ಪೌರತ್ವ ತಿದ್ದುಪಡಿ ಮಸೂದೆ (CAB) ಯ ಅಪಾಯಗಳು

Source: sonews | By Staff Correspondent | Published on 17th December 2019, 5:43 PM | National News | Special Report | Don't Miss |

ಸಿಎಬಿ ಮಸೂದೆಯು ಭಾರತೀಯ ಸಮಾಜದ ಬಹುತ್ವದ ಅಡಿಪಾಯವನ್ನು ಅಲುಗಾಡಿಸುವ ಹಲವಾರು ಬಿರುಕುಗಳನ್ನು ಉಂಟುಮಾಡುತ್ತದೆ.

ಸಿಟಿಜನ್‌ಶಿಪ್ (ಅಮೆಂಡ್‌ಮೆಂಟ್) ಬಿಲ್ (ಸಿಎಬಿ)-ಪೌರತ್ವ ತಿದ್ದುಪಡಿ ಮಸೂದೆಯು- ಸಂಸತ್ತಿನ ಎರಡೂ ಸದನಗಳಲ್ಲೂ ಅನುಮೋದನೆಗೊಂಡಿದೆ. ಆದರೆ ಈ ಮಸೂದೆಯು ನಮ್ಮ ಸಂವಿಧಾನದ ಮೂಲಭೂತ ರಚನೆಯನ್ನೇ ಉಲ್ಲಂಘಿಸುತ್ತದಲ್ಲದೆ ನಮ್ಮ ದೇಶದ ಸಾಮಾಜಿಕ ಹಂದರಕ್ಕೂ ಗಂಭೀರವಾದ ಅಪಾಯವನ್ನು ಒಡ್ಡುತ್ತದೆ. ಈ ಶಾಸನವೂ ಆಳುವ ಬಿಜೆಪಿ ಪಕ್ಷವು ಪ್ರತಿಪಾದಿಸುವ ಬಹುಸಂಖ್ಯಾರ ಧರ್ಮದ ಶ್ರೇಷ್ಟತೆಯನ್ನು ಸ್ಥಾಪಿಸಬಯಸುವ  ರಾಜಕೀಯ ಯೋಜನೆಯಾದ ಹಿಂದೂತ್ವದೆಡೆಗೆ ಕೊಂಡೊಯ್ಯುವ ಹೆಜ್ಜೆಯೆಂದೂ ಅರ್ಥಮಾಡಿಕೊಳ್ಳಬಹುದಾಗಿದೆ. ಏಕೆಂದರೆ ಆ ಮಸೂದೆಯು ಭಾರತೀಯರು ಯಾರು ಎಂಬ ಅಥವಾ ಭಾರತೀಯನಾಗುವುದೆಂದರೆ ಅರ್ಥವೇನು ಎಂಬ ಪ್ರಶ್ನೆಗೆ ಬಹಳ ತಾರತಮ್ಯದಿಂದ ಕೂಡಿದ ಹಾಗೂ ತತ್ವರಹಿತವಾದ ಉತ್ತರವನ್ನು ಕೊಡುತ್ತದೆ. ಸಂವಿಧಾನದ ನಿರ್ಮಾತೃಗಳು ನಾಗರಿಕತ್ವದ ಬಗ್ಗೆ ನಾಗರಿಕ-ಭೌಗೋಳಿಕತೆಯನ್ನಾಧರಿಸಿದ ಆಧುನಿಕ ಹಾಗೂ ನವೋದಯಶಾಲಿ ಉತ್ತರವನ್ನು ಒದಗಿಸಿದ್ದರು. ಆದರೆ ಹಾಲೀ ಸರ್ಕಾರವು ತನ್ನ ಸೈದ್ಧಾಂತಿಕ ಹಿನ್ನೆಲೆಗೆ ತಕ್ಕಂತೆ ಸಂಕುಚಿತ ಅಸ್ಮಿತೆಯನ್ನಾಧರಿಸಿದ ನಾಗರಿಕತ್ವವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ದುರುದ್ದೇಶವನ್ನು ಅದು ದಮನಿತ ಅಲ್ಪಸಂಖ್ಯಾತರ ಬಗೆಗಿನ ಮಾನವೀಯ ಕಾಳಜಿಯ ಹೆಸರಿನಲ್ಲಿ ಜಾರಿ ಮಾಡಲು ಪ್ರಯತ್ನಿಸುತ್ತಿರುವುದು ವಿಪರ್ಯಾಸವಾದರೂ ಆಶ್ಚರ್ಯವೇನಲ್ಲ. ಆಳುವ ಪಕ್ಷದ ಈ ಮಾನವೀಯ ಕಾಳಜಿಯನ್ನು ಆಳವಾಗಿ ವಿಶ್ಲೇಷಿಸಿದಾಗ ಅದರ ಟೊಳ್ಳುತನವು ಮಾತ್ರವಲ್ಲದೆ ನಮ್ಮ ಸಂವಿಧಾನಾತ್ಮಕ ಪ್ರಜಾತಂತ್ರಕ್ಕೆ ತದ್ವಿರುದ್ಧವಾಗಿರುವ ನೈಜ ಉದ್ದೇಶಗಳೂ ಸಹ ಬಯಲಾಗುತ್ತವೆ.

ಈ ಶಾಸನದ ಘೋಷಿತ ಆಶಯವು ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ದಮನದಿಂದ ಪಾರಾಗಲು ಭಾರತಕ್ಕೆ ಬಂದ ಹಿಂದೂ/ಸಿಖ್/ಕ್ರಿಶ್ಚಿಯನ್/ಪಾರ್ಸಿ/ಜೈನ್ ಧರ್ಮದ ವಲಸಿಗರಿಗೆ ನಾಗರಿಕತ್ವವನ್ನು ನೀಡುವುದಾಗಿ ಹೇಳುತ್ತದೆ. ಮೇಲ್ನೋಟಕ್ಕೆ ನೋಡಿದಲ್ಲಿ ಈ ಶಾಸನವು ಸ್ವಾಗತಾರ್ಹ ಮತ್ತು ಅಭಿನಂದನಾರ್ಹವೆಂದೆನಿಸಬಹುದು. ಆದರೆ ಈ ವರ್ಗೀಕರಣದಲ್ಲಿ ಅದು ಕೆಲವು ಸಮುದಾಯಗಳನ್ನು ಮತ್ತು ನೆರೆದೇಶಗಳನ್ನು ಕೈಬಿಟ್ಟಿರುವುದು/ಹೊರಗುಳಿಸಿರುವುದು ಅದರ ತರ್ಕದ ನೀತಿ ಬದ್ಧತೆಯ ಬಗ್ಗೆ ಮತ್ತು ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನೆರೆಹೊರೆಯ ಆ ಮೂರು ದೇಶಗಳನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಅವು ಇಸ್ಲಾಮಿಕ್ ಗಣರಾಜ್ಯವಾಗಿರುವುದು ಅಥವಾ ಇಸ್ಲಾಮನ್ನು ರಾಜಧರ್ಮವಾಗಿರಿಸಿಕೊಂಡಿರುವುದರಿಂದ ಮೇಲೆ ಹೆಸರಿಸಲಾದ ಧರ್ಮೀಯರು ಧಾರ್ಮಿಕ ದಮನದ ಭೀತಿಯನ್ನು ಎದುರಿಸುತ್ತಿರುವುದೇ ಕಾರಣವೆಂಬ ಸಮರ್ಥನೆಯನ್ನು ಸರ್ಕಾರ ನೀಡುತ್ತಿದೆ. ಆದರೆ ಇದೇ ತರ್ಕದ ಆಧಾರದಲ್ಲಿ ಬುದ್ಧ ಧರ್ಮವನ್ನು ರಾಜಧರ್ಮವಾಗಿ ಸ್ವೀಕರಿಸಿರುವ ಎರಡು ನೆರೆ ದೇಶಗಳಾದ ಭೂತಾನ್ ಮತ್ತು ಶ್ರೀಲಂಕಾಗಳೂ ಈ ವರ್ಗೀಕರಣದಲ್ಲಿ ಸೇರಿಕೊಳ್ಳಬೇಕಿತ್ತು. ಈಗಾಗಲೇ ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದ ಶ್ರೀಲಂಕಾದ ತಮಿಳರು ಭಾರತದಲ್ಲಿ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಶ್ರೀಲಂಕಾದಲ್ಲಿ ಬಹುಸಂಖ್ಯಾತರಿಗೆ ಸೇರಿದ ಕೆಲವು ಶಕ್ತಿಗಳು ಅಲ್ಪಸಂಖ್ಯಾತರನ್ನೇ ಗುರಿ ಮಾಡಿಕೊಂಡು ದಾಳಿ ಮಾಡಿರುವ ಹಲವಾರು ಪ್ರಕರಣಗಳು ಸಂಭವಿಸಿವೆ. ಹಾಗೂ ಈ ಶಾಸನಕರ್ತರ ದುರ್ಬಲ ಇತಿಹಾಸ ಜ್ನಾನ ಮತ್ತು ಪೂರ್ವಗ್ರಹಗಳನ್ನು ಬಯಲು ಮಾಡುವಂತೆ ಪಾಕಿಸ್ತಾನದಲ್ಲಿ ಧಾರ್ಮಿಕ ದಮನವನ್ನು ಎದುರಿಸುತ್ತಿರುವ ಅಹಮದೀಯಾಗಳನ್ನು, ಅಫ್ಘಾನಿಸ್ತಾನದ ಹಜಾರಗಳನ್ನು ಮತ್ತು ಮಯಾನ್ಮಾರಿನ ರೋಹಿಂಗ್ಯಾ ಮುಸ್ಲಿಮರನ್ನು ಗುರುತಿಸಲಾಗಿಲ್ಲ. ನಮ್ಮ ಸಂವಿಧಾನದ ಆರ್ಟಿಕಲ್ ೧೪, ಕಾನೂನಿನ ಎದಿರು ಎಲ್ಲರೂ ಸಮಾನರು ಎಂದು ಘೋಷಿಸುತ್ತದೆ ಮತ್ತು ತರ್ಕಬದ್ಧವಾದ ಕೆಲವು ವಿಶೇಷ ವರ್ಗೀಕರಣವನ್ನು ಮಾತ್ರ ಸಮ್ಮತಿಸುತ್ತದೆ. ಹಾಗಿರುವಾಗ ಧರ್ಮಾಧಾರಿತವಾದ ನಾಗರಿಕತ್ವವನ್ನು ನಮ್ಮ ಸಂವಿಧಾನ ಒಪ್ಪಿಕೊಳ್ಳುತ್ತದೆಯೇ? ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಮಾನವೀಯ ಸಂವೇದನೆಯು ಕೇವಲ ಆಯ್ದ  ವರ್ಗಗಳಿಗೆ ಮಾತ್ರ ಸೀಮಿತಗೊಳ್ಳುವುದು ತರವೇ? ಇದೇ ಈ ಶಾಸನದ ನಿಚ್ಚಳವಾದ ಮತ್ತು ಪ್ರಾಯಶಃ ಉದ್ದೇಶಪೂರ್‍ವಕವಾದ ಸಮಸ್ಯೆಯೂ ಆಗಿದೆ. ಅದೇನೆಂದರೆ ಈ ಶಾಸನವು ಧಾರ್ಮಿಕ ದಮನವೆಂದರೆ ಏನೆಂಬುದರ ನಿರ್ವಚನವನ್ನೂ ನೀಡುವುದಿಲ್ಲ, ಅಥವಾ ಅಂಥಾ ದಮನಗಳ ವಾಸ್ತವಿಕ ಅಂದಾಜನ್ನೂ ಒದಗಿಸುವುದಿಲ್ಲ. ದಮನಿತರ ಬಗೆಗಿನ ಕಾಳಜಿಯು ನೈಜವಾಗಿದ್ದಲ್ಲಿ ಮಸೂದೆಯು ಈಗ ಮಾಡಿರುವಂತೆ ನಿರ್ದಿಷ್ಟ ಸಮುದಾಯಗಳನ್ನು ಮಾತ್ರ ಹೆಸರಿಸದೆ ದಮನಿತ ಅಲ್ಪಸಂಖ್ಯಾತರೆಲ್ಲರನ್ನೂ ಅಥವಾ ಸಮುದಾಯಗಳೆಲ್ಲವನ್ನೂ ಒಳಗೊಳ್ಳುವಂತಿರುತ್ತಿತ್ತು. ಆ ಬಗೆಯ ಧೋರಣೆಯು ನಾಸ್ತಿಕರ ಮೇಲೆ ನಡೆಯುವ ಅಥವಾ ಇನ್ನಿತರ ಬಗೆಯ ದಮನಗಳನ್ನೂ ಒಳಗೊಳ್ಳುತ್ತಿತ್ತು. ಆಗ ಅದನ್ನು ವಿಶೇಷ ಶಾಸನವನ್ನು ಜಾರಿ ಮಾಡದೆ ಆಡಳಿತಾತ್ಮಕ ಕ್ರಮಗಳ ಮೂಲಕ ಅಥವಾ ಸಂಬಂಧಪಟ್ಟ ವಿಶ್ವಸಂಸ್ಥೆಯ ಒಡಂಬಡಿಕೆಗೆ ಸಹಿ ಹಾಕುವ ಮೂಲಕವೇ ಜಾರಿ ಮಾಡಬಹುದಾಗಿತ್ತು. 

ಆದರೆ ಅದ್ಯಾವುದನ್ನು ಮಾಡದೆ ಇಂಥಾ ತಾರತಮ್ಯ ಪೂರಿತ ಮತ್ತು ತತ್ವರಹಿತ ಶಾಸನವೊಂದನ್ನು ಜಾರಿ ಮಾಡಿರುವುದರ ಹಿಂದಿನ  ಆಳುವ ಸರ್ಕಾರದ ಉದ್ದೇಶವು ಅಲ್ಪಸಂಖ್ಯಾತರ ಕಾಳಜಿಯಲ್ಲವೆಂಬುದನ್ನೂ ಸ್ಪಷ್ಟಪಡಿಸುತ್ತದೆ. ಬದಲಿಗೆ ಭಾರತದೊಳಗಿರುವ ಅಲ್ಪಸಂಖ್ಯಾತರನ್ನು ದಾಳಿಗೆ ಗುರಿಮಾಡಿಕೊಳ್ಳುವ ಅದರ ಸೈದ್ದಾಂತಿಕ ರಣೋತ್ಸಾಹವನ್ನೇ ಅದು ಪ್ರತಿಫಲಿಸುತ್ತದೆ. ಈ ಸಿಎಬಿ ಯನ್ನು ಆಳುವ ಸರ್ಕಾರವು ಭಾರತದಾದ್ಯಂತ ಜಾರಿ ಮಾಡಬಯಸುತ್ತಿರುವ ರಾಷ್ಟ್ರೀಯ ನಾಗರಿಕ ನೋಂದಣಿ- ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್-ಯಿಂದ ಪ್ರತ್ಯೇಕಗೊಳಿಸಿ ನಾಡಲಾಗುವುದಿಲ್ಲ. ಆಳುವ ಪಕ್ಷದ ಧುರೀಣರ ಹೇಳಿಕೆಯನ್ನು ಗಮನಿಸುವುದಾದರೆ ಈ ಸಿಎಬಿ ಮತ್ತು ಎನ್‌ಆರ್‌ಸಿಗಳ ಮೂಲಗಳು ಭಿನ್ನವಾಗಿದ್ದರೂ ಈಗ ಅವಳಿ ಯೋಜನೆಗಳೇ ಆಗಿಬಿಟ್ಟಿವೆ. ಅವು ಅಸ್ಸಾಂ ಅಥವಾ ಇತರ ಈಶಾನ್ಯ ರಾಜ್ಯಗಳಲ್ಲಿ ಭಿನ್ನಭಿನ್ನ ಪರಿಣಾಮಗಳನ್ನು ಬೀರುತ್ತವೆ. ಸಿಎಬಿಯಲ್ಲಿ ಒಳಗೊಂಡಿರುವ ಸಮುದಾಯಗಳನ್ನು ಎನ್‌ಆರ್‌ಸಿಯಿಂದ ಹೊರಗುಳಿಸಲ್ಪಟ್ಟರೂ ಸಿಎಬಿ ಮೂಲಕ ನಾಗರಿಕತ್ವವನ್ನು ನೀಡಿ ಒಳಗೊಳ್ಳಲಾಗುವುದೆಂಬ ಭರವಸೆಯನ್ನು ಆಳುವ ಪಕ್ಷವು ನೀಡುತ್ತಿದೆ.  ಆದರೆ ಸಿಎಬಿಯಿಂದ ಹೊರಗುಳಿಸಲ್ಪಟ್ಟ ಸಮುದಾಯಗಳು ಮಾತ್ರ ಎನ್‌ಆರ್‌ಸಿಯಿಂದ ಹೊರಗುಳಿಸಲ್ಪಟ್ಟರೆ ಅತ್ಯಂತ ಅನಿಶ್ಚತೆ ಮತ್ತು ಅಭದ್ರತೆಗಳಿಗೆ ಗುರಿಯಾಗುತ್ತಾರೆ ಹಾಗೂ ಈಗಾಗಲೇ ವಾಸ್ತವಿಕವಾಗಿ ಎರಡನೇ ದರ್ಜೆ ನಾಗರಿಕರಾಗಿ ಬಾಳುತ್ತಿರುವ ಅವರು ಇನ್ನುಮುಂದೆ ಶಾಸನಬದ್ಧವಾಗಿಯೂ ನಾಗರಿಕತ್ವವನ್ನು ಕಳೆದುಕೊಂಡು ರಾಜ್ಯಹೀನರಾಗಲಿದ್ದಾರೆ. ನಮ್ಮವರಲ್ಲದ ಅವರನ್ನು ಗುರಿಯಾಗಿಸಿಕೊಳ್ಳುವ ಮೂಲಕ ಬಹುಸಂಖ್ಯಾತರನ್ನು ತನ್ನ ಪರವಾಗಿ ಸಧೃಡೀಕರಿಸಿಕೊಳ್ಳುವ ಪ್ರಯತ್ನದಲ್ಲಿರುವ ಆಳುವ ಪಕ್ಷದ ಸಂಕುಚಿತ ಮತ್ತು ವಿದ್ವೇಷಕಾರಿ ಲೆಕ್ಕಾಚಾರಗಳು ನಮ್ಮಂತಹ ವೈವಿಧ್ಯಪೂರಿತ ಮತ್ತು ಅಸಮಾನ ಸಮಾಜದಲ್ಲಿ ಇನ್ನೂ ಹೆಚ್ಚೂ ಬಿರುಕುಗಳನ್ನು ಮೂಡಿಸಲಿದೆ. ಇದು ಹುಟ್ಟುಹಾಕುವ ವೈರುಧ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಬಲ್ಲವೆಂಬ ಆಳುವ ಪಕ್ಷದ ಅತಿ ವಿಶ್ವಾಸವನ್ನು ಸಿಎಬಿಯ ವಿರುದ್ಧ ಅಸ್ಸಾಮಿನಲ್ಲಿ ಭುಗಿಲೆದ್ದಿರುವ ಪ್ರತಿರೋಧವು ಹುಸಿಮಾಡಿದೆ. ಹಲವಾರು ಬಗೆಯ ವೈರುಧ್ಯಗಳನ್ನೂ, ಅಸಮಾನತೆಗಳನ್ನೂ, ಮತ್ತು ಸಂಘರ್ಷಗಳನ್ನೂ ಹೊಂದಿರುವ ಸಮಾಜದಲ್ಲಿ ಜನಸಮುದಾಯವನ್ನು ಕಲ್ಪಿತ ಹೊರಗಿನವರ ಮೇಲೆ ಎತ್ತಿಕಟ್ಟುವ ರಾಜಕೀಯವು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ, ಸ್ಥಿರವಾಗಿರುವುದಿಲ್ಲ ಅಥವಾ ಅವು ಹುಟ್ಟುಹಾಕುವ ವೈರುಧ್ಯಗಳನ್ನು ಪ್ರಯೋಗಾಲಯದಲ್ಲಿ ನಡೆಯುವ ಪ್ರಯೋಗಗಳಂತೆ ನಿಯಂತ್ರಿಸಲೂ ಆಗುವುದಿಲ್ಲ. ಆದರೆ ಅವು ಸಾಮಾನ್ಯ ಜನರು ತಮ್ಮ ದಿನನಿತ್ಯದ ಬದುಕಿನಲ್ಲಿ ಆಶಿಸುವ ಸಾಮಾಜಿಕ ಸೌಹಾರ್ದತೆ ಮತ್ತು ಶಾಂತಿಗಳಿಗೆ ಮಾತ್ರ ಹಾನಿಯನ್ನುಂಟುಮಾಡಬಲ್ಲವು. ಸದಾ ಕೋಲಾಹಲ ಮತ್ತು ಘರ್ಷಣೆಯ ಪರಿಸ್ಥಿತಿಯಲ್ಲಿ ಇರಬೇಕೆಂದು ಬಯಸುವ ಆಳುವ ಪಕ್ಷದ ಯೋಜನೆಗಳು ವಿಫಲವಾಗಬೇಕೆಂದರೆ, ಈ ಶಾಸನವು ಸಾಂವಿಧಾನಿಕ ಮೌಲ್ಯಗಳ ಅಸ್ಥಿತ್ವಕ್ಕೆ ಎದುರಾಗಿರುವ ಕಂಟಕವೆಂದು ಪರಿಗಣಿಸಿ  ಯಾವ ಹಿಂದೂ ಬಹುಸಂಖ್ಯಾತ ಸಮುದಾಯದ ಹೆಸರಿನಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆಯೋ ಅವರು ಅದರ ಮೌಲ್ಯಗಳ ರಕ್ಷಣೆಗೆ ಎದ್ದುನಿಲ್ಲಬೇಕಿದೆ. 

ಕೃಪೆ: Economic and Political Weekly  

ಅನು: ಶಿವಸುಂದರ್ 

                        

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...