ಸಾವು ಮತ್ತು ಬದುಕಿನ ನಡುವಿನ ಸೇತುವೆಗಳು

Source: sonews | By Staff Correspondent | Published on 24th March 2019, 6:33 PM | National News | Special Report | Don't Miss |

ಮುಂಬೈನಲ್ಲಿ ಸಂಭವಿಸಿದ ಪಾದಾಚರಿ ಸೇತುವೆ ಕುಸಿತವು ನಮ್ಮ ನಗರ ಯೋಜನೆಗಳಲ್ಲಿರುವ ಲೋಪಗಳನ್ನು ಬಯಲುಮಾಡಿದೆ.

ಒಂದು ಸೇತುವೆಯನ್ನು ಕಟ್ಟುವುದೇ ಸಾಗಾಟ-ಸಂಪರ್ಕವನ್ನು ಸುಲಭಗೊಳಿಸುವ ಉದ್ದೇಶದಿಂದ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಸಾಗಾಟದಲ್ಲಿ ಅಡ್ಡವಾಗುವ ನದಿ, ರಸ್ತೆ ಮತ್ತಿತರ ಅಡೆತಡೆಗಳನ್ನು ದಾಟಲೆಂದೇ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ಮುಂಬೈನಲ್ಲಿ ಮಾತ್ರ ಸೇತುವೆಗಳ ಅರ್ಥವೇ ಹಲವಾರು ಬಾರಿ ಬದಲಾಗುತ್ತಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದ ಮೇಲ್ಸೇತುವೆಯು ೨೦೧೯ರ ಮಾರ್ಚ್ ೧೫ರಂದು ದಿಢೀರನೆ ಕುಸಿದುಬಿದ್ದು ಆರು ಜನ ಸತ್ತು ೩೨ ಜನ ಗಂಭೀರವಾಗಿ ಗಾಯಗೊಂಡರುಮಾಧ್ಯಮಗಳ ತಲೆಬರಹಗಳಲ್ಲಂತೂ ಹಲವಾರು ಬಾರಿ ಸೇತುವೆಯನ್ನು ದುರಂತ ಮತ್ತು ಸಾವು ಎಂಬರ್ಥಗಳಿಗೆ ಸಮೀಕರಿಸಿ ಬರೆಯಲಾಗುತ್ತಿದೆ. ನಗರದ ಸೇತುವೆಗಳು ಮತ್ತು ಫ್ಲೈ ಓವರ್ಗಳ ಸಮಸ್ಯೆಗಳಲ್ಲಿ ಕೇವಲ ನಗರಾಡಳಿತ ಮತ್ತು ನಗರ ಯೋಜನೆಗಳಂಥ ವಿಷಯಗಳು ಮಾತ್ರವಲ್ಲದೆ ನಗರ ಯೋಜನೆಗಳಲ್ಲಿ ನಾಗರಿಕರ ಪಾಲುದಾರಿಕೆಯ ಹಾಗೂ ರಾಜಕೀಯ ಉದ್ದೇಶಗಳೂ ಒಳಗೊಂಡಿವೆ

ಇತ್ತೀಚಿನ ಮುಂಬೈ ಸೇತುವೆ ಕುಸಿತದ ಘಟನೆಯು ಸಂದರ್ಭದಲ್ಲಿರುವ ಇನ್ನೊಂದು ವ್ಯಂಗ್ಯವನ್ನು ಎತ್ತಿ ತೋರಿಸುತ್ತದೆ: ನಿಲ್ದಾಣದಲ್ಲಿ ಪಾದಾಚಾರಿ ಮೇಲ್ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಕಾರಣವೇ ಪಾದಾಚಾರಿಗಳು ಕೆಳಗೆ ರಸ್ತೆಯನ್ನು ದಾಟುತ್ತಾ ಅಪಘಾತಗಳಿಗೆ ಸಿಲುಕದಿರಲಿ ಎಂದು. ಈಗ ಸುರಕ್ಷತಾ ಕ್ರಮವೇ ಇಷ್ಟೊಂದು ಜನಗಳನ್ನು ಬಲಿತೆಗೆದುಕೊಂಡಿದೆ. ಸೇತುವೆಯ ಕುಸಿತದ ನಂತರ ಮಾಧ್ಯಮಗಳು ಪ್ರಕಟಿಸಿರುವ ವಿವರಗಳನ್ನು ಓದಿದರೆ ಭಾರತೀಯರಾದ ನಮಗೆ ಅಂಥಾ ಹೊಸ ಆಘಾತವೇನೂ ಆಗುವುದಿಲ್ಲ. ಬೃಹನ್ ಮುಂಬೈ ನಗರ ಪಾಲಿಕೆಯು ಸೇತುವೆಯ ಸ್ಥಿತಿಯ ಬಗ್ಗೆ ವರದಿ ನೀಡಲು ಕೆಲವು ತಿಂಗಳ ಕೆಳಗೆ ಒಂದು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿತ್ತು. ಮತ್ತು ಖಾಸಗಿ ಕಂಪನಿಯು ಸೇತುವೆಯು ಸುಸ್ಥಿತಿಯಲ್ಲಿದೆಯೆಂದು ವರದಿ ನೀಡಿತ್ತು. ಕಾಲಕಾಲಕ್ಕೆ ಇವುಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ವರದಿ ಮಾಡಬೇಕಿದ್ದ ಖಾಸಗಿ ಇಂಜನಿಯರುಗಳ ಕಂಪನಿಯ ನಿರ್ದೇಶಕರನ್ನು ಈಗ ಬಂಧಿಸಲಾಗಿದೆ. ಆದರೆ ಪ್ರಕರಣದ ಮತ್ತೊಂದು ಅಸಂಗತವೆಂದರೆ ಪೊಲೀಸರು ಘಟನೆಯಲ್ಲಿ ನಗರ ಪಾಲಿಕೆಯ ಅಥವಾ ರೈಲ್ವೆ ಸಿಬ್ಬಂದಿಯ ಕೈವಾಡವಿದೆಯೇ ಎನ್ನುವ ಕೋನದಿಂದಲೂ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆಂದು ವರದಿಯಾಗಿದೆ. ಇಷ್ಟೊಂದು ಮಾನವ ಜೀವಗಳ ಸುರಕ್ಷೆಯು ಯಾವುದೇ ಮೇಲ್ವಿಚಾರಣೆ/ಉಸ್ತುವಾರಿಗಳಿಲ್ಲದೆ ಕೇವಲ ಒಬ್ಬ ಇಂಜನಿಂii ವರದಿಯನ್ನು ಆಧರಿಸಿರುತ್ತದೆಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅಲ್ಲದೆ ಸಂಬಂಧಪಟ್ಟವರ ಉತ್ತರದಾಯಿತ್ವವನ್ನು ಕಠಿಣವಾಗಿ ಜಾರಿಮಾಡುವ ವ್ಯವಸ್ಥೆ ಇದ್ದಿದ್ದರೆ ಇಂಜನಿಯರ್ ಒಬ್ಬ ಇಷ್ಟೊಂದು ಬೇಜವಾಬ್ದಾರಿ ವರದಿಯನ್ನು ನೀಡಲಾಗುತ್ತಿತ್ತೇ?

ನಮ್ಮ ನಗರ ಯೋಜನೆಯೊಳಗಿರುವ ಅತ್ಯಂತ ಕಳವಳ ಹುಟ್ಟಿಸುವ ಅಂಶವೂ ಇಲ್ಲೇ ಅಡಗಿದೆ. ನಗರದ ಯೋಜನೆಗಳು ನಾಗರಿಕರ ಮತ್ತು ಪ್ರಯಾಣಿಕರ ನೈಜ ಅಗತ್ಯಗಳನ್ನು ಆಧರಿಸಿ ರೂಪುಗೊಳ್ಳುತ್ತದೋ ಅಥವಾ ರಾಜಕೀಯ ಅಗತ್ಯಗಳನ್ನು ಮತ್ತು ಕಾಂಟ್ರಾಕ್ಟರುಗಳ ದುರಾಸೆಯನ್ನು ಆಧರಿಸಿ ಹುಟ್ಟಿಕೊಳ್ಳುತ್ತದೋ? ಮುಂಬೈನಲ್ಲಿ ಬಳಕೆಯಾಗದಿರುವ ಹಲವಾರು ಸ್ಕೈ ವಾಕ್ ಮತ್ತು ಮೋನೋ ರೈಲು ಯೋಜನೆಗಳಂತೆ ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳದೇ ಮುಂಬೈನಲ್ಲಿ ಮೂಲಭೂತ ಸೌಲಭ್ಯ ಯೋಜನೆಗಳನ್ನು ನಿರ್ಮಿಸುವುದು ಸಾಧಾರಣ ಸಂಗತಿಯಾಗಿಬಿಟ್ಟಿದೆ. ಮತ್ತು ಮಾಧ್ಯಮಗಳು ಬಯಲು ಮಾಡಿರುವಂತೆ ಇಂಥಾ ಹಲವಾರು ಯೋಜನೆಗಳ ನಿರ್ಮಾಣದ ಗುತ್ತಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಹಲವಾರು ಕಾಂಟ್ರಾಕ್ಟರುಗಳಿಗೆ ನೀಡಲಾಗಿದೆ. ಭಾರತದಲ್ಲಿ ಹೇರಳವಾಗಿರುವ ಅದ್ಭುತ ಇಂಜನಿಯರಿಂಗ್ ಮತ್ತು ವಾಸ್ತುಶಿಲ್ಪ ನೈಪುಣ್ಯಗಳು ನಾಗರಿಕರ ಅಗತ್ಯಗಳಿಗಲ್ಲದೆ ರಾಜಕೀಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವುದು ಎಂಥಾ ನಾಚಿಕೆಗೇಡಿನ ಸಂಗತಿಯಲ್ಲವೇ? ಅವರ ಪರಿಣಿತಿ ಮತ್ತು ಪ್ರತಿಭೆಗಳು ಸಾರ್ವಜನಿಕ ಸೇವೆಗೆ ಬಳಕೆಯಾಗಬೇಕೇ ವಿನಃ ಪಟ್ಟಭದ್ರ ಹಿತಾಸಕ್ತಿಗಳಿU ಉದ್ದೇಶಗಳಿಗಲ್ಲ. ನಗರ ಯೋಜನೆಗಳ ಗುತ್ತಿಗೆಯನ್ನು ಅತ್ಯುತ್ತಮ ಸೇವೆಯನ್ನು ಒದಗಿಸಬಲ್ಲ ವೃತ್ತಿಪರತೆಯನ್ನು ಹೊಂದಿರುವ ಪರಿಣಿತರಿಗೆ ಕೊಡುವ ಬದಲು ಯಾರು ಕಡಿಮೆ ಬಿಡ್ಡಿಂಗ್ ಮಾಡುತ್ತಾರೋ ಅವರಿಗೆ ನೀಡುವ ಪರಿಪಾಠವನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ಬಹುಪಾಲು ಯೋಜನೆಗಳ ಬಗ್ಗೆ ದೇಶಾದ್ಯಂತ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.

ಆಟೊಮೊಬೈಲ್ ವಾಹನಗಳ ಕೇಂದ್ರಿತವಾದ, ಸಾರ್ವಜನಿಕ ಸಾರಿಗೆ ವಿರೋಧಿಯಾಗಿರುವ ಮತ್ತು ಖಾಸಗಿ ಗುತ್ತಿಗೆದಾರರ ಪರವಾಗಿರುವ ನಗರ ಯೋಜನೆಗಳಿಂದಾಗುವ ಅನಾಹುತಗಳ ಬಗ್ಗೆ ನಗರ ಯೋಜನಾ ಕಾರ್ಯಕರ್ತರು ಪದೇಪದೇ ಸಾರ್ವಜನಿಕರ ಗಮನವನ್ನು ಸೆಳೆಯುತ್ತಲೇ ಇದ್ದಾರೆ. ವಾಸ್ತವವೆಂದರೆ ನಮ್ಮ ದೇಶದ ನಗರೀಕರಣವು ಅರಾಜಕವಾಗಿ ಮತ್ತು ಯೋಜನಾರಹಿತವಾಗಿ  ನಡೆಯುತ್ತಿರುವುದರಿಂದಲೇ ನಗರದ ಮೂಲಭೂತ ಸೌಕರ್ಯ ಯೋಜನೆಗಳೂ ಸಹ ನಿರ್ದಿಷ್ಟ ಸಂದರ್ಭಗಳನ್ನು ಮತ್ತು ಸಾರ್ವಜನಿಕ ಅಗತ್ಯಗಳನ್ನು ಆಧರಿಸದೆ ಅರಾಜಕವಾಗಿ ಮತ್ತು ಸಮಗ್ರ ದೃಷ್ಟಿಯಿಲ್ಲದೆ ರೂಪುಗೊಳ್ಳುತ್ತಿವೆ. ಸನ್ನಿವೇಶವು ಯಾವುದೇ ಉತ್ತರದಾಯಿತ್ವವಿಲ್ಲದಿರುವ ಆಡಳಿತಕ್ಕೆ ಮತ್ತು ವ್ಯಾಪಕ ಭ್ರಷ್ಟಾಚಾರಗಳಿಗೆ ಎಡೆಮಾಡಿಕೊಡುತ್ತದೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಮುಂಬೈನಲ್ಲಿ ನಗರ ಯೋಜನಾ ಪರಿಣಿತರು ಮತ್ತು ಪರಿಸರ ಪರಿಣಿತರು ಎಷ್ಟೇ ಪ್ರತಿಭಟನೆ ಮಾಡುತ್ತಿದ್ದರೂ ಲೆಕ್ಕಿಸದೆ ಅಲ್ಲಿನ ಸರ್ಕಾರವು ಮೆಟ್ರೋ ವ್ಯವಸ್ಥೆಗಳಿಗೆ ಮತ್ತು ಕರಾವಳಿ ಹೆದ್ದಾರಿ ಯೋಜನೆಗಳಿಗೆ ಹೆಚ್ಚು ಒತ್ತುಕೊಡುತ್ತಿದೆ. ಇದೇ ಧೋರಣೆಯೇ ದೇದೆಲ್ಲೆಡೆಯೂ ವ್ಯಕ್ತವಾಗುತ್ತಿದೆ.

ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದ ಮೇಲೆ ೨೦೧೮ರ ಜುಲೈ ರಂದು ಸೇತುವೆಯೊಂದು ಕುಸಿದುಬಿದ್ದು ಇಬ್ಬರು ವ್ಯಕ್ತಿಗಳು ಪ್ರಾಣಕಳೆದುಕೊಂಡರು. ಕೂಡಲೇ ಪರಸ್ಪರ ದೋಷಾರೋಪಗಳು ಪ್ರಾರಂಭವಾದವು. ನಂತರ ತಿಳಿದುಬಂದ ಸಂಗತಿಯೆಂದರೆ ೨೦೧೪-೧೭ರ ನಡುವೆ ಸೇತುವೆಯ ಸ್ಥಿತಿಗತಿಯ ಬಗ್ಗೆ ರೈಲ್ವೆ ಇಲಾಖೆಯು ಪರಿಶೀಲನೆ ಮಾಡಿದ್ದರೂ ಅದಕ್ಕೆ ಸಂಬಂಧಪಟ್ಟಂತೆ ಯಾವ ದಾಖಲೆಗಳು ಇರಲಿಲ್ಲ. ಅದಕ್ಕೆ ಮುಂಚೆ ೨೦೧೭ರಲ್ಲಿ ಎಲ್ಫಿನ್ಸ್ಟನ್ ಸೇತುವೆಯ ಮೇಲೆ ಸಂಭವಿಸಿದ ನೂಕುನುಗ್ಗಲಿನಲ್ಲಿ ೨೩ ಜನರು ಪ್ರಾಣಕಳೆದುಕೊಂಡು ಹಲವಾರು ಜನ ಗಂಭೀರವಾಗಿ ಗಾಯಗೊಂಡರು. ಪ್ರಯಾಣಿಕರ ಜನದಟ್ಟಣೆಗೆ ತಕ್ಕಂತೆ ಪ್ರದೇಶದ ಭೂಮಿ ಬಳಕೆಯ ಆದ್ಯತೆಯನ್ನು ಬದಲಿಸಿಕೊಳ್ಳುವಲ್ಲಿನ ಆಡಳಿತದ ಸಂಪೂರ್ಣ ವೈಫಲ್ಯವನ್ನು ಭಯಾನಕ ಘಟನೆ ಬಯಲಿಗೆ ತಂದಿತು.

ಇತ್ತೀಚಿನ ಸೇತುವೆ ಕುಸಿತದ ಘಟನೆಗೆ ಇನ್ನೂ ಎರಡು ಪ್ರಮುಖ ಆಯಾಮಗಳಿವೆ. ದುರಂತ mನೆಯು ಸಂಭವಿಸಿದ ನಂತರ ಇಂಥಾ ಅವಘಡಗಳಿಗೆ ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣವೆಂದು ದೂಷಿಸಿದ ಶಿವಸೇನಾ ಪಕ್ಷವು ಹೊಣೆಗಾರಿಕೆಯನ್ನು ಮತ್ತೊಬ್ಬರ ಮೇಲೆ ಎತ್ತಿಹಾಕುವ ಸಿನಿಕ ಪ್ರಯತ್ನವನ್ನು ಮಾಡಿತು. ಉದ್ಯೋಗಾವಕಾಶಗಳ ಕಾರಣದಿಂದಾಗಿ ಮುಂಬೈ ನಗರವು ಶತಮಾನಗಳಿಂದಲೂ ವಲಸಿಗರನ್ನು ಆಕರ್ಷಿಸುತ್ತಿದ್ದು ಮುಂದೆಯೂ ಆಕರ್ಷಣೆ ಮುಂದುವರೆಯಲಿದೆ. ನಗರದ ಇತ್ತೀಚಿನ ಅಭಿವೃದ್ಧಿ ಯೋಜನೆಯ ಪ್ರಕಾರ ಇನ್ನೂ ೮೦ ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಂಥಾ ಅಭಿವೃದ್ಧಿ ಯೋಜನೆಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಸಂಭವಿಸಲಿರುವ ಹೆಚ್ಚಳವನ್ನೂ ಗಣನೆಗೆ ತೆಗೆದುಕೊಳ್ಲಬೇಕಲ್ಲವೇ? ಮತ್ತೊಂದು ಅಂಶವೆಂದರೆ ಕಳೆದೆರಡು ವರ್ಷಗಳಲ್ಲಿ ಇದು ಮೂರನೇ ದುರಂತವಾಗಿದ್ದರೂ, ಇದು ಸಾರ್ವಜನಿಕರಲ್ಲಿ ದೊಡ್ಡ ಆಕ್ರೋವನ್ನಾಗಲೀ  ಪ್ರತಿಭಟನೆಂiನ್ನಾಗಲೀ ಹುಟ್ಟುಹಾಕಿಲ್ಲ. ಒಂದು ರೀತಿಯಲ್ಲಿ ಇಂಥಾ ಅವಘಡಗಳು ಮತ್ತು ಸಂಬಂಧೀ ಸಾವುಗಳು ಅಭಿವೃದ್ಧಿಗೆ ನಾವು ತೆರಬೇಕಿರುವ ಸಹಜ ಬೆಲೆಯೆಂದು ನಾಗರಿಕರು ಒಪ್ಪಿಕೊಂಡುಬಿಟ್ಟಿರುವಂತೆ ಕಾಣುತ್ತದೆ. ಸರ್ಕಾರವು ಸಹ ನಾಗರಿಕರ ವಿರೋಧವನ್ನು ಕಿಂಚಿತ್ತೂ ಪರಿಗಣಿಸದೆ ವಿವಾದಸ್ಪದ ಯೋಜನೆಗಳನ್ನು ಯಥಾಪ್ರಕಾರವಾಗಿ ಮುಂದುವರೆಸುತ್ತಿವೆ.

ಹೀಗಾಗಿ ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳನ್ನು ಖಾಸಗಿ ಕಾಂಟ್ರಾಕ್ಟುದಾರರಿಗೆ ಮತ್ತಿತರರಿಗೆ ವಿತರಿಸುವ ಕೊಡುಗೆಗಳೆಂದು ಪರಿಗಣಿಸದೆ ಒಂದು ಸಾರ್ವಜನಿಕ ಸೇವೆಯೆಂದು ಪರಿಗಣಿಸುವ ಅಗತ್ಯವಿದೆ. ಹೀಗಾಗಬೇಕೆಂದರೆ ನಾಗರಿಕರು ಪ್ರಶ್ನೆಗಳನ್ನು ಕೇಳುವುದು ಮತ್ತು ಅದಕ್ಕೆ ಉತ್ತರವನ್ನು ಆಗ್ರಹಿಸುವುದನ್ನು ನಿರಂತರವಾಗಿ ಮುಂದುವರೆಸಬೇಕಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ಎನ್.ಆರ್.ಸಿ ಎನ್.ಪಿ.ಆರ್ ಹಾಗೂ ಸಿಎಎ ವಿರುದ್ಧ ದೇಶದ ಶೇ50ಕ್ಕೂ ಹೆಚ್ಚು ಜನ ಬೀದಿಗಿಳಿದಿದ್ದಾರೆ-ಪ್ರತಿಭಾ ಉಭಾಲೆ

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ...

ಪ್ರಮಾಣಬದ್ಧ ಸಾಂವಿಧಾನಿಕತೆ

ಭಾರತದ ಸಂವಿಧಾನವೆಂಬುದು ಒಂದು ಪ್ರಮುಖವಾದ ನಿಯಮ-ನಿಯಂತ್ರಣಗಳ ದಾಖಲೆಯೆಂಬುದು ತೀರಾ ಇತ್ತೀಚಿನವರೆಗೂ ಒಂದು ಸಾಮಾನ್ಯ ಜ್ನಾನವೇ ...