ಅಂಬೇಡ್ಕ‌ರ್ ಪುತ್ಥಳಿಗೆ ಚಪ್ಪಲಿ ಹಾರ; ಕಲಬುರಗಿ ನಗರ ಪ್ರಕ್ಷುಬ್ಧ; ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

Source: Vb News | By I.G. Bhatkali | Published on 24th January 2024, 10:04 AM | State News | National News |

ಕಲಬುರಗಿ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ವೇಳೆ ಗದ್ದಲ ಉಂಟಾದ ಬೆನ್ನಲ್ಲೇ ಕೋಟನೂರು(ಡಿ) ಗ್ರಾಮದಲ್ಲಿರುವ ಲುಂಬಿಣಿ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ಘಟನೆ ಜರುಗಿದೆ.

ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದ್ದಾರೆ ಎನ್ನಲಾಗಿದೆ. ವಾಡಿ ಹಾಗೂ ಕೋಟನೂರು ಗ್ರಾಮದಲ್ಲಿನ ಘಟನೆಗಳಿಂದಾಗಿ ಇಡೀ ಕಲಬುರಗಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ವಾಡಿಯಲ್ಲಿ ಸಂಭವಿಸಿದ ಗದ್ದಲದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದೆ.

ಇಬ್ಬರು ಶಂಕಿತ ಆರೋಪಿಗಳ ಬಂಧನ?
ಕೋಟನುರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾರೂ ಉದ್ವೇಗಕ್ಕೆ ಒಳಗಾಗಬಾರದು. ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಸಭೆಗಾಗಿ ಆಗಮಿಸಿದ್ದ ಕಲಬುರಗಿ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೂಡಲೇ ಕಲಬುರಗಿಗೆ ವಾಪಸ್ ಕಳುಹಿಸಿ ಈ ಪ್ರಕರಣದ ಕುರಿತು ತೀವ್ರಗತಿಯಲ್ಲಿ ತನಿಖೆ ನಡೆಸಿ ಆದಷ್ಟು ಶೀಘ್ರವಾಗಿ ಅಪರಾಧಿ ಗಳನ್ನು ಬಂಧಿಸುವಂತೆ ಸೂಚಿಸಿದ್ದೇನೆ.
ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ

ಕೋಟನೂರು ಗ್ರಾಮದಲ್ಲಿರುವ ಲುಂಬಿಣಿ ಉದ್ಯಾನವನದಲ್ಲಿ ಸೋಮವಾರ ತಡರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವ ವಿಚಾರ ಮಂಗಳವಾರ ಬೆಳಗ್ಗೆ ಗಮನಕ್ಕೆ ಬರುತ್ತಿದ್ದಂತೆ ರಾಮ ಮಂದಿರ ವೃತ್ತ, ನಾಗನಹಳ್ಳಿ ವರ್ತುಲ ರಸ್ತೆ, ತಿಮ್ಮಾಪುರಿ ವೃತ್ತ ಸೇರಿದಂತೆ ಇನ್ನಿತರೆಡೆ ದಲಿತ ಸಂಘಟನೆಗಳು, ಅಂಬೇಡ್ಕರ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ನಡೆಸಿದರು.

ಫರರ್ಹತಾಬಾದ್, ಜೇವರ್ಗಿ ತಾಲೂಕು, ತೀಮಾಪುರಿ ಸರ್ಕಲ್ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ರಸ್ತೆ ತಡೆ ನಡೆಸಿ, ಟೈಯ‌ರ್ ಗಳಿಗೆ ಬೆಂಕಿ ಹಚ್ಚಿ, ಬೃಹತ್ ಪ್ರತಿಭಟನೆಗಳನ್ನು ನಡೆಸಿ, ಆದಷ್ಟು ಬೇಗ ಕಿಡಿಗೇಡಿಗಳನ್ನು ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಪೊಲೀಸ್ ಆಯುಕ್ತರು, ಎಸ್ಪಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಪುತ್ಥಳಿಗೆ ಹಾಕಿದ್ದ ಚಪ್ಪಲಿ ಹಾರವನ್ನು ತೆರವುಗೊಳಿಸಿ, ಗೌರವ ನಮನ ಸಲ್ಲಿಸಿದರು. ಬಳಿಕ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು.

ಈ ವೇಳೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪುತ್ಥಳಿಗೆ ಯಾರೋ ಕಿಡಿಗೇಡಿಗಳು, ಮತಿಹೀನರು ರಾತ್ರಿ ಹೊತ್ತಲ್ಲಿ ಹೋಗಿ ಅಪಮಾನಿಸಿ ದ್ರೋಹ ಎಸಗಿದ್ದಾರೆ. ಇಂತಹ ಮತಿಹೀನರ ಕೆಲಸಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ತಕ್ಷಣ ಅವರನ್ನು ಬಂಧಿಸಿ, ಕಾನೂನು ರೀತಿ ಶಿಕ್ಷೆಗೊಳಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಪ್ರಕರಣದ ತನಿಖೆ ಮುಗಿದ ಬಳಿಕ ಉದ್ಯಾನವನದಲ್ಲಿ ಅಂಬೇಡ್ಕರ್ ಅವರ ಹೊಸ ಪುತ್ಥಳಿಯನ್ನು ಜಿಲ್ಲಾಡಳಿತದ ವತಿಯಿಂದಲೇ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಯ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ: ಕಲಬುರಗಿ ನಗರದ ಹೊರವಲಯದಲ್ಲಿರುವ ಕೋಟನೂರ(ಡಿ) ಗ್ರಾಮದಲ್ಲಿ ಸೋಮವಾರ ರಾತ್ರಿ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್. ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆ ಖಂಡಿಸಿ ಮಂಗಳವಾರ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವ ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಮುಖಂಡರು, ಕಾರ್ಯಕರ್ತರು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಬಳಿಕ ದಲಿತ ಸಂಘಟನೆಗಳ ಮುಖಂಡರು ತಹಶೀಲ್ದಾ‌ರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜಪ್ಪ ಹುಂಡೇಕರ್, ಶ್ರೀಕಾಂತ ಶಿಂಧೆ, ಆನಂದ ಕಲ್ಲಕ್, ನಾಗೇಂದ್ರ ಬುರ್ಲಿ, ಸಂಜು ಬುಳಕರ್, ಶಿವರಾಜ ಕಲ್ಲಕ್, ರವಿ ಹೊಸಮನಿ, ಬಸವರಾಜ ಮುಡಬೂಳ, ಗಂಗಾಧರ ಸೇರಿದಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಹಲವು ಮುಖಂಡರು ಹಾಗೂ ಪದಾಧಿಕಾರಿಗಳು, ಮತ್ತಿತರರಿದ್ದರು.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ಪೊಲೀಸ್‌ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪೊಲೀಸರು ಸಂಪೂರ್ಣ ತನಿಖೆ ನಡೆಸಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬೇಕು. ಅಂಬೇಡ್ಕರ್ ಪುತ್ಥಳಿಗೆ ಮಾಡುವ ಅಪಮಾನ ಇಡೀ ನಾಗರಿಕ ಸಮಾಜಕ್ಕೆ ಮಾಡುವ ಅಪಮಾನದಂತೆ. ಇಂತಹ ಅನಾಗರಿಕ ಪ್ರವೃತ್ತಿಯನ್ನು ನಾವು ಎಲ್ಲರೂ ಸೇರಿಕೊಂಡು ಖಂಡಿಸಲೇಬೇಕು.
ಅಲ್ಲಂಪ್ರಭು ಪಾಟೀಲ್‌, ಶಾಸಕ, ಕಲಬುರಗಿ ದಕ್ಷಿಣ

ಭಾರತದ ಸಮಗ್ರ ಅಭಿವೃದ್ಧಿಗೆ, ಸರ್ವಜನತೆಯ ಸಮಾನತೆಗೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡುವ ಮೂಲಕ ಭಾರತದ ಸಂವಿಧಾನವನ್ನು, ಸಮಾನತೆಯನ್ನು ವಿರೋಧಿಸುವ ಮನೋಭಾವವನ್ನು ಪ್ರದರ್ಶಿಸಲಾಗಿದೆ. ಭಾರತವನ್ನು ಕೋಮುವಾದಿ ನೆಲೆಯಲ್ಲಿ ವಿಚ್ಛಿದ್ರಗೈಯುತ್ತಿರುವ ಸಂವಿಧಾನ ವಿರೋಧಿ ಮನುವಾದಿ ಮನಸುಗಳು ಇಂತಹ ದುಷ್ಕೃತ್ಯಕ್ಕಿಳಿಯುತ್ತವೆ. ಈ ದುಷ್ಕೃತ್ಯ ಎಸಗಿ ದವರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕು.
ಕೆ.ನೀಲಾ, ಸಿಪಿಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ

ಕಲಬುರಗಿ ನಗರದಾದ್ಯಂತ ಮದ್ಯ ಮಾರಾಟ ನಿಷೇಧ ಕಲಬುರಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜ.23ರ ಸಂಜೆ 6 ರಿಂದ ಜ.24ರ ಮಧ್ಯರಾತ್ರಿ 12 ಗಂಟೆವರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 21ರಂತೆ ಕಲಬುರಗಿ ನಗರಕ್ಕೆ ಸೀಮಿತವಾಗಿ ಎಲ್ಲ ತರಹದ ಮದ್ಯ ತಯಾರಿಕಾ ಘಟಕಗಳನ್ನು, ಮದ್ಯಪಾನ, ಸಾರಾಯಿ, ಶೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಆದೇಶಿಸಿದ್ದಾರೆ. ಇದಲ್ಲದೆ ಬಾರ್ ಮತ್ತು ರೆಸ್ಟೋರೆಂಟ್ ಅಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...