ಕೋವಿಡ್-19 : ಕಟ್ಟುನಿಟ್ಟಿನ ಬಂದೋಬಸ್ತ್ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪ್ರಧಾನಿ ಸಲಹೆ

Source: sonews | By Staff Correspondent | Published on 27th March 2020, 7:30 PM | State News |

ಬೆಂಗಳೂರು :  ಕೋವಿಡ್-19 ರ ಸೋಂಕು ವ್ಯಾಪಿಸದಂತೆ ಕಡಿವಾಣ ಹಾಕಲು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಸ್ಥಬ್ದಗೊಂಡಿದೆ. ಆದರೆ, ಕರ್ನಾಟಕದ ಕೆಲವೆಡೆಗಳಲ್ಲಿ ಮಾತ್ರ ಜನರ ಓಡಾಟ ಎಂದಿನಂತೆ ಕಾಣಿಸಿಕೊಂಡಿದೆ. ಈ ಬಗ್ಗೆ ಗಮನಹರಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಶುಕ್ರವಾರ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಿ ಸಲಹೆ ಇತ್ತರು.

ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಧಾನ ಸೌಧದ ಸಂಪುಟ ಸಭಾಂಗಣದ ಬದಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮ್ಮೇಳನ ಸಭಾಂಗಣದಲ್ಲಿ ಸಂಪುಟ ಸಭೆಯನ್ನು ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ಮುಖ್ಯಮಂತ್ರಿಯವರೇ ಪ್ರಕಟಿಸಿದರು.
 

ಗಾಬರಿ ಬೇಡ ! : ರಾಜ್ಯದಲ್ಲಿ ಕೋವಿಡ್-19 ರ ಪೂರಕ ಚಿಕಿತ್ಸೆಗೆ ಅಗತ್ಯವಿರುವ ಯಾವುದೇ ಔಷಧಿಗಳ ಕೊರತೆ ಇಲ್ಲ. ಕೋವಿಡ್-19 ಸೋಂಕು ಸಕಾರಾತ್ಮಕ ಎಂದು ದೃಢಪಟ್ಟವರೂ ಕೂಡಾ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆ ಪಡೆದ ನಂತರ ಶೇಕಡಾ 98 ರಷ್ಟು ಮಂದಿ ಬದುಕುಳಿದಿದ್ದಾರೆ. ಆದರೆ, ಜನಾರೋಗ್ಯವನ್ನು ಯಾರೂ ನಿರ್ಲಕ್ಷಿಸಬಾರದು. ಏಪ್ರಿಲ್ 14 ರವರೆಗೆ ಎಲ್ಲರೂ ಮನೆಯಲ್ಲೇ ಇದ್ದು ಈ ಸೋಂಕು ಹರಡದಂತೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
 

ಉಚಿತ ಆಹಾರ ವಿತರಣೆ: ಲಾಕ್‍ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಯಾರೂ ಅನ್ನವಿಲ್ಲದೆ ನರಳಾಡಬಾರದು ಎಂಬುದು ಸರ್ಕಾರದ ಸದಾಶಯ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‍ಗಳಲ್ಲಿ ಬಡವರಿಗೆ ಪೊಟ್ಟಣಗಳ ಮೂಲಕ ಆಹಾರವನ್ನು ವಿತರಿಸಲು ಕ್ರಮ ವಹಿಸಲಾಗಿದೆ ಅಲ್ಲದೆ, ಅಗತ್ಯ ವಸ್ತುಗಳ ಸಾಗಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ರೈತರ ಉತ್ಪನ್ನಗಳು ಗೋದಾಮಿಗೆ, ಗೋದಾಮಿನಿಂದ ಮಾರುಕಟ್ಟೆಗೆ, ಮಾರುಕಟ್ಟೆಯಿಂದ ಚಿಲ್ಲರೆ ಅಂಗಡಿಗಳಿಗೆ ಸುಗಮ ಸಾಗಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.

ಸುಲಿಗೆಕೋರರಿಗೆ ಎಚ್ಚರಿಕೆ: ಆಹಾರ ಧಾನ್ಯಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಠಿಸಿ ದುಬಾರಿ ವೆಚ್ಚದಲ್ಲಿ ಮಾರಾಟ ಮಾಡಿ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಳ್ಳುವ ಸುಲಿಗೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಎಚ್ಚರಿಸಿದರು.

ಮುಸಲ್ಮಾನ ಮುಖಂಡರಿಗೆ ಕೃತಜ್ಞತೆ: ಕಂದಾಯ ಸಚಿವ ಆರ್ ಅಶೋಕ್ ಅವರು ಮುಸಲ್ಮಾನ ಮುಖಂಡರ ಜೊತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಸಮ್ಮತಿಸಿ ಸಾಮಾಜಿಕ ಬದ್ಧತೆ ಪ್ರದರ್ಶಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಮನವಿಗೆ ಓಗೊಟ್ಟು ಸ್ಪಂದಿಸಿದ ಮುಸಲ್ಮಾನ ಮುಖಂಡರಿಗೆ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿದ್ದಾರೆ.
 

ಬಡ್ಡಿ ಮನ್ನಾ: ರೈತರ ಬೆಳೆ ಸಾಲ, ಟ್ರಾಕ್ಟರ್ ಸಾಲ, ಟಿಲ್ಲರ್ ಸಾಲ ಹೀಗೆ ಪ್ರಸಕ್ತ ಸಾಲಿನ ಮಾರ್ಚ್ 31 ರ ವರೆಗಿನ ಸುಸ್ತಿ ಬಡ್ಡಿಯ ಮನ್ನಾ ಅವಧಿಯನ್ನು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಸಕಾಲಿಕ ನೆರವು ಕಲ್ಪಿಸಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡುವಂತೆ ಉದ್ಯಮಿಗಳಲ್ಲಿ ಮನವಿ ಮಾಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Read These Next

ಕಲಘಟಗಿ ತಾಲೂಕಿನ 28 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ

ಧಾರವಾಡ : ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಕಲಘಟಗಿ ತಾಲೂಕಿನ 28 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ...

ಜಿಲ್ಲೆಯ ಅಭಿವೃದ್ಧಿಗೆ ಆಧ್ಯತೆ ; ಜಲಧಾರೆ ಯೋಜನೆಯಡಿ ಜಿಲ್ಲೆಯ ಪ್ರತಿ ಗ್ರಾಮದ ಪ್ರತಿ ಮನೆಗೆ ಮಲಪ್ರಭಾ ಕುಡಿಯುವ ನೀರು ಸರಬರಾಜು : ಜಗದೀಶ ಶೆಟ್ಟರ್

ಧಾರವಾಡ : ಭಾರತ ಸರ್ಕಾರದ ಜಲಜೀವನ ಮಿಷನ್ ಯೋಜನೆಯ ಸಹಕಾರದಲ್ಲಿ ರಾಜ್ಯಸರ್ಕಾರವು ಜಲಧಾರೆ ಯೋಜನೆ ಮೂಲಕ ಧಾರವಾಡ ಜಿಲ್ಲೆಯ ಪ್ರತಿ ...