ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವಿದೇಶಿ ಬಂಡವಾಳ

Source: sonews | By Staff Correspondent | Published on 10th September 2019, 10:26 PM | Special Report | Don't Miss |

ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆಯಲ್ಲಿ ಶೇ.೧೦೦ರಷ್ಟು ವಿದೇಶಿ ಬಂಡವಾಳಕ್ಕೆ ಅನುಮತಿ ನೀಡಿರುವುದರಲ್ಲಿ ಉತ್ಪಾದನಾ ಹಾಗೂ ಪರಿಸರಾತ್ಮಕ ಅಪಾಯಗಳಿವೆ.

ಕೇಂದ್ರ ಸರ್ಕಾರವು ತನ್ನ ನೀತಿಗಳಲ್ಲಿ ಇತ್ತೀಚೆಗೆ ತಂದಿರುವ ಬದಲಾವಣೆಗಳಲ್ಲಿ ಕಲ್ಲಿದ್ದಲಿನ ಮಾರಾಟ ಮತ್ತು ಗಣಿಗಾರಿಕಾ ಚಟುವಟಿಕೆಗಳಲ್ಲಿ ಶೇ. ೧೦೦ ರಷ್ಟು ವಿದೇಶೀ ಬಂಡವಾಳವನ್ನು ತ್ವರಿತ ಮಾರ್ಗದಲ್ಲಿ ಅನುಮತಿಸಲು ಅವಕಾಶ ಮಾಡಿಕೊಟ್ಟಿರುವುದೂ ಒಂದು. ಇದರ ಜೊತೆಗೆ ೨೦೧೫ರ ಕಲ್ಲಿದ್ದಲು ಗಣಿಗಳ ವಿಶೇಷ ಅವಕಾಶ ಕಾಯಿದೆ ಮತ್ತು ೧೯೫೭ರ ಕಲ್ಲಿದ್ದಲು ಮತ್ತು ಖನಿಜಗಳ ಅಬಿವೃದ್ಧಿ ಮತ್ತು ನಿಯಂತ್ರಣ ಕಾಯಿದೆಗಳ ತಿದ್ದುಪಡಿಗಳಿಗೆ ಒಳಪಟ್ಟು ಕಂಪನಿಗಳು ಕಲ್ಲಿದ್ದಲು ಪರಿಷ್ಕರಣೆ ಸೌಕರ್ಯಗಳನ್ನು ನಿರ್ಮಿಸಿಕೊಳ್ಳಲೂ ಸಹ ಅನುಮತಿ ನೀಡಲಾಗಿದೆ. ಹಿಂದೆ ತಮ್ಮದೇ ಆದ ಗಣಿಗಳನ್ನು ಹೊಂದಿದ್ದ ಕಂಪನಿಗಳಿಗೆ ಮಾತ್ರ ಅನುಮತಿಗಳನ್ನು ನೀಡಲಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ವಿದ್ಯುತ್, ಸ್ಟೀಲ್ ಮತ್ತು ಸಿಮೆಂಟ್ ಘಟಕಗಳು ತಮ್ಮದೇ ಆದ ಗಣಿಗಳಲ್ಲಿ ಸೌಕರ್ಯಗಳನ್ನು ನಿರ್ಮಿಸಿಕೊಳ್ಳುವಾಗ ಶೇ.೧೦೦ರಷ್ಟು ವಿದೇಶಿ ಬಂಡವಾಳ ಹೂಡಿಕೆಯ ಅನುಮತಿ ನೀಡಲಾಗುತ್ತಿತ್ತು. ಹಾಗೆಯೇ, ಕಲ್ಲಿದ್ದಲು ತೊಳೆ-ಪರಿಷ್ಕರಣಾ ಘಟಕಗಳನ್ನು ಸ್ಥಾಪಿಸಿಕೊಳ್ಳುವಲ್ಲಿ  ಸಹ ಶೇ.೧೦೦ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ  ಅನುಮತಿ ನೀಡಲಾಗುತ್ತಿತ್ತು. ಆದರೆ ಅಂಥಾ ಉದ್ದಿಮೆಗಳು ರೀತಿ ತೊಳೆದ ಕಲ್ಲಿದ್ದಲನ್ನು ಮುಂದಿನ ಹಂತದ ಪರಿಷ್ಕರಣೆಗಳನ್ನು ಮಾಡುತ್ತಿದ್ದ ಘಟಕಗಳಿಗೆ ಮಾತ್ರ ಮಾರಬೇಕಿತ್ತೇ ಹೊರತು ಮುಕ್ತ ಮಾರುಕಟ್ಟೆಯಲ್ಲಿ ಮಾರುವಂತಿರಲಿಲ್ಲ. ಹೀಗಾಗಿ ಬದಲಾದ ಸರ್ಕಾರದ ನೀತಿಯು ಕೇವಲ ಕಲ್ಲಿದ್ದಲ ಗಣಿಗಾರಿಕೆಯಲ್ಲಿ ಮಾತ್ರವಲ್ಲದೆ ತತ್ಸಂಬಂಧಿ ಪೂರಕ ಪ್ರಕ್ರಿಯೆಗಳಾದ ತೊಳೆಯುವ, ಹುಡಿ ಮಾಡುವ ಮತ್ತು ಪರಿಷ್ಕರಿಸುವಂಥಾ ಇತರ ತತ್ಸಂಬಂಧೀ ಸೌಕರ್ಯಗಳಲ್ಲೂ ಶೇ.೧೦೦ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಈಗ ಅನುಮತಿ ನೀಡಿದೆ

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತಂದಿರುವ ಹೊಸ ನೀತಿಗಳು ಹಲವಾರು ಕಾರಣಗಳಿಂದಾಗಿ ಮಹತ್ವವನ್ನು ಪಡೆದುಕೊಂಡಿವೆ. ಮೊದಲನೆಯದಾಗಿ ಭಾರತದಲ್ಲಿ ೨೮೬ ಬಿಲಿಯನ್ ಟನ್ನಿನಷ್ಟು (೨೮,೬೦೦ ಕೋಟಿ ಟನ್ನಿನಷ್ಟು) ದೊಡ್ಡದಾದ ಕಲ್ಲಿದ್ದಲು ನಿಕ್ಷೇಪಗಳಿವೆ. ಇದು ಜಗತ್ತಿನಲ್ಲೇ ಮೂರನೇ ದೊಡ್ಡ ಸಂಗ್ರಹವಾಗಿದ್ದು ಪ್ರಾಥಮಿಕ ಶಕ್ತಿ ಮೂಲಕ್ಕೆ ಬೇಕಿರುವ ವಿಶಾಲ ವಾಣಿಜ್ಯ ನೆಲೆಂiiನ್ನು ಹೊಂದಿರುವ ಬೃಹತ್ ಕೈಗಾರಿಕೆಯಾಗಿದೆ. ಕಲ್ಲಿದ್ದಲು ಒಂದು ಪ್ರಾಥಮಿಕ ಕಚ್ಚಾ ಸಾಮಗ್ರಿಯಾಗಿದ್ದು ವಿದ್ಯುತ್ ಸ್ಥಾವರಗಳಲ್ಲಿ, ಖನಿಜ ಉದ್ದಿಮೆಗಳಲ್ಲಿ ಮತ್ತು ಸಿಮೆಂಟ್ ಕೈಗಾರಿಕೆಗಳಲ್ಲಿ ಪ್ರಮುಖವಾಗಿ ಬಳಕೆಯಾಗುತ್ತದೆ. ಹೀಗಾಗಿ, ಕಲ್ಲಿದ್ದಲು ಉದ್ದಿಮೆಯು ಆರ್ಥಿಕತೆಯ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರವನ್ನು ಬಹಿಸುತ್ತದೆ.

ಎರಡನೆಯದಾಗಿ, ಭಾರತದ ಸಾರ್ವಜನಿಕ ವಲಯದ ಕಲ್ಲಿದ್ದಲು ಉತ್ಪಾದನಾ ಸಂಸ್ಥೆಯಾದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಉತ್ಪಾದನಾ ಗುರಿಗಳನ್ನು ಮುಟ್ಟಲು ಮತ್ತು ದೇಶಕ್ಕೆ ಅಗತ್ಯವಿರುವಷ್ಟು ಕಲ್ಲಿದ್ದಲನ್ನು ಉತ್ಪಾದನೆ ಮಾಡಲು ವಿಫಲವಾಗುತ್ತಿರುವುದರಿಂದ ಭಾರತವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ಅಗತ್ಯವಿರುವಷ್ಟು ಕಲ್ಲಿದ್ದಲು ಸರಬರಾಜು ಆಗದಿರುವುದರಿಂದ ವಿದ್ಯುತ್ ಉತ್ಪಾದನಾ ಸ್ಥ್ಥಾವರಗಳೂ ಸಹ ತಮ್ಮ ಅರ್ಧ ಸಾಮರ್ಥ್ಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುವಂತಾಗಿದೆ. ಆದ್ದರಿಂದಲೂ ಆಮದಿನ ಅಗತ್ಯ ಉಂಟಾಗಿದೆ. ಆದರೆ ವಿದೇಶೀ ಕಲ್ಲಿದ್ದಲನ್ನು ದೇಶೀಯ ಕಲ್ಲಿದ್ದಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ೨೦೧೮-೧೯ರ ಸಾಲಿನಲ್ಲಿ, ಭಾರತವು ೨೩. ಕೋಟಿ ಟನ್ನಿನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಅಲ್ಲದೆ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಒಳನಾಡು ಪ್ರದೇಶಗಳಲ್ಲಿರುವ  ಉಷ್ಣ ವಿದ್ಯುತ್ ಸ್ಥಾವರಗಳಿಗಾಗಿ ಬಿಲಿಯನ್ ಡಾಲರ್ (ಅಂದಾಜು ೫೭,೬೦೦ ಕೋಟಿ ರೂಪಾಯಿಗಳು) ಗಳನ್ನು ವೆಚ್ಚ ಮಾಡಿ ೧೨. ಕೋಟಿ ಟನ್ನಿನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದೆ. ಹೆಚ್ಚುತ್ತಿರುವ ಆಮದಿನ ಪ್ರಮಾಣಗಳು ಮತ್ತು ಹೆಚ್ಚುತ್ತಿರುವ ವಿದೇಶಿ ಕಲ್ಲಿದ್ದಲಿನ ದರಗಳು ಭಾರತದ ಆಮದು-ರಫ್ತುಗಳ ಚಾಲ್ತಿ ಖಾತೆಯ  ಸಮತೋಲದ (ಕರೆಂಟ್ ಅಕೌಂಟ್ ಡೆಫಿಷಿಯಟ್) ಮೇಲೆ ತೀವ್ರ ಪ್ರಭಾವವನ್ನು ಬೀರುತ್ತಿದೆ. ವಿದೇಶೀ ಕಲ್ಲಿದ್ದಲು ಕಂಪನಿಗಳ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ನೀತಿಗಳನ್ನು ಸಡಿಲೀಕರಿಸಿರುವುದರಿಂದ ದೇಶದಲ್ಲಿ ಕಲ್ಲಿದ್ದಲಿನ ಉತ್ಪಾದನಾ ಪ್ರಮಾಣ ಹೆಚ್ಚಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ವಿದೇಶೀ ಕಂಪನಿಗಳು ಕಲ್ಲಿದ್ದಲು ಗಣಿಗಾರಿಕೆಗೆ ಬೇಕಾದ ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ನಾನಗಳನ್ನು ತರುತ್ತದೆಂದೂ ಎಣಿಸಲಾಗಿದೆ. ಅದರಲ್ಲೂ ಜಾಗತಿಕ ಗಣಿಗಾರಿಕಾ ಪಂಪನಿಗಳು ಭೂ-ಗರ್ಭದೊಳಗಿನ ಗಣಿಗಾರಿಕೆಗೆ ಬೇಕಾದ ಅತ್ಯಾಧುನಿಕ ತಂತ್ರಜ್ನಾನವನ್ನು ತರುತ್ತದೆಂದೂ ಮತ್ತು ಮೂಲಕ ಕಲ್ಲಿದ್ದಲಿನ ಉತ್ಪಾದನಾ ವೆಚ್ಚವೂ ತಗ್ಗಬಹುದೆಂದೂ ನಿರೀಕ್ಷಿಸಲಾಗಿದೆ.

ಮೂರನೆಯದಾಗಿ, ಈವರಗೆ ಸಿಐಎಲ್ ಎಂಬ ಸಾರ್ವಜನಿಕ ಏಕಸ್ವಾಮ್ಯದಲ್ಲಿದ್ದ ಕಲ್ಲಿದ್ದಲು ಉತ್ಪಾದನೆ ಮತ್ತು ಮಾರಾಟ ವ್ಯವಹಾರವು ಈಗ ಸ್ಪರ್ಧೆಗೆ ಮುಕ್ತವಾಗುತ್ತದೆ. ನಂತರದಲ್ಲಿ, ತಮ್ಮದೇ ಆದ ಗಣಿಗಳನ್ನು ಹೊಂದಿರುವ ಖಾಸಗಿ ಮತ್ತು ಸಾರ್ವಜನಿಕ ಗಣಿ ಉದ್ದಿಮೆಗಳು ತಾವು ಉತ್ಪಾದಿಸುವ ಕಲ್ಲಿದ್ದಲಿನ ಶೇ.೨೫ರಷ್ಟು ಭಾಗವನ್ನು ಸಿಐಎಲ್ ಜೊತೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾgಲೂ ಕೂಡಾ ಅನುಮತಿಸಲಾಗಿದೆ. ಶೇ.೭೦.೯೬ರಷ್ಟು ಸರ್ಕಾರಿ ಶೇರುಗಳನ್ನು ಹೊಂದಿರುವ ಸಿಐಎಲ್, ೨೦೧೮-೧೯ರಲ್ಲಿ ಭಾರತದ ಕಲ್ಲಿದ್ದಲು ಉತ್ಪಾದನೆಯ ಶೇ.೮೩ರಷ್ಟನು ತಾನೇ ಉತ್ಪಾದಿಸಿತ್ತು. ಮತ್ತು ಅದರಲ್ಲಿ ಶೇ.೮೧ರಷ್ಟು ಪ್ರಮಾಣದ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಸ್ಥಾವರಗಳಿಗಾಗಿಯೇ ಬಳಕೆಯಾಗಿತ್ತು. ಅತ್ಯಂತ ಕಡಿಮೆ ಮಟ್ಟದ ಉತ್ಪಾದಕತೆಯನ್ನು ಹೊಂದಿರುವ ಸಿಐಎಲ್ ಸಂಸ್ಥೆಯು ಹೆಚ್ಚುತ್ತಿರುವ ತನ್ನ ಉತ್ಪಾದನಾ ವೆಚ್ಚಗಳನ್ನು ಕಡಿತಗೊಳಿಸಿಕೊಳ್ಳಬೇಕಾದ ಅಗತ್ಯವಿದೆ.

ನಾಲ್ಕನೆಯದಾಗಿ, ಹೊಸ ಕಲ್ಲಿದ್ದಲು ನೀತಿಯು ಪರೋಕ್ಷವಾಗಿ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಮತ್ತು ಹಂಚಿಕೆ, ಪರಿಸರ ಮತ್ತು ಅರಣ್ಯ ಇಲಾಖೆಯ ಪರವಾನಗಿಗಳು, ಭೂಮಿ ಹಂಚಿಕೆ ಇನ್ನಿತ್ಯಾದಿ ಹಲವು ನೀತಿಗಳನ್ನೂ ಸಹ ಪ್ರಭಾವಿಸುತ್ತವೆ. ಏಕೆಂದರೆ ಕಲ್ಲಿದ್ದಲು ಗಣಿಗಾರಿಕೆಯ ನೀತಿಗಳಲ್ಲಿ ಮಾತ್ರ ಸುಧಾರಣೆ ಹಾಗೂ ಸಡಿಲಿಕೆಗಳು ಬಂದ ಮಾತ್ರಕ್ಕೆ ಉದ್ದೇಶಿತ ಫಲಿತಾಂಶಗಳು ಬರಲು ಸಾಧ್ಯವಿಲ್ಲ. ಕ್ಷೇತ್ರಕ್ಕೆ ಬರಬಯಸುವ ಹೊಸ ಕಂಪನಿಗಳು ತಮ್ಮ ಹೂಡಿಕೆಗಳು ಉತ್ಪಾದನೆಯನ್ನು ಪ್ರಾರಂಭಿಸುವುದನ್ನು ನಿಧಾನಗೊಳಿಸಬಹುದಾದ ನೀತಿಗಳ ಅಪಾಯದಿಂದ ಉದ್ಭವವಾಗಬಹುದಾದ ಅತಂತ್ರಗಳು ಶೀಘ್ರಗತಿಯಲ್ಲಿ ನಿವಾರಣೆಯಾಗುವುದನ್ನು ಬಯಸುತ್ತವೆ. ವಿದೇಶೀ ಕಂಪನಿಗಳು ನಿಯಂತ್ರಣಾ ನೀತಿಗಳ ಅಪಾಯಗಳು ಹೆಚ್ಚಿರುವ ಕ್ಷೇತ್ರದಲ್ಲಿ ಅದರಲ್ಲೂ ಪ್ರಾಕೃತಿಕ ಸಂಪನ್ಮೂಲ ಕ್ಷೇತದಲ್ಲಿ ಹೂಡಿಕೆ ಮಾಡಲು ಸಾಮಾನ್ಯವಾಗಿ ಹಿಂದುಮುಂದೆ ನೋಡುತ್ತವೆ. ಉದಾಹರಣೆಗೆ ಭೂಸ್ವಾಧೀನ ಸಂಬಂಧೀ ನೀತಿಗಳು ಹಾಗೂ ಇನ್ನಿತರ ಅಗತ್ಯ ಪರವಾನಗಿಗಳು ವಿದೇಶೀ ಉದ್ದಿಮೆಗಳು ಭಾರತಕ್ಕೆ ಬರಲು ಹಿಂಜರಿಯುವಂತೆ ಮಾಡಬಹುದು.

 

ಉತ್ಪಾದನೆಯಲ್ಲಿ ರಿಸ್ಕುಗಳಿರುವುದರಿಂದ ಸ್ವಂತ ಕಲ್ಲಿದ್ದಲು ಗಣಿಗಳಲ್ಲಿ ಕೂಡಾ ಖಾಸಗಿ ಹೂಡಿಕೆಗಳು ಅತ್ಯಂತ ಕನಿಷ್ಟ ಮಟ್ಟದಲ್ಲಿವೆ. ಉದ್ದಿಮೆಗಳಿಗೆ ಬರುವ ಕಂಪನಿಗಳು ಹೊಸ ಗಣಿಗಳನ್ನು ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಪಡಿಸಬೇಕಿರುತ್ತದೆ. ಆದರೆ ಹೊಸ ಕಂಪನಿಗಳು ತಮ್ಮ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲು ಸಾಕಷ್ಟು ಕಾಲವಧಿ ಬೇಕಿರುವುದರಿಂದ ದೊಡ್ಡ ಮಟ್ಟದ ಹಣಹೂಡಿಕೆಯ ಅಗತ್ಯವಿರುತ್ತದೆ. ಇದರ ಜೊತೆಗೆ ಹರಾಜು ಪ್ರಕ್ರಿಯೆ, ಪರಿಸರ ಅನುಮತಿ, ಅಸಮರ್ಪಕ ಮೂಲಭೂತ ಸೌಕರ್ಯಗಳು, ಭೂಮಿಯ ಲಭ್ಯತೆಯಲ್ಲಿರುವ ಸಮಸ್ಯೆಗಳ ಕಾರಣಗಳಿಂದಾಗಿ ಕಲ್ಲಿದ್ದಲು ಉದ್ದಿಮೆಯಲ್ಲಿ ಶೇ.೧೦೦ರಷ್ಟು ವಿದೇಶಿ ಹಣ ಹೂಡಿಕೆಯಾಗಲು ಸಾಕಷ್ಟು ಸಮಯ ಬೇಕಾಗಬಹುದು. ಲಾಭದಾಯಕತೆಯಲ್ಲಿರುವ ಅಡೆತಡೆಗಳೂ ಸಹ ಹೊಸ ಹೂಡಿಕೆಗಳನ್ನು ಮತ್ತು ಹೊಸ ಉದ್ದಿಮೆಗಳನ್ನು ಹಿಂಜರಿಯುವಂತೆ ಮಾಡಬಹುದು.

ಆದರೆ ಪ್ರಾಕೃತಿಕ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದಿಂದ ನೋಡುವುದಾದರೆ, ವಿವೇಚನಾ ರಹಿತ ಗಣಿಗಾರಿಕೆಗಳ ಹೆಚ್ಚಳವು ಪರಿಸರದಲ್ಲಿ ಅಸಮತೋಲನವನ್ನು ಉಂಟು ಮಾಡಬಹುದು. ಅಲ್ಲದೆ ವಿದೇಶೀ ಬಂಡವಾಳ ಹೂಡಿಕೆಗೆ ಪೈಪೋಟಿ ನಡೆಸುವ ರಾಜ್ಯಗಳು ಪ್ರಕ್ರಿಯೆಯಲ್ಲಿ  ಅರಣ್ಯ ಸಂಪನ್ಮೂಲಗಳ ಮೇಲೆ ಅರಣ್ಯವಾಸಿಗಳ ಸಾಮುದಾಯಿಕ ಹಕ್ಕನ್ನು ಖಾತರಿ ಮಾಡುವ ೨೦೦೬ರ ಪರಿಶಿಷ್ಟ ಬುಡಕಟ್ಟು ಮತ್ತಿತರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆಯನ್ನು ಉಲ್ಲಂಘಿಸುವುದೇ? ಹಾಗೂ ಮೂಲಕ ಆದಿವಾಸಿಗಳ ಮತ್ತು ಮೂಲನಿವಾಸಿಗಳ ಜೀವನೋಪಾಯಗಳನ್ನು ದಿಕ್ಕೆಡಿಸುತ್ತಾ ಅವರನ್ನು ಮತ್ತೆ ಎತ್ತಂಗಡಿ ಮಾಡಲಾಗುವುದೇ? ವಿದೇಶಿ ಬಂಡವಾಳ ಹೂಡಿಕೆಯನ್ನು ಪಡೆಕೊಳ್ಳಬೇಕೆಂಬ ಉಮೇದು ಪಾತಾಳಕ್ಕಿಳಿಯಲು ಪೈಪೋಟಿಯನ್ನು ಹುಟ್ಟುಹಾಕುವುದೇ? ಎಲ್ಲಾ ಅನುಮಾನಗಳನ್ನು ಹೋಗಲಾಡಿಸಿ ಸುಸ್ಥಿರ ಅಭಿವೃದ್ದಿಯ ಉದ್ದೇಶಗಳನ್ನು ಈಡೇರಿಸಿಕೊಳ್ಳಬೇಕೆಂದರೆ ಗಣಿಕಂಪನಿಗಳು ಪರಿಸರ ರಕ್ಷಣಾ ನೀತಿ ಹಾಗೂ ನಿಯಮಗಳನ್ನು ಮತ್ತು ಗಣಿಯೊಳಗೆ ಕೆಲಸ ಮಾಡುವ ಕಾರ್ಮಿಕ ಆರೋಗ್ಯ ಮತ್ತು ಸುರಕ್ಷೆಗೆ ಸಂಬಂಧsಪಟ್ಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂಥಾ ಕಠಿಣವಾದ ನಿಯಂತ್ರಣಗಳನ್ನು ಹಾಗೂ ಮುನ್ನೆಚ್ಚರಿಕೆಗಳನ್ನು ವಿಧಿಸಬೇಕಾದ ಅಗತ್ಯವಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...