ಮಹಿಳಾ ಪೊಲೀಸರಿಗೆ ಹೊಸ ನಿಯಮ: ಸೀರೆ ಉಡುವಂತಿಲ್ಲ, ಹೂ ಮುಡಿಯುವಂತಿಲ್ಲ

Source: S.O. News Service | By MV Bhatkal | Published on 21st October 2018, 7:41 PM | State News |

ಬೆಂಗಳೂರು: ಪೊಲೀಸ್‌ ಇಲಾಖೆಯ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಸೀರೆ ಉಡುವಂತಿಲ್ಲ, ಗಾಜಿನ ಬಳೆ ತೊಡುವಂತಿಲ್ಲ, ಹೂವು ಮುಡಿಯುವಂತಿಲ್ಲ. ಕೇಶರಾಶಿ ಇಳಿಬಿಟ್ಟು ಓಡಾಡುವಂತಿಲ್ಲ...
ಈ ಸಂಬಂಧ ಅ.16ರಂದು ಸುತ್ತೋಲೆ ಹೊರಡಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರು, ಮಹಿಳಾ ಪೊಲೀಸರಿಗಾಗಿ ಕೆಲ ನಿಯಮಗಳನ್ನು ರೂಪಿಸಿದ್ದಾರೆ. ಈ ಬಗ್ಗೆ ಪರ–ವಿರೋಧದ ಚರ್ಚೆ ಇಲಾಖೆಯಲ್ಲಿ ಆರಂಭವಾಗಿದೆ.
ಪೊಲೀಸ್ ಇಲಾಖೆಯ ಎಲ್ಲ ಮಹಿಳಾಅಧಿಕಾರಿ/ಸಿಬ್ಬಂದಿ ಇನ್ನು ಮುಂದೆ ಕರ್ತವ್ಯದ ವೇಳೆ ಸೀರೆ ಬದಲು ಪ್ಯಾಂಟ್–ಶರ್ಟ್ ಸಮವಸ್ತ್ರವನ್ನೇ ಧರಿಸಬೇಕು ಎಂದೂ ಅವರು ಸೂಚಿಸಿದ್ದಾರೆ.
‘ಮಹಿಳಾ ಸಿಬ್ಬಂದಿಯ ಅಭಿಪ್ರಾಯಗಳನ್ನು ಪಡೆದು, ಉನ್ನತ ಮಟ್ಟದ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಪರಾಧ ಸ್ಥಳಕ್ಕೆ ಭೇಟಿ ನೀಡುವ, ಕೈದಿಗಳನ್ನು ಬೆಂಗಾವಲಿನಲ್ಲಿ ಕರೆದೊಯ್ಯುವ, ಬಂದೋಬಸ್ತ್‌ ಕರ್ತವ್ಯ ನಿರ್ವಹಿಸುವ, ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ಸಂದರ್ಭಗಳಲ್ಲಿ ಸಿಬ್ಬಂದಿ ಚುರುಕಿನಿಂದ ಇರಬೇಕಾಗುತ್ತದೆ.
ಸೀರೆಯುಟ್ಟು ಈ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ಯಾಂಟ್–ಶರ್ಟ್ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ’ ಎಂದು ಡಿಜಿಪಿ ಆದೇಶದಲ್ಲಿ ಹೇಳಿದ್ದಾರೆ.
‘ಕರ್ನಾಟಕ ಪೊಲೀಸ್‌ ಕಾಯ್ದೆ ಪ್ರಕಾರ ಪ್ರತಿ ಮಹಿಳಾ ಸಿಬ್ಬಂದಿ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಕಡ್ಡಾಯವಾಗಿ ಪ್ಯಾಂಟ್‌ ಸಮವಸ್ತ್ರವನ್ನೇ ಧರಿಸಬೇಕು. ಆದರೆ, ಕೆಲವರು ತಮ್ಮ ದೇಹಕ್ಕೆ ಸರಿ ಹೊಂದುವುದಿಲ್ಲವೆಂದು ಸೀರೆಯುಡುತ್ತಿದ್ದರು. ಈಗ ಪ್ಯಾಂಟ್–ಶರ್ಟ್ ಬಂದರೆ ದೈಹಿಕ ಸದೃಢತೆ ಬಗ್ಗೆಯೂ ಕಾಳಜಿ ವಹಿಸುತ್ತಾರೆ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
‘ಕೆಳಹಂತದ ಸಿಬ್ಬಂದಿಗೂ ಅಧಿಕಾರಿ ಶ್ರೇಣಿಯ ಸ್ಥಾನಮಾನ ಸಿಗಬೇಕು ಎಂಬ ನಿಟ್ಟಿನಲ್ಲಿ ಇದೊಂದು ಮಹತ್ವದ ನಿರ್ಧಾರ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ‘ದಪ್ಪಗಿರುವ ಮಹಿಳೆಯರು ಪ್ಯಾಂಟ್–ಶರ್ಟ್ ಹಾಕಿಕೊಂಡು ಹೊರಗೆ ತಿರುಗಾಡುವುದು ಹೇಗೆ’ ಎಂದು ಮತ್ತೆ ಕೆಲ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ರಿಯಾಯಿತಿ ಕೊಡಿ: ‘ಮದುವೆ ಬಳಿಕ ಅಥವಾ 40 ವರ್ಷವಾಗುತ್ತಿದ್ದಂತೆಯೇ ಮಹಿಳೆಯರು ದಪ್ಪ ಆಗುತ್ತಾರೆ. ಅವರಿಗೆಲ್ಲ ಸೀರೆಯೇ ಸೂಕ್ತ. ಹೀಗಾಗಿ, 40 ದಾಟಿದ ಮಹಿಳಾ ಸಿಬ್ಬಂದಿಗೆ ರಿಯಾಯಿತಿ ನೀಡಬೇಕು. ಈ ಕುರಿತು ಹಿಂದೆಯೂ ಮೌಖಿಕ ಆದೇಶವಿತ್ತು’ ಎಂದು ಬೆಂಗಳೂರಿನ ಠಾಣೆಯೊಂದರ ಹೆಡ್‌ಕಾನ್‌ಸ್ಟೆಬಲ್ ಹೇಳಿದರು.
ಔಟ್‌ಶರ್ಟ್ ತೊಂದರೆ ಇಲ್ಲ: ‘ಪ‍್ರತಿಭಟನಾಕಾರರನ್ನು ನಿಯಂತ್ರಿಸುವಾಗ ಎಷ್ಟೋ ಸಲ ನಮ್ಮ ಸೀರೆಯೇ ಬಿಚ್ಚಿ ಹೋದಂತಹ ನಿದರ್ಶನಗಳಿವೆ. ಹೀಗಾಗಿ ಪ್ಯಾಂಟ್ ಸೂಕ್ತ. ಕಾನ್‌ಸ್ಟೆಬಲ್‌ಗಳಿಗೆ ಔಟ್‌ಶರ್ಟ್ ಇರುವುದರಿಂದ ಯಾವುದೇ ತೊಂದರೆ ಇಲ್ಲ’ ಎಂದು ಕಾನ್‌ಸ್ಟೆಬಲ್‌ ಒಬ್ಬರು ಹೇಳಿದರು

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...