ತುಮಕೂರು: ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಕ್ರೋಸರ್‌ಗೆ ಲಾರಿ ಡಿಕ್ಕಿ; 10 ಮಂದಿ ಮೃತ್ಯು; 14 ಜನರಿಗೆ ಗಾಯ

Source: Vb | By I.G. Bhatkali | Published on 26th August 2022, 8:14 AM | State News |

ತುಮಕೂರು: ಹೊಟ್ಟೆಪಾಡಿಗಾಗಿ ಕೂಲಿ ಅರಸಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕರಿದ್ದ ಕ್ರೂಸರ್ ವಾಹನಕ್ಕೆ ಲಾರಿ ಢಿಕ್ಕಿಯಾದ ಪರಿಣಾಮ ಇಬ್ಬರು ಮಕ್ಕಳು ಸಹಿತ 10 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿರುವ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಬಾಲೇನಹಳ್ಳಿ ಗೇಟ್ ಬಳಿಯಿಂದ ವರದಿಯಾಗಿದೆ.

ಸಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ಸರಹದ್ದಿನ ಬಾಲೇನಹಳ್ಳಿ ಬಳಿ ಆಂಜನೇಯಸ್ವಾಮಿ ದೇವಾಲಯದ ಎದುರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗುರುವಾರ ಮುಂಜಾನೆ 4:30ಕ್ಕೆ ರಾಯಚೂರಿನಿಂದ ಬೆಂಗಳೂರು ಕಡೆಗೆ 23 ಮಂದಿ ಕಾರ್ಮಿಕರನ್ನು ಹೊತ್ತು ತೆರಳುತ್ತಿದ್ದ વ્ર ಕ್ರೂಸರ್ ವಾಹನದ ಟೈರ್ ಸವೆದಿದ್ದರಿಂದ ಪಂಕ್ಚರ್ ಆಗಿದೆ ಎನ್ನಲಾಗಿದೆ. ಅದೇ ವೇಳೆಗೆ ಅತಿ ವೇಗವಾಗಿ ಹಿಂದಿನಿಂದ ಬಂದ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಕ್ರೂಸರ್ ವಾಹನದ ಹಿಂಬದಿಗೆ ಅಪ್ಪಳಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ.

ಲಾರಿ ಅಪ್ಪಳಿಸಿದ ರಭಸಕ್ಕೆ ಕ್ರೂಸರ್ ವಾಹನ ರಸ್ತೆ ಮಧ್ಯದ ಡಿವೈಡರ್‌ಗೆ ಗುದ್ದಿ ಪಲ್ಟಿ ಹೊಡೆದು ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆ ಭೀಕರವಾಗಿದ್ದರಿಂದ ಕ್ರೂಸರ್ ವಾಹನದಲ್ಲಿದ್ದ ಚಾಲಕ ಸೇರಿದಂತೆ 23 ಮಂದಿ ಕೂಲಿ ಕಾರ್ಮಿಕರ ಪೈಕಿ ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತಪಟ್ಟವರನ್ನು ರಾಯಚೂರು ಜಿಲ್ಲೆ ಸಿರಿವಾರ ತಾಲೂಕು ಕುರುಕುಂದ ಗ್ರಾಮದ ಸುಜಾತ (25), ಲಕ್ಷ್ಮೀ (30), ವಿನೋದ (3), ಕ್ರೂಸರ್ ವಾಹನದ ಚಾಲಕ ಕೃಷ್ಣಪ್ಪ (28), ಕಸನದೊಡ್ಡಿಯ ಬಸಮ್ಮ (50), ಪ್ರಭು (30), ನಾಗಮ್ಮ (55), ಮೋನಮ್ಮ (30) ಎಂದು ಗುರುತಿಸಲಾಗಿದೆ. ಮೃತಪಟ್ಟ ಇನ್ನಿಬ್ಬರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಮಲ್ಲಿ ಗ್ರಾಮದ ದುರ್ಗಮ್ಮ (52), ನವೀಲುಕಲ್ಲು ಗ್ರಾಮದ ಬಾಲಾಜಿ (6), ಸಂದೀಪ (5), ಮಾನ್ವಿ ತಾಲೂಕಿನ ಮಾಡಗಿರಿ ಗ್ರಾಮದ ಉಮೇಶ (28), ಮಾನ್ವಿ ತಾಲೂಕಿನ ಮಾಡಗಿರಿ ಗ್ರಾಮದ ಯಲ್ಲಮ್ಮ, ನವೀಲುಕಲ್ಲು ಗ್ರಾಮದ ಅನಿಲ್, ದೇವದುರ್ಗ ತಾಲೂಕಿನ ಗುಡನಾಳು ಗ್ರಾಮದ ದೇವರಾಜು, ಸಿರಿವಾರದ ಮೋನಿಕ (40), ನಾಗಪ್ಪ, ನಾಗಮ್ಮ, ವಸಂತ, ವೈಶಾಲಿ, ವಿರೂಪ್ಪಾಕ್ಷಪ್ಪ, ಶಿವರಾಜು ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದು, ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಿರಾ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಸಿರಾ ಮತ್ತು ಕಳ್ಳಂಬೆಳ್ಳ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಸಿರಾ ಆಸ್ಪತ್ರೆಗೆ ರವಾನಿಸಿ, ತೀವ್ರವಾಗಿ ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿ, ಎಸ್ಪಿ, ಐಜಿಪಿ ಭೇಟಿ: ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಪೂರ್‌ಾಡ್, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರು ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...