ಆನೆ,ಮಾನವ ಸಂಘರ್ಷ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ಆರ್,ಗಿರೀಶ್

Source: so news | Published on 1st October 2019, 7:36 AM | State News | Don't Miss |

ಹಾಸನ:ಮಲೆನಾಡು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆನೆ ಹಾಗೂ ವನ್ಯ ಜೀವಿಗಳ ಹಾವಳಿ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆನೆ ಕಾರಿಡಾರ್ ಕುರಿತ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾನವ-ಆನೆ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಇನ್ನಷ್ಟು ಉತ್ತಮ ಕ್ರಮ ಕೈಗೊಳ್ಳಬೇಕು ಎಂದರು.
ಆಲೂರು,ಸಕಲೇಶಪುರ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರು ಮಾತನಾಡಿ ಮಲೆನಾಡು ಜನರು ಆನೆ, ಕಾಡೆಮ್ಮೆಗಳ ಹಾವಳಿಯಿಂದ ಆಗುತ್ತಿರುವ ಜೀವಹಾನಿ, ಬೆಳೆ ಹಾನಿ, ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು.
ರೈತರಿಗೆ ಹೆಚ್ಚಿನ ಪರಿಹಾರ ದೊರೆಯಬೇಕು. ಸೋಲಾರ್ ಬೇಲಿ ಅಳವಡೆಕೆಗೆ ಇರುವ ಸಬ್ಸಿಡಿ ಶೇ. 60 ರಿಂದ 90 ಕ್ಕೆ ಏರಿಕೆ ಮಾಡಬೇಕು, ಸಕಲೇಶಪುರದಲ್ಲಿ ಅರಣ್ಯ ಇಲಾಖೆ ವನ್ಯ ಜೀವಿ ಉಪ ವಿಭಾಗ ಪ್ರಾರಂಭವಾಗಬೇಕು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಹೆಚ್ಚಿಸಬೇಕು, ಆನೆಗಳನ್ನು ಕಾಡಿಗಟ್ಟಲು  ಗ್ರಾಮ ಮಟ್ಟದ ತಂಡಗಳನ್ನು ಹೆಚ್ಚಾಗಿ ರಚಿಸಬೇಕು ಎಂದರು.
ಅರಣ್ಯ ಇಲಾಖೆಗೆ ಸಂಭಂದಿಸಿದ ಒತ್ತುವರಿ ಜಾಗಗಳನ್ನು ತೆರವುಗೊಳಿಸಿ ಆ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದು, ವನ್ಯ ಜೀವಿಳಿಗೆ ಉಪಯುಕ್ತ ಆಹಾರ ಕಾಡಿನ ಮದ್ಯೆ ಬೆಳೆಸಬೇಕು ಹಾಗೂ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳಲ್ಲಿ ಅನಗತ್ಯ ಗಿಡ ಗಂಟಿಗಳನ್ನು ತೆರವುಗೊಳಿಸುವ ಜೊತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದರು. 
ಅರಣ್ಯ ಸಂರಕ್ಷಾಣಾಧಿಕಾರಿ ಶಿವರಾಂಬಾಬು ಅವರು ಮಾತನಾಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ವನ್ಯಜೀವಿಗಳ ದಾಳಿಯಿಂದ 65 ಮಂದಿ ಸಾವನ್ನಪ್ಪಿದ್ದು ಇದನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ ಎಂದರು.
ಪರಿಸರ ಸಂರಕ್ಷಕರಾದ ಹೆಚ್.ಪಿ ಮೋಹನ್ ಅವರು ಮಾತನಾಡಿ ವನ್ಯ ಜೀವಿಗಳ ಹಾವಳಿಯಿಂದ  ಮಲೆ ನಾಡಿನ ಬಹುಭಾಗ ಬೆಳೆ ಹಾನಿ ಮಾನವ ಜೀವ ಹಾನಿಯಾಗುತ್ತಿದ್ದು ಜನರು ಭಯ ಭೀತರಾಗಿ ಬದುಕುವಂತಾಗಿದೆ ಇದನ್ನು ತಡೆಯಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದರು.
ಹಾನಿಯಾದ ಬೆಳೆಗಳಿಗೆ ಶೀರ್ಘ ಪರಿಹಾರ ಒದಗಿಸಬೇಕು ಹಾಗೂ ಸುರಕ್ಷತಾ ದೃಷ್ಠಿಯಿಂದ ರೈತರಿಗೆ, ಬೆಳೆಗಾರರಿಗೆ ಅವಶ್ಯಕ ಆಯುದ ಮತ್ತು ಸಲಕರಣೆಗಳನ್ನು ಬಳಸಲು ಅನುಮತಿ ನೀಡಬೇಕು ಎಂದರು.
ಸಭೆಯಲ್ಲಿ ಆನೆ ಕಾರಿಡಾರ್ ನಿರ್ಮಾಣದ ಪ್ರಸ್ತಾವನೆಯ ಪ್ರಗತಿ ಬಗ್ಗೆ ಚರ್ಚೆ ನಡೆಸಲಾಯಿತು ಮತ್ತೊಮ್ಮೆ ಈ ಬಗ್ಗೆ ಮನವಿ ಸಲ್ಲಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪೆಟ್, ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್, ಸಕಲೇಶಪುರ ಕಾಫಿ ಬೆಳೆಗಾರರ ಸಂಘದ ಅದ್ಯಕ್ಷರಾದ ಮಹೇಶ್ ಮತ್ತಿತರರು ಹಾಜರಿದ್ದರು.

Read These Next