ಲೋಕಸಭಾ ಚುನಾವಣೆ; ರಾಜ್ಯದಲ್ಲಿ 2 ಹಂತಗಳಲ್ಲಿ ಮತದಾನ

Source: Vb | By I.G. Bhatkali | Published on 17th March 2024, 7:10 AM | State News |

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಪ್ರಿಲ್ 26 ಹಾಗೂ ಮೇ 7ರಂದು ತಲಾ 14 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಶನಿವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯುವ ಮತದಾರರು(18-19 ವೈಸ್ಸಿನವರು)-11,24,622, 85 ವರ್ಷಕ್ಕಿಂತ ಹಿರಿಯ ಮತದಾರರು-5,70,168, ದಿವ್ಯಾಂಗ ಮತದಾರರು-6,12,154, ಬುಡಕಟ್ಟು ಜನಾಂಗದ ಮತದಾರರು-38,794, ಅತಿ ಹೆಚ್ಚು ಮತದಾರರು ಇರುವ ಲೋಕಸಭಾ ಲೋಕಸಭಾ ಕ್ಷೇತ್ರ ಬೆಂಗಳೂರು ಉತ್ತರ (31,74,098 ಮತದಾರರು), ಅತಿ ಕಡಿಮೆ ಮತದಾರರು ಇರುವ ಲೋಕಸಭಾ ಕ್ಷೇತ್ರ ಉಡುಪಿ-ಚಿಕ್ಕಮಗಳೂರು(15,72,958 ಮತದಾರರು) ಎಂದು ತಿಳಿಸಿದರು. ಅತಿ ಹೆಚ್ಚು ಮತದಾರರು ಇರುವ ವಿಧಾನಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ(7,33,313 ಮತದಾರರು), ಅತಿ ಕಡಿಮೆ ಮತದಾರರು ಇರುವ ವಿಧಾನಸಭಾ ಕ್ಷೇತ್ರ ಶೃಂಗೇರಿ(1,68,084 ಮತದಾರರು) ಎಂದು ಅವರು ತಿಳಿಸಿದರು. ಒಟ್ಟು 58,834 ಮತಗಟ್ಟೆಗಳಿವೆ. ಈ ಪೈಕಿ ನಗರ ಪ್ರದೇಶದಲ್ಲಿ 21,595 ಹಾಗೂ ಗ್ರಾಮೀಣ ಪ್ರದೇಶದಲ್ಲಿ 37,239 ಮತಗಟ್ಟೆಗಳಿವೆ.

ನಾಮಪತ್ರ ಸಲ್ಲಿಕೆಯ ಕೊನೆಯ 10 ದಿನದ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಇದೇ ಮಾರ್ಚ್ ತಿಂಗಳೊಳಗೆ 18 ವರ್ಷ ತುಂಬುವವರಾಗಿದ್ದರೆ ಅಂತಹವರು ಅರ್ಜಿ ನಮೂನೆ 8 ಅನ್ನು ಭರ್ತಿ ಮಾಡಿ ತಮ್ಮ ಹೆಸರು ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ. ಕಳೆದ ಬಾರಿ ಬಿಬಿಎಂಪಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಅಂತಹ ಮತಗಟ್ಟೆ ಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.

ಮನೋಜ್ ಕುಮಾರ್ ಮೀನಾ, ಮುಖ್ಯ ಚುನಾವಣಾಧಿಕಾರಿ

ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2,911 ಹಾಗೂ ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 1,842 ಮತಟ್ಟೆಗಳಿವೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

28 ಮಂದಿ ಚುನಾವಣಾಧಿಕಾರಿಗಳು, 259 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 1,10,946 ಬ್ಯಾಲೆಟ್ ಯೂನಿಟ್, 77,667 ಕಂಟ್ರೋಲ್ ಯೂನಿಟ್ ಹಾಗೂ 82,575 ವಿವಿ ಪ್ಯಾಟ್‌ಗಳನ್ನು ಸಿದ್ಧವಾಗಿರಿಸಿ ಕೊಳ್ಳಲಾಗಿದೆ. 2,357 ಕ್ಷಿಪತ್ರ ಪಡೆಗಳು, 2,669 ಸ್ಥಿರ ಕಣ್ಣಾವಲು ತಂಡಗಳು, 647 ವೀಡಿಯೊ ಕಣ್ಣಾವಲು ತಂಡಗಳು, 258 ಲೆಕ್ಕಪರಿಶೋಧಕ ತಂಡಗಳು ಹಾಗೂ 257 ವೀಡಿಯೊ ವೀಕ್ಷಣೆ ತಂಡಗಳು ಸಿದ್ದವಾಗಿವೆ ಎಂದು ಅವರು ಹೇಳಿದರು.

58,834 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಈ ಪೈಕಿ 1,120 ಮತಗಟ್ಟೆಗಳನ್ನು ಮಹಿಳೆಯರ ತಂಡಗಳು ನಿರ್ವಹಿಸಲಿವೆ. 224 ಮತಗಟ್ಟೆಗಳನ್ನು ದಿವ್ಯಾಂಗರು ನಿರ್ವಹಿಸಲಿದ್ದಾರೆ. 224 ಮತಗಟ್ಟೆಗಳನ್ನು ಯುವಕರು ನಿರ್ವಹಿಸಲಿದ್ದಾರೆ. 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 200 ವಿಷಯಾಧಾರಿತ ಮತಗಟ್ಟೆಗಳು ಇರಲಿವೆ. ಒಟ್ಟು 1,808 ಮಾದರಿ ಮತಗಟ್ಟೆಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದರು.

ಗಡಿ ಚೆಕ್‌ಪೋಸ್ಟ್: ನಮ್ಮ ರಾಜ್ಯಕ್ಕೆ ಹೊಂದಿ ಕೊಂಡಿರುವ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಂಬಂಧಿಸಿದಂತೆ ಅಂತರ್‌ರಾಜ್ಯ ಗಡಿ ಚೆಕ್ ಪೋಸ್ಟ್‌ಗಳಿವೆ. ಇದರಲ್ಲಿ ಪೊಲೀಸ್ ಇಲಾಖೆಯ 172 ಹಾಗೂ ಅಬಕಾರಿ ಇಲಾಖೆಯ 40 ಚೆಕ್ ಪೋಸ್ಟ್‌ಗಳಿವೆ ಎಂದು ಮನೋಜ್ ಕುಮಾ‌ರ್ ಮೀನಾ ತಿಳಿಸಿದರು.

ರಾಯಭಾರಿಗಳು: ಕ್ರಿಕೆಟಿಗ ರಾಹುಲ್ ದ್ರಾವಿಡ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಾಗೂ ಪ್ಯಾರಾ ಒಲಿಂಪಿಯನ್ ಕ್ರೀಡಾಪಟು ಗಿರೀಶ್ ಗೌಡ ಅವರನ್ನು ರಾಜ್ಯ ಚುನಾವಣಾ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದರು.

ಮತದಾರರ ಅನುಕೂಲಕ್ಕಾಗಿ ವೋಟರ್ ಹೆಲ್ಸ್ ಲೈನ್ ಅಪ್ಲಿಕೇಷನ್, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿ ನೀಡಲು ಸಿವಿಜಿಲ್ ಅಪ್ಲಿಕೇಷನ್, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸುವಿಧಾ ಆ್ಯಪ್, ದಿವ್ಯಾಂಗರಿಗಾಗಿ ಸಕ್ಷಮ್ ಆ್ಯಪ್, ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಕೆವೈಸಿ ಆ್ಯಪ್, ಮತದಾನದ ಶೇಕಡಾವಾರು ಪ್ರಮಾಣ ಪ್ರದರ್ಶಿಸಲು ವೋಟ‌ರ್ ಟರ್ನ್‌ಔಟ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...