ಉ.ಭಾರತದಲ್ಲಿ ಮಳೆಯ ಆರ್ಭಟ; ಹಿಮಾಚಲ, ಲಡಾಖ್, ಉತ್ತರಾಖಂಡಗಳಲ್ಲಿ ಭೂಕುಸಿತ; ಹಲವು ನಗರ, ಗ್ರಾಮಗಳು ಜಲಾವೃತ 40 ವರ್ಷಗಳಲ್ಲೇ ದಿಲ್ಲಿಯಲ್ಲಿ ದಾಖಲೆ ಮಳೆ

Source: Vb/PTI | By I.G. Bhatkali | Published on 10th July 2023, 11:23 AM | National News |

ಹೊಸದಿಲ್ಲಿ: ಉತ್ತರಾಖಂಡ, ಹಿಮಾಚಲಪ್ರದೇಶ ಹಾಗೂ ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ದಿಲ್ಲಿ, ಹರ್ಯಾಣ, ಹಿಮಾಚಲ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳು ನೆರೆಪೀಡಿತವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಭೂಕುಸಿತ ಮತ್ತಿತರ ಮಳೆ ಸಂಬಂಧಿತ ದುರಂತಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ದಿಲ್ಲಿಯಲ್ಲಿ ಯಮುನಾ ನದಿ ಸಹಿತ ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ನೂರಾರು ಗ್ರಾಮಗಳು, ಪಟ್ಟಣಗಳು ಜಲಾವೃತಗೊಂಡಿವೆ. ಹಲವೆಡೆ ಹೆದ್ದಾರಿ, ರಸ್ತೆಗಳು ನೆರೆನೀರಿನಲ್ಲಿ ಮುಳುಗಿವೆ.

ಉತ್ತರಾಖಂಡ, ಹಿಮಾಚಲಪ್ರದೇಶದಂತಹ ಪರ್ವತ ರಾಜ್ಯಗಳಲ್ಲಿ ಸಂಭವಿಸಿದ ದಿಢೀರ್ ನೆರೆಯಿಂದಾಗಿ ರಸ್ತೆಗಳು ಕೊಚ್ಚಿಹೋಗಿವೆ.

ದಿಲ್ಲಿ ಸೇರಿದಂತೆ ವಿವಿಧೆಡೆ ರೈಲು ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಸುಮಾರು 17 ರೈಲುಗಳ ಸಂಚಾರವನ್ನು ರದ್ದುಪಡಿಸಿರುವುದಾಗಿ ಹಾಗೂ ಇತರ 12 ರೈಲುಗಳ ಪಥವನ್ನು ಬದಲಾಯಿಸಿರುವುದಾಗಿ ಉತ್ತರ ರೈಲ್ವೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ರೈಲ್ವೆ ಹಳಿ ಸಂಪೂರ್ಣ ಜಲಾವೃತಗೊಂಡಿರುವ ಕಾರಣ ಸುಮಾರು ನಾಲ್ಕು ಕಡೆಗಳಲ್ಲಿ ರೈಲು ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಜಮ್ಮು-ಕಾಶ್ಮೀರ, ಹಾಗೂ ಲಡಾಖ್ ಹಿಮಾಚಲ ಪ್ರದೇಶದ ನಿರ್ದಿಷ್ಟ ಪ್ರದೇಶಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೆ ಯೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ರಾಜಧಾನಿ ದಿಲ್ಲಿಯಲ್ಲಿ ರವಿವಾರ ಬೆಳಗ್ಗೆ 8:30ರ ತನಕ 24 ಗಂಟೆಗಳಲ್ಲಿ 153 ಮಿ.ಮೀ. ಮಳೆಯಾಗಿದ್ದು, 1982ರಿಂದೀಚೆಗೆ ಇದು ಜುಲೈ ತಿಂಗಳಲ್ಲಿನ ಗರಿಷ್ಠ ದಾಖಲೆಯಾಗಿದೆಯೆಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಹರ್ಯಾಣದ ಹದಿನಿಕುಂಡ್ ಅಣೆಕಟ್ಟು ಕಾಲುವೆಯಿಂದ ಯುಮುನಾ ನದಿಗೆ 1 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಿದ್ದರಿಂದ ರಾಜಧಾನಿ ದಿಲ್ಲಿಯಲ್ಲಿ ಪ್ರವಾಹ ಸಾಧ್ಯತೆಯ ಬಗ್ಗೆ ದಿಲ್ಲಿ ಸರಕಾರ ರವಿವಾರ ಎಚ್ಚರಿಕೆ ನೀಡಿದೆ. ಸೋಮವಾರ ಎಲ್ಲಾ ಶಾಲಾ, ಕಾಲೇಜುಗಳಿಗೆ ದಿಲ್ಲಿ ಸರಕಾರ ರಜೆ ಘೋಷಿಸಿದೆ.

ನೆರೆಯಲ್ಲಿ ಮುಳುಗಿದ ಗುರುಗ್ರಾಮ: ದಿಲ್ಲಿ ಸಮೀಪದ ಗುರುಗ್ರಾಮ ನಗರದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.  ಸೋಮವಾರದಂದು ಮನೆಯಿಂದಲೇ ಉದ್ಯೋಗಿಗಳು ಕಾರ್ಯಾಚರಿಸುವಂತೆ ಸೂಚನೆ ನೀಡಬೇಕೆಂದು ಕಾರ್ಪೊರೇಟ್ ಕಂಪೆನಿಗಳಿಗೆ ಸ್ಥಳೀಯಾಡಳಿತ ಸಲಹೆ ನೀಡಿದೆ ಹಾಗೂ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ. ಕುಂಭದ್ರೋಣ ಮಳೆಯಿಂದಾಗಿ ನಗರದ ರಸ್ತೆ ಪಾರ್ಕ್‌ಗಳು, ಮಾರುಕಟ್ಟೆಗಳು, ಶಾಲೆ, ಆಸ್ಪತ್ರೆಗಳು ಜಲಾವೃತಗೊಂಡಿವೆ.

ಮಳೆಗೆ ಬೆಚ್ಚಿದ ಹಿಮಾಚಲ: ಹಿಮಾಚಲ ಪ್ರದೇಶದಲ್ಲಿ ರವಿವಾರ ವರುಣನ ಆರ್ಭಟಕ್ಕೆ ಐವರು ಬಲಿಯಾಗಿದದ್ದಾರೆ. ನಿರಂತರ ಮಳೆಯಾಗುತ್ತಿರುವ ಕುಲು, ಕಿನ್ನಾಪುರ್, ಚಾಂಬಾ ಜಿಲ್ಲೆಗಳಲ್ಲಿ ಭೂಕುಸಿತ ಹಾಗೂ ದಿಢೀರ್ ಪ್ರವಾಹ ಸಂಭವಿಸಿದೆ. ಹಲವಾರು ಮನೆಗಳು ಕುಸಿದಿವೆ. ರಾಜ್ಯದ ವಿವಿಧೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಸ್ಥಳೀಯ ಹವಾಮಾನ ಇಲಾಖೆಯು 12 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಕಳೆದ 36 ತಾಸುಗಳಲ್ಲಿ 14 ಭೂಕುಸಿತ ಹಾಗೂ 13 ದಿಢೀರ್ ಪ್ರವಾಹ ಸಂಭವಿಸಿರುವುದು ವರದಿಯಾಗಿದೆ.

ಶಿಮ್ಲಾ ಜಿಲ್ಲೆಯ ಕೊಟಗಡದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮನೆಯೊಂದು ಕುಸಿದು ಒಂದೇ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ. ಲಾಹುವುಲ್ ಹಾಗೂ ಸಿಟಿಗಳಲ್ಲಿ ಸುಮಾರು 200 ಮಂದಿ ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ಆಹಾರ ಹಾಗೂ ಔಷಧಿಗಳ ಏರ್ಪಾಡು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಹಲವು ಪ್ರದೇಶಗಳು ಸಂಪರ್ಕಕಳೆದುಕೊಂಡಿದ್ದು, 736 ರಸ್ತೆಗಳನ್ನು ಸಂಚಾರಕ್ಕೆ ಮುಚ್ಚುಗಡೆಗೊಳಿಸಲಾಗಿದೆ. ಭೂಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 21ರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...