ಉಡುಪಿ: ಒಂದೇ ಕುಟುಂಬದ ನಾಲ್ವರ ಕಗ್ಗೋಲೆ ಪ್ರಕರಣ; ಪ್ರವೀಣ್‌ ಚೌಗುಲೆ ಬಂಧನ; ಆರೋಪಿ ತಪೊಪ್ಪಿಗೆ, ಕಾರಣಗಳ ಬಗ್ಗೆ ಪರಿಶೀಲನೆ: ಎಸ್ಪಿ ಡಾ.ಅರುಣ್

Source: Vb | By I.G. Bhatkali | Published on 17th November 2023, 8:30 AM | Coastal News | State News |

ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೋಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿರುವ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39) ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ. ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ವಿಶೇಷ 5 ತಂಡ, ಬಳಿಕ ಹೆಚ್ಚುವರಿ ಮೂರು ತಂಡಗಳನ್ನು ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು. ನಮ್ಮ ತಂಡಗಳು ಸುಮಾರು 15-20 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತ್ತು. ಅದೇ ರೀತಿ ಪ್ರವೀಣ್‌ನನ್ನು ಕೂಡ ಸಂಶಯದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದರು.

ತಾಂತ್ರಿಕ ಹಾಗೂ ಇತರ ಸಾಕ್ಷ್ಯಾಧಾರಗಳಿಂದಲೂ ಪ್ರವೀಣ್‌ ಚೌಗುಲೆಯೇ ಕೊಲೆ ಮಾಡಿರುವುದು ದೃಢಪಟ್ಟಿದ್ದು, ಬಂಧನ ಪ್ರಕ್ರಿಯೆ ಮುಗಿಸಿ ಆರೋಪಿ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. 

ಕೊಲೆಗೆ ಮೂರು ಕಾರಣಗಳು:
ಆರೋಪಿಯು ವಿಚಾರಣೆ ವೇಳೆ ಕೊಲೆಗೆ ಎರಡು ಮೂರು ವಿಚಾರಗಳು ಪ್ರೇರಣೆ ಎಂಬುದಾಗಿ ತಿಳಿಸಿದ್ದು, ಅದರ ಸತ್ಯಾಸತ್ಯತೆಯನ್ನು ಸಂತ್ರಸ್ತೆಯ ಕುಟುಂಬದವರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಾಗುವುದು. ಇವುಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ ದೃಢಪಡಿಸದೆ ಕೊಲೆಗೆ ಕಾರಣ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಎಸ್ಪಿ ಹೇಳಿದರು.

ಏನು ಮಹಾರಾಷ್ಟ್ರ ಸಾಂಗ್ಲಿ ನಿವಾಸಿಯಾಗಿರುವ ಈತ ಹಲವು ವರ್ಷಗಳಿಂದ ಮಂಗಳೂರಿನಲ್ಲೇ ವಾಸವಿದ್ದನು. ವಿವಾಹಿತನಾಗಿರುವ ಈತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಂಸ್ಥೆಯಲ್ಲಿ ಕ್ಯಾಬಿನ್ ಕ್ರೂ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

ಲಿಫ್ಟ್ ಕೊಟ್ಟವರ ವಿಚಾರಣೆ:
ಆತ ಈ ಹಿಂದೆ ನೇಜಾರಿನ ಮನೆಗೆ ಬಂದಿದ್ದಾನೆಯೇ ಎಂಬುದನ್ನು ತಾಂತ್ರಿಕ ಸಾಕ್ಷ್ಯಗಳ ಮೂಲಕ ಪತ್ತೆ ಹಚ್ಚಲಾಗುವುದು. ಆತ ಯಾವ ರೀತಿ ಬಂದಿದ್ದಾನೆ ಮತ್ತು ಯಾವ ರೀತಿ ಹೋಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ. ಸಿಸಿಟಿವಿ ಕ್ಯಾಮರಾ ಫೂಟೇಜ್ ಮತ್ತು ತಾಂತ್ರಿಕ ಸಾಕ್ಷ್ಯಗಳ ಮೂಲಕ ಈತನಿಗೆ ಯಾರೆಲ್ಲ ಲಿಫ್ಟ್ ಕೊಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಅವರನ್ನೆಲ್ಲ ಕರೆಸಿ ವಿಚಾರಣೆ ನಡೆಸಲಾಗುವುದು ಎಂದರು.

ನಾವು ತನಿಖೆಯಲ್ಲಿ ಯಾಕೆ ಕೊಲೆ ಮಾಡಿದ, ಅದಕ್ಕೆ ಪ್ರೇರಣೆ ಏನು ಮತ್ತು ಇದರ ಹಿಂದೆ ಬೇರೆ ಯಾರು ಇದ್ದಾರೆಯೇ ಎಂಬುದು ಪತ್ತೆ ಹಚ್ಚಲು ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದೇವೆ. ಆರೋಪಿ ವಿಚಾರಣೆ ಸಂದರ್ಭ ಹೇಳುವ ಎಲ್ಲ ಹೇಳಿಕೆಗಳನ್ನು ನಾವು ಪರಿಶೀಲನೆ ಮಾಡಿಯೇ ದೃಢಪಡಿಸಬೇಕಾಗುತ್ತದೆ. ಆತನ ವಿರುದ್ದ ಬೇರೆ ಠಾಣೆಗಳಲ್ಲಿ ಕೇಸ್‌ ಗಳಿವೆಯೇ ಎಂಬುದನ್ನೂ ನಾವು ಪರಿಶೀಲನೆ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.

ಆಯುಧ ವಶಪಡಿಸಿಕೊಂಡಿಲ್ಲ:
ಆರೋಪಿ ಪ್ರವೀಣ್ ಚೌಗುಲೆ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಕೃತ್ಯಕ್ಕೆ ಬಳಸಿದ ಆಯುಧವನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದರು.

ಕೊಲೆಗೆ ಪ್ರೇರಣೆ, ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ಇತರ ಪ್ರಕ್ರಿಯೆಗಳನ್ನು ಮುಂದಿನ ದಿನಗಳಲ್ಲಿ ಮುಗಿಸಿ ಅತೀ ಶೀಘ್ರವೇ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ವದಂತಿಗಳನ್ನು ತಡೆಗಟ್ಟಲು ಮತ್ತು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ.ಸಿದ್ದಲಿಂಗಪ್ಪ ಹಾಜರಿದ್ದರು.

ಆರೋಪಿ ಪ್ರವೀಣ್ ಚೌಗಲೆ 14 ದಿನ ಪೊಲೀಸ್ ಕಸ್ಟಡಿಗೆ:
ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಉಡುಪಿ ಬಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.

ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಪಿಯ ಆರೋಗ್ಯ ತಪಾಸಣೆ ನಡೆಸಿ ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಉಡುಪಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಪೊಲೀಸರ ಪರವಾಗಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್. ಎಂ.ನದಾಫ್, ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಅದರಂತೆ ನ್ಯಾಯಾಧೀಶ ಶ್ಯಾಮ್‌ ಪ್ರಸಾದ್ ಆರೋಪಿಯನ್ನು ನ.28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಆರೋಪಿ ಪರ ಸರಕಾರದಿಂದ ನೇಮಕ ಮಾಡಲಾದ ವಕೀಲ ರಾಜು ಪೂಜಾರಿ ಈ ಸಂದರ್ಭದಲ್ಲಿ ಹಾಜರಿದ್ದರು.

ಬಳಿಕ ಪೊಲೀಸರು ವಿಚಾರಣೆಗಾಗಿ ಆರೋಪಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿಗಳಾದ ಬೆಳ್ಳಿಯಪ್ಪ ಕೆ.ಯು., ದಿನಕರ ಕೆ.ಪಿ., ಅರವಿಂದ ಕಲಗುಜ್ಜಿ, ಪೊಲೀಸ್ ನಿರೀಕ್ಷಕರಾದ ಮಂಜಪ್ಪ, ದೇವರಾಜ್ ಹಾಜರಿದ್ದರು.

ಕೋರ್ಟ್ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆರೋಪಿಯನ್ನು ಕಾಣಲು ಕೋರ್ಟ್ ಸುತ್ತ ಮುತ್ತ ಜನಸ್ತೋಮವೇ ನೆರೆದಿತ್ತು.

ಪುಣೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದ:
ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39) ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಮೂರು ತಿಂಗಳ ಕಾಲ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದನು ಎಂಬ ಮಾಹಿತಿ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.

ಮೂರು ತಿಂಗಳು ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದ ಚೌಗುಲೆ, ಮಂಗಳೂರಿನ ಏರ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿದ್ದನು ಎನ್ನಲಾಗಿದೆ. ಈತ ಮಂಗಳೂರಿನ ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ಯೂನಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಅಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿದ್ದ ಐನಾಝಳ ಪರಿಚಯವಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮಾಧ್ಯಮದ ಜೊತೆ ಮಾತನಾಡಿದ ಎಸ್ಪಿ, ನಮ್ಮ ಮಾಹಿತಿ ಪ್ರಕಾರ ಆತ ಸಿಐಎಸ್‌ಎಫ್ ಹಾಗೂ ಸಿಆರ್‌ ಪಿಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಆತ ಸಿವಿಲ್ ಪೊಲೀಸ್‌ನಲ್ಲಿ ಕೆಲಸ ಮಾಡುತ್ತಿದ್ದನು ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...