ಪರ್ಮನೆಂಟ್ ಇರಲು ಬಂದಿಲ್ಲವಂತೆ ಸಂಸದರು; ಯೋಜನೆಗಳಿಗೆ ವಿರೋಧ ವ್ಯಕ್ತವಾದಲ್ಲಿ ಆರಂಭದಲ್ಲೇ ಹೊಸಕಿ ಹಾಕ್ಬೇಕಂತೆ! ‘ಹಿಂದೂ ಹುಲಿ’ ಹೆಗಡೆ ಹೇಳಿಕೆಗೆ ಮೀನುಗಾರರು ಕೆಂಡಾಮಂಡಲ

Source: S O News Service | By Office Staff | Published on 19th January 2020, 8:29 PM | Coastal News | State News | Special Report |

ಕಾರವಾರ: ವಿವಾದಗಳಿಂದ ದೂರ ಉಳಿದುಕೊಳ್ಳಲು ಖುದ್ದು ಸಂಸದ ಅನಂತಕುಮಾರ್ ಹೆಗಡೆಗೂ ಸಾಧ್ಯವಿಲ್ಲ ಎನಿಸುತ್ತಿದೆ. ಕಳೆದ ಕೆಲ ತಿಂಗಳಿಂದ ಯಾವುದೇ ಹೇಳಿಕೆಗಳನ್ನು ನೀಡದೇ ಸುಮ್ಮನಿದ್ದ ‘ಹಿಂದೂ ಹುಲಿ’ ಇದೀಗ ಏಕಾಏಕಿ ಅಭಿವೃದ್ಧಿ ಪರ ಟೊಂಕಕಟ್ಟಿ ನಿಂತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವವರನ್ನು ಮಟ್ಟ ಹಾಕಿ ಎಂದು ತಮ್ಮ ಕಾರ್ಯಕರ್ತರಿಗೆ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.

ಶುಕ್ರವಾರ ಕುಮಟಾ ಪಟ್ಟಣದಲ್ಲಿ ನಡೆದಿದ್ದ ಬಿಜೆಪಿ ಪಕ್ಷದ ಖಾಸಗಿ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಅಭಿವೃದ್ಧಿ ಕಾರ್ಯಕ್ರಮಗಳು ಬರುತ್ತಿವೆ. ಮುಂದಿನ ಪೀಳಿಗೆಗಳಿಗಾಗಿ ಇವು ಅತ್ಯಗತ್ಯವಾಗಿದ್ದು, ಅವುಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಎನ್ನುವ ಮಾತುಗಳನ್ನು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಜಿಲ್ಲೆಗೆ ವ್ಯಾಪಾರ- ವಹಿವಾಟು, ಅಭಿವೃದ್ಧಿ ಕಾರ್ಯಗಳು ಬರಬೇಕಾಗಿದೆ. ಅಭಿವೃದ್ಧಿ ಕಾರ್ಯಗಳು ಜನರಿಗಾಗಿ, ಊರುಗಳಿಗಾಗಿ ಬೇಕಾಗಿದ್ದು, ರಾಜಕಾರಣಿಗಳಿಗಲ್ಲ. ನಮ್ಮ ಹೊಟ್ಟೆಗೋಸ್ಕರ, ನಮ್ಮ ನಾಡಿಗೋಸ್ಕರ, ಮುಂದಿನ ತಲೆಮಾರಿಗೋಸ್ಕರ ಅಭಿವೃದ್ಧಿ ಬೇಕಾಗಿದ್ದು, ಈ ಕಾರಣಕ್ಕೋಸ್ಕರವೇ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದರು.

ಪರ್ಮನೆಂಟ್ ಖುರ್ಚಿ ಮೇಲೆ ಕುಳಿತುಕೊಳ್ಳಲು ತಾನು ಬಂದಿಲ್ಲ. ನಾಳೆ ಯಾರು ಇರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ, ಯಾವ ಹೆಜ್ಜೆ ಇಟ್ಟಿದ್ದೀನೋ ಅದನ್ನ ಮಾಡಿಯೇ ಹೋಗುತ್ತೇನೆ ಎನ್ನುವ ಮಾತುಗಳನ್ನು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಮಂಗಳೂರು, ಮಲ್ಪೆ, ಗೋವಾಗಳಲ್ಲಿ ಈಗಾಗಲೇ ಬಂದರುಗಳ ಅಭಿವೃದ್ಧಿಯನ್ನು ಮಾಡಲಾಗಿದೆ. ಅಲ್ಲಿನ ಮೀನುಗಾರರ ಬದುಕು ಹಾಳಾಗಿ ಹೋಗಿದೆಯಾ? ಅನಂತಕುಮಾರ್ ಹೆಗಡೆಗೆ ಈ ಜಿಲ್ಲೆಯ ಭವಿಷ್ಯ ಪ್ರಮುಖವಾಗಿದ್ದು, ಎಲ್ಲೆಲ್ಲಿ ಯಾವ ಯಾವ ಅಭಿವೃದ್ಧಿಗಳು ಆಗಬೇಕು ಅವುಗಳನ್ನ ಮಾಡುವ ಕಾರ್ಯವನ್ನು ಮಾಡಿಯೇ ತೀರುತ್ತೇನೆ ಎಂದಿದ್ದಾರೆ.

ಪ್ರತಿಬಾರಿ ಅಭಿವೃದ್ಧಿ ಕಾರ್ಯಗಳು ಬಂದ ವೇಳೆಯಲ್ಲಿ ವಿರೋಧಗಳು ವ್ಯಕ್ತವಾಗುವುದು ಸಹಜ. ಜಿಲ್ಲೆಯ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಾರಂಭದಲ್ಲೂ ಜನರು ಸಾಕಷ್ಟು ವಿರೋಧ ಮಾಡಿದ್ದರು. ಆದರೆ, ಇದೀಗ ಜಿಲ್ಲೆಯಲ್ಲಿ ಹೆದ್ದಾರಿ ಅಗಲೀಕರಣವಾಗಿರುವುದು ಅದೇ ಜನರಿಗೆ ಅನುಕೂಲಕವಾಗಿದೆ. ಅದರಂತೆ ಸಾಗರಮಾಲಾ ಯೋಜನೆಗೆ ಜನರು ವಿರೋಧವನ್ನು ಮಾಡುತ್ತಿದ್ದಾರೆ. ಆದರೆ, ಈ ಯೋಜನೆ ಕೇವಲ ಕಾರವಾರದ ವಾಣಿಜ್ಯ ಬಂದರನ್ನು ಮಾತ್ರ ಅಭಿವೃದ್ಧಿ ಪಡಿಸುವುದಿಲ್ಲ. ಬೇಲೆಕೇರಿ, ತದಡಿ ಬಂದರುಗಳೂ ಸಹ ಅಭಿವೃದ್ಧಿ ಹೊಂದಲಿವೆ.

ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ನೀವೆಲ್ಲರೂ ಮುಂದೆ ನಿಂತು ಸಹಕಾರ ನೀಡಬೇಕಿದೆ. ಅಲ್ಲದೇ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನ ಮಾಡಬೇಕಾಗಿದೆ. ಯೋಜನೆಗಳಿಗೆ ವಿರೋಧಗಳು ವ್ಯಕ್ತವಾಗುವ ಪ್ರಾಥಮಿಕ ಹಂತದಲ್ಲಿಯೇ ಅಂತಹವುಗಳನ್ನು ಹೊಸಕಿ ಹಾಕುವ ಕಾರ್ಯವನ್ನು ಮಾಡಬೇಕು ಎಂದು ಸಂಸದ ಹೆಗಡೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಕಳೆದ ಆರು ದಿನಗಳಿಂದ ಕಾರವಾರದಲ್ಲಿ ಮೀನುಗಾರರು ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಕಾಮಗಾರಿ ಪ್ರಾರಂಭಿಸಲು ಮುಂದಾಗಿರುವುದನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದಾರೆ. ಕಾರವಾರ ಬಂದ್ ಸಹ ಮಾಡುವ ಮೂಲಕ ವ್ಯಾಪಕ ವಿರೋಧವನ್ನ ವ್ಯಕ್ತಪಡಿಸಿದ್ದು ಯೋಜನೆಯನ್ನ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ಹೋರಾಟವನ್ನು ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಅನಂತಕುಮಾರ್ ಹೆಗಡೆ ಈ ರೀತಿಯ ಹೇಳಿಕೆ ನೀಡಿರುವುದು ಮೀನುಗಾರರ ಆಕ್ರೋಶಕ್ಕೆ ಗುರಿಯಾಗಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...