ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಅಧಿಕಾರಿಗೆ ವಂಚನೆ; ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

Source: Vb | By I.G. Bhatkali | Published on 23rd October 2023, 8:02 AM | State News | National News |

ಬೆಂಗಳೂರು: ಚೈತ್ರಾ ವಂಚನೆ ಪ್ರಕರಣದ ಮಾದರಿಯಲ್ಲೇ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿದ ಇನ್ನೊಂದು ಪ್ರಕರಣ ವಿಜಯನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪುತ್ತೂರಿನ ಬಿಜೆಪಿ ಮುಖಂಡ ಶೇಖ‌ ಎಸ್‌.ಪಿ. ಮತ್ತು ಕೊಟ್ಟೂರಿನ ರೇವಣಸಿದ್ದಪ್ಪ ಅವರು 2 ಕೋಟಿ ರೂ.ಗೂ ಅಧಿಕ ಹಣವನ್ನು ಪಡೆದಿದ್ದು, ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೂ ಶಾಮೀಲಾಗಿದ್ದಾರೆ. ಹಣವನ್ನು ವಾಪಸ್ ಕೊಡುವಂತೆ ಒತ್ತಾಯಿಸಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಲೋಕೋಪಯೋಗಿ (ಪಿಡಬ್ಲ್ಯುಡಿ) ಇಲಾಖೆಯ ನಿವೃತ್ತ ಸಹಾಯಕ ಅಭಿಯಂತರ ಶಿವಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ. ರವಿವಾರ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿರುವ ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ನಿವೃತ್ತಿಯ ಕಾರ್ಯ ಕ್ರಮವೊಂದರಲ್ಲಿ ಕೊಟ್ಟೂರಿನ ರೇವಣ ಸಿದ್ದಪ್ಪ ಎಂಬಾತ ಪರಿಚಯವಾಗಿದ್ದ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ನನ್ನನ್ನು ಪದೇ ಪದೇ ಭೇಟಿ ಮಾಡಿ 'ಬಿಜೆಪಿಯ ಟಿಕೆಟನ್ನು ನಿಮಗೆ ಕೊಡಿಸುವೆ, ನೀವು ಟಿಕೆಟ್ ಪಡೆಯಲು ಯೋಗ್ಯರು' ಎಂದು ಪುಸಲಾಯಿಸುವ ಮಾತುಗಳನ್ನಾಡುತ್ತಿದ್ದ. 2022ರ ಅ.23ರಂದು ರೇವಣಸಿದ್ದಪ್ಪ ನನ್ನನ್ನು ಬೆಂಗಳೂರಿಗೆ ಕರೆತಂದು ಒಂದು ಹೋಟೆಲ್‌ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ. ಎಂಬವರನ್ನು ಪರಿಚಯಿಸಿದ್ದ. ಇವರಿಬ್ಬರು ಸೇರಿ ನನಗೆ ಟಿಕೆಟ್‌ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ವಂಚಿಸಿದ್ದಾರೆ. ನಳಿನ್ ಕುಮಾರ್ ಕಟೀಲು ಅವರ ಮಾತಿನ ಭರವಸೆಯಂತೆ ನಾನು ಶೇಖರ್ ಜೊತೆಗೆ ನಾನು ವ್ಯವಹರಿಸಿದ್ದೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆಯಿತು” ಎಂದು ತಿಳಿಸಿದರು. ಶೇಖರ್ ಎನ್.ಪಿ. ನನ್ನ ಬಳಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಕೇಳಿದರು. ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ನಿಮ್ಮ ಹಣವನ್ನು ವಾಪಸ್ ನೀಡುತ್ತೇನೆಂದು ತಿಳಿಸಿದರು. ಹಂತಹಂತವಾಗಿ ಅವರು ಒಟ್ಟು 2.55 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

2022 ಅ.15ರ೦ದು ಚಿತ್ರದುರ್ಗದಲ್ಲಿ ರಸ್ತೆಯ ಬಳಿ ಶೇಖ‌ ಎನ್.ಪಿ. ಕುಂದಾಪುರದ ಅರ್ಜುನ ಎಂಬವನನ್ನು ಕಳುಹಿಸಿ 50 ಲಕ್ಷ ರೂ. ಪಡೆದಿದ್ದಾರೆ. ನಂತರ ಆನ್ ಲೈನ್ ಪೇಮೆಂಟ್ ಸೇರಿ 1 ಕೋಟಿ 65 ಲಕ್ಷ ರೂ. ಶೇಖರ್ ಎನ್.ಪಿ. ಅವರಿಗೆ ಸಂದಾಯವಾಗಿದೆ ಎಂದು ಶಿವಮೂರ್ತಿ ವಿವರಿಸಿದರು.

ಇದರ ಜೊತೆಗೆ ಕೊಟ್ಟೂರು ತಾಲೂಕಿನ, ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡನಾಗಿದ್ದ ರೇವಣಸಿದ್ದು ಬಿನ್ ಸಿದ್ದಲಿಂಗಪ್ಪ ಒಂದು ಹೋಟೆಲ್‌ಗೆ ಕರೆದುಕೊಂಡು ಹೋಗಿ, ಬಿಜೆಪಿ ಹಿರಿಯ ನಾಯಕರಿಗೆ ಮತ್ತು ಇತರರಿಗೆ ಕೊಡಬೇಕೆಂದು ಹೇಳಿ 50 ಲಕ್ಷ ರೂ. ನಗದನ್ನು ಕೇಳಿದರು. ಕುಗ್ಗಿ ತಾಲೂಕಿನ ಚಿಕ್ಕಹೋಗಿಗಹಳ್ಳಿ ಗ್ರಾಮದ ಆರೆಸೆಸ್ ಮುಖಂಡರಾದ ನಾಗಣ್ಣ ಅವರು ಈ ಹಣವನ್ನು ಪಡೆದಿರುತ್ತಾರೆ ಎಂದು ಶಿವಮೂರ್ತಿ ತಿಳಿಸಿದರು.

ನನ್ನ ಸ್ವಂತ ನಿವೇಶನವನ್ನು ಮಾರಾಟ ಮಾಡಿ, ನನ್ನ ಆಪ್ತ ಸ್ನೇಹಿತರಿಂದ ಸಾಲ ಪಡೆದು ಹಾಗೂ ನಿವೃತ್ತಿಯಿಂದ ಬಂದ ಹಣವನ್ನೆಲ್ಲಾ ಸೇರಿಸಿ ಇವರಿಗೆ ಕೊಟ್ಟಿರುತ್ತೇನೆ. ಇದಾದ ನಂತರದ ದಿನಗಳಲ್ಲಿ 2023ರ ಎಪ್ರಿಲ್ ತಿಂಗಳಿನಲ್ಲಿ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ(ಎಸ್‌ಸಿ)ದ ಬಿಜೆಪಿ ಟಿಕೆಟ್ ನನಗೆ ಬರುವುದಿಲ್ಲ. ಬದಲಿಗೆ ಬಿ.ರಾಮು ಎಂಬವರಿಗೆ ಸಿಗುತ್ತದೆ ಎಂದು ಗೊತ್ತಾಯಿತು. ಇದರಿಂದ ಆಘಾತವಾದ ನನಗೆ ಏನು ಮಾಡಬೇಕೆಂದು ತಿಳಿಯದೆ ಮೇಲೆ ತಿಳಿಸಿರುವ ಹಣ ಪಡೆದವರಿಗೆ ಕರೆ ಮಾಡಿದಾಗ ಒಂದು ತಿಂಗಳು ಅವರು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ಬೇರೆಯವರ ನಂಬರಿನಿಂದ ಕರೆ ಮಾಡಿದಾಗ ಸ್ವೀಕರಿಸಿದ್ದಾರೆ. ಆಗ ನನ್ನ ಬಳಿ ಮಾತನಾಡಿದ ಇವರು ಹಣ ವಾಪಸ್ ನೀಡಲು ಹಲವಾರು ದಿನಾಂಕಗಳು, ಸಬೂಬುಗಳನ್ನು ನೀಡುತ್ತಾ ಬಂದಿದ್ದು, ಈವರೆಗೆ ಹಣ ನೀಡಿಲ್ಲ ಎಂದು ಹೇಳಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...