ವಿಶ್ವವಿಖ್ಯಾತ ಮುರುಡೇಶ್ವರದಲ್ಲೀಗ ಧೂಳು ಹಾಗೂ ಹೊಂಡಗಳದ್ದೇ ದರಬಾರು

Source: sonews | By Staff Correspondent | Published on 8th December 2018, 6:12 PM | Coastal News | State News | Don't Miss |


•    ಪ್ರವಾಸಿಗರಿಗೆ ಕಿರುಕುಳ
•    ಅರ್ಧಕ್ಕೆ ನಿಂತಿದೆ ಬಹು ಮುಖ್ಯ ದ್ವಿಪಥ ರಸ್ತೆ ನಿರ್ಮಾಣ


ಭಟ್ಕಳ: ಉ.ಕ.ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಜಗತ್ವಿಖ್ಯಾತವಾಗಿದ್ದು ದೇಶ ವಿದೇಶದ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಸ್ಥಳೀಯವಾಗಿರುವ ಕೆಲವೊಂದು ಸಮಸ್ಯೆಗಳಿಂದಾಗಿ ಯಾತ್ರಿಕರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. 

ಇಲ್ಲಿನ ದೇವಸ್ಥಾನಕ್ಕೆ ತೆರಳುವ ಮುಖ್ಯ ದ್ವಾರ ಸಂಪೂರ್ಣ ಹೊಂಡಮಯವಾಗಿದ್ದು ಧೂಳಿನಿಂದಾವೃತ್ತಗೊಂಡಿದೆ. ಮುರುಡೇಶ್ವರನ ದರುಶನಕ್ಕೆ ಬರುವ ಯಾತ್ರಿಗಳು ಇಲ್ಲಿನ ಸುಡುವ ಸೆಕೆ ಹಾಗೂ ಧೂಳಿನಿಂದಾಗಿ ಸಂಕಟಪಡುವಂತಾಗಿದೆ. 

ಮುರ್ಡೇಶ್ವರ ಅಂದಾಗಲೇ ನೆನಪಾಗುವುದು ಅತೀ ದೊಡ್ಡದಾದ ಶಿವನ ಮೂರ್ತಿ, ಈ ಮೂರ್ತಿ ಏಷಿಯಾದಲ್ಲೇ ಅಗ್ರ ಸ್ಥಾನದಲ್ಲಿದೆ. ಆದರೆ ಇಲ್ಲಿಗೆ ತೆರಳುವ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿದ್ದು, ದೇಶ ಹಾಗೂ ವಿದೇಶ ಪ್ರವಾಸಿಗರು ಹಿಡಿಶಾಪ ಹಾಕುತ್ತಾ ಈ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ವಿದೇಶಿಗರ ಮುಂದೆ ದೇಶದ ಮಾನ ಹರಾಜಾಗುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಸ್ಥಳೀಯ ಆಡಳಿತ ವರ್ಗವಾಗಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಾವಿರಾರು ಕಿ.ಮೀ. ದೂರದಿಂದ ಹಾಯಾಗಿ ಬರುವ ಪ್ರವಾಸಿಗರಿಗೆ ಇಲ್ಲಿನ ಕೇವಲ ಒಂದೂವರೆ ಕಿ.ಮೀ. ದೂರದ ರಸ್ತೆ ಪ್ರಯಾಣ ಸಾಕಪ್ಪಾ ಅನ್ನಿಸುವಷ್ಟು ದುಸ್ಥಿತಿಗೆ ಮಾರ್ಪಟ್ಟಿದೆ. 

ಇಲ್ಲಿನ ರಾಷ್ಟ್ರೀಯ ಹೆದ್ದಾರಿ-66ರಿಂದ ಮುರ್ಡೇಶ್ವರಕ್ಕೆ ಜೋಡಣೆಯಾಗುವ ರಸ್ತೆಯೂ ಸುಮಾರು 750 ಮೀ. ದೂರದ ಕಾರೆಹಳ್ಳದ ವರೆಗೆ ಮಾತ್ರ ದ್ವಿಪಥದ ರಸ್ತೆ ನಿರ್ಮಾಣದಿಂದ ಪ್ರವಾಸಿಗರಿಗೆ ಸಂತಸ ನೀಡಲಿದ್ದು ಅಲ್ಲಿಂದ ದೇವಸ್ಥಾನದವರೆಗೆ ರಸ್ತೆಯೂ ಸಂಪೂರ್ಣ ಗುಂಡಿಗಳಂತಾಗಿವೆ. ರಸ್ತೆಯಲ್ಲಿನ ವಾಹನ ಸಂಚಾರ ಕೆಟ್ಟ ಅನುಭವ ನೀಡುತ್ತದೆ. ಇನ್ನು ಒಂದು ಪಡೆದರೆ ಇನ್ನೊಂದು ಉಚಿತ ಎನ್ನುವಂತೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಾಳಾದ ರಸ್ತೆಯ ಧೂಳು ಇನ್ನಷ್ಟು ಕಿರಿಕಿರಿ ನೀಡುತ್ತದೆ.
ರಸ್ತೆ ಸರಿಪಡಿಸಲು ಈ ಹಿಂದಿನ ಅವಧಿಯಲ್ಲಿನ ಶಾಸಕರು ಕಾಮಗಾರಿ ತಂದಿದ್ದಾದರೂ ಕಾಮಗಾರಿ ಮಾತ್ರ ಅರ್ಧದಲ್ಲೇ ನಿಂತಿರುವುದು ನೋಡಿದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಇಲ್ಲಿನ ಕಾರೆಹಳ್ಳದ ಸೇತುವೆಯ ಕಡೆ ವಾಹನ ಬರುತ್ತಿದ್ದಂತೆ ನರಕ ಸದೃಶ ವಾತಾವರಣ ಕಾಣಲಾರಂಭಿಸುತ್ತದೆ. ಒಂದು ಕೈಯಲ್ಲಿ ಮೂಗು ಮುಚ್ಚಿ  ಇನ್ನೊಂದು ಕೈಯಲ್ಲಿ ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. 

ಸಾಕಾಗಿದೆ ಧೂಳಿನ ಸಂಕಷ್ಟ: ಈ ರಸ್ತೆಯ ಧೂಳು ಪ್ರವಾಸಿಗರ ಜೊತೆಗೆ ರಸ್ತೆ ಪಕ್ಕದ ಪಕ್ಕದ ನಿವಾಸಿಗರಿಗೂ,ಅಂಗಡಿ ಮುಂಗಟ್ಟಿನ ವ್ಯಾಪಾರಿಗಳಿಗೂ ಸಂಕಷ್ಟವಾಗಿದ್ದು, ಪ್ರತಿನಿತ್ಯ ಕಸ ಗುಡಿಸುವ ರೀತಿಯಲ್ಲಿಯೇ ಅಂಗಡಿ ಹಾಗೂ ಮನೆಯನ್ನು ಸಂಪೂರ್ಣ ಸುಚ್ಛಿಗೊಳಿಸುವಂತಾಗಿದೆ. ಇದರಿಂದ ನಿವಾಸಿಗರು ಹಾಗೂ ಅಂಗಡಿ ಮುಂಗಟ್ಟಿನ ಮಾಲೀಕರು ಸ್ಥಳೀಯ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸ್ಥಳೀಯ ಜನಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎನ್ನುವಂತೆ ನಿರ್ಲಕ್ಷ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಉಸಿರಾಟಕ್ಕೆ ತೊಂದರೆ: ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆ ಮಾರ್ಗದಲ್ಲಿ ಸಂಚರಿಸುವ ಜೊತೆಗೆ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಾರಕ್ಕೆ ಕುಳಿತುಕೊಳ್ಳುವ ವ್ಯಾಪಾರಿಗಳು ಈ ಧೂಳನ್ನು ತಿನ್ನುವಂತಾಗಿದ್ದು, ಇದರಿಂದ ಮುಂದಿನ ದಿನದಲ್ಲಿ ಉಸಿರಾಟಕ್ಕೆ ತೊಂದರೆಯಾಗಲಿದೆಯಾ ಎಂಬ ಭಯ ಆವರಿಸಿದೆ. ಸದ್ಯ ತಾತ್ಕಾಲಿಕವಾಗಿ ಇಲ್ಲಿನ ಅಂಗಡಿಕಾರರು ರಸ್ತೆಗೆ ನೀರು ಹಾಯಿಸಿ ವಾಹನ ಸಂಚಾರದಿಂದಾಗುವ ಧೂಳಿನಿಂದ ತಪ್ಪಿಸಿಕೊಳ್ಳುವ ಮಾರ್ಗ ಅನುಸರಿಸಿದ್ದಾರೆ. 

ಶೀಘ್ರ ರಸ್ತೆ ನಿರ್ಮಾಣಕ್ಕೆ ಜನರ ಆಗ್ರಹ: ರಸ್ತೆಯಲ್ಲಿ ತಿರುಗಾಡಲು ಅಸಾಧ್ಯವಾಗಿದ್ದು ಹೊಂಡಮಯವಾದ ರಸ್ತೆಯನ್ನು ಡಾಂಬರೀಕರಣ ಮಾಡಿ ಸುಗಮ ಸಂಚಾರದತ್ತ ಇಲಾಖೆಗಳು ಹಾಗೂ ಸ್ಥಳೀಯ ಪಂಚಾಯತ್ ಗಮನ ಹರಿಸಿ ಕಾರೆಹಳ್ಳದವರೆಗಿನ ದ್ವಿಪಥದ ರಸ್ತೆಯನ್ನು ದೇವಸ್ಥಾನದವರೆಗೆ ಮಾಡುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ. 

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...