ಚುನಾವಣಾ ಆಯೋಗಕ್ಕೆ ನೇಮಕಾತಿಗಳು; ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸಿಜೆಐ; ರಾಷ್ಟ್ರಪತಿಗಳಿಗೆ ಸಲಹೆ ನೀಡಬೇಕು: ಸುಪ್ರೀಂ

Source: Vb | By I.G. Bhatkali | Published on 3rd March 2023, 8:31 AM | National News |

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತ (ಇಸಿ) ರ ನೇಮಕಾತಿಗಳ ಕುರಿತು ಪ್ರಧಾನಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರನ್ನು ಒಳಗೊಂಡ ಸಮಿತಿಯು ರಾಷ್ಟ್ರಪತಿಗಳಿಗೆ ಸಲಹೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಮಹತ್ವದ ತೀರ್ಪೊಂದರಲ್ಲಿ ನಿರ್ದೇಶನ ನೀಡಿದೆ.

ಚುನಾವಣಾ ಆಯೋಗಕ್ಕೆ ನೇಮಕಾತಿಗಳ ಕುರಿತು ಸಂಸತ್ತು ಕಾನೂನನ್ನು ರೂಪಿಸುವವರೆಗೂ ಈ ಪದ್ಧತಿಯೇ ಮುಂದುವರಿಯಬೇಕು ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಪೀಠವು ಹೇಳಿತು.

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಅನುಪಸ್ಥಿತಿಯಲ್ಲಿ ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕರು ಸಿಇಸಿ ಮತ್ತು ಇಸಿಗಳನ್ನು ನೇಮಕಗೊಳಿಸಲು ಸಮಿತಿಯಲ್ಲಿರುತ್ತಾರೆ ಎಂದೂ ಪೀಠವು ಸ್ಪಷ್ಟಪಡಿಸಿತು.

ಚುನಾವಣಾ ಪ್ರಕ್ರಿಯೆಯ ಶುದ್ಧತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪಾಲುದಾರರು ಕಾರ್ಯ ನಿರ್ವಹಿಸಿದರೆ ಮಾತ್ರ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ ಎಂದು ಪೀಠವು ತಿಳಿಸಿತು. ಚುನಾವಣಾ ಆಯುಕ್ತರ ನೇಮಕಾತಿಗಾಗಿ ಸ್ವತಂತ್ರ ಕಾರ್ಯವಿಧಾನವೊಂದನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರತಿಪಕ್ಷ ನಾಯಕರು ಹಲವಾರು ಬಾರಿ ಪ್ರಶ್ನಿಸಿದ್ದಾರೆ.

ಸಂವಿಧಾನದ ವಿಧಿ 324(2)ರಂತೆ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ನೇಮಿಸಬೇಕಾಗುತ್ತದೆ.

ರಾಷ್ಟ್ರಪತಿಗಳು ಪ್ರಧಾನಿ ಮತ್ತು ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರುವುದರಿಂದ ಚುನಾವಣಾ ಆಯುಕ್ತರ ನೇಮಕಾತಿಯು ಸಂಪೂರ್ಣವಾಗಿ ಕಾರ್ಯಕಾರಿ ನಿರ್ಧಾರವಾಗಿರುತ್ತದೆ. ಇದು ತನಗೆ ನಿಷ್ಠವಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಲು ಆಡಳಿತ ಪಕಕ್ಕೆ ವಿಪುಲ ಅವಕಾಶವನ್ನು ನೀಡುತ್ತದೆ ಮತ್ತು ತನ್ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮತ್ತು ಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಕಾರ್ಯಾಂಗದ ಎಲ್ಲ ರೀತಿಯ ಅಧೀನತೆಗಳಿಂದ ಚುನಾವಣಾ ಆಯೋಗವು ದೂರವಿರಬೇಕು ಎಂದು ಗುರುವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಹಣಕಾಸು ಬೆಂಬಲವನ್ನು ಕಡಿತಗೊಳಿಸುವುದು ಕಾರ್ಯಾಂಗದ ಹಸ್ತಕ್ಷೇಪಕ್ಕೆ ಒಂದು ಮಾರ್ಗವಾಗಿದೆ. ದುರ್ಬಲ ಚುನಾವಣಾ ಆಯೋಗವು ಅಸಮಂಜಸ ಸನ್ನಿವೇಶಕ್ಕೆ ಕಾರಣವಾಗುತ್ತದೆ ಮತ್ತು ಅದನ್ನು ದಕ್ಷ ಕಾರ್ಯನಿರ್ವಹಣೆಯಿಂದ ವಿಮುಖಗೊಳಿಸುತ್ತದೆ ಎಂದು ಅಭಿಪ್ರಾಯಿಸಿತು.

ಅಧಿಕಾರದಲ್ಲಿರುವ ಪಕ್ಷವು ತನಗೆ ನಿಷ್ಠ ಚುನಾವಣಾ ಆಯೋಗದ ಮೂಲಕ ಅಧಿಕಾರದಲ್ಲಿ ಮುಂದುವರಿಯುವ ಇನ್ನಿಲ್ಲದ ಲಾಲಸೆಯನ್ನು ಹೊಂದಿರುತ್ತದೆ ಎಂದು ಹೇಳಿದ ನ್ಯಾಯಾಧೀಶರು, ಮಾಧ್ಯಮಗಳ ಒಂದು ದೊಡ್ಡ ವರ್ಗವು ತನ್ನ ಪಾತ್ರವನ್ನು ಮರೆತು ಪಕ್ಷಪಾತಿಯಾಗಿದೆ ಎಂದರು.

ಆದ್ದರಿಂದ ಚುನಾವಣಾ ಆಯೋಗವು ಸರಕಾರದ ಮೇಲೆ ಅವಲಂಬಿತವಾಗದಿರಲು ಪ್ರತ್ಯೇಕ ಸಚಿವಾಲಯ, ನಿಯಮ ರಚನೆಯ ಅಧಿಕಾರ ಮತ್ತು ಸ್ವತಂತ್ರ ಬಜೆಟ್ ಅನ್ನು ಹೊಂದಿರಬೇಕು ಎಂದು ಪೀಠವು ಹೇಳಿತು.

ಚುನಾವಣಾ ಆಯುಕ್ತರನ್ನು ತೆಗೆದು ಹಾಕುವ ಪ್ರಕ್ರಿಯೆಯು ಮುಖ್ಯ ಚುನಾವಣಾ ಆಯುಕ್ತರ ವಜಾ ಪ್ರಕ್ರಿಯೆಗೆ ಸಮನಾಗಿರಬೇಕು ಎಂದು ನ್ಯಾ.ರಸ್ತೋಗಿ ಹೇಳಿದರು. ಮುಖ್ಯ ಚುನಾವಣಾ ಆಯುಕ್ತರನ್ನು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಂತೆ ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಮಾತ್ರ ವಜಾ ಮಾಡಲಾಗುತ್ತದೆ.

ಪ್ರಕರಣದ ವಿಚಾರಣೆ ಸಂದರ್ಭಗಳಲ್ಲಿ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಶಾಂತ ಭೂಷಣ್ ಮತ್ತು ಗೋಪಾಲ ಶಂಕರನಾರಾಯಣನ್ ಅವರು, ವಿಧಿ 324(2)ರಡಿ ಆದೇಶವಿದ್ದರೂ ಚುನಾವಣಾ ಆಯುಕ್ತರ ನೇಮಕಾತಿಗಾಗಿ ಸಂಸತ್ತು ಶಾಸನವನ್ನು ರೂಪಿಸಿಲ್ಲ ಎಂದು ದೂರಿದ್ದರು.

ಚುನಾವಣಾ ಆಯುಕ್ತರ ನೇಮಕಾತಿಗೆ ಕಾನೂನು ಇಲ್ಲದಿರುವುದು ಆತಂಕಕಾರಿ ಪ್ರವೃತ್ತಿಗೆ ಕಾರಣವಾಗಿದೆ ಎಂದೂ ಹೇಳಿದ ಸರ್ವೋಚ್ಚ ನ್ಯಾಯಾಲಯವು, 10 ವರ್ಷಗಳಲ್ಲಿ ಯುಪಿಎ ಆಡಳಿತವು ಆರು ಮುಖ್ಯ ಚುನಾವಣಾ ಆಯುಕ್ತರನ್ನು ಹೊಂದಿತ್ತು ಮತ್ತು ಪ್ರಸಕ್ತ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಸುಮಾರು ಎಂಟು ವರ್ಷಗಳಲ್ಲಿ ಎಂಟು ಸಿಇಸಿಗಳನ್ನು ಹೊಂದಿತ್ತು ಎಂದು ಹೇಳಿತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...