ಕೆಂಪುಕೋಟೆಯಲ್ಲಿ ಭಾರತ ಜೋಡೊ; ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಕೋಮುದ್ವೇಷವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ: ರಾಹುಲ್

Source: Vb | By I.G. Bhatkali | Published on 26th December 2022, 8:28 AM | National News |

ಹೊಸದಿಲ್ಲಿ: ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವರ ಕರೆಗಳ ನಡುವೆಯೇ ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆ ಶನಿವಾರ ತನ್ನ 108ನೇ ದಿನವನ್ನು ಪ್ರವೇಶಿಸುವ ಮೂಲಕ ರಾಷ್ಟ್ರ ರಾಜಧಾನಿ ದಿಲ್ಲಿಯ ಕೆಂಪುಕೋಟೆಯನ್ನು ತಲುಪಿತು. ಈ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಕೋಮುದ್ವೇಷವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ ಮತ್ತು ಅದನ್ನು ದೇಶಾದ್ಯಂತ ಹರಡುತ್ತಿದೆ ಎಂದು ಆರೋಪಿಸಿದರು.

ಸಾವಿರಾರು ಜನರ ಜೊತೆ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾತ್ರೆಯನ್ನು ಸೇರಿಕೊಂಡರು. ಪ್ರಿಯಾಂಕಾರ ಪತಿ ರಾಬರ್ಟ್ ವಾದ್ರಾ ಅವರು ಗಾಂಧಿ ಕುಟುಂಬಕ್ಕೆ ಸಾಥ್ ನೀಡಿದ್ದರು. ನಟ-ರಾಜಕಾರಣಿ ಕಮಲ್ ಹಾಸನ್ ಅವರೂ ರಾಹುಲ್ ಜೊತೆ ಹೆಜ್ಜೆಗಳನ್ನು ಹಾಕಿದರು.

ಜೈರಾಮ್ ರಮೇಶ್, ಪವನ್ ಖೇರಾ, ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ವಾ ಮತ್ತು ರಣದೀಪ್ ಸುರ್ಜೆವಾಲಾ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ರಾಹುಲ್ ಜೊತೆಯಲ್ಲಿದ್ದರು. ಸೋನಿಯಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಇದು ಎರಡನೇ ಸಲವಾಗಿದೆ. ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ಯಾತ್ರೆಯಲ್ಲಿ ಅವರು ಭಾಗವಹಿಸಿದ್ದರು.

ಕೆಂಪುಕೋಟೆಯ ಎದುರು ಬೃಹತ್ ರಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, 'ಕನ್ಯಾಕುಮಾರಿಯಿಂದ ದಿಲ್ಲಿಯವರೆಗೆ ಸಾವಿರಾರು ಕಿ.ಮೀ.ಗಳ ಪಾದಯಾತ್ರೆಯಲ್ಲಿ ದೇಶದಲ್ಲಿ ಎಲ್ಲಿಯೂ ಹಿಂಸಾಚಾರ ಅಥವಾ ದ್ವೇಷವನ್ನು ನಾನು ನೋಡಲಿಲ್ಲ, ಆದರೆ ಮಾಧ್ಯಮಗಳನ್ನು ನಿಯಂತ್ರಿಸುವ ಶಕ್ತಿಗಳ ಆಣತಿಯಂತೆ ಅದು ಸದಾಕಾಲ ಟಿವಿಯಲ್ಲಿ ಹರಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ' ಎಂದು ಹೇಳಿದರು.

'ನನ್ನ ವ್ಯಕ್ತಿತ್ವವನ್ನು ನಾಶಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತ ಬಿಜೆಪಿ ಸಾವಿರಾರು ಕೋ.ರೂ.ಗಳನ್ನು ವ್ಯಯಿಸಿದ್ದಾರೆ, ಆದರೆ ಕೇವಲ ಒಂದು ತಿಂಗಳಲ್ಲಿ ಸತ್ಯವೇನು ಎನ್ನುವುದನ್ನು ನಾನು ದೇಶಕ್ಕೆ ತೋರಿಸಿದ್ದೇನೆ 'ಎಂದು ಹೇಳಿದ ರಾಹುಲ್ ತನ್ನ ಭಾರತ ಜೋಡೊ ಯಾತ್ರೆಯಲ್ಲಿ ಜನರು ತನಗೆ ತೋರಿಸಿದ ಪ್ರೀತಿ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ರಾಜಸ್ಥಾನದಲ್ಲಿ ತನ್ನ ಮನವಿಯ ಬಳಿಕ ದೇಶಾದ್ಯಂತ ಜನರು ಸಾವಿರಾರು ಪ್ರೀತಿಯ ಅಂಗಡಿಗಳನ್ನು ತೆರೆದಿದ್ದಾರೆ'' ಎಂದರು.

24X7 ಟಿವಿ ಚಾನೆಲ್‌ಗಳ ಮೂಲಕ ಹಿಂದೂ-ಮುಸ್ಲಿಮರ ಹೆಸರಿನಲ್ಲಿ ದ್ವೇಷವನ್ನು ಹರಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಇದು ಸತ್ಯವಾಗಿದೆ ಎಂದು ಒತ್ತಿ ಹೇಳಿದರು.

ಇದರ ನಂತರ ಅವರು ನಿಮ್ಮ ಹಣವನ್ನು ತಮ್ಮ ಉದ್ಯಮಿ ಸ್ನೇಹಿತರಿಗೆ ಹಸ್ತಾಂತರಿಸುತ್ತಾರೆ, ನಿಮ್ಮ ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು ಮತ್ತು ಇತರ ಆಸ್ತಿಗಳನ್ನು ಅವರಿಗೆ ಮಾರಾಟ ಮಾಡುತ್ತಾರೆ. ಎಲ್ಲ ಸಮಯದಲ್ಲಿಯೂ ಅವರು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ಹೇಳಿದ ರಾಹುಲ್, ಇದು ನರೇಂದ್ರ ಮೋದಿ ಸರಕಾರವಲ್ಲ, ಅಂಬಾನಿ-ಅದಾನಿ ಸರಕಾರವಾಗಿದೆ ಎಂದರು.

ಸಾವಿರಾರು ಕೋ.ರೂ.ಗಳನ್ನು ದೊಡ್ಡ ಕೈಗಾರಿಕೋದ್ಯಮಿ ಗಳಿಗೆ ನೀಡಲಾಗುತ್ತಿದೆ, ಜನಸಾಮಾನ್ಯರಿಗಲ್ಲ. ಇವುಗಳು ನೀತಿಗಳಲ್ಲ, ಆದರೆ ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ರೈತರನ್ನು ನಾಶಗೊಳಿಸುವ ಅಸ್ತಗಳಾಗಿವೆ ಎಂದ ಅವರು, ಭಾರತವನ್ನು ಒಗ್ಗೂಡಿಸುವುದು ಹಾಗೂ ಬೆಲೆಏರಿಕೆ, ನಿರುದ್ಯೋಗ, ಕೋಮುದ್ವೇಷ ಮತ್ತು ಹಿಂಸಾಚಾರದ ವಿರುದ್ಧಜನರಲ್ಲಿ ಜಾಗೃತಿಯನ್ನು ಹರಡುವುದು ಕಾಂಗ್ರೆಸ್‌ನ ಯಾತ್ರೆಯ ಉದ್ದೇಶವಾಗಿದೆ ಎಂದರು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಕೆಂಪುಕೋಟೆಯ ಹೊರಗೆ ರಾಹುಲ್ ಭಾಷಣ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇವೆ: ರಾಹುಲ್ ಶನಿವಾರ ಬೆಳಗಿನ ಜಾವ ಯಾತ್ರೆಯು ಹರ್ಯಾಣದ ಫರೀದಾಬಾದ್‌ನಿಂದ ದಿಲ್ಲಿಯನ್ನು ಪ್ರವೇಶಿಸುತ್ತಿದ್ದಂತೆ ಬದರ್‌ ಪುರ ಗಡಿಯಲ್ಲಿ 'ರಾಹುಲ್ ಜಿಂದಾಬಾದ್' ಘೋಷಣೆಗಳ ನಡುವೆಯೇ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿಯವರು ರಾಹುಲ್, ಪಕದ ಇತರ ನಾಯಕರು ಮತ್ತು ಯಾತ್ರಿಗಳನ್ನು ಸ್ವಾಗತಿಸಿದರು.

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಪ್ರೀತಿ ವಿರುದ್ಧ ದ್ವೇಷ 'ದ ದಾಳಿಯನ್ನು ನಡೆಸುವ ಮೂಲಕ ರಾಹುಲ್ ತನ್ನ ಯಾತ್ರೆಯ ದಿಲ್ಲಿ ಅಧ್ಯಾಯವನ್ನು ಆರಂಭಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ಅವರು (ಬಿಜೆಪಿ ಮತ್ತು ಆರೆಸ್ಸೆಸ್) ದ್ವೇಷವನ್ನು ಹರಡುತ್ತಿದ್ದಾರೆ, ನಾವು ಪ್ರೀತಿಯನ್ನು ಹರಡುತ್ತಿದ್ದೇವೆ ಎಂದೂ ರಾಹುಲ್ ನುಡಿದರು.

ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗಿನ ಭಾರತ ಜೋಡೊ ಯಾತ್ರೆಯು ಶನಿವಾರ ಸಂಜೆ ದಿಲ್ಲಿಯ ಕೆಂಪುಕೋಟೆಯಲ್ಲಿ ಸಂಪನ್ನಗೊಂಡಿದ್ದು, ಒಂಭತ್ತು ದಿನಗಳ ವಿರಾಮದ ಬಳಿಕ ಜ.3ರಂದು ರಾಜಧಾನಿಯಲ್ಲಿ ಪುನರಾರಂಭಗೊಳ್ಳಲಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...