ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯವ ನೀರು ಪೂರೈಸಲು ಅಗತ್ಯ ಕ್ರಮ : ಸಚಿವ ಮಧು ಎಸ್ ಬಂಗಾರಪ್ಪ

Source: SO News | By Laxmi Tanaya | Published on 4th December 2023, 8:37 PM | State News | NewsVoir |

ಶಿವಮೊಗ್ಗ :  ಪ್ರಸಕ್ತ ಸಾಲಿನ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯದಿಂದ ತೀವ್ರ‌ತರದ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಸಂಭವವಿದ್ದು, ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

 ಅವರು  ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಳ್ಳಿ ತಾಲೂಕಿಗೆ  ಭೇಟಿ ನೀಡಿ ಅಧಿಕಾರಿಗಳೊಂದಿಗೆ ಬರ, ಶುದ್ಧ ಕುಡಿಯುವ ನೀರು ಮತ್ತು  ಜಾನುವಾರುಗಳಿಗೆ ಮೇವಿನ ಸಂಗ್ರಹ ಮುಂತಾದ ವಿಷಯಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿರುವುದು ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ ಎಂದ ಅವರು ಯಾವುದೇ ಸಂದರ್ಭದಲ್ಲಿಯೂ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.

 ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವುದು, ಕೆರೆ-ಕಟ್ಟೆ ಕಾಲುವೆಗಳಲ್ಲಿ ನೀರಿನ ಅಭಾವ ಉಂಟಾಗಿರುವುದರಿಂದ ಡಿಸೆಂಬರ್-ಜನವರಿ ಮಾಹೆಯಿಂದಲೇ ನೀರಿನ ಸಮಸ್ಯೆ ಎದುರಾಗುವ ಸಂಭವವಿದೆ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ. ಆಯಾ ತಾಲೂಕಿನ ತಹಶೀಲ್ದಾರರು ಕಾರ್ಯನಿರ್ವಾಹಕ ಅಧಿಕಾರಿಗಳು ಬಹು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಆದ್ಯತೆಯ ಮೇಲೆ ನೀರಿನ ಸೌಲಭ್ಯ ಒದಗಿಸುವಂತೆ ಸೂಚಿಸಿದ ಅವರು ಅಗತ್ಯವಿದ್ದಲ್ಲಿ ಖಾಸಗಿ ಬೋರ್ವೆಲ್‍ಗಳನ್ನು ವಶಕ್ಕೆ ಪಡೆದು ನೀರು ಸರಬರಾಜು ಮಾಡುವಂತೆ ಸಲಹೆ ನೀಡಿದರು.

 ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಮೇವಿನ ಕೊರತೆ ಇಲ್ಲದಿರುವುದನ್ನು ಗುರುತಿಸಲಾಗಿದೆ ಆದಾಗಿಯೂ ಮೇವಿನ ಕೊರತೆ ಕಂಡುಬಂದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾಗರ ತಾಲೂಕಿನ  10,000ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ  ಬೆಳೆ ಹಾನಿಗೊಳಗಾಗಿದ್ದು ಸುಮಾರು 11ಕೋಟಿ ಮೊತ್ತದ ಅಂದಾಜು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಹೊಸನಗರ ತಾಲೂಕಿನಲ್ಲಿ 5.5ಕೋಟಿ ಮೊತ್ತದ ಬೆಳೆ  ಹಾನಿಗೊಳಗಾಗಿದೆ. ಹಾಗೆಯೇ ತೀರ್ಥಹಳ್ಳಿ ತಾಲೂಕಿನಲ್ಲಿಯೂ 6.11 ಕೋಟಿ ಮೊತ್ತದ ಬೆಳೆ ನಾಶವಾಗಿರುವ ಅಂದಾಜು ಮಾಡಲಾಗಿದೆ  ಎಂಬ ಮಾಹಿತಿಯನ್ನು ಈಗಾಗಲೇ ಅಧಿಕಾರಿಗಳಿಂದ ಪಡೆದುಕೊಂಡಿದ್ದು ನಿಯಮಾನುಸಾರ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

 ಕೆಲವು ತಾಲೂಕುಗಳಲ್ಲಿ ಕಾಲುಸಂಕ, ಜಾನುವಾರುಗಳಿಗೆ ಕುಡಿಯುವ ನೀರಿನ ಬಾನಿ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ತೆರೆದ ಬಾವಿಗಳನ್ನು ಕೊರೆಸಲು ಬೇಡಿಕೆ ಇದ್ದು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೊಸನಗರ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಹಾಗೂ ತೀರ್ಥಹಳ್ಳಿ ತಾಲೂಕಿನ 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ಕುಡಿಯುವ ನೀರಿಗಾಗಿ ಬಳಿಸುವ ಬೋರ್ವೆಲ್‍ಗಳಲ್ಲಿ ಫ್ಲೋರೈಡ್ ಅಂಶ ಕಂಡುಬಂದಿದ್ದು ಗ್ರಾಮೀಣ ಜನರಿಗೆ ಪರ್ಯಾಯ ಕ್ರಮವಾಗಿ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

 ಗ್ರಾಮೀಣ ಪ್ರದೇಶದ ಜನರಿಗೆ ಕೃಷಿ ಚಟುವಟಿಕೆಗಳಿಲ್ಲದಿರುವುದರಿಂದ ಉದ್ಯೋಗದ ಸಮಸ್ಯೆ ಎದುರಾಗುವ ಸಂಭವವಿದೆ. ಆದ್ದರಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕೃಷಿಕರಿಗೆ ಹಾಗೂ ಆಸಕ್ತರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚು ಪ್ರಮಾಣದಲ್ಲಿ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ಕುಡಿಯುವ ನೀರಿನ ಪರಿಸ್ಥಿತಿ ಗಂಭೀರ ಸ್ವರೂಪದ್ದಾಗಿದ್ದಲ್ಲಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ವಿಶೇಷವಾಗಿ ತೀರ್ಥಹಳ್ಳಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಕಂಡುಬಂದಿರುವ ಅಡಿಕೆ ಕೊಳೆರೋಗ, ಎಲೆಚುಕ್ಕೆ ರೋಗದ ನಿಯಂತ್ರಣದ ಕುರಿತು ಈಗಾಗಲೇ ಕೃಷಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.

 ಕುಡಿಯುವ ನೀರಿನ ಪೂರೈಕೆ ಸಂಬಂಧ ಈವರೆಗೆ ಕೈಗೊಳ್ಳಲಾಗಿರುವ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು. ಕಳಪೆ ಎಂದು ಕಂಡುಬಂದ ಗುತ್ತಿಗೆದಾರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಗೋಶಾಲೆಗಳ ನಿರ್ವಹಣೆಗೆ ಅಗತ್ಯವಿರುವ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಪಶುವೈದ್ಯಾಧಿಕಾರಿಗಳಿಗೆ ಸೂಚಿಸಿದರು.

 ಈ ಎಲ್ಲಾ ಸಭೆಗಳಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Read These Next

ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು :     ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕಿಯಿಲ್ಲ, ಸಂವಿಧಾನದ  ವಿರುದ್ಧ ಇರುವವರನ್ನು ...

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳ್ಳಿಸಿದ್ದ ಎಲ್ಲ ಮುಸ್ಲಿಮ್ ವಿರೋಧಿ ಕಾನೂನುಗಳನ್ನು ರದ್ದು ಪಡಿಸುವಂತೆ ಆಗ್ರಹ

ಭಟ್ಕಳ: ಇಲ್ಲಿನ ಮುಸ್ಲಿಮರ ಸಾಮಾಜಿಕ ರಾಜಕೀಯ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನಿಯೋಗವೊಂದು ಬುಧವಾರ ...

ಕಾಂಗ್ರೆಸ್ ಸಮಾವೇಶ: ಮಂಗಳೂರು ಉತ್ತರದಿಂದ 150ಕ್ಕೂ ಅಧಿಕ ಬಸ್‌ಗಳಲ್ಲಿ ಆಗಮಿಸಿದ ಕಾರ್ಯಕರ್ತರು

ಅಡ್ಯಾರ್;ನಲ್ಲಿಂದು ಆಯೋಜಿ ಸಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾ ವೇಶಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಿಂದ ...

ಖರ್ಗೆ ಆತಂಕ; 'ಮೋದಿ ಮತ್ತೆ ಗೆದ್ದಲ್ಲಿ ಚುನಾವಣೆ ರದ್ದು; ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಯೇ ನಡೆಯದು ಎಂದು ಎಐಸಿಸಿ ...