುದಿತ್ತು.

370ನೇ ವಿಧಿಯ ಹಿನ್ನೆಲೆ

ಸ್ವಾತಂತ್ರ್ಯಪೂರ್ವದ ಜಮ್ಮು ಮತ್ತು ಕಾಶ್ಮೀರ ರಾಜ ಸಂಸ್ಥಾನ ಭಾರತದ ಭಾಗವಾದ ಪ್ರಸಕ್ತ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮತ್ತು ಕಾಶ್ಮೀರ ದ ಪಾಕಿಸ್ತಾನ ಆಕ್ರಮಿತ ಭಾಗವನ್ನು ಒಳಗೊಂಡಿತ್ತು. ಅಂದಿನ ಮಹಾರಾಜ ಹರಿಸಿಂಗ್ಗೆ ಭಾರತಕ್ಕೆ ಸೇರುವ ಮನಸ್ಸು ಇರಲಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಒಂದು ಪ್ರತ್ಯೇಕ ಪ್ರಭುತ್ವವನ್ನಾಗಿರಿಸುವುದು ಅವರ ಬಯಕೆಯಾಗಿತ್ತು. ಆದ್ದರಿಂದ 1947 ಆಗಸ್ಟ್ 15ರ ವೇಳೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಷೇಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಪಾಳೇಗಾರಿ ಆಳ್ವಿಕೆಯ ವಿರುದ್ಧ ಹೋರಾಡುತ್ತಿತ್ತು. ಇದು ರಾಜರ ಸಂಸ್ಥಾನಗಳಲ್ಲಿ ಪಾಳೇಗಾರಿ-ವಿರೋಧಿ, ಸಾಮ್ರಾಜ್ಯಶಾಹಿ-ವಿರೋಧಿ ಚಳವಳಿಯ ಭಾಗವಾಗಿತ್ತು.

ಮುಖ್ಯವಾಗಿ ವಾಯವ್ಯ ಪ್ರಾಂತ್ಯದ ಪಠಾಣರನ್ನೊಳಗೊಂಡ ಪಾಕಿಸ್ತಾನದ ದಾಳಿಕೋರರು ಆಕ್ರಮಣ ನಡೆಸಿ ಶ್ರೀನಗರದ ಹೊರವಲಯವನ್ನು ತಲುಪಿದಾಗಲಷ್ಟೆ ಭಾರತಕ್ಕೆ ಸೇರ್ಪಡೆಯ ಒಡಂಬಡಿಕೆಗೆ ಸಹಿಹಾಕಲು ಮಹಾರಾಜ ಹರಿಸಿಂಗ್ ಒಪ್ಪಿದರು. 1947 ಅಕ್ಟೋಬರ್ 26ರಂದು ಅದಕ್ಕೆ ಸಹಿ ಹಾಕಲಾಯಿತು. ನ್ಯಾಷನಲ್ ಕಾನ್ಫರೆನ್ಸ್ ಜೊತೆಗಿದ್ದ ಕಾಶ್ಮೀರ ಕಣಿವೆಯ ಜನರು ಆಕ್ರಮಣಕಾರರ ವಿರುದ್ಧ ಹೋರಾಡಿದರು. ಭಾರತೀಯ ಸೇನೆಯನ್ನು ವಿಮಾನದ ಮೂಲಕ ಶ್ರೀನಗರಕ್ಕೆ ರವಾನಿಸಲಾಯಿತು. ಈ ಸೈನ್ಯ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತು.

ಈ ಸನ್ನಿವೇಶದಲ್ಲಿ ಸಂವಿಧಾನವನ್ನು ರಚಿಸುತ್ತಿದ್ದ ಸಂವಿಧಾನ ರಚನಾ ಸಭೆಯು ಅದರಲ್ಲಿ 370ನೇ ವಿಧಿಯನ್ನು ಸೇರಿಸಿತು. ಭಾರತೀಯ ಪ್ರಭುತ್ವ ಮತ್ತು ಕಾಶ್ಮೀರಿ ಜನರ ಪ್ರತಿನಿಧಿಗಳ ನಡುವೆ ಆದ ಒಪ್ಪಂದವನ್ನು 370ನೇ ವಿಧಿ ಪ್ರತಿನಿಧಿಸುತ್ತದೆ. ತಮ್ಮ ಅಸ್ಮಿತೆ ಮತ್ತು ಕಶ್ಮೀರಿಯತ್ ಎಂದು ಹೇಳಲಾಗುವ ಅವರದೇ ಆದ ಜೀವನಶೈಲಿಯನ್ನು ಉಳಿಸಿಕೊಳ್ಳುವ ಕಾಶ್ಮೀರಿ ಜನತೆಯ ಆಶೋತ್ತರಗಳನ್ನು ಅದು ಒಳಗೊಂಡಿತ್ತು.

ದೇಶವು ಧರ್ಮಗಳ ಆಧಾರದಲ್ಲಿ ಒಡೆಯುತ್ತಿದ್ದಾಗ ಹಾಗೂ ದ್ವಿರಾಷ್ಟ್ರ ಸಿದ್ಧಾಂತ ಅಸ್ತಿತ್ವದಲ್ಲಿದ್ದಾಗ, ಮುಸ್ಲಿಂ ಬಹುಸಂಖ್ಯಾಕರಾಗಿರುವ ರಾಜ್ಯವೊಂದರ ಜನರು ಜಾತ್ಯತೀತವಾದ ಭಾರತೀಯ ಪ್ರಭುತ್ವಕ್ಕೆ ಬೆಂಬಲ ನೀಡಿದ್ದು ಭಾರತದ ಪ್ರಭುತ್ವಕ್ಕೆ ಮಹತ್ವದ ವಿಚಾರವಾಗಿತ್ತು. ದೇಶ ವಿಭಜನೆಯ ಸಂದರ್ಭ ವಾಯವ್ಯ ಭಾರತವನ್ನು ದೊಂಬಿಗಳ ಕೆನ್ನಾಲಗೆ ಆವರಿಸಿಕೊಂಡಿದ್ದಾಗ ಕಾಶ್ಮೀರ ಕಣಿವೆಯು ಶಾಂತಿ ಮತ್ತು ಕೋಮು ಸೌಹಾರ್ದದ ಸ್ವರ್ಗವಾಗಿತ್ತು
.
370ನೇ ವಿಧಿಯ ನಿಧಾನ ನಾಶ

ಈ ಬದ್ಧತೆಯಂದ ಹಿಂದೆ ಸರಿದಿದ್ದೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣವಾಗಿದೆ. 1953ರ ನಂತರ ಸತತವಾಗಿ ಕೇಂದ್ರದಲ್ಲಿನ ಕಾಂಗ್ರೆಸ್ ಸರಕಾರಗಳು 370ನೇ ವಿಧಿಯನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಕ್ರಮಗಳನ್ನು ಕೈಗೊಳ್ಳತೊಡಗಿದವು. 1960, 70 ಮತ್ತು 80ರ ದಶಕದಾದ್ಯಂತ ಕೇಂದ್ರೀಕರಣ ಮತ್ತು ಸ್ವಾಯತ್ತತೆಯನ್ನು ನಿರಾಕರಿಸುವ ಪ್ರಕ್ರಿಯೆ ಮುಂದುವರಿಯಿತು. ರಾಜ್ಯಕ್ಕೆ ನೀಡಲಾಗಿದ್ದ ಸ್ವಾಯತ್ತತೆಯ ಬಹುತೇಕ ಅಂಶಗಳನ್ನು ತೆಗೆದು ಹಾಕುವ ಉದ್ದೇಶದಿಂದ 370ನೇ ವಿಧಿಯನ್ನು ಬುಡಮೇಲು ಮಾಡಲಾಯಿತು. 1954ರ ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ) ಆದೇಶದ ನಂತರದಲ್ಲಿ 2010ರವರೆಗೆ ಇಂಥ 42 ಆದೇಶಗಳು ಜಾರಿಯಾಗಿವೆ. ಅವುಗಳು 370ನೇ ವಿಧಿಯನ್ನು ಅಳವಡಿಸುವ ವೇಳೆ ನಮೂದಿತವಾಗದ ಕಾನೂನುಗಳ ವಿಚಾರದಲ್ಲಿ ಕೇಂದ್ರದ ಮಧ್ಯಪ್ರವೇಶದ ಅವಕಾಶವನ್ನು ಹೆಚ್ಚಿಸಿದವು.
ಕಾನೂನು ತಜ್ಞ ಎ.ಜಿ. ನೂರಾನಿ ಅವರು ಸಮರ್ಥವಾಗಿ ದಾಖಲೀಕರಿಸಿರುವಂತೆ, ಕೇಂದ್ರೀಕರಣ ಪ್ರಕ್ರಿಯೆ ಮೂಲಕ 370ನೇ ವಿಧಿಯ ಮೂಲ ಆಶಯವನ್ನು ದುರ್ಬಲಗೊಳಿಸಲಾಯಿತು. ಕೇಂದ್ರ ಪಟ್ಟಿಯಲ್ಲಿರುವ 97 ವಿಷಯಗಳ ಪೈಕಿ 94 ವಿಷಯಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತವೆ.

ಪರಕೀಯಭಾವ ಮತ್ತು ಉಗ್ರವಾದದ ಉದಯ

ರಾಜ್ಯದಲ್ಲಿ ಸ್ವಾಯತ್ತತೆಯ ಕುಸಿತದೊಂದಿಗೆ ಪ್ರಜಾಪ್ರಭುತ್ವದ ನಿರಾಕರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನವು ನಡೆಯತೊಡಗಿತು. ಚುನಾಯಿತ ಸರಕಾರಗಳನ್ನು ಉರುಳಿಸಲಾಯಿತು. ಕೇಂದ್ರ ಸರಕಾರದ ಆಶ್ರಯದಲ್ಲಿ ಪದೇ ಪದೇ ಚುನಾವಣಾ ಅಕ್ರಮಗಳನ್ನು ನಡೆಸಲಾಯಿತು. 1987ರ ಚುನಾವಣೆ ಇದಕ್ಕೊಂದು ಉದಾಹರಣೆ. ಈ ಹಿನ್ನೆಲೆಯಲ್ಲಿ ಪರಕೀಯ ಭಾವ ಮೊಳೆತು ಅದು ಉಗ್ರವಾದ ಮತ್ತು `ಆಜಾದಿ' ಘೋಷಣೆಯೊಂದಿಗೆ ಸಶಸ್ತ್ರ ಹೋರಾಟದ ಸೂಚನೆಗಳು ಕಂಡುಬಂದವು. ಕಾಲಾಂತರದಲ್ಲಿ ಹಿಜ್ಬುಲ್ ಮುಜಾಹಿದಿನ್ ಮತ್ತು ನಂತರದ ವರ್ಷಗಳಲ್ಲಿ ಪಾಕಿಸ್ತಾನ ನೆಲೆಯ ಉಗ್ರಪಂಥೀಯ ಜೈಷ್ ಎ ಮೊಹಮದ್ ಮತ್ತು ಲಷ್ಕರ್ ಎ ತೊಯ್ಬಾದಂಥ ಭಯೋತ್ಪಾದಕ ಸಂಘಟನೆಗಳು ಸೇರಿದಂತೆ ಪಾಕಿಸ್ತಾನ ಬೆಂಬಲಿತ ಇಸ್ಲಾಮ್ವಾದಿ ಶಕ್ತಿಗಳು ಈ ಅತೃಪ್ತಿಯನ್ನು ಬಳಸಿಕೊಂಡವು.

ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಪಾಳೇಗಾರಿ-ವಿರೋಧಿ ಹೋರಾಟವನ್ನು ಹಿಂದೂ ಕೋಮುವಾದಿ ಶಕ್ತಿಗಳು ಮೊದಲಿನಿಂದಲೂ ವಿರೋಧಿಸುತ್ತಿದ್ದವು. ವಾಸ್ತವವಾಗಿ ಜನಸಂಘದ ಪೂರ್ವಜವಾದ ಪ್ರಜಾ ಪರಿಷತ್ ಮಹಾರಾಜನಿಗೆ ಬೆಂಬಲ ನೀಡಿತ್ತು. ಜನ ಸಂಘ ಮತ್ತು ಹಿಂದೂ ಮಹಾಸಭಾ 370ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ರೀತಿಯ ಸ್ವಾಯತ್ತತೆ ನೀಡುವುದನ್ನು ಸಂಪೂರ್ಣವಾಗಿ ವಿರೋಧಿಸಿದ್ದವು. ಹಿಂದುತ್ವ ಸಿದ್ಧಾಂತ ಹೊಂದಿರುವುದರಿಂದ ಆರ್ಎಸ್ಎಸ್ ಬೆಂಬಲಿತ ಜನಸಂಘ ಮತ್ತು ನಂತರದಲ್ಲಿ ಬಿಜೆಪಿ ಏಕಘಟಕ ಕೇಂದ್ರೀಕೃತ ಭಾರತದ ಕಲ್ಪನೆಯಿಂದ ಸತತವಾಗಿ 370ನೇ ವಿಧಿಯನ್ನು ವಿರೋಧಿಸುತ್ತಾ ಬಂದಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಕಾಶ್ಮೀರ ಕಣಿವೆಯು ಮುಸ್ಲಿಂ ಬಾಹುಳ್ಯದ ಪ್ರದೇಶ ಎಂಬುದು ಅವರ ಶತ್ರುತ್ವಕ್ಕೆ ಕಾರಣವಾಗಿತ್ತು.

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕುವುದು ಹಿಂದುತ್ವದ ಹುನ್ನಾರ

ಗಡಿಯಾಚೆಗಿನ ಇಸ್ಲಾಮ್ವಾದಿಗಳ ರೀತಿಯಲ್ಲಿ ಹಿಂದುತ್ವವಾದಿಗಳು ಮತ್ತು ಆರ್ಎಸ್ಎಸ್ನವರು ಜಮ್ಮು ಮತ್ತು ಕಾಶ್ಮೀರವನ್ನು ಮೂರು ಭಾಗಳನ್ನಾಗಿ ಮಾಡಬೇಕೆಂದು ಬಯಸುತ್ತಾರೆ; ಹಿಂದೂ ಬಹುಸಂಖ್ಯಾಕರನ್ನು ಹೊಂದಿರುವ ಪ್ತ್ಯೇಕ ಜಮ್ಮು, ಮುಸ್ಲಿಂ ಬಾಹುಳ್ಯದ ಕಣಿವೆ ಮತ್ತು ಬೌದ್ಧರು ಸಣ್ಣ ಬಹುಸಂಖ್ಯಾಕರಾಗಿರುವ ಲಡಾಖ್- ಇವೇ ಆ ಮೂರು ಭಾಗಗಳು. ಮುಸ್ಲಿಮರು ಬಹುಸಂಖ್ಯಾತರಾಗಿರುವ ಒಂದು ಸಮಗ್ರ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅಸ್ತಿತ್ವವು ಅವರಿಗೆ ಅಪಥ್ಯವಾಗಿದೆ. 
ಕಾಶ್ಮೀರ ಕಣಿವೆಯ ಧಾರ್ಮಿಕ ಸ್ವರೂಪದ ಕಾರಣದಿಂದಾಗಿ ಅದು ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯ ಆಗರವಾಗಿದೆ ಎಂಬುದು ಆರ್ಎಸ್ಎಸ್-ಬಿಜೆಪಿ ವಾದವಾಗಿದೆ. ಅವುಗಳ ಹುಟ್ಟಾ ಮುಸ್ಲಿಂ-ವಿರೋಧಿ ದ್ವೇಷದ ಭಾವನೆಯಿಂದಾಗಿ ಅವುಗಳು ಯಾವತ್ತೂ ಕಾಶ್ಮೀರಿ ಜನತೆಯ ಯಾವುದೇ ಪ್ರಜಾಸತ್ತಾತ್ಮಕ ಆಶೋತ್ತರಗಳಿಗೆ ವಿರುದ್ಧವಾಗಿರುತ್ತವೆ. 370ನೇ ವಿಧಿಯನ್ನು ರದ್ದುಪಡಿಸುವುದನ್ನು ಪ್ರತಿಪಾದಿಸುವುದೆಂದರೆ ಅವರ ದೃಷ್ಟಿಯಲ್ಲಿ ಒಂದು ಭದ್ರತಾ ಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಕಣಿವೆಯ ಜನರನ್ನು ದಮನಿಸುವುದು ಎಂದರ್ಥ.

RSS ಮತ್ತು ಮೋದಿ-ಷಾ ಜೋಡಿ ಪ್ರಕಾರ ಕಾಶ್ಮೀರವು ಒಂದು ಭೂಪ್ರದೇಶದ ತುಣುಕು, ಅದು ಅಖಂಡ ಭಾರತದ ಭಾಗವಾಗಿದೆ. ಆದರೆ ಅದರ ಜನರು ಮಸ್ಲಿಮರಾಗಿರುವುದರಿಂದ ಅವರನ್ನು ವಿದೇಶಿಯರೆಂದು ಪರಿಗಣಿಸಬೇಕು. ಜಮ್ಮು ಮತ್ತು ಕಣಿವೆಯ ನಡುವೆ ಕೋಮುವಾದಿ ವಿಭಜನೆ ಹೆಚ್ಚಿಸಲು ಆರ್ಎಸ್ಎಸ್ ಮತ್ತು ಬಿಜೆಪಿ ಅನವರತ ಶ್ರಮಿಸುತ್ತಿವೆ. 2014ರಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಪ್ರಯತ್ನಗಳು ಇನ್ನಷ್ಟು ಹೆಚ್ಚಿದವು. ನಾಗರಿಕರ ಪ್ರತಿಭಟನೆಗಳನ್ನು ಕೂಡ ಉಗ್ರಗಾಮಿ ಚಟುವಟಿಕೆಗಳಂತೆ ಬಲಪ್ರಯೋಗದಿಂದ ದಮನಿಸಬೇಕೆಂಬ ಕಠಿಣ ಧೋರಣೆ ಮತ್ತು ಎಲ್ಲಾ ರಾಜಕೀಯ ಮಾತುಕತೆಗಳನ್ನು ಕೈಬಿಟ್ಟಿದ್ದು ರಾಜ್ಯದಲ್ಲಿ ಪರಿಸ್ಥಿತಿಯನ್ನು ಹದಗೆಡಿಸಿತು. ಕಳೆದ ಕೆಲವು ವರ್ಷಗಳಲ್ಲಿ ಸ್ಥಳೀಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಉಗ್ರಗಾಮಿ ಸಂಘಟನೆಗಳನ್ನು ಸೇರಿದ್ದಾರೆ. ಭದ್ರತಾ ಪಡೆಗಳ ಸಿಬ್ಬಂದಿ ಮತ್ತು ಉಗ್ರಗಾಮಿಗಳ ಸಾವಿನ ಸಂಖ್ಯೆಯಲ್ಲಿ ಏಕಪ್ರಕಾರದ ಏರಿಕೆಯಾಗಿರುವುದನ್ನು ಅಂಕಿ ಸಂಖ್ಯೆಗಳು ಹೇಳುತ್ತವೆ
.
ವಿಶಾಲ ಬಂದೀಖಾನೆ

ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನ ಬದಲಾಯಿಸುವುದಕ್ಕೆ ಸಂಬಂಧಿಸಿ ಸಂಸತ್ತಿನಲ್ಲಿ ಸಾಂವಿಧಾನಿಕ ಬದಲಾವಣೆಗಳನ್ನು ತರುವ ಮುನ್ನ ಕೇಂದ್ರ ಸರಕಾರ ರಾಜ್ಯದಲ್ಲಿ ಭಾರೀ ಭದ್ರತಾ ಕಾರ್ಯಾಚರಣೆ ನಡೆಸಿತು. ಇದು ಕಾಶ್ಮೀರ ಜನತೆಯ ಬಗ್ಗೆ ಬಿಜೆಪಿ ಆಡಳಿತಗಾರರಿಗಿರುವ ವೈರ ಭಾವದ ದ್ಯೋತಕವಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳು ಮತ್ತು ಸೈನ್ಯದ ಹತ್ತಾರು ಸಾವಿರ ಸಿಬ್ಬಂದಿ ಹಾಗೂ ಸೈನಿಕರನ್ನು ವಿಮಾನಗಳ ಮೂಲಕ ರಾಜ್ಯಕ್ಕೆ ಕಳಿಸಲಾಯಿತು. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಬಂಧಿಸಲಾಯಿತು. ಇಂಟರ್ನೆಟ್ ಮತ್ತು ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿ ಮಾಹಿತಿ ಪ್ರಸಾರರವನ್ನು ನಿರ್ಬಂಧಿಸಲಾಯಿತು. ಅಮರನಾಥ ಯಾಥ್ರೆಯನ್ನು ರದ್ದುಪಡಿಸಲಾಯಿತು. ಪ್ರವಾಸಿಗಳನ್ನು ವಾಪಸ್ ಕಳಿಸಲಾಯಿತು. ಕಾಶ್ಮೀರ ಒಂದು ವಿಶಾಲ ಬಂದೀಖಾನೆಯಾಯಿತು. ಜನತಾಂತ್ರಿಕವಾಗಿ ಚುನಾಯಿತವಾದ ಸರಕಾರವೊಂದು ಒಂದು ರಾಜ್ಯದ ನಾಗರಿಕರನ್ನು, ಯಾರ ಹೆಸರಲ್ಲಿ ಅವರ ಬದುಕುಗಳಲ್ಲಿ ತೀವ್ರ ಬದಲಾವಣೆಗಳನ್ನು ತರಲು ಹೊರಟಿತ್ತೋ ಆ ಜನಗಳನ್ನು ಈ ರೀತಿ ನಡೆಸಿಕೊಳ್ಳಲಾಯಿತು.

ಕಪಟ ತರ್ಕಗಳು

370ನೇ ವಿಧಿಯನ್ನು ರದ್ದುಪಡಿಸುವ ಸಂಬಂಧ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಮಂಡಿಸಿದ ವಾದಗಳು ಹಳಸಲಾದ, ಹಿಂದುತ್ವ ಶಿಬಿರಕ್ಕೆ ಅನುಕೂಲವಾದ ವಾದಗಳೇ ಆಗಿವೆ. 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿ ಸಮಗ್ರಗೊಳಿಸುವುದನ್ನು ತಡೆಯುತ್ತದೆ ಎಂದು ಷಾ ಹೇಳಿದರು. ವಾಸ್ತವವಾಗಿ, ಕಾಶ್ಮೀರದ ಜನರು ಮನಃಪೂರ್ವಕವಾಗಿಯೇ ಭಾರತದ ಒಕ್ಕೂಟವನ್ನು ಸೇರಿದ್ದರು. 370ನೇ ವಿಧಿಯಲ್ಲಿ ಆನಂತರ ಅಡಕಗೊಳಿಸಲಾದ ಆಶ್ವಾಸನೆಗಳ ಆಧಾರದಲ್ಲಿ ಅವರು ಭಾರತ ಒಕ್ಕೂಟವನ್ನು ಸೇರಿದ್ದರು. ಸಾಂವಿಧಾನಿಕವಾದ ಈ ಭದ್ರತೆಯ ಖಾತರಿಯೇ ತಮ್ಮ ಭವಿಷ್ಯ ಭಾರತದಲ್ಲಿ ಅಡಗಿದೆ ಎಂಬ ಭರವಸೆಯನ್ನು ಭಾರತ ಕಾಶ್ಮೀರಿ ಜನತೆಗೆ ನೀಡಿತ್ತು. 
370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸಿದೆ ಎಂದು ಷಾ ಹೇಳಿದ್ದಾರೆ. ನಿಜ ಹೇಳಬೇಕೆಂದರೆ, 370ನೇ ವಿಧಿಯಡಿ ನೀಡಲಾದ ಸ್ವಾಯತ್ತತೆಯನ್ನು ದುರ್ಬಲಗೊಳಿಸಿದ್ದು ಮತ್ತು ಅತೃಪ್ತಿ ಹಾಗೂ ಪರಕೀಯ ಭಾವ ಮೂಡಲು ಕಾರಣವಾದ ಪ್ರಜಾಪ್ರಭುತ್ವದ ಬರ್ಬರ ದಮನವೇ ಪಾಕಿಸ್ತಾನ ಪ್ರೇರಿತ ಪ್ರತ್ಯೇಕತೆ ಮತ್ತು ಭಯೋತ್ಪಾದನೆ ಹೆಚ್ಚಲು ಕಾರಣವಾಗಿದೆ. ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಮೂಲಕ ಮಾತ್ರವೇ ಜನರಲ್ಲಿನ ಪರಕೀಯತೆಯ ಭಾವನೆಯನ್ನು ನಿವಾರಿಸಬಹುದಿತ್ತು.

ರಾಜ್ಯದಲ್ಲಿನ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿಯ ಕುಂಠಿತಕ್ಕೆ 370ನೇ ವಿಧಿ ಹೊಣೆಯೆಂದು ಅಮಿತ್ ಷಾ ಆರೋಪಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಹೆಚ್ಚಿದ ಉಗ್ರಗಾಮಿತ್ವ ಮತ್ತು ಹೆಚ್ಚಿದ ಪ್ರಕ್ಷುಬ್ಧ ಸ್ಥಿತಿಯೇ ಅಭಿವೃದ್ಧಿಗೆ ಮತ್ತು ಆರ್ಥಿಕ ಬೆಳವಣಿಗೆಯ ಅವಕಾಶಗಳಿಗೆ ಅಡ್ಡಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ, ಉದ್ಯೋಗಾವಕಾಶ ಮತ್ತು ಖಾಸಗಿ ಬಂಡವಾಳ ಹೂಡಿಕೆಯ ಪರ್ವ ಸಾಧ್ಯ ಎಂಬ ಅಮಿತ್ ಷಾ ದಾವೆ ಒಂದು ರಾಜಕೀಯ ಪರಿಹಾರಕ್ಕೆ ಬಾರದೆ ಹಾಗೂ ಶಾಂತಿ ಮತ್ತು ಸಹಜತೆಯನ್ನು ಮರಳಿ ಸ್ಥಾಪಿಸದೆಯೇ ಕೇವಲ ಕಲ್ಪನಾ ಲಹರಿಯಷ್ಟೇ ಎನ್ನುವುದನ್ನು ಮರೆಯಬಾರದು.

ಅಂತಿಮವಾಗಿ, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಹಣ ಲೂಟಿಗೆ 370ನೇ ವಿಧಿಯೇ ಕಾರಣ ಎಂದು ಷಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಭ್ರಷ್ಟಾಚಾರ ಮತ್ತು ಲಂಚಕೋರ ಆಡಳಿತದಿಂದ ನಲುಗುತ್ತಿದೆ ಎನ್ನುವುದು ನಿಜ. ಆದರೆ ಇಂಥ ಪರಿಸ್ಥಿತಿಯು ವಿಶ್ವಾಸಾರ್ಹತೆ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಕೊರತೆಯ ಫಲಿತ ಎಂಬುದನ್ನು ಮರೆಯಬಾರದು. ಜಮ್ಮು ಮತ್ತು ಕಾಶ್ಮೀರ ಹೆಚ್ಚು ಕಮ್ಮಿ ಒಂದು ಪೊಲೀಸ್ ಪ್ರಭುತ್ವವಾಗಿದೆ ಮತ್ತು ಹತ್ತು ವರ್ಷಗಳಷ್ಟು ದೀರ್ಘ ಕಾಲ ಕೇಂದ್ರದ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರೀಕೃತ ಆಡಳಿತಶಾಹಿ-ಭದ್ರತಾ ವ್ಯವಸ್ಥೆ ಮತ್ತು ಅವುಗಳ ರಾಜಕೀಯ ಸಹಚರರು ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮುಖ ಮೂಲಗಳು.

ಸಂವಿಧಾನಿಕ ವಂಚನೆ

ಸಂವಿಧಾನದ ವಿರುದ್ಧ ಮೋದಿ ಸರಕಾರ ಮಾಡಿದ ಈ ಕ್ಷಿಪ್ರಕ್ರಾಂತಿಯ ರೀತಿಯು ಈಗ ದೇಶದಲ್ಲಿ ಪ್ರತಿಷ್ಠಾಪನೆಯಾಗಿರುವ ಸರ್ವಾಧಿಕಾರಶಾಹಿ ಆಳ್ವಿಕೆಯ ಸಂಕೇತವಾಗಿದೆ. 370ನೇ ವಿಧಿಯನ್ವಯ ಒಂದು ರಾಷ್ಟ್ರಪತಿ ಆದೇಶದ ಮೂಲಕ ಸಂವಿಧಾನದ ಇನ್ನೊಂದು ವಿಧಿಯನ್ನು ಅಂದರೆ 367ನೇ ವಿಧಿಯನ್ನು ಬದಲಾಯಿಸಲು ಬಳಸಲಾಯಿತು. 370ನೇ ವಿಧಿಯ ಸಾರವನ್ನೇ ಹಿಂಪಡೆಯಲು ಅದನ್ನು ಬಳಸಲಾಯಿತು. ಈ ಕುತಂತ್ರದ ಮೂಲಕವಾಗಿ, ರಾಜ್ಯವು ರಾಷ್ಟ್ರಪತಿ ಶಾಸನದಲ್ಲಿರುವುದರಿಂದ ರಾಜ್ಯ ಶಾಸಕಾಂಗದ ಅಧಿಕಾರವನ್ನು ಕಸಿಯಲಾಯಿತು. 
ಆಳುವ ಪಕ್ಷದ ಕಾರ್ಯತಂತ್ರಗಳು ಮತ್ತು ಮೋದಿ ಸರಕಾರದ ಬಲವಂತದ ಅಧಿಕಾರಗಳು ಪ್ರತಿಪಕ್ಷಗಳ ಮೇಲೆ ಹೇಗೆ ಪರಿಣಾಮ ಉಂಟುಮಾಡುತ್ತಿವೆ ಎನ್ನುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕು. ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್ಆರ್ಸಿಪಿ, ಟಿಡಿಪಿ, ಟಿಆರ್ಎಸ್ ಮತ್ತು ಇತರ ಪಕ್ಷಗಳು ಒಕ್ಕೂಟತ್ವ-ವಿರೋಧಿ ಕ್ರಮಗಳಿಗೆ ಬೆಂಬಲ ನೀಡಿದವು ಎನ್ನುವುದರಿಂದ ಇದು ಗೊತ್ತಾಗುತ್ತದೆ. ಇದು ತಮ್ಮ ಕಾಲ ಮೇಲೆ ತಾವೇ ಕೊಡಲಿ ಹಾಕಿಕೊಂಡ ಗಾದೆಯಂತಾಗಿದೆ. .

370ನೇ ವಿಧಿಯನ್ವಯ ನೀಡಲಾದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವಲ್ಲಿ ಮೂಲ ಅಪರಾಧಿಯಾದ ಕಾಂಗ್ರೆಸ್ ಪಕ್ಷವು ಸದನದಲ್ಲಿ ಒಡೆದ ಮನೆಯಂತೆ ಕಂಡಿತು ಹಾಗೂ ಪ್ರತಿರೋಧ ಒಡ್ಡುವಲ್ಲಿ ಪರಿಣಾಮಕಾರಿಯಾಗಿರಲಿಲ್ಲ.

ದೀರ್ಘ ಹೋರಾಟ ಮುಂದಿದೆ

ರಾಷ್ಟ್ರಪತಿ ಆದೇಶ ಮತ್ತು ಅಂಗೀಕರಿಸಲಾದ ಮಸೂದೆಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶ ಇದ್ದೇ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕಾಶ್ಮೀರ ಜನತೆಗೆ ನೀಡಲಾದ ಆಶ್ವಾಸನೆಗೆ ವಿಶ್ವಾಸದ್ರೋಹ ಬಗೆದದ್ದರ ವಿರುದ್ಧ ದೀರ್ಘ ಹೋರಾಟ ನಡೆಯಲಿದೆ. ಇದು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ್ದಲ್ಲ, ಇದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವವನ್ನು ರಕ್ಷಿಸುವ ಹೋರಾಟವಾಗಿದೆ.

ಸಂವಿಧಾನದ 370ನೇ ವಿಧಿಯನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಡಮಾಡಲಾದ ಸ್ವಾಯತ್ತತೆಯನ್ನು ರಕ್ಷಿಸಲು ಸಿಪಿಐ (ಎಂ) ಸತತವಾಗಿ ಹೋರಾಡುತ್ತಾ ಬಂದಿದೆ. ಆ ಸ್ವಾಯತ್ತತೆ ಮತ್ತು 370ನೇ ವಿಧಿಯಡಿಯ ಅಧಿಕಾರಗಳನ್ನು ದುರ್ಬಲಗೊಳಿಸುವುದನ್ನು ಸಿಪಿಐ (ಎಂ) ವಿರೋಧಿಸಿದೆ. ಬಿಜೆಪಿ ತಳೆದಿರುವ ನಿಲವಿಗೆ ತದ್ವಿರುದ್ಧವಾಗಿ, ರಾಜ್ಯಕ್ಕೆ ಗರಿಷ್ಠ ಸ್ವಾಯತ್ತತೆ ಮತ್ತು ಅದರಡಿ ಬರುವ ಜಮ್ಮು, ಕಣಿವೆ ಮತ್ತು ಲಡಾಖ್ ಪ್ರದೇಶಗಳಿಗೆ ಪ್ರಾದೇಶಿಕ ಸ್ವಾಯತ್ತತೆ ಒದಗಿಸಬೇಕೆಂದು ಸಿಪಿಐ(ಎಂ) ಪ್ರತಿಪಾದಿಸುತ್ತಾ ಬಂದಿದೆ. ಉಗ್ರಗಾಮಿಗಳ ಸಶಸ್ತ್ರ ಹಿಂಸಾಚಾರವನ್ನು ವಿರೋಧಿಸುತ್ತಲೇ ಗಡಿಯಾಚೆಗಿನ ಭಯೋತ್ಪಾದನೆ ತಡೆಯಲು ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವಾಗಲೇ ಒಂದು ರಾಜಕೀಯ ಇತ್ಯರ್ಥಕ್ಕಾಗಿ ರಾಜ್ಯದೊಳಗಿನ ಎಲ್ಲಾ ಬಗೆಯ ರಾಜಕೀಯ ಅಭಿಪ್ರಾಯ ಹೊಂದಿರುವವರೊಂದಿಗೆ ರಾಜಕೀಯ ಸಂವಾದವನ್ನು ನಡೆಸಬೇಕೆಂದು ಪಕ್ಷ ಕರೆ ನೀಡುತ್ತಾ ಬಂದಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ವಿಭಾಗಗಳಿಂದ ಬೆಂಬಲ ವ್ಯಕ್ತವಾಗಿದೆ. ಇದು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕಲು ನಿರ್ಣಾಯಕವಾದ ಮಾರ್ಗವೆಂದು ಕಾಣಲಾಗುತ್ತಿದೆ. ಮೋದಿ ಸರಕಾರ ಪ್ರಚುರಪಡಿಸುತ್ತಿರುವ ಈ ಅಧಿಕೃತ ಕಥನಕ್ಕೆ ಹಲವರು ಮಾರುಹೋಗಿದ್ದಾರೆ. ಆದರೆ ಇದರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಇಡಿಯಾಗಿ ದೇಶದ ಮೇಲೆ ದೀರ್ಘಕಾಲದಲ್ಲಾಗುವ ಅಪಾಯಕಾರಿ ಪರಿಣಾಮ ಏನೆಂಬುದು ಜನರ ಮುಂದೆ ಬಂದಿಲ್ಲ.

ಜಮ್ಮು ಮತ್ತು ಕಾಶ್ಮೀರದ ಜಾತ್ಯತೀತ ಮತ್ತು ಸಮ್ಮಿಶ್ರತೆಯ ಪರಂಪರೆಯನ್ನು ರಕ್ಷಿಸುವ ಹೋರಾಟವನ್ನು ಇಡಿಯಾಗಿ ಹಿಂದುತ್ವ ಸರ್ವಾಧಿಕಾರಶಾಹಿಯ ವಿರುದ್ಧದ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಒಕ್ಕೂಟ ತತ್ವವನ್ನು ರಕ್ಷಿಸುವ ಹೋರಾಟದೊಂದಿಗೆ ಬೆಸೆಯುವ ಈ ಕೆಲಸವನ್ನು ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಕೈಗೆತ್ತಿಕೊಳ್ಳಬೇಕಾಗಿದೆ.

(ಅನು: ವಿಶ್ವ; ಜನಶಕ್ತಿಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಲಿರುವ ಲೇಖನ)
 

Read These Next

ಪ್ರತಿಭಟನೆ ಹತ್ತಿಕ್ಕಲು ಸರಕಾರಕ್ಕೆ ಯಾವುದೇ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ

ಹೊಸದಿಲ್ಲಿ: ಭಿನ್ನಮತದ ನಾಶ ಅಥವಾ ನಿರುತ್ತೇಜನ ಪ್ರಜಾಪ್ರಭುತ್ವದ ಮೇಲೆ ಘೋರ ಪರಿಣಾಮ ಬೀರುತ್ತದೆ. ಪ್ರತಿಭಟನೆ ಹಿಂಸಾಚಾರಕ್ಕೆ ...

ಎನ್.ಆರ್.ಸಿ ಎನ್.ಪಿ.ಆರ್ ಹಾಗೂ ಸಿಎಎ ವಿರುದ್ಧ ದೇಶದ ಶೇ50ಕ್ಕೂ ಹೆಚ್ಚು ಜನ ಬೀದಿಗಿಳಿದಿದ್ದಾರೆ-ಪ್ರತಿಭಾ ಉಭಾಲೆ

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ...

ಪ್ರಮಾಣಬದ್ಧ ಸಾಂವಿಧಾನಿಕತೆ

ಭಾರತದ ಸಂವಿಧಾನವೆಂಬುದು ಒಂದು ಪ್ರಮುಖವಾದ ನಿಯಮ-ನಿಯಂತ್ರಣಗಳ ದಾಖಲೆಯೆಂಬುದು ತೀರಾ ಇತ್ತೀಚಿನವರೆಗೂ ಒಂದು ಸಾಮಾನ್ಯ ಜ್ನಾನವೇ ...

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ದೋರಣೆ; ಜೋಗೇಶ್ವರಹಳ್ಳ ಗ್ರಾಮದ ರಸ್ತೆ ದುರಸ್ತಿ ಕಾರ್ಯಕ್ಕೆ ಬಡಿದ ಗ್ರಹಣ

ಸುಮಾರು 3 ಕಿ.ಮಿ ದೂರವಿರುವ ಜೋಗೇಶ್ವರಹಳ್ಳದ ಗ್ರಾಮಕ್ಕೆ ಹೋಗುವ ರಸ್ತೆಗೆ ದ್ವೀಚಕ್ರ ವಾಹನ ಚಲಾಯಿಸುಕೊಂಡು  ಗ್ರಾಮ ಮುಟ್ಟುವುದು ...