ಎನ್.ಜಿ.ಇ.ಎಫ್ ಸಂಸ್ಥೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಚಿವ ಜಗದೀಶ ಶೆಟ್ಟರ್

Source: so news | Published on 12th November 2019, 12:20 AM | State News | Don't Miss |


ಧಾರವಾಡ: ಎನ್.ಜಿ.ಇ.ಎಫ್ ಕೈಗಾರಿಕಾ ಸಂಸ್ಥೆಯ ಪುನಶ್ಚೇತನಕ್ಕೆ ೩೦ ಕೋಟಿ ರೂ. ಗಳ ಅನುದಾನದ ಅವಶ್ಯಕತೆಯಿದ್ದು, ಇದನ್ನು ಮುಖ್ಯಮಂತ್ರಿಯವರ ಜೊತೆ ಸಮಾಲೋಚಿಸಿ ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಬೃಹತ ಮತ್ತು ಮದ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಹೇಳಿದರು.

ಅವರು ಇಂದು ಎನ್.ಜಿ.ಇ.ಎಫ್. ಕೈಗಾರಿಕಾ ಸಂಸ್ಥೆಗೆ ಭೇಟಿ ನೀಡಿ, ಸಂಸ್ಥೆಯ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದರು.

ಎನ್.ಜಿ.ಇ.ಎಫ್ ಉದ್ಯಮವು ಮೂಲತಃ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಕೇಂದ್ರ ಸರ್ಕಾರವು ಈ ಉದ್ಯಮವನ್ನು ಬಂದ್ ಮಾಡಲು ನಿರ್ಧರಿಸಿದ್ದರಿಂದ ೧೯೮೪ ರಲ್ಲಿ ಹುಬ್ಬಳ್ಳಿಯ ರಾಯಾಪುರದಲ್ಲಿ ಮರುಸ್ಥಾಪನೆ ಮಾಡಲು ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿದ್ದ ಎನ್.ಜಿ.ಇ.ಎಫ್ ಸಂಸ್ಥೆಯ ಯಂತ್ರೋಪಕರಣಗಳನ್ನು ಇಲ್ಲಿಗೆ ತಂದು ಮರುಸ್ಥಾಪಿಸಲಾಯಿತು. ಆರಂಭದಲ್ಲಿ ಹೆಚ್ಚು ಪ್ರಗತಿ ಕಾಣದ ಈ ಸಂಸ್ಥೆಯು ಇಂದು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಿ ಸ್ಥಳೀಯರಿಗೆ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ತನ್ನದೆಯಾದೆ ಕೊಡುಗೆ ನೀಡುತ್ತಿದೆ.

೨೦೧೭- ೧೮ ರಲ್ಲಿ ಸಂಸ್ಥೆಯ ರೂ. ೩೧.೨೦ ಕೋಟಿಗಳ ವಹಿವಾಟನ್ನು ನಡೆಸಿದ್ದು, ರೂ. ೩೮. ೯೬ ಲಕ್ಷ ಲಾಭವನ್ನು ಗಳಿಸಿದೆ. ಮತ್ತು ೨೦೧೮- ೧೯ ರಲ್ಲಿ ರೂ. ೧೩೨.೩೬ ಕೋಟಿಗಳ ವಹಿವಾಟನ್ನು ನಡೆಸಿದ್ದು, ರೂ. ೧೭೮.೩೮ ಲಕ್ಷಗಳ ನಿರ್ವಹಣಾ ಲಾಭ ಮತ್ತು ರೂ. ೫೨.೮೪ ಲಕ್ಷಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಹೇಳಿದರು.

ಎನ್.ಜಿ.ಇ.ಎಫ್ ಕೈಗಾರಿಕಾ ಸಂಸ್ಥೆಯು ಹೆಸ್ಕಾಂದೊAದಿಗೆ ಒಪ್ಪಂದ ಮಾಡಿಕೊಂಡು ಟ್ರಾನ್ಸಫಾರ್ಮರಗಳ ರಿಪೇರಿ ಹಾಗೂ ಉತ್ಪಾದನೆ ಕಾರ್ಯ ನಿರ್ವಹಿಸುತ್ತಿದೆ. ಎನ್.ಜಿ.ಇ.ಎಫ್ ಕೈಗಾರಿಕಾ ಸಂಸ್ಥೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಆದರೂ ಸಹ ಸಂಸ್ಥೆಯು ಲಭ್ಯವಿರುವ ನುರಿತ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಅತ್ಯುತ್ತಮ ಗುಣಮಟ್ಟದ ಮೋಟಾರುಗಳು ಹಾಗೂ ಟ್ರಾನ್ಸಫಾರ್ಮರಗಳನ್ನು ಪೂರೈಕೆ ಮಾಡಿ, ಅಭಿವೃದ್ಧಿ ಪಡಿಸುತ್ತಿದೆ ಎಂದು ಅವರು ಹೇಳಿದರು.

ಎನ್.ಜಿ.ಇ.ಎಫ್. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕಿರಣ ಅಡವಿ ಅವರು ಮಾತನಾಡಿ, ಎನ್.ಜಿ.ಇ.ಎಫ್. ಸಂಸ್ಥೆಯು ಉತ್ತಮ ಗುಣಮಟ್ಟದ ಉತ್ಪಾದನೆಗಳ ಮೂಲಕ ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೆಸ್ಕಾಂ, ಕೈಗಾ ಅಣುಸ್ಥಾವರ, ಮಿಲಿಟರಿ, ಹೆಚ್.ಎಮ್.ಟಿ ಮತ್ತು ಇಸ್ರೊ ದಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಗೆ ಮೋಟಾರು, ಸ್ವಿಚ್‌ಗೇರ್ ಮತ್ತು ಟ್ರಾನ್ಸಫಾರ್ಮರ್‌ಗಳನ್ನು ಪೂರೈಕೆ ಮಾಡಲು ಒಪ್ಪಂದ ಮಾಡಿಕೊಳ್ಳುತ್ತಿದೆ. ಮತ್ತು ಬೆಳಗಾವಿ, ತರಿಕೇರಿಗಳಲ್ಲಿ ಎನ್.ಜಿ.ಇ.ಎಫ್. ಸಂಸ್ಥೆಯ ಶಾಖೆಗಳನ್ನು ಆರಂಭಿಸಲಾಗಿದ್ದು, ಸದ್ಯದಲ್ಲಿಯೇ ಕೊಪ್ಪಳದಲ್ಲಿ ಮತ್ತೊಂದು ಶಾಖೆಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಸಂಸ್ಥೆಯಲ್ಲಿ ೨೫೦ ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಲಾಭದಾಯಕ ಉದ್ಯಮವಾಗಿ ಎನ್.ಜಿ.ಇ.ಎಫ್. ಸಂಸ್ಥೆಯು ಬೆಳೆಯುತ್ತಿದೆ. ಸಕಾಲದಲ್ಲಿ ಸರ್ಕಾರವು ಅಗತ್ಯ ಆರ್ಥಿಕ ನೆರವು ನೀಡಿದರೆ ಇನ್ನು ಹೆಚ್ಚು ಸಮರ್ಥವಾಗಿ ಕೆಲಸ ಮಾಡಿ ಹೆಚ್ಚಿನ ಉದ್ಯೋಗ, ಲಾಭಂಶ ಮತ್ತು ಕೈಗಾರಿಕೆಗಳಿಗೆ ಪೂರಕವಾದ ಉತ್ಪನ್ನಗಳನ್ನು ಪೂರೈಸಬಹುದೆಂದು ಅವರು ಹೇಳಿದರು.

ಸಭೆಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್.ಸಿ.ಆರ್, ಮತ್ತು ವ್ಯವಸ್ಥಾಪಕ ಹೆಚ್.ಎಮ್. ಬ್ಯಾಹಟ್ಟಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು.

Read These Next