ಜನಜಾಗೃತಿ ವಸ್ತುಪ್ರದರ್ಶನಕ್ಕೆ ಚಾಲನೆ:ವಸ್ತುಪ್ರದರ್ಶನದಲ್ಲಿ ಆರೋಗ್ಯ, ನೈರ್ಮಲ್ಯ ಸೇವೆಗಳ ಅನಾವರಣ

Source: so news | Published on 25th August 2019, 11:50 PM | State News | Don't Miss |

 


ಹುಬ್ಬಳ್ಳಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜನಜಾಗೃತಿ ವಸ್ತುಪ್ರದರ್ಶನಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಭಾನುವಾರ ಚಾಲನೆ ನೀಡಿದರು.
ಈ ಜನಜಾಗೃತಿ ವಸ್ತು ಪ್ರದರ್ಶನದಲ್ಲಿ ನವಜಾತ ಶಿಶುಗಳ ಆರೈಕೆ, ಮಕ್ಕಳ ಅಪೌಷ್ಠಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಪುನಶ್ಚೇತನಾ ಕೇಂದ್ರಗಳನ್ನು ಸ್ಥಾಪಿಸಿರುವುದು, ಸಂಪೂರ್ಣ ಲಸಿಕೆ ಪರಿಪೂರ್ಣ ಆರೋಗ್ಯ ಧ್ಯೇಯವಾಕ್ಯದಡಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಕುರಿತ ಅಂಶಗಳ ವಿವರಣೆ 5 ವರ್ಷದಲ್ಲಿ 7 ಬಾರಿ ಲಸಿಕೆ ತಪ್ಪದೆ ಹಾಕಿಸುವುದು, ಪೌಷ್ಠಿಕ ಆಹಾರ ಪುನಶ್ಚೇತನಾ ಕೇಂದ್ರಗಳ ಸ್ಥಾಪನೆಯ ಮೂಲಕ ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ, ರಕ್ತಹೀನತೆ ತಡೆಗಟ್ಟುವ ಬಗೆ, ಕ್ಷಯರೋಗದ ಲಕ್ಷಣಗಳು ಮತ್ತು ನಿಯಂತ್ರಣದ ಕ್ರಮಗಳು, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಲಕ್ಷಣಗಳು ಮತ್ತು ಮುನ್ನೆಚ್ಚೆರಿಕಾ ಕ್ರಮಗಳು, ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾದರಿಯಲ್ಲಿ ಸೌಲಭ್ಯಗಳ ಒದಗಿಸುವಿಕೆ, ಮಾನಸಿಕ ಆರೋಗ್ಯ, ಜನನಿ-ಶಿಶು ಸುರಕ್ಷಾ, ತಾಯಿ ಕಾರ್ಡ್, ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ಸೇವನೆಯ ಕ್ರಮಗಳ ಕುರಿತ ಸಂಪೂರ್ಣ ಮಾಹಿತಿ ಒಳಗೊಂಡ ಬೃಹತ್ ಫಲಕಗಳ ಪ್ರದರ್ಶನಕ್ಕಿಡಲಾಗಿದೆ.
ವಿದ್ಯುತ್ ಬಗ್ಗೆ ಜಾಗೃತಿ ಇದ್ದು, ವಿದ್ಯುತ್ ಲೈನ್‍ಮ್ಯಾನ್‍ಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿಮ್ಮ ಸುರಕ್ಷಿತ ನಮ್ಮ ಆದ್ಯತೆಯ ಕಡೆ ಗಮನವಹಿಸುವುದು, ರಾಷ್ಟ್ರೀಯ ಫ್ಲೋರೋಸಿಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ, ಪ್ರತಿ ಜಿಲ್ಲೆಯಲ್ಲೂ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡದಿಂದ 24x7 ಆರೋಗ್ಯ ಮತ್ತು ಕ್ಷೇಮ ತಂಡಗಳ ಕಾರ್ಯಚರಣೆ, ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮ, ಮನೆಯ ಹೊರಗಡೆ ಶೌಚಾಲಯ ನಿರ್ಮಾಣ ಸೇರಿದಂತೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿ ಒಳಗೊಂಡ ಫಲಕಗಳನ್ನು ಈ ವಸ್ತುಪ್ರದರ್ಶನಕ್ಕಿಡಲಾಗಿದ್ದು, ಜನರು ಅಯ್ಯೋ ಕುತೂಹಲ ಹಾಗೂ ಆಸಕ್ತಿಯಿಂದ ವೀಕ್ಷಿಸುತ್ತಿರುವುದು ಕಂಡುಬರುತ್ತಿದೆ.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, 
ವಿವಿಧ ಆರೋಗ್ಯ ಸೇವೆಗಳು ಮತ್ತು ಆರೋಗ್ಯ ಇಲಾಖೆಯ ಹಾಗೂ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಜಾಗೃತಿ ವಸ್ತುಪ್ರದರ್ಶನ ಏರ್ಪಡಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್, 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗ ನಿಯಂತ್ರಕ ಅಶೋಕ ಪಾಟೀಲ, ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ, ಗ್ರಾಮೀಣ ತಹಸೀಲ್ದಾರ ಸಂಗಪ್ಪ ಬಾಡಗಿ, ಡಿಪೋ ಮ್ಯಾನೇಜರ್ ಆರ್.ಜಿ.ನಾಡಗೌಡ್ರ, ವಾಕರಸಾಸಂ ಉಪಕಾರ್ಮಿಕ ಮುಖ್ಯ ಕಲ್ಯಾಣಾಧಿಕಾರಿ ಪಿ.ವೈ.ನಾಯಕ,ನಿಲ್ದಾಣಾಧಿಕಾರಿ ರೋಹಿಣಿ ಬೇವಿನಕಟ್ಟಿ ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.

ಗಮನಸೆಳೆದ ಬೀದಿ ನಾಟಕ ,ಜಾಗೃತಿ ಗೀತೆಗಳು: 
ಧಾರವಾಡದ ಸಮುದಾಯ ತಂಡದ ಕಲಾವಿದರು ಬೀದಿ ನಾಟಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಫಕೀರವ್ವ ಗುಡಿಸಾಗರ ಜನಪದ ಸಂಸ್ಥೆಯ ಕಲಾವಿದರಿಂದ ನೀರು,ನೈರ್ಮಲ್ಯ, ಆರೋಗ್ಯ ಕುರಿತು ಜಾಗೃತಿ ಗೀತೆಗಳು ಜರುಗಿದವು.

Read These Next