ಹಿಜಾಬ್: ಸುಪ್ರೀಂ ಪೀಠದಿಂದ ಭಿನ್ನ ತೀರ್ಪು; ಮುಖ್ಯ ನ್ಯಾಯಾಧೀಶರ ಅಂಗಳದಲ್ಲಿ ಪ್ರಕರಣ

Source: Vb | By I.G. Bhatkali | Published on 14th October 2022, 10:06 PM | Coastal News | State News | National News |

ಹೊಸದಿಲ್ಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕರ್ನಾಟಕ ಸರಕಾರದ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲನವಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನ್ಯಾಯಪೀಠದ ಇಬ್ಬರು ನ್ಯಾಯಾಧೀಶರು ಗುರುವಾರ ಭಿನ್ನ ತೀರ್ಪುಗಳನ್ನು ನೀಡಿದ್ದಾರೆ. ಇದೀಗ ವಿಭಾಗೀಯ ಪೀಠವು ಸೂಕ್ತ ನಿರ್ದೇಶನಕ್ಕಾಗಿ ತೀರ್ಪುಗಳನ್ನು ಮುಖ್ಯ ನ್ಯಾಯಾಧೀಶರ ಮುಂದಿರಿಸಿದೆ.

ದ್ವಿಸದಸ್ಯ ನ್ಯಾಯಪೀಠದ ಒಬ್ಬ ನ್ಯಾಯಾಧೀಶ ಸುಧಾಂಶು ಧುಲಿಯಾ ತನ್ನ ತೀರ್ಪಿನಲ್ಲಿ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿ ಕರ್ನಾಟಕ ಸರಕಾರದ ಆದೇಶವನ್ನು ರದ್ದುಪಡಿಸಿದ್ದಾರೆ. ಆದರೆ, ನ್ಯಾಯಪೀಠದ ಇನ್ನೋರ್ವ ಸದಸ್ಯ ಹೇಮಂತ್ ಗುಪ್ತಾ ಮೇಲ್ಮನವಿಗಳನ್ನು ತಳ್ಳಿಹಾಕಿದ್ದಾರೆ.

ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಹಿಜಾಬ್ ಇಸ್ಲಾಮ್‌ ಅತ್ಯಗತ್ಯ ಭಾಗವಲ್ಲ; ಹಾಗಾಗಿ, ಅದಕ್ಕೆ ಧಾರ್ಮಿಕ ಮೂಲಭೂತ ಹಕ್ಕಿನ ಅಡಿಯಲ್ಲಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಕಳೆದ ತಿಂಗಳು, ಗುಪ್ತಾ ಮತ್ತು ಧುಲಿಯಾ ಅವರನ್ನೊಳಗೊಂಡ ವಿಭಾಗೀಯಪೀಠವು, ಅರ್ಜಿದಾರರು (ವಿದ್ಯಾರ್ಥಿನಿಯರು) ಮತ್ತು ರಾಜ್ಯ ಸರಕಾರದ ಪರ ವಕೀಲರು ಮಂಡಿಸಿದ ವಾದಗಳನ್ನು 10 ದಿನಗಳ ಕಾಲ ಆಲಿಸಿದ ಬಳಿಕ, ತನ್ನ ತೀರ್ಪನ್ನು ಕಾದಿರಿಸಿತ್ತು.

ನ್ಯಾಯಾಧೀಶರು ಏನೇನು ಹೇಳಿದರು?: ಕರಣವನ್ನು ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಬೇಕೇ ಎನ್ನುವುದು ಸೇರಿದಂತೆ ಈ ವಿಷಯದಲ್ಲಿ 11 ಪ್ರಶ್ನೆಗಳನ್ನು ನಾನು ರೂಪಿಸಿದ್ದೇನೆ ಎಂದು ತನ್ನ ತೀರ್ಪಿನಲ್ಲಿ ಗುರುವಾರ ನ್ಯಾ.ಹೇಮಂತ್ ಗುಪ್ತಾ ಹೇಳಿದರು. ವಿದ್ಯಾರ್ಥಿಗಳ ಸಮವಸ್ತ್ರಗಳ ಬಗ್ಗೆ ಕಾಲೇಜು ಆಡಳಿತವು ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದೇ, ಹಿಜಾಬ್ ಧರಿಸುವುದು ಅಥವಾ ನಿಷೇಧಿಸುವುದು ಸಂವಿಧಾನದ 25ನೇ ವಿಧಿ (ಧರ್ಮವನ್ನು ಬೋಧಿಸುವ, ಅನುಸರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯ)ಯ ಉಲ್ಲಂಘನೆಯೇ ಮತ್ತು ಶಿರವಸ್ತ್ರವನ್ನು ಧರಿಸುವುದು ಇಸ್ಲಾಮ್‌ ಅತ್ಯಗತ್ಯ ಧಾರ್ಮಿಕ ಆಚರಣೆಯೇ- ಇವು ಗುಪ್ತಾ ರೂಪಿಸಿರುವ ಪ್ರಶ್ನೆಗಳ ಪೈಕಿ ಕೆಲವು.

ಅದೇ ವೇಳೆ, ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಷಯ ಈ ಪ್ರಕರಣದಲ್ಲಿ ಮುಖ್ಯವಾಗುವುದಿಲ್ಲ ಎಂದು ಪೀಠದ ಇನ್ನೋರ್ವ ಸದಸ್ಯ ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ. “ಹೈಕೋರ್ಟ್ ತಪ್ಪು ದಾರಿಯಲ್ಲಿ ಸಾಗಿತ್ತು” ಎಂದು ಅವರು ಅಭಿಪ್ರಾಯಪಟ್ಟರು. “ಅಂತಿಮವಾಗಿ ಇದು ವ್ಯಕ್ತಿಗಳ ಆಯ್ಕೆಗೆ ಹಾಗೂ ಸಂವಿಧಾನದ 14ನೇ ವಿಧಿ (ಕಾನೂನಿನ ಎದುರು ಎಲ್ಲರೂ ಸಮಾನರು) ಮತ್ತು 19ನೇ ವಿಧಿ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ)ಗೆ ಸಂಬಂಧಿಸಿದ ವಿಷಯ' ಎಂದು ಅವರು ಹೇಳಿದರು.

ಎಲ್ಲಾ ನಾಗರಿಕರಿಗೆ ಜಾತ್ಯತೀತತೆ ಅನ್ವಯ: ನ್ಯಾ. ಗುಪ್ತಾ: ಜಾತ್ಯತೀತತೆಯು ಎಲ್ಲಾ ನಾಗರಿಕರಿಗೆ ಅನ್ವಯವಾಗುತ್ತದೆ, ಹಾಗಾಗಿ, ಒಂದು ಸಮುದಾಯಕ್ಕೆ ಧಾರ್ಮಿಕ ಸಂಕೇತಗಳನ್ನು ಬಳಸಲು ಅನುಮತಿ ನೀಡುವುದು ಜಾತ್ಯತೀತತೆಗೆ ವಿರುದ್ಧವಾಗುತ್ತದೆ ಎಂದು ನ್ಯಾ. ಹೇಮಂತ್ ಗುಪ್ತಾ ಅಭಿಪ್ರಾಯಪಟ್ಟರು. "ತಮ್ಮ ಧಾರ್ಮಿಕ ಸಂಕೇತಗಳನ್ನು ಶಾಲಾ ತರಗತಿಗಳಿಗೆ ಒಯ್ಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ, ಭ್ರಾತೃತ್ವದ ಸಾಂವಿಧಾನಿಕ ಉದ್ದೇಶವು ವಿಫಲವಾಗುತ್ತದೆ'' ಎಂದು ಅವರು ಹೇಳಿದರು.

ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬ ಪ್ರಶ್ನೆಯೇ ಮುಖ್ಯವಲ್ಲ: ಧುಲಿಯಾ: ಹಿಜಾಬ್ ನಿಷೇಧಕ್ಕೆ ಸಂಬಂಧಿಸಿ • ಸುಪ್ರೀಂ ಕೋರ್ಟ್ ಭಿನ್ನ ತೀರ್ಪು ನೀಡಿದೆಯಾದರೂ, ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ ಎಂಬ ವಿಷಯದ ಬಗ್ಗೆ ನ್ಯಾಯಪೀಠದ ಇಬ್ಬರೂ ಸದಸ್ಯರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಹಿಜಾಬ್ ಇಸ್ಲಾಮ್‌ ಇಸ್ಲಾಮ್‌ನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಹಾಗಾಗಿ ಅರ್ಜಿದಾರರು ಸಂವಿಧಾನದ 25ನೇ ವಿಧಿಯಡಿಯಲ್ಲಿ ರಕ್ಷಣೆ ಕೋರಲು ಸಾಧ್ಯವಿಲ್ಲ. ಎಂಬುದಾಗಿ ಕರ್ನಾಟಕ ಹೈಕೋರ್ಟ್ ಹೇಳಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಲಾಗಿತ್ತು.

ಹಿಜಾಬ್ ಧಾರಣೆಯು 'ಧಾರ್ಮಿಕ ಆಚರಣೆ' ಯಾಗಿರಬಹುದು ಅಥವಾ ಅತ್ಯ ಗತ್ಯ ಧಾರ್ಮಿಕ ಆಚರಣೆಯಾಗಿರ ಬಹುದು ಅಥವಾ ಅದು ಇಸ್ಲಾಮ್ ಧರ್ಮದ ಮಹಿಳೆ ಯರ ಸಾಮಾಜಿಕ ನಡವಳಿಕೆಯಾಗಿರ ಬಹುದು. ಆದರೆ, ಶಾಲೆಗಳ ಒಳಗಡೆ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಲಾರದು ಎಂದು ನ್ಯಾ.ಹೇಮಂತ್ ಗುಪ್ತಾ ಹೇಳಿದರೆ, ಈ ವಿವಾದವನ್ನು ಇತ್ಯರ್ಥ ಪಡಿಸಲು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರ ಣೆಯೇ ಎನ್ನುವುದನ್ನು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಅಭಿಪ್ರಾಯ ವನ್ನು ನ್ಯಾ.ಸುಧಾಂಶು ಧುಲಿಯಾ ವ್ಯಕ್ತ ಪಡಿಸಿದರು. ನ್ಯಾ.ಗುಪ್ತಾ ತನ್ನ ತೀರ್ಪಿನಲ್ಲಿ ಕುರ್‌ ಆನ್ ಮತ್ತು ಇತರ ಧಾರ್ಮಿಕ ಪುಸ್ತಕಗಳಲ್ಲಿ ಹೇಳಲಾಗಿರುವ ವಿವಿಧ ಅಂಶಗಳನ್ನು ಹಾಗೂ ಅತ್ಯಗತ್ಯ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ತೀರ್ಪುಗಳನ್ನು ದಾಖಲಿಸಿದ್ದಾರೆ.

ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬ ಅಭಿಪ್ರಾಯವನ್ನು ಆ ಧರ್ಮವನ್ನು ಅನುಸರಿಸುವವರು ಪ್ರತಿಪಾದಿಸಿದರೆ, ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಸಂಕೇತಗಳನ್ನು ಜಾತ್ಯತೀತ ಶಾಲೆಯೊಂದಕ್ಕೆ ಒಯ್ಯಬಹುದೇ ಎಂಬ ಪ್ರಶ್ನೆಯನ್ನು ನಾನುಕೇಳುತ್ತೇನೆ” ಎಂದು ನ್ಯಾ. ಗುಪ್ತಾ ಹೇಳಿದ್ದಾರೆ. ಧಾರ್ಮಿಕ ನಂಬಿಕೆಯೊಂದನ್ನು ಸರಕಾರಿ ಹಣದಿಂದ ನಡೆಸಲ್ಪಡುವ ಜಾತ್ಯತೀತ ಶಾಲೆಯೊಂದಕ್ಕೆ ಒಯ್ಯುವಂತಿಲ್ಲ. ಹಿಜಾಬ್ ಧರಿಸಲು ಅಥವಾ ತಿಲಕ ಮುಂತಾದ ಯಾವುದೇ ಗುರುತು ಧರಿಸಲು ಅವಕಾಶ ನೀಡುವ ಶಾಲೆಯೊಂದಕ್ಕೆ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯನ್ನು ಒಯ್ಯಬಹುದು. ಆದರೆ, ಸರಕಾರಿ ನಿಧಿಯಿಂದ ಸರಕಾರವು ನಡೆಸುವ ಶಾಲೆಗಳಿಗೆ ಧಾರ್ಮಿಕ ನಂಬಿಕೆಯ ಸಂಕೇತಗಳನ್ನು ಒಯ್ಯುವಂತಿಲ್ಲ ಎಂಬ ಸೂಚನೆ ನೀಡುವ ಅಧಿಕಾರ ಸರಕಾರಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಷಯವನ್ನು ಕೈಗೆತ್ತಿಕೊಂಡಿರುವುದಕ್ಕಾಗಿ ನ್ಯಾ. ಧುಲಿಯಾ ಕರ್ನಾಟಕ ಹೈಕೋರ್ಟನ್ನು ಟೀಕಿಸಿದ್ದಾರೆ. “ನ್ಯಾಯಾಲಯದ ಎದುರಿರುವ ವಿಷಯವನ್ನು ಇತ್ಯರ್ಥಪಡಿಸಲು ಅತ್ಯಗತ್ಯ ಧಾರ್ಮಿಕ ಆಚರಣೆಗಳ ವಿಷಯ ಯಾವುದೇ ರೀತಿಯಲ್ಲಿ ಪ್ರಸ್ತುತವಲ್ಲ. ಯಾಕೆಂದರೆ, ಹಾಲಿ ಪ್ರಕರಣದಂತೆ, ಸಂವಿಧಾನದ 25(1) ವಿಧಿಯಡಿಯಲ್ಲಿ ಅರ್ಜಿದಾರರು ರಕ್ಷಣೆ ಕೋರುವಾಗ, ತಾವುಅಗತ್ಯ ಧಾರ್ಮಿಕ ಆಚರಣೆಯ ಹಕ್ಕನ್ನು ಕೇಳುತ್ತಿದ್ದೇವೆ ಎನ್ನುವುದನ್ನು ಅವರು ಸಾಬೀತುಪಡಿಸುವ ಅಗತ್ಯವೇ ಇರುವುದಿಲ್ಲ. ಅದೊಂದು ಸರಳ ಧಾರ್ಮಿಕ ಆಚರಣೆಯಾಗಿರಬಹುದು, ನಂಬಿಕೆಯ ಅಥವಾ ಆತ್ಮಸಾಕ್ಷಿಯ ವಿಚಾರವಾಗಿರಬಹುದು. ಆದರೆ, ಅವರ ಹಕ್ಕುಗಳು “ಸಾರ್ವಜನಿಕ ವ್ಯವಸ್ಥೆ, ನೈತಿಕತೆ ಮತ್ತು ಆರೊಗ್ಯಕ್ಕೆ ವಿರುದ್ಧವಾಗಿರಬಾರದು. ಅದೂ ಅಲ್ಲದೆ, ಅದು ಸಂವಿಧಾನದ ಮೂರನೇ ಭಾಗದಲ್ಲಿರುವ ವಿಧಿಗಳಿಗೆ ಅನುಗುಣವಾಗಿರಬೇಕು' ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್‌ ಗ್ರಹಿಕೆಯು ಇದಕ್ಕಿಂತ ಭಿನ್ನವಾಗಿರ ಬಹುದಾಗಿತ್ತು. ಅದು ಒಮ್ಮೆಲೇ ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಷಯಕ್ಕೆ ಧುಮುಕುವ ಮೊದಲು, ಹಿಜಾಬ್ ಧಾರಣೆಯ ಮೇಲೆ ಶಾಲೆ ಅಥವಾ ಸರಕಾರ ವಿಧಿಸಿರುವ ನಿರ್ಬಂಧಗಳು ಸರಿಯಾದ ನಿರ್ಬಂಧಗಳೇ ಎನ್ನುವುದನ್ನು ಪರಿಶೀಲಿಸಬಹುದಾಗಿತ್ತು'' ಎಂದು ನ್ಯಾ. ಧುಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಹಿಜಾಬ್ ಧರಿಸುವ ಬಾಲಕಿಯು ಸಾರ್ವಜನಿಕ ವ್ಯವಸ್ಥೆಗೆ ಸವಾಲು ಹೇಗೆ?:ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಸರಕಾರ ಹೊರಡಿಸಿರುವ ಫೆಬ್ರವರಿ 5ರ ಆದೇಶದಲ್ಲಾಗಲಿ, ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಾಗಲಿ ಸರಕಾರವು ಇದಕ್ಕೆ ಯಾವುದೇ ಸ್ವೀಕಾರಾರ್ಹ ಕಾರಣಗಳನ್ನು ನೀಡಿಲ್ಲ. ಶಾಲಾ ತರಗತಿಯಲ್ಲಿ ಹಿಜಾಬ್ ಧರಿಸುವ ಬಾಲಕಿಯೊಬ್ಬಳು ಸಾರ್ವಜನಿಕ ವ್ಯವಸ್ಥೆಗೆ ಅಥವಾ ಕಾನೂನುಮತ್ತು ಸುವ್ಯವಸ್ಥೆಗೆ ಹೇಗೆ ಸಮಸ್ಯೆಯಾಗುತ್ತಾಳೆ ಎನ್ನುವುದು ನನ್ನ ತರ್ಕಕ್ಕೆ ನಿಲುಕುವುದಿಲ್ಲ' ಎಂದುತನ್ನ ತೀರ್ಪಿನಲ್ಲಿ ನ್ಯಾ. ಸುಧಾಂಶು ಧುಲಿಯಾ ಹೇಳಿದ್ದಾರೆ. ಬದಲಿಗೆ, ಈ ವಿಷಯದಲ್ಲಿ ಸರಕಾರವು ಸೂಕ್ತ ಕೊಡುಕೊಳ್ಳುವಿಕೆ ನೀತಿಯನ್ನು ಅನುಸರಿಸಿದರೆ, ತನ್ನ ಭಿನ್ನಾಭಿಪ್ರಾಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ಬದುಕಲು ಕಲಿತ ಪ್ರಬುದ್ಧ ಸಮಾಜ ನಾವಾಗಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ್ಯ, ಘನತೆಯನ್ನು ಬಲಿಗೊಟ್ಟು ಶಿಸ್ತು ತರಲಾಗದು ಭಿನ್ನ ತೀರ್ಪುಗಳನ್ನು ನೀಡಿರುವ ಇಬ್ಬರೂ ನ್ಯಾಯಾಧೀಶರು ತಮ್ಮ ತೀರ್ಪುಗಳಿಗೆ ಬಲವಾದ ಕಾರಣಗಳನ್ನು ನೀಡಿದ್ದಾರೆ. ನ್ಯಾ.ಧುಲಿಯಾ ತನ್ನ ತೀರ್ಪಿನಲ್ಲಿ ಜಾತ್ಯತೀತತೆ, ಸಾಂವಿಧಾನಿಕ ಹಕ್ಕುಗಳು ಮತ್ತು ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. “ನಮ್ಮ ಸಂವಿ ಧಾನದ ಹಲವು ಅಂಶಗಳಲ್ಲಿ ನಂಬಿಕೆಯೂ ಒಂದು. ನಮ್ಮ ಸಂವಿಧಾನವು ನಂಬಿಕೆಯ ಒಂದು ದಾಖಲೆಯಾಗಿದೆ. ಅದು ಅಲ್ಪಸಂಖ್ಯಾತರು ಬಹು ಸಂಖ್ಯಾತರ ಮೇಲೆ ಇಟ್ಟಿರುವ ನಂಬಿಕೆಯಾಗಿದೆ' ಎಂದು ನ್ಯಾ.ಧುಲಿಯಾ ತನ್ನ ತೀರ್ಪಿನಲ್ಲಿ ಹೇಳಿದರು. ಅದೇವೇಳೆ, “ಶಾಲೆಗಳಲ್ಲಿ ಶಿಸ್ತು ಮುಖ್ಯ. ಆದರೆ ಸ್ವಾತಂತ್ರ್ಯ ಮತ್ತು ಘನತೆಯನ್ನು ಬಲಿಗೊಟ್ಟು ಶಿಸ್ತು ತರಲಾಗದು. ಶಾಲಾ ದ್ವಾರದ ಹೊರಗೆ ಹಿಜಾಬ್ ತೆಗೆಯುವಂತೆ ಪಿಯುಸಿ ಬಾಲಕಿಯೊಬ್ಬಳಿಗೆ ಸೂಚಿಸುವುದು ಆಕೆಯ ಖಾಸಗಿತನ ಮತ್ತು ಘನತೆಯ ಮೇಲಿನ ಅತಿಕ್ರಮಣವಾಗಿದೆ'' ಎಂದು ಅವರು ಹೇಳಿದರು.

ಓರ್ವ ಬಾಲಕಿ ಬೆಳಗ್ಗೆ ತನ್ನ ಶಾಲಾ ಚೀಲವನ್ನು ಬೆನ್ನಿಗೆ ಹಾಕಿಕೊಂಡು ಶಾಲೆಗೆ ಹೊರಡುವ ದೃಶ್ಯವು ಇಂದಿನ ಭಾರತದ ಅತ್ಯಂತ ಶ್ರೇಷ್ಠ ದೃಶ್ಯಗಳಲ್ಲಿ ಒಂದಾಗಿದೆ. ಅವಳು ನಮ್ಮ ಭರವಸೆ, ನಮ್ಮ ಭವಿಷ್ಯ. ಆದರೆ, ಸಹೋದರನಿಗೆ ಹೋಲಿಸಿದರೆ ಓರ್ವ ಬಾಲಕಿಯು ಶಿಕ್ಷಣ ಪಡೆಯುವುದು ತುಂಬಾ ಕಷ್ಟ ಎನ್ನುವುದು ಕೂಡಾ ವಾಸ್ತವ' ಎಂದು ನ್ಯಾ. ಧುಲಿಯಾ ತನ್ನ ತೀರ್ಪಿನಲ್ಲಿ ಹೇಳಿದರು.

ಅರ್ಜಿದಾರರು ಕೇಳಿದ್ದಿಷ್ಟೆ. ನಾವು ಹಿಜಾಬ್ ಧರಿಸುತ್ತೇವೆ ಎಂದು ಪ್ರಜಾಪ್ರಭುತ್ವವೊಂದರಲ್ಲಿ ಅಷ್ಟನ್ನೂ ಕೇಳಲು ಸಾಧ್ಯವಿಲ್ಲವೇ? ಅದು ಸಾರ್ವಜನಿಕ ವ್ಯವಸ್ಥೆ, ನೈತಿಕತೆ ಅಥವಾ ಆರೋಗ್ಯಕ್ಕೆ ಅಥವಾ ಸಭ್ಯತೆಗಾದರೂ ಹೇಗೆ ವಿರುದ್ಧವಾಗುತ್ತದೆ?” ಅವರು ಪ್ರಶ್ನಿಸಿದರು.

Read These Next

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...