ಧಾರಾಕಾರ ಮಳೆಗೆ ಪಂಪ್‌ವೆಲ್ ಜಲಾವೃತ ಮಂಗಳೂರಿನಲ್ಲಿ ಕೃತಕ ನೆರೆ: ಟ್ರಾಫಿಕ್ ಜಾಮ್, ಸಂಚಾರ ಅಸ್ತವ್ಯಸ್ತ

Source: Vb | By I.G. Bhatkali | Published on 4th July 2023, 4:24 PM | Coastal News | State News |

ಮಂಗಳೂರು: ದ.ಕ., ಉಡುಪಿ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಮುಂಗಾರು ಬಿರುಸುಗೊಂಡಿದೆ. ಮಂಗಳೂರು ನಗರದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪಂಪ್‌ವೆಲ್ ಪ್ರದೇಶದ ಸುತ್ತಮುತ್ತ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು. ಮಾತ್ರವಲ್ಲದೆ, ನಗರದೆಲ್ಲೆಡೆ ಕೆಲ ತಾಸು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ಜನರು ಪರದಾಡಿದರು.

ರವಿವಾರ ತಡರಾತ್ರಿಯಿಂದ ನಗರದಲ್ಲಿ ಮಳೆ ಬಿರುಸು ಪಡೆದಿದ್ದು, ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಸಾಧಾರಣ ಮಳೆಯಾಗಿದೆ. ಸಂಜೆ 3 ಗಂಟೆಯಿಂದ ಸುಮಾರು ಒಂದು ತಾಸಿಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಗೆ ಪಂಪ್ ವೆಲ್‌ನಲ್ಲಿ ಸುಮಾರು ಮೂರಾಲ್ಕು ಅಡಿಗಳಷ್ಟು ಎತ್ತರದಲ್ಲಿ ನೀರು ನಿಂತು ಸುಗಮ ಸಂಚಾರಕ್ಕೆ ತಡೆಯಾಯಿತು. ನೀರು ತುಂಬಿದ ಕಾರಣ ಪಂಪ್ ವೆಲ್‌ನಲ್ಲಿ ಕೆಲಹೊತ್ತು ವಾಹನ ಹಾಗೂ ಜನ ಸಂಚಾರವನ್ನು ನಿರ್ಬಂಧಿಸಲಾಯಿತು. ಪಂಪ್ ವೆಲ್ ಮಾತ್ರವಲ್ಲದೆ, ಉಜೋಡಿ, ಕುದ್ರೋಳಿ, ಪಡೀಲ್ ಸೇತುವೆ, ಕೊಟ್ಟಾರ ಚೌಕಿ, ಬಂದರು, ಕೊಡಿಯಾಲ್‌ಬೈಲ್ ಮೊದಲಾದ ತಗ್ಗು ಪ್ರದೇಶಗಳು ಜಲಾವೃತಗೊಂಡವು.

ಪಂಪ್‌ ವೆಲ್, ಮಂಗಳೂರು ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಕಾರಣ ಇಲ್ಲಿ ಪಡೀಲ್, ಉಳ್ಳಾಲ, ನಂತೂರು ಹಾಗೂ ನಗರದ ಒಳಭಾಗಗಳಿಂದಲೂ ಪಂಪ್‌ವೆಲ್ ಮೂಲಕ ವಾಹನಗಳ ಸಂಚಾರ ನಿರಂತರವಾಗಿರುತ್ತದೆ. ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಪಂಪ್‌ವೆಲ್‌ ಮಹಾವೀರ ವೃತ್ತ ಜಲಾವೃತಗೊಂಡ ಪರಿಣಾಮ ನಗರದ ಜ್ಯೋತಿ, ನಂತೂರು, ಕೆಪಿಟಿ, ಕಂಕನಾಡಿ, ವೆಲೆನ್ಸಿಯಾ, ಜಪ್ಪಿನಮೊಗರು ಸೇರಿದಂತೆ ನಗರದ ಪ್ರಮುಖ ಜಂಕ್ಷನ್ ಹಾಗೂ ಹೆದ್ದಾರಿಯಲ್ಲೂ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.

ಆ್ಯಂಬುಲೆನ್ಸ್‌ಗಳ ಪರದಾಟ ಕೃತಕ ನೆರೆಯಿಂದಾಗಿ ಪಂಪ್‌ವೆಲ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಆಗಮಿಸುವ ಆ್ಯಂಬುಲೆನ್ಸ್ ಗಳು, ಶಾಲಾ ಕಾಲೇಜು ಮಕ್ಕಳು ಹಾಗೂ ಕಚೇರಿಗಳಿಂದ ಮನೆಗಳಿಗೆ ತೆರಳುವ ಸಾರ್ವಜನಿಕರು ಪರದಾಡಬೇಕಾಯಿತು. ಹಠಾತ್ತನೆ ಸೃಷ್ಟಿಯಾದ ಕೃತಕ ನೆರೆಯಿಂದ ಪಂಪ್‌ವೆಲ್‌ನಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳಿಗೆ ನೀರು ನುಗ್ಗಿ ಹಾನಿಗೀಡಾಗಿದ್ದು, ಸ್ಥಳೀಯರ ನೆರವಿನಿಂದ ವಾಹನಗಳನ್ನು ತೆರವುಗೊಳಿಸುವ ಕಾರ್ಯ ನಡೆಸಲಾಯಿತು.

ಒಳಚರಂಡಿ ನೀರು ರಸ್ತೆಯಲ್ಲಿ! ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಒಂದೆಡೆಯಾದರೆ, ನಿಷೇಧದ ಹೊರತಾಗಿಯೂ ಅಲ್ಲಲ್ಲಿ ರಸ್ತೆಗಳ ಅಗೆತ, ಅಸಮರ್ಪಕ ಸ್ಟಾರ್ಟ್ ಸಿಟಿ ಕಾಮಗಾರಿಗಳು ನಗರದಲ್ಲಿ ಕೃತಕ ನೆರೆಗೆ ಕಾರಣವಾಗುತ್ತಿದೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರಿನ ಬಕೆ ಕೊಳಚೆ ನೀರು ಕೂಡಾ ರಸ್ತೆಗಳಲ್ಲಿ ಹರಿಯುತ್ತಿದೆ.

ಪಡೀಲ್ ಅಂಡರ್‌ ಪಾಸ್, ಕೊಟ್ಟಾರಚೌಕಿ ತಗ್ಗು ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದರೆ, ನಾಗುರಿ, ಜಪ್ಪಿನಮೊಗರಿನಲ್ಲಿ ಕೆಲವು ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ಅಳತೆಯಲ್ಲಿ ಕೂಡ ಕೆಲವು ಅಂಗಡಿಗಳು ಜಲಾವೃತಗೊಂಡವು. ಪಡೀಲ್ ಮೇಘ ನಗರದಲ್ಲಿ ಹಾಗೂ ಜನವಿನಲ್ಲೂ ಮನೆಯೊಳಗೆ ನೀರು ಹರಿದಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...