ವಿಜಯೇಂದ್ರ ನೇಮಕದ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

Source: Vb | By I.G. Bhatkali | Published on 12th November 2023, 11:37 PM | State News |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ, ಇದೇ ಮೊದಲ ಬಾರಿಗೆ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ರಾಜಾಧ್ಯಕ್ಷರಾಗಿ ಪಕ್ಷದ ವರಿಷ್ಠರು ಘೋಷಿಸಿದ ಬೆನ್ನಿಗೇ ರಾಜ್ಯ ಬಿಜೆಪಿಯೊಳಗೆ ಅಸಮಾಧಾನ ಭುಗಿಲೆದ್ದಿದೆ.

ಈಶ್ವರಪ್ಪ, ಸಿ.ಟಿ. ರವಿ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಈ ಆಯ್ಕೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ಶಾಸಕ ಅರವಿಂದ ಬೆಲ್ಲದ್ ಮೊದಲಾದವರು ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಗಳಾಗಿದ್ದರು. ಇದರ ಜೊತೆಗೆ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಪ್ರಬಲ ಆಕಾಂಕ್ಷಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಆಯ್ಕೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯದ ವಿಜಯೇಂದ್ರ ಪಾಲಾಗಿರುವುದರಿಂದ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅದೇ ಸಮುದಾಯದವರನ್ನು ಆಯ್ಕೆ ಮಾಡುವ ಬದಲಾಗಿ, ದಲಿತ ಅಥವಾ ಒಕ್ಕಲಿಗ ಸಮುದಾಯದವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಇದರಿಂದಾಗಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕೆಗಳನ್ನು ಮಾಡುತ್ತಿದ್ದ ಯತ್ನಾಳ್‌ಗೆ ಭಾರೀ ಹಿನ್ನಡೆಯಾಗಿದ್ದು, ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಯಾರೋ ಒಬ್ಬರಿಂದ ಪಕ್ಷ ಬೆಳೆಯುವುದಿಲ್ಲ. ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ' ಎಂದು ಈಶ್ವರಪ್ಪ ವರಿಷ್ಠರಿಗೆ ಎಚ್ಚರಿಕೆಯನ್ನು ನೀಡಿದ್ದರೆ, “ನಾನೂ ರಾಜಕೀಯ ಸನ್ಯಾಸಿಯಲ್ಲ. ವೈಯಕ್ತಿಕ ರಾಜಕಾರಣ ಮಾಡಲು ನನಗೂ ಬರುತ್ತದೆ” ಎಂದು ಸಿ.ಟಿ. ರವಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.

ಬಿಜೆಪಿ ಹೈಕಮಾಂಡ್ ಸೂಚನೆಯಂತೆ ವಿಧಾನಸಭಾ ಚುನಾವಣೆಯಲ್ಲಿ ತಾವು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರವನ್ನು ತ್ಯಾಗ ಮಾಡಿ, ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದ ವಿ.ಸೋಮಣ್ಣ ತನಗೆ ರಾಜ್ಯಾಧ್ಯಕ್ಷಸ್ಥಾನ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಬೇಡಿಕೆ ಇಟ್ಟಿದ್ದರು. ಇದೀಗ, ವಿಜಯೇಂದ್ರ ನೇಮಕದ ಹಿನ್ನೆಲೆಯಲ್ಲಿ ಅವರು ಮೌನಕ್ಕೆ ಶರಣಾಗಿದ್ದಾರೆ.

'ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವವಿದೆ. ಪಕ್ಷವನ್ನು ಯಾವುದೇ ಒಬ್ಬ ವ್ಯಕ್ತಿಯ ಕೈಗೆ ಕೊಡಲು ಆಗುವುದಿಲ್ಲ. ವಿಜಯೇಂದ್ರ ಒಬ್ಬನೇ ಅಲ್ಲ, ಇಡೀ ರಾಜ್ಯದಲ್ಲಿ ಒಂದು ಕೋಟಿ ಬಿಜೆಪಿ ಸದಸ್ಯರು ಇದ್ದಾರೆ. ಸಂಘಟನೆ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತದೆ' ಎಂದು ಹೇಳುವ ಮೂಲಕ ಕೆ.ಎಸ್.ಈಶ್ವರಪ್ಪ, ಪಕ್ಷವನ್ನು ವ್ಯಕ್ತಿ ಕೇಂದ್ರೀತವನ್ನಾಗಿಸುವ ಪ್ರಯತ್ನವನ್ನು ಟೀಕಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಅವರ ಉತ್ತರಾಧಿಕಾರಿಯಾಗಿ ಪಕ್ಷವು ಅರವಿಂದ ಬೆಲ್ಲದ್ ಅವರನ್ನು ಆಯ್ಕೆ ಮಾಡಲಿದೆ ಎಂದು ಪ್ರಚಾರ ಮಾಡಲಾಗಿತ್ತು. ಆ ಮಟ್ಟಿಗೆ ಅರವಿಂದ ಬೆಲ್ಲದ್ ಪಕ್ಷದಲ್ಲಿ ತಮ್ಮ ಪ್ರಭಾವ ಬೀರಲು ಯತ್ನಿಸಿದ್ದರು. ಅಲ್ಲದೆ, ಈಗ ಪಕ್ಷದ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಎರಡರಲ್ಲಿ ಒಂದು ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು. ವಿಜಯೇಂದ್ರ ನೇಮಕದ ಹಿನ್ನೆಲೆಯಲ್ಲಿ ಅವರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅವರಲ್ಲಿನ ಅಸಮಾಧಾನ ವ್ಯಕ್ತವಾಗುವಂತೆ ಕಾಣುತ್ತಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯನ್ನು ರಾಜ್ಯ ರಾಜಕಾರಣಕ್ಕೆ ಕರೆ ತಂದು ಬಿಜೆಪಿ ರಾಜ್ಯಾಧ್ಯಕ್ಷೆಯನ್ನಾಗಿ ಮಾಡುವ ಬಗ್ಗೆಯೂ ಪಕ್ಷದ ಆಂತರಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಕಾಂಗ್ರೆಸ್ ಸರಕಾರ ಶಕ್ತಿ ಹಾಗೂ ಗೃಹ ಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಮತಗಳನ್ನು ಭದ್ರಪಡಿಸಿಕೊಳ್ಳುತ್ತಿರುವುದರಿಂದ ಬಿಜೆಪಿಯು ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಿ ಮಹಿಳಾ ಮತದಾರರನ್ನು ಸೆಳೆಯುವ ಯೋಜನೆ ಹೊಂದಿತ್ತು ಎನ್ನಲಾಗಿದೆ.

ದೀಪಾವಳಿ ಬಳಿಕ ಪದಗ್ರಹಣ: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿಜೆಪಿಯವಾಗತ ಬಿ.ವೈ ವಿಜಯೇಂದ್ರ ದೀಪಾವಳಿ ಬಳಿಕ ನ.15 ಅಥವಾ 16ರಂದು ಅಧಿಕೃತವಾಗಿ ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಂದ ವಿಜಯೇಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಕ್ಷದ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಸಾಕ್ಷಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ಎಲ್ಲ ಬೂತ್‌ಗಳನ್ನು ಬಲಪಡಿಸಲು ಆದ್ಯತೆ; ವಿಜಯೇಂದ್ರ: ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ, ಪಕ್ಷದ ಎಲ್ಲ ಬೂತ್‌ಗಳನ್ನು ಬಲಪಡಿಸಲು ಆದ್ಯತೆ ನೀಡುವುದಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಗಾಂಧಿನಗರ ಬೂತ್‌-40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ದೀಪಾವಳಿ ಶುಭಾಶಯ ಕೋರಿದ್ದೇನೆ. ರಾಜ್ಯದಲ್ಲಿ 58,282 ಬೂತ್‌ಗಳು ಇವೆ. ಎಲ್ಲ ಬೂತ್‌ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲಾಗುವುದು ಎಂದರು.

ಪ್ರತೀ ಬೂತ್ ಪ್ರಮುಖರು ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಮತ್ತು ಹಾಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇಂದಿನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಕಾರ್ಯಾರಂಭ ಮಾಡಿದ್ದೇನೆ ಎಂದು ಅವರು ಹೇಳಿದರು.

ಪಕ್ಷದ ರಾಷ್ಟ್ರೀಯ ನಾಯಕರು ಬೂತ್‌ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣಲಾಗುತ್ತದೆ. ಇದೇ ಬಿಜೆಪಿಯ ವಿಶೇಷತೆ, ಬಿಜೆಪಿ ಕಾರ್ಯಕರ್ತರು ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ. ನಮ್ಮ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ಹೋರಾಟದ ಗುಣವಿದೆ ಎಂದು ವಿಜಯೇಂದ್ರ ತಿಳಿಸಿದರು.

ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಜಿಲ್ಲಾಧ್ಯಕ್ಷ ಮಂಜುನಾಥ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.

ವಿಜಯೇಂದ್ರಗೆ ಅಭಿನಂದನೆ ಸಲ್ಲಿಸದ ಬಿಜೆಪಿಯ ಬಹುಪಾಲು ನಾಯಕರು!: ಬಿಜೆಪಿ ವರ್ಸಸ್ ಬಿಜೆಪಿ ಕದನ ಈಗ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. 20, 30ವರ್ಷಗಳಿಂದ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಪಕ್ಷದಲ್ಲಿ ಕಾಣಿಸಿಕೊಂಡು 'ಯಡಿಯೂರಪ್ಪರ ಮಗ' ಎಂಬ ಒಂದೇ ಅರ್ಹತೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕುಳಿತಿರುವ ವಿಜಯೇಂದ್ರ ಅವರನ್ನು ಬಿಜೆಪಿಯ ಬಹುಪಾಲು ನಾಯಕರು ಅಭಿನಂದಿಸಲಿಲ್ಲ, ಹಾರೈಸಲಿಲ್ಲ. ಒಡಕಿನ ಮನೆಯಾಗಿರುವ 'ಫ್ಯಾಮಿಲಿ ಜನತಾ ಪಾರ್ಟಿ' ಮುಂದೆ ಸಂಪೂರ್ಣ ನಜ್ಜುಗುಜ್ಜಾಗುವ ಎಲ್ಲ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ' ಎಂದು ಕಾಂಗ್ರೆಸ್ “ಎಕ್ಸ್' ನಲ್ಲಿ ಪೋಸ್ಟ್ ಹಾಕುವ ಮೂಲಕ ಲೇವಡಿ ಮಾಡಿದೆ.

ನಾನೇನೂ ರಾಜಕೀಯ ಸನ್ಯಾಸಿಯಲ್ಲ: ಸಿ.ಟಿ.ರವಿ: ನಾನೇನೂ ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ಬಳಿಕ ನಾನು ನನ್ನ ವೈಯಕ್ತಿಕ ರಾಜಕಾರಣ ಮಾಡುತ್ತೇನೆ' ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ನೇಮಕಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಎನ್ನುವುದು ಇಬ್ಬರ ನಡುವಿನ ಚದುರಂಗದ ಆಟವಲ್ಲ. ಬದಲಿಗೆ, ತಂಡವಾಗಿ ಎಲ್ಲರೂ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ. ನಾಯಕ ಆದ ವ್ಯಕ್ತಿ ಸಮನ್ವಯತೆ ಮೂಡಿಸುವ ಕೆಲಸ ಮಾಡಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು' ಎಂದು ಹೇಳಿದರು.

ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ. ಹೀಗಾಗಿ ನನಗೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಗುರಿ 2024ರ ಲೋಕಸಭೆ ಚನಾವಣೆಯಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎನ್ನುವುದಾಗಿದೆ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಮಾತ್ರ ನಮ್ಮ ಗಮನ ಇರಲಿದೆ ಎಂದು ಸಿ.ಟಿ.ರವಿ ನುಡಿದರು. 'ಬಿಜೆಪಿ ರಾಜ್ಯಾ ಧ್ಯಕ್ಷ ಸ್ಥಾನಕ್ಕೆ ಬೇಕಾಗುವ ಅರ್ಹತೆ, ಯೋಗ್ಯತೆ ಪಕ್ಷದಲ್ಲಿ ಬಹಳಷ್ಟು ಜನರಿಗಿದೆ. 

ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ವರಿಷ್ಠರು ಮಾಡಿದ್ದಾರೆ. ಎಂದ ಅವರು, ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ. ವಿಜಯೇಂದ್ರರಿಗೆ ಈಗಾಗಲೇ ಅಭಿನಂದನೆ ಸಲ್ಲಿಸಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಅಧಿಕಾರವಲ್ಲ ಜವಾಬ್ದಾರಿ' ಎಂದು ಹೇಳಿದರು. ಎರಡೂವರೆ ದಶಕದಿಂದ ಯಾವ ಹುದ್ದೆಯನ್ನೂ ಕೇಳಿ ಪಡೆದಿಲ್ಲ. ಬೂತ್ ಮಟ್ಟದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೂ ನನಗೆ ಪಕ್ಷ ಜವಾಬ್ದಾರಿಯನ್ನು ಕೇಳದೆ ಕೊಟ್ಟಿದೆ. ಇದೀಗ ವಿಜಯೇಂದ್ರಗೆ ಜವಾಬ್ದಾರಿ ನೀಡಿದೆ. ಪಕ್ಷದ ಸಂಘಟನೆ, ಲೋಕಸಭೆ ಸೇರಿ ಮುಂಬರಲಿರುವ ಎಲ್ಲ ಚುನಾವಣೆ ಗೆಲ್ಲಬೇಕು ಎಂದು ರವಿ ತಿಳಿಸಿದರು.

ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ: ಈಶ್ವರಪ್ಪ: ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ. ಭಾರತೀಯ ಜನತಾ ಪಾರ್ಟಿ ಯಾರ ಮೇಲೂ ನಿಂತಿಲ್ಲ. ಬಿಜೆಪಿಯಲ್ಲಿ ನರೇಂದ್ರ ಮೋದಿ ಕೂಡ ಓರ್ವ ಕಾರ್ಯಕರ್ತ. ನಾನೂ ಕಾರ್ಯಕರ್ತ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗಲ್ಲ. ಅವರು ಒಬ್ಬ ನಾಯಕ ಮಾತ್ರ. ಎಲ್ಲರೂ ಒಟ್ಟಾಗಿ 28 ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದರು.

ಕುಟುಂಬ ರಾಜಕಾರಣದ ಬಗ್ಗೆ ಟ್ವಿಟ್ ಮಾಡುವ ಅಧಿಕಾರ ಕಾಂಗ್ರೆಸ್‌ಗೆ ಇದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ, ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎನ್ನುವುದು ಗೊತ್ತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಂಗ್ರೆಸ್ ಪಕ್ಷ ಎಲ್ಲಿದೆ? ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದು ಚೂರಾಗಿದೆ. ಕಾಂಗ್ರೆಸ್‌ನ್ನು ನೆಹರೂ, ಇಂದಿರಾಗಾಂಧಿ ಕುಟುಂಬದವರೇ ಆಳಿದ್ದು, ಕಾಂಗ್ರೆಸ್ ಇರುವುದೇ ಒಂದು ಕುಟುಂಬದ ಹಿಡಿತದಲ್ಲಿ. ಆದರೆ, ಬಿಜೆಪಿ ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿದ್ದು, ವ್ಯಕ್ತಿ ಮೇಲೆ ನಿಂತಿಲ್ಲ. ಎಲ್ಲ ನಾಯಕರು ಒಟ್ಟಿಗೆ ಇರುತ್ತೇವೆ. ಬಿಜೆಪಿಯಲ್ಲಿ ಸ್ಥಾನಮಾನದ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ, ಪ್ರಧಾನಮಂತ್ರಿ ಮೋದಿಯವರೂ ಕಾರ್ಯಕರ್ತರೇ ಎಂದು ನುಡಿದರು.

ಮುಂದಿನ ಚುನಾವಣೆ ವೇಳೆ 28 ಸ್ಥಾನಗಳನ್ನು ಗೆಲ್ಲುತ್ತೇವೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ಸಂಘಟನೆ, ಹಿಂದುತ್ವದ ಮೇಲೆ ಬಿಜೆಪಿ ನಡೆಯುತ್ತಿದೆ. ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ನಿರ್ವಹಿಸುತ್ತೇನೆ. ನಮ್ಮದು ಸಾಮೂಹಿಕ ನೇತೃತ್ವ, ಲೋಕಸಭೆ ಟಿಕೆಟ್ ಹಂಚಿಕೆ, ಲೋಕಸಭೆ ಚುನಾವಣಾ ಪ್ರಚಾರ ಎಲ್ಲಾ ಸಾಮೂಹಿಕ ನೇತೃತ್ವದಲ್ಲೇ ನಡೆಯುತ್ತದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನದ ನಿರೀಕ್ಷೆ ಇರಲಿಲ್ಲ: ಯಡಿಯೂರಪ: ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತದೆಂದು ನಾನು ನಿರೀಕ್ಷೆ ಇಟ್ಟಿರಲಿಲ್ಲ. ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ದಿಲ್ಲಿಗೆ ಹೋಗಿ ವರಿಷ್ಠರನ್ನು ಕೇಳಿರಲಿಲ್ಲ. ಆದರೂ, ಪಕ್ಷದ ಅಧ್ಯಕ್ಷ ಸ್ಥಾನದಂತಹ ದೊಡ್ಡ ಸ್ಥಾನ ಸಿಕ್ಕಿದ್ದು, ಇಂತಹ ಸಂದರ್ಭದಲ್ಲಿ ಸವಾಲುಗಳು ಸಹಜ ಎಂದು ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಗುರಿ ಮುಟ್ಟಲು ಕಷ್ಟವಿಲ್ಲ. ಆದರೆ, ಹಾದಿ ಕಠಿಣ ಇದೆ. ನಾನೂ ರಾಜ್ಯ ಪ್ರವಾಸ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ. ಪ್ರಧಾನಿ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಅವರು ಸೂಕ್ತ ಸಮಯದಲ್ಲಿ ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎಂದು ಸಮರ್ಥಿಸಿದರು.

ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ಈ ಬಾರಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಹೋದಲ್ಲಿ ಪಕ್ಷಕ್ಕೆ ಯಶಸ್ಸು ಖಚಿತ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಇನ್ನು ನಿವೃತ್ತಿ ಪರ್ವ ಕಾಂಗ್ರೆಸ್ ವ್ಯಂಗ್ಯ: ಬಿ. ಎಸ್. ಯಡಿಯೂರಪ್ಪನವರ ಮಗನನ್ನು ರಾಜ್ಯ ಅಧ್ಯಕ್ಷ ನನ್ನಾಗಿ ಮಾಡುವ ಮೂಲಕ ಬಿಜೆಪಿ ಲೀಡರ್‌ಸ್‌ ಪಕ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.

ಶನಿವಾರ ಎಕ್ಸ್(ಟ್ವಿಟರ್) ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, 'ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಹಲವರಿದ್ದರೂ 'ಎಳೆ ಹುಡುಗ'ನಿಗೆ ಪಟ್ಟ ಕಟ್ಟುವ ಮೂಲಕ ಉಳಿದವರೆಲ್ಲ ಅನರ್ಹರು ಎಂಬ ಸಂದೇಶ ನೀಡಿದ್ದೇ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿದಿದ್ದೇ? ಬಿಜೆಪಿ ಉತ್ತರಿಸುವುದೇ' ಎಂದು ಪ್ರಶ್ನಿಸಿದೆ.

ಸಿ.ಟಿ.ರವಿ ಅವರೇ, ಈಗ ಯಡಿಯೂರಪ್ಪನವರ ಕಿಚನ್ ಕ್ಯಾಬಿನೆಟ್ ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ, ಅವರ ಕಿಚನ್ ಕ್ಯಾಬಿನೆಟ್ ಗೆ ತಾವು ಹೋಗುವಿರಾ ಅಥವಾ ತಾವೂ ರಾಜಕೀಯ ನಿವೃತ್ತಿ ಪಡೆಯುವಿರಾ? ಯತ್ನಾಳ್ ಅವರೇ, ಇದೆಂತಹಾ ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವಿರಾ ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ? ಫ್ಯಾಮಿಲಿ ಜನತಾ ಪಾರ್ಟಿಯಲ್ಲಿ ಇನ್ನುಂದೆ ನಿವೃತ್ತಿ ಪರ್ವ ಶುರುವಾದರೂ ಆಶ್ಚರ್ಯವಿಲ್ಲ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. 'ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ. ಇದು ಸಿ.ಟಿ.ರವಿ, ಯತ್ನಾಳ್, ಬಿ.ಎಲ್.ಸಂತೋಷ್ ಅವರು ಸಮಾಧಾನ ಮಾಡಿಕೊಳ್ಳುತ್ತಿರುವುದೋ ಅಥವಾ ನೈಜತೆ ಇದೆಯೋ ಬಿಜೆಪಿ ಸ್ಪಷ್ಟಪಡಿಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...