ಚೆನ್ನಮ್ಮ ವೃತ್ತ ಫ್ಲೈ ಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ. ಉತ್ತರ ಕರ್ನಾಟಕ ಭಾಗದ ರಾಷ್ಟೀಯ ಹೆದ್ದಾರಿಗಳ ಅಭಿವೃದ್ಧಿಗೆ 21 ಸಾವಿರ ಕೋಟಿ ಬಿಡುಗಡೆ : ಕೇಂದ್ರ ಸಚಿವ ನಿತಿನ್ ಗಡ್ಕರಿ

Source: SO News | By Laxmi Tanaya | Published on 16th January 2021, 7:19 PM | State News |

ಹುಬ್ಬಳ್ಳಿ : ಕೇಂದ್ರ ಸರ್ಕಾರದಿಂದ ಉತ್ತರ ಕರ್ನಾಟಕ ಭಾಗದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 21 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಚಿವ ನಿತಿನ್ ಗಡ್ಕರಿ ಹೇಳಿದರು. 

ನಗರದ ಡೆನ್ನಿಸನ್ ಹೋಟೆಲ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಹುಬ್ಬಳ್ಳಿ ಚೆನ್ನಮ್ಮಾ ವೃತ್ತದ ಫ್ಲೈ ಓವರ್ ಹಾಗೂ ಕಲಘಟಗಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ 2.77 ಕಿ.ಮೀ. ಚತುಷ್ಪಥ ರಸ್ತೆ ಹಾಗೂ ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣ ಕಾಮಗಾರಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಸತತ ಪ್ರಯತ್ನದಿಂದಾಗಿ ಸುಂದರವಾದ ಚೆನ್ನಮ್ಮಾ ವೃತ್ತದ ಫ್ಲೈ ಓವರ್ ನಿರ್ಮಾಣ ಕಾಮಾಗರಿ ಸಾಧ್ಯವಾಗಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಿಂದ ಹಣ ಬಿಡುಗಡೆ ಮಾಡಲಾಗಿದೆ. 

ಭಾರತ ಸರ್ಕಾರ ಕರ್ನಾಟಕ ರಾಜ್ಯ ಸಂಪೂರ್ಣ ಅಭಿವೃದ್ಧಿಗೆ ಸಹಕಾರ ನೀಡಲಿದೆ. ಈ ಮೊದಲು 19 ಡಿಸೆಂಬರ್ 2020 ರಂದು ನೆಡೆದ ಕಾರ್ಯಕ್ರಮದಲ್ಲಿ, ರೂ.5454 ಕೋಟಿ ವೆಚ್ಚದ 25 ಹೆದ್ದಾರಿಗಳ ಅಭಿವೃದ್ಧಿಯ ಕಾಮಗಾರಿಗೆ ಭೂಮಿ ಪೂಜೆ ಹಾಗೂ 5449 ಕೋಟಿ ವೆಚ್ಚದ ಪೂರ್ಣಗೊಂಡ 8 ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಮಾಡಲಾಗಿದೆ. 

298 ಕೋಟಿ ವೆಚ್ಚದಲ್ಲಿ 3.6 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಚೆನ್ನಮ್ಮ ವೃತ್ತ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸುಸಜ್ಜಿತ ರಸ್ತೆ ಇದಾಗಿರಲಿದ್ದು, ಹುಬ್ಬಳ್ಳಿಯ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿ ಪ್ರಯಾಣ ಸಮಯವನ್ನು 30 ನಿಮಿಷದಿಂದ 10 ನಿಮಿಷಕ್ಕೆ ಇಳಿಸಲಿದೆ. ಚೆನ್ನಮ್ಮಾ ವೃತ್ತದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದರೊಂದಿಗೆ ಪರಿಸರ ಆಗುವ ಹಾನಿಯನ್ನು ತಪ್ಪಿಸಲಿದೆ. ಅಂಕೋಲಾ ಗೂಟಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬರುವ ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣ ಮಾಡುವುದರಿಂದ, ಸುಗಮ ಸಂಚಾರ ಹಾಗೂ ಅಪಘಾತವನ್ನು ತಡೆಗಟ್ಟಲಿದೆ. 25 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣದೊಂದಿಗೆ 2.77 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು. 

1335 ಕೋಟಿ ವೆಚ್ಚದಲ್ಲಿ 144 ಕಿ.ಮೀ ಉದ್ದದ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ.77 ರಷ್ಟು ಪೂರ್ಣವಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ಹುಬ್ಬಳ್ಳಿ-ಹಾವೇರಿ, ಹಾವೇರಿ-ದಾವಣಗೆರೆ ಮಾರ್ಗದ 6 ಪಥಗಳ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಮೂರು ಕಾಮಗಾರಿಗಳನ್ನು ಮಾರ್ಚ್ 2021 ರ ಒಳಗಾಗಿ ಪೂರ್ಣಗೊಳಿಸಲಾಗುವುದು. 
ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶದ ಗಡಿ ರಸ್ತೆಗಳು, ಬೆಳಗಾವಿ-ಖಾನಾಪುರ, ಹುಬ್ಬಳ್ಳಿ-ಬಿಜಾಪುರ, ಹುಬ್ಬಳ್ಳಿ-ಬೈಪಾಸ್, ಧಾರವಾಡ-ನರೇಂದ್ರ ಬೈಪಾಸ್, ಅಂಕೋಲಾ-ಗೂಟಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ 6600 ಕೋಟಿ ವೆಚ್ಚದ 21 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಇವುಗಳನ್ನು ಬೇಗನೆ ಪೂರ್ಣಗೊಳಿಸಲಾಗುವುದು. 

ಉತ್ತರ ಕರ್ನಾಟಕ ಭಾಗದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಗೊಟುರು-ಅಕ್ಕಲಕೋಟೆ, ಕುಮುಟಾ-ಹಾವೇರಿ, ಮಚ್ಚೆ-ಗೋವಾ, ಭಾಲ್ಕಿ-ಜಿತನೂರ, ಬೀದರ್-ಔರದ್ ಮಹಾರಾಷ್ಟ್ರ ತೆಲಂಗಾಣ ಸಂಪರ್ಕಿಸುವ ಇತರೆ ಹೆದ್ದಾರಿಗಳು ಸೇರಿದಂತೆ 626 ಕಿಮಿ ಉದ್ದದ 10 ರಾಷ್ಟ್ರೀಯ ಹೆದ್ದಾರಿಗಳನ್ನು 3 ವರ್ಷಗಳಲ್ಲಿ ನಿರ್ಮಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್, ಬೆಳಗಾವಿ ರಿಂಗ್ ರೋಡ್, ಬೆಳಗಾವಿ-ಹುನಗುಂದ, ಹಾವೇರಿ-ಯಾಕುಂಬಿ, ಅಮ್ಮಿನಗಡ-ಬಾಣಪುರ, ನಿಪ್ಪಾಣಿ-ಚಿಕ್ಕೋಡಿ, ಬೀದರ್-ತೆಲೆಂಗಾಣ ಗಡಿ ರಸ್ತೆ, ಸಂಕೇಶ್ವರ-ಮುರಗುಡ್ಯಾ, ಟಿಕೋಟ-ಕನಮಡಿ, ಶಿರೂರು-ಗದ್ದನಕೇರಿ, ನಾಗಸೂರು-ಇಂಡಿ, ಇಂಡಿ-ಬಿಜಾಪುರ, ನರಗುಂದ-ನವಲಗುಂದ ರಸ್ತೆಗಳ ನಿರ್ಮಾಣಕ್ಕಾಗಿ ಒಟ್ಟು 21 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ಅಗತ್ಯ ಇಲಾಖೆಗಳಿಂದ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಬೇಕು.

ಕೇಂದ್ರ ಸರ್ಕಾರ 2001 ರಿಂದ ಇಲ್ಲಿಯ ವರೆಗೆ 8330 ಕೋಟಿ ಕೇಂದ್ರ ರಸ್ತೆ ನಿಧಿಯನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಕಳೆದ ಬಾರಿ 435 ಕೋಟಿ ಬಿಡುಗಡೆ ಮಾಡಲಾಗಿದೆ. ಇದುವರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 4443 ಕೋಟಿ ರಸ್ತೆ ನಿಧಿಯನ್ನು ಬಿಡುಗಡೆ ಮಾಡಬೇಕಿದೆ. ಈ ವರ್ಷವೂ ಕರ್ನಾಟಕ್ಕೆ ಯಾವುದೇ ಕೇಂದ್ರ ರಸ್ತೆ ನಿಧಿಯನ್ನು ನೀಡಿರುವುದಿಲ್ಲ. ರಾಜ್ಯ ಸರ್ಕಾರ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು, ಕೇಂದ್ರ ರಸ್ತೆ ನಿಧಿಯಡಿ ಕಾಮಗಾರಿ ಕೈಗೊಳ್ಳಲಿ. ಕೇಂದ್ರ ದಿಂದ ಪ್ರತಿ ವರ್ಷ ಪ್ರೆಟ್ರೋಲ್ ಹಾಗೂ ಡಿಜಲ್ ಮೇಲಿನ ಸೆಸ್ ಆಧರಿಸಿ ರಾಜ್ಯಕ್ಕೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗುವುದು. ಭಾರತ ಮಾಲಾ ಯೋಜನೆ ಹಾಗೂ ಬೇಲಿಕೇರಿ ಬಂದರನ್ನು ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ಪಡಿಸಲಾಗುವುದು. ಚೆನೈ ಬೆಂಗಳೂರು ಎಕ್ಸ್ಪ್ರಸ್ ಹೆದ್ದಾರಿ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. 

ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಯೋಜನೆ ಸಾಕಾರಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಕಬ್ಬು ಹೆಚ್ಚಾಗಿ ಬೆಳೆಯಲಾಗುತ್ತದೆ. ಕಬ್ಬಿನ ಕಾರ್ಖಾನೆಗಳು ಹೆಚ್ಚಿವೆ. ಕೇಂದ್ರ ಸರ್ಕಾರ ಬಜಾಜ್ ಹಾಗೂ ಟಾಟಾ ಕಂಪನಿಗಳ ಸಹಯೋಗದೊಂದಿಗೆ ಎಥೆನಾಲ್ ಆಧಾರಿತ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿ ಪಡಿಸಿದೆ. ಭಾರತದಲ್ಲಿ ಕಾರುಗಳಿಗೆ ಎಥೆನಾಲ್ ಅನ್ನು ಇಂಧನವಾಗಿ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಬ್ಬಿನಿಂದ ಎಥೆನಾಲ್ ಅನ್ನು ಉತ್ಪಾದಿಸಬಹುದು. ಭಾರತದಲ್ಲಿ ಅಕ್ಕಿ, ಗೋಧಿ, ಬಾರ್ಲಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಎಣ್ಣೆ ಕಾಳುಗಳನ್ನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಎಥೆನಾಲ್ ಮಿಥೆನಾಲ್ ಸೇರಿದಂತೆ ಇತರೆ ಬಯೋ ಇಂಧನಗಳನ್ನು ಬಳಕೆಯಿಂದ ಪರಿಸರ ರಕ್ಷಣೆಯಾಗಲಿದೆ. 

ಕರ್ನಾಟಕ ಸರ್ಕಾರದ ಸಮಗ್ರ ಅಭಿವೃದ್ದಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ಬೆಂಗಳೂರಿನ ವಾಹನ ದಟ್ಟಣೆ ನಿರ್ವಹಿಸುವಲ್ಲಿ, ಹಾಗೂ ಹೊಸ ರಿಂಗ್ ರೋಡ್ ನಿರ್ಮಾಣದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು. 

ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿ, ರಾಜ್ಯ ಸರ್ಕಾರ ವಿವಿಧ ಬ್ಯಾಂಕುಗಳಿಂದ ಹಣ ಪಡೆದು ಕೇಂದ್ರ ನಿಧಿಯಡಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ 1.66 ಲಕ್ಷ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಆಭಾರಿಯಾಗಿದೆ. ಕರ್ನಾಟಕ ಉತ್ತಮ ಸಂಪರ್ಕ ರಸ್ತೆಗಳನ್ನು ಹೊಂದಿದ್ದು, ಎರಡನೇ ಹಾಗೂ ಮೂರನೇ ಸ್ತರದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಭೂಸ್ವಾಧೀನಕ್ಕಾಗಿ ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು. 

ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ನಿವೃತ್ತ ಸೇನಾಧಿಕಾರಿ ಡಾ.ವಿ.ಕೆ.ಸಿಂಗ್, ಉಪಮುಖ್ಯ ಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ ಕಾರಜೋಳ, ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಎ.ಕೆ.ಪಾಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

 *ಚೆನ್ನಮ್ಮ ವೃತ್ತದಲ್ಲಿ ಭೂಮಿ ಪೂಜೆ* 

ಕಾರ್ಯಕ್ರಮದ ನಂತರ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮೂಲ ಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಸಂಕರ ಪಾಟೀಲ ಮುನೇನಕೊಪ್ಪ, ಶಾಸಕರುಗಳಾದ ಸಿ.ಎಂ.ನಿಂಬಣ್ಣವರ್, ಅಬ್ಬಯ್ಯ ಪ್ರಸಾದ್, ಅರವಿಂದ ಬೆಲ್ಲದ್, ಅಮೃತ ದೇಸಾಯಿ, ಬಸವರಾಜ ಹೊರಟ್ಟಿ, ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹೆದ್ದಾರಿ ವಿಭಾಗದ ಮುಖ್ಯ ಅಭಿಯಂತರರಾದ ಗೋವಿಂದ ರಾಜು, ವಿಜಯಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...