ಉಡುಪಿ: ನಾಲ್ಕರ ಬರ್ಬರ ಹತ್ಯೆ; ತಾಯಿ, ಮೂವರು ಮಕ್ಕಳನ್ನು ಇರಿದು ಕೊಂದ ದುಷ್ಕರ್ಮಿ; ಓರ್ವ ಮಹಿಳೆಗೆ ಗಂಭೀರ ಗಾಯ

Source: Vb/S O | By I.G. Bhatkali | Published on 13th November 2023, 2:47 AM | Coastal News | State News |

ಉಡುಪಿ: ಹಾಡಹಗಲೇ ತಾಯಿ ಮತ್ತು ಮೂವರು ಮಕ್ಕಳನ್ನು ದುಷ್ಕರ್ಮಿಯೋರ್ವ ಬರ್ಬರವಾಗಿ ಹತ್ಯೆಗೈದ ಘಟನೆ ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ನೇಜಾರು-ಕೆಮ್ಮಣ್ಣು ರಸ್ತೆಯ ತೃಪ್ತಿ ಲೇಔಟ್‌ ಎಂಬಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ. ಈ ಭೀಕರ ಕೃತ್ಯಕ್ಕೆ ಇಡೀ ಕರಾವಳಿ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.

ನೇಜಾರು ತೃಪ್ತಿ ಲೇಔಟ್‌ ನೂರು ಮುಹಮ್ಮದ್ ಎಂಬವರ ಪತ್ನಿ ಹಸೀನಾ (48) ಹಾಗೂ ಅವರ ಪುತ್ರಿಯರಾದ ಆಫ್ನಾನ್ (23) ಮತ್ತು ಅಯ್ನಾಝ್ (21) ಹಾಗೂ ಪುತ್ರ ಅಸೀಮ್(13) ಕೊಲೆಯಾದವರು. ದುಷ್ಕರ್ಮಿಯಿಂದ ಇರಿತಕ್ಕೆ ಒಳಗಾಗಿ ಗಾಯಗೊಂಡಿರುವ ಹಸೀನಾರ ಅತ್ತೆ ಹಾಜಿರಾ(70) ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಸ್ಕ್ ಧರಿಸಿಕೊಂಡು ಆಟೊ ರಿಕ್ಷಾದಲ್ಲಿ ಬಂದ ದುಷ್ಕರ್ಮಿ ಎಲ್ಲರನ್ನು ಚೂರಿಯಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದಾನೆ. ಅಡುಗೆಕೋಣೆಯ ಸಮೀಪ ಹಸೀನಾ, ಬೆಡ್ ರೂಮಿನಲ್ಲಿ ಆಫ್ನಾನ್, ಬಾತ್ ರೂಮ್ ಬಳಿ ಅಯ್ನಾಝ್, ಹಾಲ್‌ನಲ್ಲಿ ಅಸೀಮ್ ಮೃತದೇಹವು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯೊಳಗೆ ಬೊಬ್ಬೆ ಕೇಳಿ ಅಲ್ಲೇ ಪಕ್ಕದಲ್ಲಿರುವ ಹಸೀನಾರ ಅಣ್ಣನ ಮಗಳು ಓಡಿ ಬಂದಿದ್ದು, ಈ ವೇಳೆ ದುಷ್ಕರ್ಮಿ ಅಲ್ಲಿಂದ ಪರಾರಿಯಾದನು ಎಂದು ತಿಳಿದುಬಂದಿದೆ.

ಸುಶಿಕ್ಷಿತ ಕುಟುಂಬ: ನೂರು ಮುಹಮ್ಮದ್ ಹೈಕಾಡಿ ಮೂಲದವರಾಗಿದ್ದರೆ, ಹಸೀನಾ ಹೂಡೆ ಸಮೀಪದ ಕೋಡಿ ಬೆಂಗ್ರೆಯವರು. ಇವರು ಸುಮಾರು 15 ವರ್ಷಗಳ ಹಿಂದೆ ನೇಜಾರು - ಕೆಮ್ಮಣ್ಣು ರಸ್ತೆಯ ತೃಪ್ತಿ ಲೇಔಟ್‌ನಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿದ್ದರು. ನೂರ್ ಮುಹಮ್ಮದ್ ಕಳೆದ 35 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಕಂಪೆನಿಯೊಂದರಲ್ಲಿ  ದುಡಿಯುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು.  ಇವರಲ್ಲಿ ಆಫ್ನಾನ್ ಮಂಗಳೂರಿನಲ್ಲಿ ಲಾಜಿಸ್ಟಿಕ್ ಆಗಿದ್ದು, ಅಯ್ನಾಝ್ ಮಂಗಳೂರು ಏರ್ ಇಂಡಿಯಾದಲ್ಲಿ ಗಗನ ಸಖಿಯಾಗಿದ್ದರು. ಅಸೀಮ್  ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದನು. ಇವರ ಹಿರಿಯ ಪುತ್ರ ಅಸದ್ (25) ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಯಲ್ಲಿ ಗ್ರೌಂಡ್  ಸ್ಟಾಫ್  ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಇಡೀ ಕುಟುಂಬ ತಂದೆಯೊಂದಿಗೆ ಸೌದಿಯಲ್ಲಿ ಕೆಲ ವರ್ಷಗಳ ಕಾಲ ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಟೊದಲ್ಲಿ ಬಂದಿದ್ದ ಹಂತಕ: ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯ ರಿಕ್ಷಾ ನಿಲ್ದಾಣದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ತೃಪ್ತಿ ಲೇಔಟ್‌ಗೆ ಆಟೊ ರಿಕ್ಷಾದಲ್ಲಿ ಬಂದ ಹಂತಕ, ಕೇವಲ 15 ನಿಮಿಷದಲ್ಲಿ ಕೊಲೆ ಕೃತ್ಯ ಎಸಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಕೃತ್ಯ ಎಸಗಿ ಕೆಮ್ಮಣ್ಣು- ನೇಜಾರು ರಸ್ತೆಗೆ ಬಂದ ಆತ, ದಾರಿಯಲ್ಲಿ ಹೋಗುವ ಬೈಕೊಂದನ್ನು ನಿಲ್ಲಿಸಿ ಅದರಲ್ಲಿ ಸಂತೆಕಟ್ಟೆಗೆ ತೆರಳಿದ್ದಾನೆ. ಅಲ್ಲಿ ರಿಕ್ಷಾದ ಮೂಲಕ ಆತ ಉಡುಪಿ ಕರಾವಳಿ ಬೈಪಾಸ್ ವರೆಗೆ ಬಂದು ಇಳಿದು ಹೋಗಿದ್ದಾನೆ. ಅಲ್ಲಿಂದ ಮೊದಲು ಉಡುಪಿ ಕಡೆಗೆ ಬಂದು ನಂತರ ರಾಷ್ಟ್ರೀಯ ಹೆದ್ದಾರಿ ಕಡೆ ತೆರಳಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಸ್ಕ್ ಧರಿಸಿದ್ದ ಹಂತಕ, ಬೆನ್ನ ಹಿಂದೆ ಬ್ಯಾಗ್ ಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ ಕಾರಣಕ್ಕೆ ಈ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ. ಈ ನಡುವೆ ಹಣಕಾಸಿನ ವಿಚಾರ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಪೊಲೀಸ್‌ ತನಿಖೆಯಿಂದಷ್ಟೇ ನೈಜ ಕಾರಣ ಬಯಲಿಗೆ ಬರಬೇಕಾಗಿದೆ.

ಘಟನೆ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿಯಷ್ಟೇ ಮನೆಗೆ ಬಂದಿದ್ದರು:
ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಆಫ್ನಾನ್ ಮತ್ತು ಅಯ್ನಾಝ್ ಒಂದೇ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ರಜೆಯ ಹಿನ್ನೆಲೆಯಲ್ಲಿ ಇವರು ಶನಿವಾರ ರಾತ್ರಿ ಮಂಗಳೂರಿನಿಂದ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಅಯ್ನಾಝ್ ಕೆಲ ತಿಂಗಳ ಹಿಂದೆಯಷ್ಟೇ ಗಗನಸಖಿ ಕೆಲಸಕ್ಕೆ ಸೇರಿದ್ದರು ಎಂದು ಮೂಲಗಳು ತಿಳಿಸಿವೆ.

ಎಸ್ಪಿಯಿಂದ ಪರಿಶೀಲನೆ: ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು, ಮಂಗಳೂರು ಮತ್ತು ಮಣಿಪಾಲ ಕೆಎಂಸಿಯ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಆಗಮಿಸಿ ತನಿಖೆ ನಡೆಸಿದೆ. ಸ್ಥಳದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ಕೆ.ಪಿ.ದಿನಕರ್, ಪ್ರಕರಣದ ತನಿಖಾಧಿಕಾರಿ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಮೊದಲಾದವರು ಹಾಜರಿದ್ದರು.

ಮನೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್‌ ಕಾಂಚನ್, ಉದ್ಯಮಿ ಆನಂದ ಸಿ.ಕುಂದರ್‌ ಮೊದಲಾದವರು ಭೇಟಿ ನೀಡಿದರು.

ಸುದೀರ್ಘ ಮಹಜರು: ನಾಲ್ವರ ಹತ್ಯೆಯ ಹಿನ್ನೆಲೆಯಲ್ಲಿ ಪೊಲೀಸರು ಬೆಳಗ್ಗೆ 9:30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಸಂಜೆ 6:15ರವರೆಗೆ ಸುದೀರ್ಘ ಅವಧಿಯ ಮಹಜರು ಕಾರ್ಯ ನಡೆಸಿದರು. ಬಳಿಕ ನಾಲ್ಕು ಮೃತದೇಹಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಿ ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಬೆಂಗಳೂರಿನಲ್ಲಿದ್ದ ಮಗ ಅಸದ್ ಮಣಿಪಾಲ ಆಸ್ಪತ್ರೆಗೆ ಆಗಮಿಸಿದ್ದಾರೆ. ನೂರು ಮುಹಮ್ಮದ್ ಸೌದಿಯಿಂದ ನಾಳೆ ಬೆಳಗ್ಗೆ ಉಡುಪಿಗೆ ಆಗಮಿಸಲಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ತನಿಖೆಗೆ 5 ತಂಡ ರಚನೆ; ಎಸ್ಪಿ
ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಆರೋಪಿಯನ್ನು ಪತ್ತೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದರು. ಈ ಕೃತ್ಯವು ಕಳ್ಳತನದ ಉದ್ದೇಶದಿಂದ ನಡೆದಂತೆ ಕಾಣುತ್ತಿಲ್ಲ. ಪ್ರಾಥಮಿಕ ತನಿಖೆಯ ವೇಳೆ ಮನೆಯಿಂದ ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳವಾಗಿರುವುದು ಕಂಡುಬಂದಿಲ್ಲ. ದುಷ್ಕರ್ಮಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.

ಹಂತಕ ಕನ್ನಡ ಮಾತನಾಡುತ್ತಿದ್ದ; ರಿಕ್ಷಾ ಚಾಲಕ ಮಾಹಿತಿ:
ಬೆಳಗ್ಗೆ 8:30ರಿಂದ 9 ಗಂಟೆ ಮಧ್ಯಾವಧಿಯಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ರಿಕ್ಷಾ ನಿಲ್ದಾಣಕ್ಕೆ ಬಂದು ತೃಪ್ತಿ ಲೇಔಟ್‌ ಬಿಡುವಂತೆ ತಿಳಿಸಿದ.  ಅದರಂತೆ ಆತನನ್ನು ರಿಕ್ಷಾದಲ್ಲಿ ಬಾಡಿಗೆಗೆ ಕರೆದು ಹೋಗಿದ್ದೆ. ಅಲ್ಲಿ ದಾರಿ ತಪ್ಪಿ ನಾನು ಸ್ವಲ್ಪ ಮುಂದೆ ಹೋದೆ. ಆಗ ಆ ವ್ಯಕ್ತಿಯೇ ದಾರಿಯನ್ನು ತೋರಿಸಿ ಮನೆಯ ಎದುರೇ ಬಿಡುವಂತೆ ಹೇಳಿ ನನ್ನನ್ನು ಕಳುಹಿಸಿದ ಎಂದು ಸಂತೆಕಟ್ಟೆಯ ರಿಕ್ಷಾ ಚಾಲಕ ಶ್ಯಾಮ್ ನೇಜಾರು ಮಾಹಿತಿ ನೀಡಿದ್ದಾರೆ.

ಸುಮಾರು 20 ನಿಮಿಷಗಳ ಬಳಿಕ ಮತ್ತೆ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ ಅದೇ ವ್ಯಕ್ತಿ, ಸರತಿ ಸಾಲಿನಲ್ಲಿ ನಿಂತ ಎದುರಿನ ರಿಕ್ಷಾದಲ್ಲಿ ಕುಳಿತು ಉಡುಪಿಗೆ ಬಿಡುವಂತೆ ತಿಳಿಸಿದ್ದನು. ಆಗ ನಾನು ಆತನ ಬಳಿ ಹೋಗಿ 'ನೀವು ಮೊದಲೇ ಹೇಳುತ್ತಿದ್ದರೆ ನಾನು ಅಲ್ಲಿಯೇ ಕಾಯುತ್ತಿದ್ದೆ' ಎಂದು ತಿಳಿಸಿದೆ. ಅದಕ್ಕೆ ಆತ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ಇನ್ನೊಬ್ಬರ ರಿಕ್ಷಾದಲ್ಲಿ ಉಡುಪಿ ಕಡೆ ಹೋಗಿದ್ದಾನೆ' ಎಂದು ಶ್ಯಾಮ್ ತಿಳಿಸಿದರು. ಇನ್ನೊಬ್ಬರ ರಿಕ್ಷಾದಲ್ಲಿ ಉಡುಪಿಗೆ ಹೋಗುವಾಗ ಆತ ತುಂಬಾ ವೇಗವಾಗಿ ಹೋಗುವಂತೆಯೂ ತಿಳಿಸಿದ್ದಾನೆ. ತುಂಬಾ ಬಿಳಿಯಾಗಿದ್ದ ಆತ, ಮುಖಕ್ಕೆ ಮಾಸ್ಕ್ ಹಾಕಿದ್ದನು. ಮೆಂಗಳೂರು ಶೈಲಿಯಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದನು. ಬೆನ್ನಿನಲ್ಲಿ ಬ್ಯಾಗ್ ಇತ್ತು. ಆತ ಧರಿಸಿದ್ದ ಶರ್ಟ್‌ನಿಂದ ನಿಲ್ದಾಣದಲ್ಲಿ ಆತನನ್ನು ಗುರುತು ಹಿಡಿದೆ ಎಂದು ಅವರು ಹೇಳಿದರು.

ಶೌಚಾಲಯದಲ್ಲಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡ ಹಾಜಿರಾ!
ನಾಲ್ವರ ಬರ್ಬರ ಹತ್ಯೆ ಸಂದರ್ಭ ಮನೆಯಲ್ಲಿದ್ದ ಮೃತ ಹಸೀನಾರ ಅತ್ತೆ 70 ವರ್ಷದ ಹಾಜಿರಾ ಹಂತಕನ ಆಕ್ರಮಣದಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ತೆರಳಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಹಂತಕನ ಜೊತೆ ಕೊಲೆಯಾದವರೆಲ್ಲ ಸಾಕಷ್ಟು ಹೋರಾಡಿರುವ ಕುರುಹುಗಳು ಕಂಡುಬಂದಿವೆ. ಇದೇ ವೇಳೆ ಆತ ಹಾಜಿರಾ ಅವರ ಹೊಟ್ಟೆಯ ಭಾಗಕ್ಕೂ ಹರಿತವಾದ ಆಯುಧದಿಂದ ಇರಿದಿದ್ದನು. ಗಾಯಗೊಂಡ ಅವರು ದುಷ್ಕರ್ಮಿಯ ಕೈಯಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದ ವೇಳೆ ಒಳಗಡೆಯಿಂದ ಬಾಗಿಲು ಮುಚ್ಚಿರುವ ಶೌಚಾಲಯವನ್ನು ಗಮನಿಸಿದ್ದಾರೆ. ಈ ವೇಳೆ ಬಾಗಿಲು ತೆರೆಯುವಂತೆ ಪೊಲೀಸರು ಮನವಿ ಮಾಡಿದಾಗ ಹೆದರಿದ್ದ ಹಾಜಿರಾ ಬಾಗಿಲು ತೆರೆಯಲು ಧೈರ್ಯ ತೋರಲಿಲ್ಲ. ಕೊನೆಗೆ ಬಾಗಿಲು ಮುರಿದು ಹಾಜಿರಾರನ್ನು ರಕ್ಷಿಸಿದ ಪೊಲೀಸರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೊಟ್ಟೆಯ ಎಡಭಾಗಕ್ಕೆ ಇರಿತಕ್ಕೊಳಗಾಗಿರುವ ಹಾಜಿರಾ ತೀವ್ರವಾಗಿ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೈಕಲ್‌ನಲ್ಲಿ ಆಡುತ್ತಿದ್ದ ಬಾಲಕ!
ಶಾಲೆಗೆ ರಜೆಯಿದ್ದ ಕಾರಣ ಅಸೀಮ್ ಇಂದು ಬೆಳಗ್ಗೆ ಎದ್ದು ಮನೆಯ ಎದುರಿನ ರಸ್ತೆಯಲ್ಲಿ ತನ್ನ ನೆರೆಮನೆಯ ಸಂಬಂಧಿಕರ ಮಕ್ಕಳು ಹಾಗೂ ಸ್ನೇಹಿತರ ಜೊತೆ ಸೈಕಲ್‌ನಲ್ಲಿ ಆಟ ಆಡುತ್ತಿದ್ದನು. ಈ ವೇಳೆ ಮನೆಯೊಳಗೆ ಬೊಬ್ಬೆ ಕೇಳಿತ್ತೆನ್ನಲಾಗಿದೆ. ಆಗ ಆತ ಮನೆಯಂಗಳದಲ್ಲೇ ಸೈಕಲ್ ತೊರೆದು ಒಳಗೆ ಓಡಿದ್ದಾನೆ ಎಂದು ತಿಳಿದು ಬಂದಿದೆ. ಒಳಗೆ ಮೂವರನ್ನು ಹತ್ಯೆಗೈದು ಬರುತ್ತಿದ್ದ ಹಂತಕ, ಹಾಲ್‌ನಲ್ಲಿ ಒಳಗೆ ಬರುತ್ತಿದ್ದ ಆಸೀಮ್‌ನನ್ನು ಹಿಡಿದು, ಎದೆ ಹಾಗೂ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...