ದಸರಾ ಪ್ರಧಾನ ಕವಿಗೋಷ್ಠಿಗೆ ಸಾಹಿತಿ ಆರ್.ಚೌಡರೆಡ್ಡಿ ಆಯ್ಕೆ

Source: sonews | By Staff Correspondent | Published on 11th October 2018, 11:10 PM | State News |

ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಾಹಿತಿ ಹಾಗೂ ಪತ್ರಕರ್ತ ಆರ್.ಚೌಡರೆಡ್ಡಿ ಮೈಸೂರು ದಸರಾ ಕವಿಗೋಷ್ಠಿಗೆ ಅಯ್ಕೆಯಾಗಿದ್ದಾರೆ.

ಸೆ.15 ರಂದು ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯಲಿರುವ ಪ್ರಧಾನ ಕವಿಗೋಷ್ಠಿಯಲ್ಲಿ ಕಾವ್ಯ ವಾಚನ ಮಾಡಲಿದ್ದಾರೆ.

ಪ್ರೌಢ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಆರ್.ಚೌಡರೆಡ್ಡಿ, ಚಿಲಿಪಿಲಿ, ಗಂಧಗಾಳಿ, ಕುಕಿಲು, ಮಾತು ಮೌನದ ನಡುವೆ (ಕವನ ಸಂಕಲನಗಳು), ಪ್ರತಿಬಿಂಬ, ತೋರಣ (ಕಥಾ ಸಂಕಲನಗಳು) ಕಣಿವೆಯ ಕುಸುಮ, ಬೆಂಕಿಯ ಸಂಗ, ಮೂರು ಮುಖಗಳು ( ಕಾದಂಬರಿಗಳು), ಮಾವಿನ ಮಡಿಲು, ಬೇರು ಬೆವರು, ಸುಗ್ಗಿ ಮತ್ತಿತರ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕತೆ ಮತ್ತು ಕವಿತೆಗಳನ್ನು ಬರೆದಿದ್ದಾರೆ. 
      
ಇವರ ಭಾವಗೀತೆಗಳಿಗೆ ಖ್ಯಾತ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್, ಡಿ.ಆರ್.ರಾಜಪ್ಪ, ಜಿ.ಪ್ರಭಾಕರರೆಡ್ಡಿ,     ಜನ್ನಘಟ್ಟ ಕೃಷ್ಣಮೂರ್ತಿ ಅವರು ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಕತೆ, ಕವನ, ಲೇಖನಗಳು ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಕೆಲವು ಮಕ್ಕಳ ಪದ್ಯಗಳು ಆನೆ ಬಂದಿತ್ತು ಎಂಬ ಹೆಸರಿನ ಧ್ವನಿ ಸುರುಳಿಯಲ್ಲಿ ಸೇರಿವೆ. ಕೆಲವು ಕವನಗಳು ತೆಲುಗು ಭಾಷೆಗೆ ಭಾಷಾಂತರಗೊಂಡಿವೆ
  
ಇವರು ಕನ್ನಡ ಜಾಗೃತಿ ಸಮಿತಿಯ ಸದಸ್ಯನಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪುಸ್ತಕಗಳ ಮೌಲ್ಯಮಾಪಕನಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ಅಖಿಲ ಭಾರತ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಹಲವು ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ.
  
ಇವರು ಸಾಹಿತ್ಯ ಸೇವೆಗಾಗಿ ದೊಡ್ಡಬಳ್ಳಾಪುರದ ಮಾತೃ ಚೌಡೇಶ್ವರಿ ಕಲಾ ಸಂಘದ ವತಿಯಿಂದ ‘ಕನಕದಾಸ ಪ್ರಶಸ್ತಿ’, ಪತ್ರಿಕಾ ಲೇಖನಗಳಿಗಾಗಿ ಬಿ.ವಿ.ನರಸಿಂಹಮೂರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 

Read These Next