ಬಂಡವಾಳ ಹೂಡಿಕೆದಾರರ ಸಭೆ; ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನ ಮಾದರಿ ಕೈಗಾರಿಕಾ ನೀತಿ ಜಾರಿ: ಸಚಿವ ಶೆಟ್ಟರ್

Source: so news | Published on 12th September 2019, 11:57 PM | State News | Don't Miss |

ಬೆಳಗಾವಿ: ಕೈಗಾರಿಕಾ ನೀತಿ ಕರಡು ಸಿದ್ಧಪಡಿಸಲಾಗುತ್ತಿದ್ದು, ಡಿಸೆಂಬರ್‌ನಲ್ಲಿ ಕೈಗಾರಿಕಾ ನೀತಿ ಬಿಡುಗಡೆ ಮಾಡಿ ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಆಧರಿಸಿ‌ ಅಂತಿಮಪಡಿಸಲಾಗುವುದು. ಎಲ್ಲ ಅಗತ್ಯ ಅಂಶಗಳನ್ನು ಅಳವಡಿಸಿ ಇಡೀ ದೇಶದಲ್ಲಿ ಮಾದರಿ ಕೈಗಾರಿಕಾ ನೀತಿ ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಭರವಸೆ ನೀಡಿದರು.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವ ಕುರಿತು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕೈಗಾರಿಕೋದ್ಯಮಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಸ್ಥಾಪನೆ ಮತ್ತು ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಅತ್ಯಂತ ಪ್ರಮುಖ ಕೈಗಾರಿಕಾ ಕಾರಿಡಾರ್ ಆಗಿ ಬೆಳಗಾವಿ ರೂಪುಗೊಳ್ಳಲಿದೆ.
ಹುಬ್ಬಳ್ಳಿ-ಧಾರವಾಡ-ಬೆಳಗಾವಿ ನಗರಗಳು ಕೈಗಾರಿಕಾ ಅಭಿವೃದ್ಧಿಯ ತ್ರಿವಳಿ ನಗರವಾಗಿ ರೂಪುಗೊಂಡಿವೆ.

ಬೆಳಗಾವಿಯ ಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ನಿವೇಶನ ವಿತರಣೆ, ಸಹಾಯಧನ, ಉತ್ಪನ್ನಗಳಿಗೆ ದರ ನಿಗದಿ ಸೇರಿದಂತೆ ಎಲ್ಲ ಬಗೆಯ ನೆರವು ಸರ್ಕಾರ ನೀಡಲಿದೆ.

ಅಭಿವೃದ್ಧಿಗೆ ಕೈಜೋಡಿಸಲು ಮನವಿ:

ಕೈಗಾರಿಕೆ ಬೆಳವಣಿಗೆಗೆ ಉಭಯ ರಾಜ್ಯಗಳ ಕೈಗಾರಿಕೋದ್ಯಮಿಗಳು ಕೈಜೋಡಿಸುವ ಮೂಲಕ ಒಟ್ಟಾರೆ ಬೆಳವಣಿಗೆಗೆ ಸಹಕರಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡರು.
ಬಂಡವಾಳ ಹೂಡಿಕೆ ಮಾಡುವ ನೆರೆಯ ರಾಜ್ಯದ ಉದ್ಯಮಿಗಳಿಗೆ ಸರ್ಕಾರ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಿದೆ. ಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆಗೆ ಸರ್ಕಾರ ಬದ್ಧವಿದೆ ಎಂದರು.

ಬಂಡವಾಳ ಹೂಡಿಕೆಗೆ ಮನವಿ:

ಶಾಸಕ ಅನಿಲ್ ಬೆನಕೆ ಮಾತನಾಡಿ, "ಕನ್ನಡ-ಮರಾಠಿ ಭಾಷಿಕರ ಸಮನ್ವಯತೆ ಮತ್ತು ಸಹೋದರತೆಯ ನಾಡು ಇದು. ಇಂತಹ ನಗರದ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸೋಣ" ಎಂದರು.
ಕೈಗಾರಿಕೆ ಬೆಳವಣಿಗೆಗೆ ಕರ್ನಾಟಕ-ಮಹಾರಾಷ್ಟ್ರದ ಎಲ್ಲ ಕೈಗಾರಿಕೋದ್ಯಮಿಗಳು ಒಟ್ಟಾಗಿ ಪ್ರಯತ್ನಿಸೋಣ. ಇದಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ ಅವರು, ಫೌಂಡ್ರಿ ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲಿ ಬೆಳಗಾವಿ ಇಡೀ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದೆ. ಇತರೆ ರಾಜ್ಯದ ಕೈಗಾರಿಕೋದ್ಯಮಿಗಳು ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕಣಗಲಾ ಹಾಗೂ ಕಿತ್ತೂರಿನಲ್ಲಿ ಲಭ್ಯವಿರುವ ಕೈಗಾರಿಕಾ ನಿವೇಶನಗಳ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ ಗುಪ್ತಾ ಮಾಹಿತಿ ನೀಡಿದರು.
ಕೈಗಾರಿಕಾ ಇಲಾಖೆಯ ಆಯುಕ್ತರು ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಗುಂಜನ್ ಕೃಷ್ಣನ್ ಉಪಸ್ಥಿತರಿದ್ದರು.

ಬೆಳಗಾವಿ, ಸಾಂಗ್ಲಿ, ಕೊಲ್ಲಾಪುರ, ಇಚಲಕರಂಜಿ ಸೇರಿದಂತೆ ವಿವಿಧ ನಗರಗಳ ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿದ್ದರು.
ಆಟೋಮೊಬೈಲ್, ಅರ್ಥಮೂವರ್ಸ್, ಪ್ಲಾಸ್ಟಿಕ್, ಆಹಾರ ಸಂಸ್ಕರಣೆ ಸೇರಿದಂತೆ ವಿವಿಧ ಬಗೆಯ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Read These Next

ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಕೋಲಾರ: ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ...

ಭಟ್ಕಳದಲ್ಲಿ ಭಾನುವಾರದಂದು ಬೆ.8ರಿಂದ ಮ.2 ಗಂಟೆ ವರೆಗೆ ಲಾಕ್‍ಡೌನ್  ಸಡಿಲಿಕೆ-ಸಹಾಯ ಆಯುಕ್ತ

ಭಟ್ಕಳ: ರಾಜ್ಯಾದ್ಯಂತ ಭಾನುವಾರದ ಕಫ್ರ್ಯೂ ಆದೇಶವನ್ನು ಸರ್ಕಾರ ಹಿಂಪಡೆದ ಹಿನ್ನೆಯಲ್ಲಿ ಈ ಆದೇಶ ಭಟ್ಕಳಕ್ಕೂ ಅನ್ವಯಿಸುತ್ತಿದ್ದು ...