ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

Source: VB | By I.G. Bhatkali | Published on 29th April 2024, 12:41 AM | State News |

ಚಾಮರಾಜನಗರ/ಹನೂರು: ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ಧ್ವಂಸವಾಗಿ, ಚುನಾವಣಾಧಿಕಾರಿ, ತಹಶೀಲಾರ್, ಪೊಲೀಸ್ ಇನ್ ಸೆಕ‌ರ್ ಸಹಿತ ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಬಳಿ ಇರುವ ಇಂಡಿಗನತ್ತ ಮೆಂದಾರೆ ಗ್ರಾಮದ ಮತಗಟ್ಟೆಯೊಂದರಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದ ಪ್ರತಿಭಟನಾಕಾರರು ರೊಚ್ಚಿಗೆದ್ದು ಮತಯಂತ್ರವನ್ನು ಧ್ವಂಸ ಮಾಡಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದಾಗ ಪ್ರತಿಭಟನಾಕಾರರು ಕಲ್ಲು ತೂರಿದ ಘಟನೆಯಿಂದ ತಹಶೀಲ್ದಾರ್ ಗುರುಪ್ರಸಾದ್, ಇನ್‌ಸ್ಪೆಕ್ಟರ್ ಜಗದೀಶ್, ಚುನಾವಣಾಧಿಕಾರಿಗಳಿಗೆ ಗಾಯಗಳಾಗಿವೆ.

ಇಂಡಿಗನತ್ತ ಮೆಂದಾರೆ ಗ್ರಾಮದ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರಕಾರ ಮೀನಾಮೇಷ ಎಣಿಸುತ್ತಿದೆ, ಜಿಲ್ಲಾಡಳಿತವೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು.

ಶುಕ್ರವಾರ ಇಂಡಿಗನತ್ತ ಗ್ರಾಮದ ಮತಗಟ್ಟೆ ಸಂಖ್ಯೆ 146ರಲ್ಲಿ ಮತದಾನಕ್ಕೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಬಂದೋಬಸ್ತನಲ್ಲಿ ಸಿದ್ಧತೆ ಮಾಡಿಕೊಂಡಿ ದ್ದರು. ಮತಗಟ್ಟೆ ಬಳಿಯೇ ಮತ ಬಹಿಷ್ಕಾರ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಮಧ್ಯಾಹ್ನವಾದರೂ ಮತ ಚಲಾವಣೆಯಾಗದ ಹಿನ್ನೆಲೆಯಲ್ಲಿ ಹನೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ತಾಪಂ ಇಒ ಉಮೇಶ್, ಮಹದೇಶ್ವರ ಬೆಟ್ಟ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಅವರು ಮತದಾನಕ್ಕೆ ಸಹಕರಿಸುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಅಧಿಕಾರಿಗಳ ಮನವಿಗೆ ಕೆಲವರು ಸ್ಪಂದಿಸಿ ಮತ ಚಲಾಯಿಸಲು ತೆರಳಿ ಹಿಂದಿರುಗಿದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿತು.

ಪ್ರತಿಭಟನಾಕಾರರು ಮತಗಟ್ಟೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕೆಲವರು ಮತಗಟ್ಟೆಯೊಳಗೆ ನುಗ್ಗಿ ಅಲ್ಲಿದ್ದ ಇವಿಎಂ, ವಿವಿ ಪ್ಯಾಟ್ ಹಾಗೂ ಇನ್ನಿತರ ಸಲಕರಣೆಗಳನ್ನು ಧ್ವಂಸ ಮಾಡಿದ್ದಲ್ಲದೆ, ಮತಗಟ್ಟೆಯ ಬಾಗಿಲು, ಕಿಟಕಿಗಳನ್ನು ಒಡೆದು ಹಾಕಿದ್ದಾರೆ ಎನ್ನಲಾಗಿದೆ. ಸರ್ಕಲ್ ಇನ್‌ಸ್ಪೆಕ್ಟರ್ ಜಗದೀಶ್ ಅವರು ಪೊಲೀಸರು ಮತ್ತು ಹೋಂ ಗಾರ್ಡ್‌ಗಳ ಮೂಲಕ ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸರ ಲಘು ಲಾಠಿ ಪ್ರಹಾರದಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲುಗಳನ್ನು ಪೊಲೀಸರು ಮತ್ತು ಮತಗಟ್ಟೆಯ ಮೇಲೆ ತೂರಿದ್ದಾರೆ ಎನ್ನಲಾಗಿದೆ.

ಪೊಲೀಸರ ಲಾಠಿ ಪ್ರಹಾರದಿಂದಾಗಿ ಮಹಿಳೆಯೊಬ್ಬರ ತಲೆ, ಕೈಗೆ ಪೆಟ್ಟಾಗಿದೆ. ಗ್ರಾಮಸ್ಥರ ಕಲ್ಲು ತೂರಾಟದಿಂದ ತಹಶೀಲ್ದಾ‌ರ್ ಗುರುಪ್ರಸಾದ್, ಇನ್‌ಸ್ಪೆಕ್ಟರ್ ಜಗದೀಶ್ ಹಾಗೂ ಚುನಾವಣಾ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲೂ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಈ ನಡುವೆ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೊಂಬೆಗಲ್ಲು ಮತ್ತು ಕೆರೆದಿಂಬ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಚುನಾವಣಾ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಮತ್ತು ತುಳಸಿಕೆರೆ ಮತಗಟ್ಟೆಗಳಲ್ಲಿ ಮತದಾನ ಸಂಪೂರ್ಣ ಬಹಿಷ್ಕಾರವಾದಂತಾಗಿದೆ. ಇಲ್ಲಿ ಮರು ಮತದಾನ ನಡೆಯಲಿದ್ದು, ಚುನಾವಣಾಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಬಳಿಕ ಮತದಾನದ ದಿನಾಂಕ ನಿಗದಿ ಪಡಿಸುವ ಸಾಧ್ಯತೆಗಳಿವೆ. ಇಂಡಿಗನತ್ತ ಘಟನೆಯ ಬಗ್ಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳಿಂದ ವಿವರಣೆ ಪಡೆದುಕೊಂಡಿದೆ.

Read These Next

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ರಾಜ್ಯಾದ್ಯಂತ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.40ರಷ್ಟು ಉತ್ತೀರ್ಣತೆ ದಾಖಲಾಗಿದೆ. ...

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ; 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಈ ವರ್ಷದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ 94 ರಷ್ಟು ಪ್ರಥಮ ಹಾಗೂ ದಕ್ಷಿಣ ಕಾಂಡ ಶೇ 92.12 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ...