ಕಪಟತನದಲ್ಲಿ ಏಕಧರ್ಮ ಪ್ರಭುತ್ವದ ಪ್ರಚಾರ

Source: sonews | By Staff Correspondent | Published on 29th October 2018, 10:58 PM | National News | Special Report | Don't Miss |

ಸಂಘಪರಿವಾರವು ಕಾನೂನಿನ ಮುಖವಾಡದ ಕೆಳೆಗೆ ತನ್ನ ಸಂವಿಧಾನ ಬಾಹಿರ ಕಾರ್ಯಸೂಚಿಗಳನ್ನು ಮುಂದೆತಳ್ಳುತ್ತಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ತಮ್ಮ ವಾರ್ಷಿಕ ವಿಜಯ ದಶಮಿ ಭಾಷಣದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರದ ಆತ್ಮ-ಗೌರದ ಕಾರಣಗಳನ್ನು ಮುಂದೆ ಮಾಡಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ರಾಮಮಂದಿರ ನಿರ್ಮಾಣ ಮಾಡಲು ಶಾಸನವೊಂದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿರುವ ಭಾಗವತರ ಹೇಳಿಕೆ ಬರಲಿರುವ ಐದು ರಾಜ್ಯ ಶಾಸನಸಭಾ ಚುನಾವಣೆಗಳಲ್ಲಿ ಮತ್ತು ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ವಿಷಯವನ್ನು ಮುಂದಿಟ್ಟುಕೊಂಡು ಮತಸೂರೆ ಹೊಡೆಯುವ ಹುನ್ನರವೇ ಹೊರತು ಬೇರೆನಲ್ಲ. ಬಾಬ್ರಿಮಸೀದಿ-ರಾಮಮಂದಿರ ಇರುವ ಭೂಮಿಯ ಒಡೆತನದ ವಿವಾದವು ಇದೀಗ ಸುಪ್ರೀಂ ಕೋರ್ಟಿನ ಅಂಗಳ ಸೇರಿರುವುದರಿಂದಲೂ ಹತಾಷ ಹೇಳಿಕೆ ಹೊರಬಿದ್ದಿರಬಹುದು. ಹೀಗಾಗಿ ಭಾಗವತರ ಹೇಳಿಕೆಯು ಪರಿಣಾಮದಲ್ಲಿ ನ್ಯಾಯಾಂಗದ ನಡಾವಳಿ ಮತ್ತು ವಿವೇಚನೆಯನ್ನು ಪಕ್ಕಕ್ಕೆ ಸರಿಸಬೇಕು ಎಂಬುದೇ ಆಗಿರುತ್ತದೆ.

ಮೋಹನ್ ಭಾಗವತರ ಭಾಷಣದಲ್ಲಿ ಉಲ್ಲೇಖವಾಗಿರುವ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆತ್ಮ ಗೌರವದ ಮಾತುಗಳು ಸಂಘ ಪರಿವಾರದ ಸಂಕುಚಿತ ರಾಜಕಾರಣದ ಮತ್ತು ಚುನಾವಣಾ ಹಿತಾಸಕ್ತಿಯ ಹೇಳಿಕೆಗಳೇ ಆಗಿವೆ. ಲೋಕಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಬಹುಮತವೇ ಇರುವ ಹಿನ್ನೆಲೆಯಲ್ಲಿ ಆಗ್ರಹವನ್ನು ಕಳೆದ ನಾಲಕ್ಕುವರೆ ವರ್ಷಗಳಲ್ಲಿ ಯಾವತ್ತೂ ಮಾಡದೇ ಈಗ ಒತ್ತಾಯವನ್ನು ಮಾಡುತ್ತಿರುವುದು ಚುನಾವಣಾ ರಣತಂತ್ರದ ಭಾಗವೇ ಹೊರತು ಮತ್ತೇನಲ್ಲ. ರಾಮಮಂದಿರವೆಂಬುದು ದೇಶದ ಕೋಟ್ಯಾಂತರ ದೇಶವಾಸಿಗಳ ಭಾವನೆಗಳ ದ್ಯೋತಕ ಎಂಬ ಭಾಗವತರ ಹೇಳಿಕೆಯು ಸಂಘಪರಿವಾರವು ಬಿಜೆಪಿಯ ಮೂಲಕ ಮಂದಿರ ವಿವಾದವನ್ನು ಮತ್ತೆ ಉದ್ರೇಕಿಸಿ ಹಿಂದೂತ್ವದ ರಾಜಕಾರಣದ ಸುತ್ತಾ ಮತಗಳನ್ನು ಧೃವೀಕರಿಸಲು ಸಿದ್ದಗೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಕರೆಯ ಹಿಂದಿನ ಬೆದರಿಕೆಯ ಧ್ವನಿ ಎಷ್ಟೇ ಸ್ಪಷ್ಟವಾಗಿದ್ದರೂ ಇದು ವಾಸ್ತವದಲ್ಲಿ ಎನ್ಡಿಎ ಸರ್ಕಾರದ ಬಗ್ಗೆ ಜನರಲ್ಲಿ ಮಡುಗಟ್ಟುತ್ತಿರುವ ಅಸಮಧಾನದ ಹಿನ್ನೆಲೆಯಲ್ಲಿ ಮಾಡಿರುವ ಒಂದು ರಕ್ಷಣಾತ್ಮಕ ನಡೆಯೇ ಆಗಿದೆ. ಅಚ್ಚೇ ದಿನ್  ಭರವಸೆಗಳು ಕೇವಲ ನೀರ್ಗುಳ್ಳೆಗಳೆಂದು ಸಾಬೀತಾಗತೊಡಗುತ್ತಿದ್ದಂತೆ ಸಂಘಪರಿವಾರ ಮತ್ತು ಬಿಜೆಪಿ ಕೋಮುವಾದಿ ಧ್ರುವೀಕರಣ ಮತ್ತು ಸಧೃಢೀಕರಣದೆಡೆಗೆ ಹೆಚ್ಚು ಒತ್ತುಕೊಡುತ್ತಿರುವುದು ಸ್ಪಷ್ಟವಾಗಿದೆ. ಅವರು ಕೋಮುವಾದೀ ಕಾರ್ಯಸೂಚಿಗೆ ಮರಳುತ್ತಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಅವರು ಅದನ್ನೆಂದೂ ಕೈಬಿಟ್ಟಿರಲಿಲ್ಲ. ಆದರೂ ವಿಕಾಸ್ ಪುರುಷ ನರೇಂದ್ರಮೋದಿಯ ಬಗ್ಗೆ ಕೆಲವು ಉದಾರವಾದಿ ನಾಯಕರು ಹಾಗೆ ನಮ್ಮನ್ನು ನಂಬಿಸಲು ಪ್ರಯತ್ನಿಸಿದ್ದರು. ಮೇಲಾಗಿ ನರೇಂದ್ರಮೋದಿಯವರಿಗೆ ಜಮಾನ್ಯತೆ ಗಿಟ್ಟಿಸಿಕೊಡಲು ಕಟ್ಟಲಾಗಿದ್ದ ಪ್ರಭಾವಳಿಗಳು ಕೇವಲ ವಿಕಾಸ್ ಅಥವಾ ಅಚ್ಚೆ ದಿನ್ ಗಳ ಸುತ್ತಾ ಮಾತ್ರವೇನಾಗಿರಲಿಲ್ಲ. ಏಕೆಂದರೆ ಘೋಷಣೆಗಳಲ್ಲೂ ಹಿಂದೂತ್ವದ ಕಾರ್ಯಸೂಚಿ ಸದಾ ಬೆಸೆದುಕೊಂಡಿತ್ತು. ಅಭಿವೃದ್ಧಿಯ ನೇತಾರನೆಂಬ ಪ್ರಭಾವಳಿಯು ದಿನಗಳೆದಂತೆ ಬಣ್ಣಗೆಡಲು ಆರಂಭಿಸುತ್ತಿದ್ದಂತೆ ಹಿಂದೂತ್ವದ ಸುತ್ತ ಅವರ ಜನಮಾನ್ಯತೆಯನ್ನು ಸಧೃಢೀಕರಿಸಿಕೊಳ್ಳುವುದು ಈಗ ಒಂದು ರಾಜಕೀಯ ಅಗತ್ಯವಾಗಿದೆ. ರಾಮಮಂದಿರ ನಿರ್ಮಾಣದ ಆಗ್ರಹ ನಿಟ್ಟಿನೆಡೆಗೆ ಇಟ್ಟಿರುವ ಹೆಜ್ಜೆಯಾಗಿದೆ. ಸಂದರ್ಭದಲ್ಲಿ ರಾಮಮಂದಿರ ವಿಷಯವನ್ನು ಉದ್ರೇಕಿಸುವುದರ ಹಿಂದೆ ತತ್ಕ್ಷಣದ ಚುನಾವಣಾ ಪ್ರಯೋಜನಗಳಾಚೆಗಿನ ರಾಜಕೀಯ ಕಾರ್ಯತಂತವೂ ಇದೆ. ಚುನಾವಣೆಗಳಲ್ಲಿನ ಬಿಜೆಪಿಯ ಸೋಲು-ಗೆಲುವುಗಳೇನೇ ಇದ್ದರೂ ಹಿಂದೂತ್ವದ ರಾಜಕಾರಣವನ್ನು ದೇಶದ ರಾಜಕೀಯ ಸಂಕಥನದ ಕೇಂದ್ರವಾಗುಳಿಸಿಕೊಳ್ಳುವುದು ಅದರ ದೀರ್ಘಕಾಲೀನ ಕಾರ್ಯತಂತ್ರವಾಗಿದೆ.

ಭಾಷಣದ ಜೊತೆಗೆ ಕಳೆದ ತಿಂಗಳು ದೆಹಲಿಯ ವಿಜ್ಯಾನ್ ಭವನದಲ್ಲಿ ಭಾಗವತರು ನಡೆಸಿದ ಮೂರು ದಿನಗಳ ಸಾರ್ವಜನಿಕ ಸಂಬಂಧಗಳನ್ನು  ಸುಧಾರಿಸಿಕೊಳ್ಳುವ ಕಾರ್ಯಕ್ರಮವನ್ನು ಜೊತೆಗಿಟ್ಟು ನೋಡಿದಲ್ಲಿ ದೇಶದ ರಾಜಕಾರಣದ ಮೇಲೆ ಶಾಶ್ವತ ಯಾಜಮಾನ್ಯವನ್ನು ಸ್ಥಾಪಿಸಲು ರೂಪಿಸಲಾಗುತ್ತಿರುವ ವ್ಯೂಹೋಪಾಯಗಳು ಅರ್ಥವಾಗುತ್ತವೆ. ವಿಗ್ಯಾನ್ ಭವನದಲ್ಲಿ ಅಂದು ಭಾಗವತರು ಬಹುತ್ವವನ್ನು ಒಪ್ಪಿಕೊಳ್ಳುತ್ತಾ ಮಾಡಿದ ಮೇಲ್ತೋರಿಕೆಯ ಭಾಷಣಗಳನ್ನು ಹಿಂದುಮುಂದು ನೋಡದೆ ಸ್ವಾಗತಿಸಿ ಅನಂದಿಸಿದ ಹಲವು ಉದಾರವಾದಿ ವಿಶ್ಲೇಷಕರು ಈಗ ಅವರು ಒಡೆದಾಳುವ ರಾಜಕಾರಣಕ್ಕೆ ಮರಳಿರುವ ಬಗ್ಗೆ ಆಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆಆದರೆ ಅವೆರಡೂ ಭಾಣಗಳ ನಡುವೆ ಯಾವುದೇ ವಿರೋಧಾಭಾಸಗಳಿರಲಿಲ್ಲ. ಏಕೆಂದರೆ ಅವು ಚುನಾವಣೆಯಾಚೆಗೂ ಚಾಚಿ ನಿಲ್ಲುವ ಮತ್ತು ಬಲವಾಗಿ ಹೆಣೆದಿರುವ ಒಂದು ವ್ಯೂಹತಂತ್ರದ ಭಾಗವೇ ಆಗಿದೆ. ಆರ್ಥಿಕ ವಿಷಯಗಳ ವಿರುದ್ಧ ಜನರ ಅಸಮಾಧಾನಗಳು ಅಭಿವ್ಯಕ್ತಗೊಳ್ಳುತ್ತಿದ್ದರೂ ಅಂಥಾ ಅಸಮಾಧಾನಗಳು ಕಣ್ಣಿಗೆ ರಾಚುವಷ್ಟು ಕ್ರಿಯಾಶೀಲವಾಗಿಲ್ಲ/ದ್ವೇಶ ರಾಜಕಾರಣದ ಕಾರ್ಯಸೂಚಿಗಳ ವಿರುದ್ಧ ಕಣ್ಣಿಗೆ ಹೊಡೆಯುವಷ್ಟು ಸಕ್ರಿಯವಾಗಿ ಕಂಡುಬರುತ್ತಿಲ್ಲ. ಹೀಗಾಗಿ ಬದಲಾದ ರಾಜಕೀಯ ಪರಿಸರದಲ್ಲೂ ಮತ್ತು ಹೊಂದಾಣಿಕೆಗಳಲ್ಲೂ ಸಹ ಹಿಂದೂತ್ವ ಕಾರ್ಯಸೂಚಿಯ ಸುತ್ತಾ ಒಂದು ಜನಮಾನ್ಯತೆಯನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹಿಂದೂತ್ವವನ್ನು ಹೆಡೆಮುರಿ ಕಟ್ಟಬಲ್ಲ ಒಂದು ಪರಿಣಾಮಕಾರಿ ಪರ್ಯಾಯ ಅಥವಾ ಪ್ರತಿರೋಧ ಪ್ರಮುಖ ವಿರೋಧ ಪಕ್ಷಗಳಿಲ್ಲ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ಸಿನಲ್ಲಿಲ್ಲ. ಶಬರಿಮಲ ಪ್ರಕರಣದಲ್ಲಿ ಸಂಘಪರಿವಾರದ ಧೋರಣೆಯನ್ನೇ ಯಥಾವತ್ ಅನುಸರಿಸುತ್ತಿರುವ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಲುವುಗಳು ಶ್ರದ್ಧೆ, ಭಾವನೆ ಮತ್ತು ಸಂಪ್ರಧಾಯಗಳು ಸಾಂವಿಧಾನಿಕ ಮೌಲ್ಯಗಳೊಂದಿಗೆ  ಘರ್ಷಿಸಿದಾಗ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬಲ್ಲ ಅದರ ಸಾಮರ್ಥ್ಯದ ಬಗ್ಗೆ ಅಸಮಾಧಾನವನ್ನು ಹುಟ್ಟುಹಾಕುತ್ತದೆ.

ಶಬರಿಮಲ ಪ್ರಕರಣದಲ್ಲಿ ಸಂವಿಧಾನವನ್ನು ಆಧರಿಸಿ ನೀಡಿರುವ ಕೋರ್ಟು ಆದೇಶಕ್ಕಿಂತ ಜನರ ಶ್ರದ್ಧೆಯ ವಿಷಯವೇ ಪ್ರಮುಖವೆಂದು ನಿರೂಪಿತವಾಗಿ ಅಯೋಧ್ಯಾ ಪ್ರಕರಣಕ್ಕೆ ಮುನ್ನುಡಿಯನ್ನು ಹಾಕುವುದು ಸಂಘಪರಿವಾರಕ್ಕೆ ಅತ್ಯಗತ್ಯವಾಗಿದೆ. ಶಬರಿಮಲ ವಿಷಯದಲ್ಲಿ ಜನರ ಉನ್ಮಾದವನ್ನು ಬಡಿದೆಬ್ಬಿಸುವ (ಬಾಬ್ರಿ ಮಸೀದಿ ಪ್ರಕರಣದಲ್ಲೂ ಮಾಡಿದಂತೆ) ಸಂವಿಧಾನ ಬಾಹಿರ ತಂತ್ರಗಳಿಗೆ ಮೊರೆ ಹೋಗಿದ್ದರೆ ಬಾಬ್ರಿ ಮಸೀದಿ ವಿಷಯದಲ್ಲಿ ಶಾಸನವನ್ನು ತಂದು ರಾಮಮಂದಿರ ಕಟ್ಟಬೇಕೆಂಬ ಮೇಲ್ತೋರಿಕೆಯ ಸಾಂವಿಧಾನಿಕ ಮಾತುಗಳನ್ನಾಡುತ್ತಿದೆ. ಆದರೆ ಅದೂ ಸಹ ಸಾರದಲ್ಲಿ ಅಸಾಂವಿಧಾನಿಕವೇ ಆಗಿದೆ. ಏಕೆಂದರೆ ಅಂಥಾ ಒಂದು ಶಾಸನವು ಜಾರಿಯಾಗುವುದೇ ಆದಲ್ಲಿ ಅದು ಭಾರತವನ್ನು ಒಂದು ಏಕಧರ್ಮ ಪ್ರಭುತ್ವವೆಂದು ಘೋಷಿಸುವುದಕ್ಕೆ ಸರಿಸಮಾನವಾಗಿರುತ್ತದೆ. ರಾಜ್ಯಸಭೆಯಲ್ಲಿ ಬಿಜೆಪಿಗಿರುವ ಬಲಾಬಲ ಮತ್ತು ಇಂಥಾ ಒಂದು ನಡೆಯು ಎನ್ಡಿಎ ಮಿತ್ರಕೂಟದಲ್ಲೇ ತರಬಹುದಾದ ಅಸಮಾಧಾನದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡಾಗ ಅಂಥಾ ಒಂದು ಕ್ರಮಕ್ಕೆ ಸರ್ಕಾರ ಮುಂದಾಗಲಾರದು. ಆದರೆ ಬಿಜೆಪಿಯು ಆಟದ ನಿಯಮಗಳನ್ನು ಗೌರವಿಸುವ ಒಂದು ಬಲಪಂಥೀಯ ಸಂಪ್ರದಾಯಶರಣ ಪಕ್ಷವೇನಲ್ಲ; ಕೇವಲ ವಾಸ್ತವವನ್ನು ಕಾಣಲಾಗದವರು ಅಥವಾ ನರಸಿಂಹರಾವ್ ಅವರಂಥವರು ಮಾತ್ರ ಅವರ ಮೇಲ್ತೋರಿಕೆಯ ಬದ್ಧತೆಗೆ ಬೆಲೆ ನೀಡಬಲ್ಲರು. ಬಿಜೆಪಿಯು ಒಂದು ಪ್ರತಿಗಾಮಿ ಪಕ್ಷವಾಗಿದ್ದು ಸಂಸದೀಯ ಪ್ರಜಾತಂತ್ರಕ್ಕೆ ವ್ಯತಿರಿಕ್ತವಾಗಿರುವ ಹಿಂದೂ ರಾಷ್ಟ್ರವನ್ನು ನಿರ್ಮಿಸಬೇಕೆಂಬ ರಾಜಕೀಯ ಯೋಜನೆಯುಳ್ಳ ಸಂಘಟನೆಯೊಂದರಿಂದ ನಿಯಂತ್ರಿಸಲ್ಪಡುತ್ತದೆ.

ಹೀಗಾಗಿ ಮಂದಿರವನ್ನು ನಿರ್ಮಿಸಬೇಕೆಂಬ ಕಾನೂನು ಜಾರಿ ಮಾಡಿ ಬಿಡುವ ಉದ್ದೇಶದಿಂದಲೇ ಅಲ್ಲವಾದರೂ ಜನರಲ್ಲಿ ಉನ್ಮಾದವನ್ನು ಕೆರಳಿಸಿ ಸಂಘಟಿಸುವ ಉದ್ದೇಶದಿಂದಲಾದರೂ ಅಂಥಾ ಕ್ರಮಕ್ಕೆ ಮುಂದಾಗಬಹುದು. ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷವು ಶ್ರದ್ಧೆ ಮತ್ತು ನಂಬಿಕೆಗಳಿಗಿಂತ ಸಾಂವಿಧಾನಿಕ ಧರ್ಮ ನಿರಪೇಕ್ಷ ತತ್ವವನ್ನು ಎತ್ತಿ ಹಿಡಿಯಬೇಕಾದ ಪರೀಕ್ಷೆಯನ್ನು ಎದುರಿಸಬೇಕಿದೆ. ರಾಮನನ್ನು ದೇಶದ ಬಹುಸಂಖ್ಯಾತರು ದೇವರೆಂದು ಆರಾಧಿಸುವುದರಿಂದ ವಿರೋಧ ಪಕ್ಷಗಳು ಮಂದಿರ ನಿರ್ಮಾಣವನ್ನು ವಿರೋಧಿಸಬಾರದೆಂಬ ಹೇಳಿಕೆಯ ಮೂಲಕ ಈಗಾಗಲೇ ಭಾಗವತ್ ಅವರು ಈಗಾಗಲೇ ಮೊದಲ ಪ್ರಹಾರವನ್ನು ಮಾಡಿಯಾಗಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮತ್ತೊಬ್ಬರ ಶ್ರದ್ಧಾ ಕೇಂದ್ರವನ್ನು ನಾಶ ಮಾಡಿ ಜಾಗದಲ್ಲಿ ಮಂದಿರ ನಿರ್ಮಾಣವಾಗುವುದನ್ನು ಯಾವ ಒಳ್ಳೆಯ ಹಿಂದೂ ಕೂಡ ಬಯಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದರು. ಇಂಥಾ ನಿರುಪದ್ರವಿ ಹೇಳಿಕೆಯ ಬೆಂಬಲವಾಗಿ ನಿಲ್ಲಲೂ ಸಹ ಕಾಂಗ್ರೆಸ್ ಹಿಂದುಮುಂದೆ ನೋಡುತ್ತಿದೆ. ಹಿಂದೂತ್ವ ರಾಜಕಾರಣದ ಶಾಶ್ವತ ಯಾಜಮಾನ್ಯಕ್ಕೆ ದೀರ್ಘಕಾಲೀನ ವ್ಯೂಹತಂತ್ರಗಳನ್ನು ರೂಪಿಸಿರುವ ಸಂಘಪರಿವಾರದ ಹುನ್ನಾರಗಳನ್ನು ಕಾಂಗ್ರೆಸ್ ಅಯೋಧ್ಯಾ ವಿಷಯದಲ್ಲಿ ಮಾಡುತ್ತಿರುವಂತೆ ಅಂಥ ವಿದ್ಯಮಾನವನ್ನೇ ಗಮನಕ್ಕೆ ತೆಗೆದುಕೊಳ್ಳದಿರುವ ಮೂಲಕವೋ ಅಥವಾ ಶಬರಿಮಲ ವಿಷಯದಲ್ಲಿ ಮಾಡುತ್ತಿರುವಂತೆ ತಾನೇ ಸಂಘಪರಿವಾರದ ನಿಲುವನ್ನು ತೆಗೆದುಕೊಳ್ಳುವ ಮೂಲಕವೋ ಪ್ರತಿರೋಧಿಸಲು ಸಾಧ್ಯವಿಲ್ಲ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...

'ಸಸಿಕಾಂತ್ ಸೆಂಥಿಲ್ ಮೇಲಿನ ಸಂಘಟಿತ ದಾಳಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುವ ಫ್ಯಾಸಿಸ್ಟ್ ಷಡ್ಯಂತ್ರ'

ಮಂಗಳೂರು: 'ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯಕ್ಕೊಳಗಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿ ಭಾರತ ಆಡಳಿತ ಸೇವೆಯ ...