ಹೊಸದಿಲ್ಲಿ: ಮಾಧ್ಯಮ ಪ್ರತಿನಿಧಿಗಳು ಸುದ್ದಿಗಳನ್ನು ಸಂಗ್ರಹಿಸಲು ತಮ್ಮದೇ ಆದ ಮೂಲಗಳನ್ನು ಹೊಂದಿದ್ದಾರೆ ಮತ್ತು ಯಾವುದೇ ತನಿಖೆಗಾಗಿ ಪತ್ರಕರ್ತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲು ಕೇಂದ್ರವು ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.
ಪತ್ರಕರ್ತರ ಸಾಧನಗಳನ್ನು ವಶಪಡಿಸಿಕೊಳ್ಳುವ ಕಾನೂನು ಜಾರಿ ಸಂಸ್ಥೆಗಳಿಗಾಗಿ ವಿವರವಾದ ಮಾರ್ಗಸೂಚಿಗಳನ್ನು ಕೋರಿ ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಕಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿದ ನ್ಯಾಯಾಲಯವು ಇಂತಹ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರಕ್ಕೆ ಸಮಯವನ್ನು ನೀಡಿತು. 'ಕೇಂದ್ರವು ಮಾರ್ಗಸೂಚಿಗಳನ್ನು ರೂಪಿಸಬೇಕು. ನೀವು ಬಯಸಿದರೆ ನಾವೇ ಅದನ್ನು ಮಾಡುತ್ತೇವೆ. ಆದರೆ ಅದನ್ನು ನೀವೇ ಮಾಡಬೇಕು ಎಂದು ನಾನು ಭಾವಿಸಿದ್ದೇನೆ. ಇದು ತನ್ನ ತನಿಖಾ ಸಂಸ್ಥೆಗಳ ಮೂಲಕ ನಡೆಸಲ್ಪಡುವ ಸರಕಾರವಾಗಿರಲು ಸಾಧ್ಯವಿಲ್ಲ ಎಂದು ನ್ಯಾ.ಕೌಲ್ ಹೇಳಿದರು. ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್
ಜನರಲ್ ಎಸ್.ವಿ.ರಾಜು ಅವರು, ನ್ಯಾಯಾಲಯದ ಮುಂದಿರುವ ವಿಷಯವು ಸಂಕೀರ್ಣ ಕಾನೂನು ಸಮಸ್ಯೆಗಳಿಗೆ ಸಂಬಂಧಿಸಿದೆ. ಮಾಧ್ಯಮಗಳು ಹಕ್ಕುಗಳನ್ನು ಹೊಂದಿವೆ,ಆದರೆ ಅವ ಕಾನೂನಿಗಿಂತ ಮೇಲಲ್ಲ ಎಂದು ಹೇಳಿದರು. ಇಂದು ಕಾನೂನು ಜಾರಿ ಸಂಸ್ಥೆಗಳು ಪಾಸ್ವರ್ಡ್ಗಳು ಅಥವಾ ಬಯೊಮೆಟ್ರಿಕ್ಸ್ ನ್ನು ಹಂಚಿಕೊಳ್ಳಲು ಪತ್ರಕರ್ತರನ್ನು ಬಲವಂತಗೊಳಿಸುತ್ತಿವೆ. ಅವು ಯಾವಾಗ ಮತ್ತು ಏನನ್ನು ವಶಪಡಿಸಿಕೊಳ್ಳುತ್ತವೆ ಎನ್ನುವ ಕುರಿತು ಯಾವುದೇ ಮಾರ್ಗಸೂಚಿಗಳಿಲ್ಲ. ಪತ್ರಕರ್ತರ ಸಾಧನಗಳು ವೈಯಕ್ತಿಕ, ಹಣಕಾಸು ಮತ್ತು ಎಲ್ಲ ಡಿಜಿಟಲ್ ಮಾಹಿತಿಗಳನ್ನು ಒಳಗೊಂಡಿರುತ್ತವೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.
ಈ ಪ್ರಕರಣದಲ್ಲಿ ಯಾವ ರೀತಿಯ ಮಾರ್ಗಸೂಚಿಗಳು ಅಗತ್ಯವಾಗಿವೆ ಎನ್ನುವುದನ್ನು ಕೇಂದ್ರವು ವಿಶ್ಲೇಷಿಸಬೇಕು ಎಂದು ಒತ್ತಿ ಹೇಳಿದ ನ್ಯಾಯಾಲಯವು ಈ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸುವಂತೆ ಹೆಚ್ಚುಮ ಸಾಲಿಸಿಟರ್ ಜನರಲ್ ಗೆ ಸೂಚಿಸಿತು.
ಈ ಹಿಂದೆ ಸುದ್ದಿ ಜಾಲತಾಣ ನ್ಯೂಸ್ ಕ್ಲಿಕ್‌ನ ಪತ್ರಕರ್ತರು, ಸಂಪಾದಕರು ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಲೇಖಕರ ನಿವಾಸಗಳ ಮೇಲೆ ದಿಲ್ಲಿ ಪೊಲೀಸರು ದಾಳಿ ನಡೆಸಿದ ಬಳಿಕ 16 ಪತ್ರಿಕಾ ಸ್ವಾತಂತ್ರ್ಯ ಸಂಸ್ಥೆಗಳು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರವೊಂದನ್ನು ಬರೆದು, ಮಾಧ್ಯಮಗಳನ್ನು ದಮನಿಸಲು ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಅಂತ್ಯಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿದ್ದವು. ಪತ್ರಕರ್ತರ ವಿದ್ಯುನ್ಮಾನ ಸಾಧನಗಳನ್ನು ಪೊಲೀಸರು ವಶಪಡಿಸಿಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ಒದಗಿಸುವಂತೆಯೂ ಅವು ಕೋರಿದ್ದವು.