ವಸತಿ ಸೌಲಭ್ಯ ಕಲ್ಪಿಸಲು ನಗರದ ಎಲ್ಲಾ ಹೋಟೆಲ್‍ಗಳನ್ನು ಕಾಯ್ದಿರಿಸಿ -ಪ್ರಿಯಾಂಕ ಖರ್ಗೆ

Source: so news | Published on 23rd January 2020, 1:06 AM | State News | Don't Miss |

 

ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರು ದಿನ ನುಡಿ ಜಾತ್ರೆಗೆ ಬರುವ ಗಣ್ಯರು, ಪರಿಷತ್ತಿನ ಪದಾಧಿಕಾರಿಗಳು ಹಾಗೂ ನೊಂದಾಯಿತ ಪ್ರತಿನಿಧಿಗಳಿಗೆ ತಂಗಲು ಅನುಕೂಲವಾಗುವಂತೆ ಈಗಾಗಲೆ ಕಾಯ್ದಿರಿಸಿದ ಹೋಟೆಲ್‍ಗಳು ಸಾಲದು. ನಗರದ ಬಹುತೇಕ ಹೋಟೆಲ್‍ಗಳನ್ನು ಕಾಯ್ದಿರಿಸಬೇಕು ಎಂದು ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಅಧ್ಯಕ್ಷ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಬುಧವಾರ ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನೃಪತುಂಗನ ನಾಡಿನಲ್ಲಿ ನುಡಿ ಜಾತ್ರೆ ನಡೆಯುತ್ತಿರುವುದು ನಮಗೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಹೀಗಾಗಿ ಇಲ್ಲಿ ಬರುವ ಅತಿಥಿ ಗಣ್ಯರಿಗೆ ವಸತಿ ಸೌಕರ್ಯದಲ್ಲಿ ಯಾವುದೇ ಲೊಪದೋಷವಾಗದಂತೆ ಮುನ್ನೇಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ವಸತಿ ಸಮಿತಿಗೆ ಸಂಬಂಧಿಸಿದಂತೆ ಎಲ್ಲಾ ಪೂರ್ವಸಿದ್ಧತೆಗಳು ಒಂದು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಮ್ಮೇಳನಕ್ಕೆ ಆಗಮಿಸುವ ಒಟ್ಟಾರೆ ಜನಸಂಖ್ಯೆ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಿ ನೀಡಿದಲ್ಲಿ ಅದಕ್ಕನುಗುಣವಾಗಿ ಎ, ಬಿ, ಸಿ, ಕೆಟಗರಿಯನ್ವಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಕೂಡಲೆ ಸಮಿತಿಗೆ ಪಟ್ಟಿ ಸಲ್ಲಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನುಡಿ ಸಮ್ಮೇಳನ ರಾಷ್ಟ್ರೀಯ ಹಬ್ಬವಾಗಿರುವುದರಿಂದ ನಗರದ ಎಲ್ಲಾ ಹೋಟೆಲ್, ಲಾಡ್ಜ್ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಅಟೋ, ಟ್ಯಾಕ್ಸಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನುಡಿ ಸಮ್ಮೇಳನಕ್ಕೆ ಬರುವವರನ್ನು ರಿಯಾಯಿತಿ ದರದಲ್ಲಿ ಸೇವೆ ನೀಡುವಂತೆ ಅವರನ್ನು ಕೋರಬೇಕು ಎಂದರು.
ಹೆಲ್ಪ್ ಡೆಸ್ಕ್ ಸ್ಥಾಪಿಸಿ: ಕನ್ನಡದ ಮೇರು ಹಬ್ಬಕ್ಕೆ ಬೇರೆ ಊರುಗಳಿಂದ ಬರುವವರಿಗೆ ಕಲಬುರಗಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದಲ್ಲಿ ಹೆಲ್ಪ್‍ಡೆಸ್ಕ್ ಸ್ಥಾಪಿಸಿ ವಸತಿ, ಸಾರಿಗೆ ಸೇರಿದಂತೆ ಕಾರ್ಯಕ್ರಮಗಳ ಮಾಹಿತಿ ನೀಡಲು ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಸ್ಸಿನ ಖರ್ಚು ಭರಿಸಲು ದೇಣಿಗೆ: ಜಿಲ್ಲೆಯ ವಿವಿಧ ತಾಲೂಕುಗಳಿಂದ ಮೂರು ದಿನ ನುಡಿ ಸಮ್ಮೇಳನಕ್ಕೆ ಸಾರ್ವಜನಿಕರನ್ನು ಕರೆದುಕೊಂಡು ಬಂದು ಮರಳಿ ಹೋಗುವ ಸರ್ಕಾರಿ ಬಸ್ಸುಗಳ ವೆಚ್ಚ ಸುಮಾರು 8 ಲಕ್ಷ ರೂ. ಆಗಲಿದ್ದು, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಈ ವೆಚ್ಚ ಭರಿಸಲು ಅವಕಾಶವಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ತಿಳಿಸಿದಾಗ ಆ ಹಣವನ್ನು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರುಗಳಿಂದ ಸಂಗ್ರಹಿಸಿ ನೀಡುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಆರ್.ಟಿ.ಓ. ದಾಮೋದರ ಕೆ. ಮಾತನಾಡಿ ಪ್ರತಿನಿಧಿಗಳು ಸೇರಿದಂತೆ ಇನ್ನಿತರರ ಓಡಾಟಕ್ಕೆ ಒಟ್ಟಾರೆ 200 ಶಾಲಾ ಬಸ್‍ಗಳನ್ನು ತೆಗೆದುಕೊಳ್ಳಲಾಗುವುದು. ಇದಲ್ಲದೆ ಬಾಡಿಗೆ ಮೇಲೆ ತಲಾ 50 ಇನ್ನೋವಾ, ಕ್ರೂಸರ್, ಕಾರುಗಳನ್ನು ಸಹ ಪಡೆಯಲಾಗುತ್ತಿದೆ. ಇನ್ನೂ ಅವಶ್ಯಕತೆ ಇದ್ದಲ್ಲಿ ತಾಲೂಕುಗಳಿಂದ ವಾಹನಗಳನ್ನು ಪಡೆಯಲಾಗುವುದು ಎಂದು ಸಭೆಗೆ ತಿಳಿಸಿದರು.
ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ಪಿ. ರಾಜಾ ಮಾತನಾಡಿ ವಸತಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ 18 ಕಲ್ಯಾಣ ಮಂಟಪ, 16 ಶಿಕ್ಷಣ ಸಂಸ್ಥೆಗಳು, 36 ಹೋಟೆಲ್- ಲಾಡ್ಜ್‍ಗಳನ್ನು ಗುರುತಿಸಿ ಕೋಣೆ ಕಾಯ್ದಿರಿಸಲಾಗಿದೆ. ಹೋಟೆಲ್ ಮತ್ತು ಕೋಣೆಗಳ ಸಂಖ್ಯೆ ಇನ್ನೂ ಅವ್ಯಕತೆ ಇರುವುದರಿಂದ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೋಟೆಲ್ ಮಾಲೀಕರ ಸಭೆ ಕರೆದು ಇನ್ನೂ ಕಾಯ್ದಿರಿಸಲಾಗುವುದು. ವಸತಿಗೆ ಗುರುತಿಸಿರುವ ಶಿಕ್ಷಣ ಸಂಸ್ಥೆ ಮತ್ತು ಕಲ್ಯಾಣ ಮಂಟಪದಲ್ಲಿನ ಶೌಚಾಲಯ, ಸ್ನಾನಗೃಹ, ವಿದ್ಯುತ್ ದುರಸ್ತಿ ಮಾಡಲು ಹಾಗೂ ತಾತ್ಕಲಿಕವಾಗಿ 500 ಸ್ನಾನಗೃಹ, 400 ಶೌಚಾಲಯಗಳನ್ನು ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ವಸತಿ ವ್ಯವಸ್ಥೆ ಕುರಿತಂತೆ ಸಹಾಯಕ್ಕಾಗಿ 100 ಜನ ಪ್ರತಿನಿಧಿಗಳಿಗೆ ಓರ್ವ ಪಿ.ಡಿ.ಓ. ಮತ್ತು 1000 ಜನ ಪ್ರತಿನಿಧಿಗಳ ಮೇಲ್ವಿಚಾರಣೆಗೆ ಓರ್ವ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್, ಸದಸ್ಯ ಶರಣಗೌಡ ಪಾಟೀಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಐ.ಎ.ಎಸ್. ಪ್ರೊಬೇಷನರ್ ಅಧಿಕಾರಿ ಗೋಪಾಲಕೃಷ್ಣ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಡಿಡಿಪಿಐ ಶರಣಗೌಡ ಪಾಟೀಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ, ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್ ಸೇರಿದಂತೆ ಇನ್ನಿತರ ಸದಸ್ಯರು, ಅಧಿಕಾರಿಗಳು ಇದ್ದರು.

Read These Next

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...

ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಅರ್ಜಿ ಆಹ್ವಾನ                                                         

ಬೆಂಗಳೂರು: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ (ಡಿ.ಸಿ.ಎಂ) ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ...