ಅಭಿವೃದ್ಧಿ ಗ್ಯಾರಂಟಿಯ ಬಜೆಟ್; •ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರೂ. •ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒತ್ತು - ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 100 ಕೋ.ರೂ.

Source: Vb | By I.G. Bhatkali | Published on 8th July 2023, 7:31 AM | State News |

ಬೆಂಗಳೂರು: 'ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ' ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ 52ಸಾವಿರ ಕೋಟಿ ರೂ.ಗಳನ್ನು ಒದಗಿಸಲು ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ, ಜನಸಾಮಾನ್ಯರ ಮೇಲೆ ಯಾವುದೇ ತೆರಿಗೆ ವಿಧಿಸದೆ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಪರಿಕಲ್ಪನೆಯ ರಾಜ್ಯದ ಅಭಿವೃದ್ಧಿಗೆ ಪೂರಕವಾದ ತಮ್ಮ ದಾಖಲೆಯ 14ನೇ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ 2023-24ನೇ ಸಾಲಿನ ಒಟ್ಟು 3,27,747 ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸಿದ್ದು, ಒಟ್ಟು ಸ್ವೀಕೃತಿ 3,24,478 ಕೋಟಿ ರೂ., ರಾಜಸ್ವ ಸ್ವೀಕೃತಿ 2,38,410 ಕೋಟಿ ರೂ., ಸಾರ್ವಜನಿಕ ಋಣ(ಸಾಲ) 85,818 ಕೋಟಿ ರೂ.ಗಳು ಎಂದು ಉಲ್ಲೇಖಿಸಿದರು.

ಗ್ಯಾರಂಟಿ ಯೋಜನೆಗಳನ್ನು 'ಬಿಟ್ಟಿ' ಕೊಡುಗೆಗಳೆಂದು ಹಂಗಿಸುವ ಪ್ರತಿಪಕ್ಷಗಳಿಗೆ ಬಜೆಟ್ ಭಾಷಣದಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, 'ಅಭಿವೃದ್ಧಿಯ ಫಲವನ್ನು ದುರ್ಬಲರಿಗೆ ಹಂಚುವ ಪ್ರಯತ್ನ' ಎಂದು ಸಮರ್ಥಿಸಿದರು. 'ದಲಿತರು ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು ಸೇರಿದಂತೆ ದುರ್ಬಲರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದು, ರೈತರಿಗೆ ಶೂನ್ಯ ಬಡ್ಡಿದರದ ಸಾಲವನ್ನು 3ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಶೇ.3ರ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಸಾಲ 10ಲಕ್ಷ ರೂ.ನಿಂದ 20ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗುವುದು ಎಂದು ಘೋಷಿಸಿದರು.

2018ರಲ್ಲಿ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಹಾಗೂ ಅನುಗ್ರಹ, ಅರಿವು ಯೋಜನೆಯನ್ನು ಮರು ಜಾರಿ ಮಾಡ ಲಾಗುವುದು. ಮಕ್ಕಳ ಕಲಿಕಾ ನ್ಯೂನತೆ ಹೋಗಲಾಡಿಸಲು ಮರುಸಿಂಚನ ಯೋಜನೆ ಪ್ರಕಟಿಸಿದ್ದಾರೆ.

ಶಾಲೆಗಳ ಸುತ್ತಮುತ್ತ 50ಲಕ್ಷ ಸಸಿ ನೆಡುವ ಸಸ್ಯ ಶ್ಯಾಮಲ ಯೋಜನೆ ಪ್ರಕಟಿಸಿದ್ದಾರೆ. ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ಬಾರಿ ವಿತರಿಸುತ್ತಿರುವ ಮೊಟ್ಟೆ, ಶೇಂಗಾ, ಚಿಕ್ಕಿ, ಬಾಳೆಹಣ್ಣನ್ನು ವಾರದಲ್ಲಿ 2ದಿನ ವಿತರಿಸುವ ಘೋಷಣೆ ಜತೆಗೆ ಈ ಯೋಜನೆಯನ್ನು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಕೃಷಿಭಾಗ್ಯ ಯೋಜನೆ ಮರುಜಾರಿಗೆ 100 ಕೋಟಿ ರೂ., ರಾಮನಗರ ಮಾದರಿಯಲ್ಲೇ ಶಿಡ್ಲಘಟ್ಟದಲ್ಲಿ 75 ಕೋಟಿ ರೂ.ವೆಚ್ಚದಲ್ಲಿ ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆ ಅಭಿವೃದ್ಧಿ, ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಸಾಲಮಿತಿಯನ್ನು 50 ಸಾವಿರ ರೂ.ನಿಂದ 3ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಟ್ಟ ಎಸ್ಸಿಪಿ-ಟಿಎಸ್ಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಕಲ್ಪಿ ಸಲು 7-ಡಿ'ಯನ್ನು ರದ್ದುಪಡಿಸಲಾಗುವುದು. ಪರಿಶಿಷ್ಟರ ಕಲ್ಯಾಣಕ್ಕೆ 4,079 ಕೋಟಿ ರೂ. ಹೆಚ್ಚಳ ಮಾಡಲಾಗಿದೆ. ಬೆಂಗಳೂರು ನಗರದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಠಾತ್ ಹೃದಯಾಘಾತ ತಡೆಗಟ್ಟಲು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೊಸ ಯೋಜನೆ ರೂಪಿಸಲಾಗುವುದು. ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಕ್ರಮ ವಹಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಆಧರಿತ ಕೈಗಾರಿಕಾ ಕ್ಲಸ್ಟರ್‌ ಅಭಿವೃದ್ಧಿಪಡಿಸಲಾಗುವುದು. ದಕ್ಷಿಣ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಟ್ಟಡ ಹಾಗೂ 25 ತಾಲೂಕುಗಳಲ್ಲಿ ಆಡಳಿತ ಸೌಧ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...