ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

Source: sonews | By Staff Correspondent | Published on 16th February 2019, 11:05 PM | Coastal News | Don't Miss |

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ಅಜ್ಞಾನದ ಬಗ್ಗೆ ತಿಳಿಯಲು ಸಾಧ್ಯ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಅವರು ಇಲ್ಲಿನ ಸಾಗರ ರಸ್ತೆಯ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವೃಕ್ಷಲಕ್ಷ ಆಂದೋಲನ ಕರ್ನಾಟಕ, ಸೆಂಟರ್ ಫಾರ್ ಪಾಲಿಸಿ ರಿಸರ್ಚ ಕಾರವಾರ, ಶ್ರೀ ಶಿವಶಾಂತಿಕಾ ಸಾವಯವ ಪರಿವಾರ ಮತ್ತಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಲಾಗಿದ್ದ ಕರಾವಳಿ ಅರಣ್ಯ ಪರಿಸ್ಥಿತಿ ಸವಾಲು-ಪರಿಹಾರ ಎನ್ನುವ ರಾಜ್ಯ ಮಟ್ಟದ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮಲ್ಲಿನ ಪರಿವರ್ತನೆಯಿಂದ ಮಾತ್ರ ಪರಿಸರ ಉಳಿವಿನ ಕಾರ್ಯ ಮಾಡಲು ಸಾಧ್ಯ. ಕೇವಲ ಕಾಟಾಚಾರಕ್ಕೆ ಕಾರ್ಯ ಆಗಬಾರದು ಇದರಿಂದ ಪರಿಸರ ಸಂಬಂಧಿತ ಸಮಸ್ಯೆ, ಪರಿಹಾರ ಪಡೆದುಕೊಂಡು ಗುರಿ ಸಾಧಿಸಲು ಸಾಧ್ಯವಿಲ್ಲ. ಸದ್ಯ ಕರಾವಳಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಕಾಮಗಾರಿ ನಡೆಸುವವರು ಉದ್ದೇಶ ಪೂರ್ವಕವಾಗಿಯೋ ಅಥವಾ ಇನ್ಯಾವುದೋ ಕಾರಣದಿಂದ ಅವೈಜ್ಞಾನಿಕ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ನಮ್ಮಲ್ಲಿನ ಖನಿಜ ಸಂಪತ್ತನ್ನು ದೋಚುವ ಉದ್ದೇಶದಿಂದ ಇಲ್ಲಿನ ಮಣ್ಣು, ಕಲ್ಲುಗಳನ್ನು ತೆಗೆದು ಬೇರೆಡೆ ಸಾಗಾಟ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎನ್ನುವುದು ಮೇಲ್ನೋಟಕ್ಕೇ ತಿಳಿದು ಬರುತ್ತದೆ.  ಇಂದು ಮೀನುಗಾರಿಕೆಯಲ್ಲಿಯೂ ಸಹ ಶೇ.30ರಷ್ಟು ಇಳಿಮುಖವಾಗಿದ್ದು. ಲೈಟ್ ಫಿಶ್ಶಿಂಗ್‍ನಿಂದಾಗಿ ಮೀನಿನ ಪರಿಸರಕ್ಕೆ ಧಕ್ಕೆಯಾಗಿದೆ. ಇವೆಲ್ಲದರ ಅಂಶ ಜನರಿಗೆ ತಲುಪಬೇಕಾದರೆ ನಿತ್ಯ ನಿರಂತರ ಇಂತಹ ಪರಿಸರ ಸಂಬಂಧಿ ಕಾರ್ಯಕ್ರಮ ಆಗಬೇಕು. ಇಂದಿನ ಯುವ ಪೀಳಿಗೆಗೆ ಇದರ ಬಗ್ಗೆ ಮಾಹಿತಿ ನೀಡಿ ಕಾಲೇಜು ಮಟ್ಟದಲ್ಲಿ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಹೆದ್ದಾರಿಯಲ್ಲಿ ಪಯಣ ಎಂಬ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೇರ ಪರಿಸರ ಸಂಬಂಧಿತ ಪೂರಕ ಕಾರ್ಯಕ್ರಮ ನಡೆಯಬೇಕು. ಪರಿಸರದ ಮೇಲಿನ ಕಾಳಜಿ ಎಲ್ಲರಲ್ಲಿಯೂ ಜಾಗೃತವಾಗಬೇಕು ಹಾಗೂ ಇದು ನಮ್ಮ ಕರ್ತವ್ಯ ಸಹ ಆಗಿದೆ. ಕಾರ್ಯಾಗಾರದಲ್ಲಿನ ಎರಡು ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ನೀಡಲಿರುವ ವಿಚಾರವನ್ನು ಪಡೆದು ಆ ಮೂಲಕ ಪರಿಸರ ಸಂರಕ್ಷಣೆಯ  ಕಾರ್ಯಕ್ಕೆ ಸಹಕಾರಿಯಾಗಲಿದೆ. ಉತ್ತಮ ಕಾರ್ಯಕ್ಕೆ ಉತ್ತಮ ಬೆಂಬಲ ಸಾರ್ವಜನಿಕರಿಂದ ಸಿಗಬೇಕು ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಪರಿಸರಕ್ಕೆ ನಾಗರಿಕರಾದ ನಾವು ಏನನ್ನು ನೀಡಿದ್ದೇವೆಂಬ ಚಿಂತನೆ ಆಗಬೇಕು. ಪರಿಸರದ ಸುತ್ತಮುತ್ತಲು ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಈ ಪೈಕಿ ಸಿಆರ್‍ಝಢ್, ಅರಣ್ಯ ಸಮಸ್ಯೆ ಬಗ್ಗೆ ಸೂಕ್ತ ಚರ್ಚೆಗಳಾಗಬೇಕು. ಪಶ್ಷಿಮ ಘಟ್ಟದ ನದಿ ಕಣಿವೆಗಳ ಉಳಿವಿಗೆ ಕರಾವಳಿ ರಕ್ಷಣೆ ಅಗತ್ಯ. ಅತೀಯಾದ ವಾಣಿಜ್ಯಕರಣದಿಂದ ಇಲ್ಲಿನ ಜೀವ ವೈವಿಧ್ಯಕ್ಕೂ ಕುತ್ತು ಬಂದಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಅನೇಕ ಸಂಕಷ್ಟ, ಸಮಸ್ಯೆಗಳು ಎದುರಾಗಿದ್ದು ಅದರ ಪರಿಹಾರೋಪಾಯಗಳು ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೌಷಧಿ ಮೂಲಿಕಾ ಪ್ರಾಧಿಕಾರ ತಜ್ಞ ಸದಸ್ಯ ಕೇಶವ ಕೂರ್ಸೆ ಪರಿಸರ ಸಂರಕ್ಷಣೆ ಕುರಿತಾಗಿ ಆಶಯ ಭಾಷಣ ಮಾಡಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ರಾಜಶೇಖರ ಪುರಾಣಿಕ ಹೆದ್ದಾರಿ ಅಗಲೀಕರಣದಲ್ಲಿ ಜನರಿಂದ ಬಂದಂತಹ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ವಿವರಿಸಿದರು. 

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ವನ್ಯ ಜೀವಿ ಮಂಡಳಿಯ ಮಾಜಿ ಸದಸ್ಯ ಬಿ.ಎಚ್.ರಾಘವೇಂದ್ರ, ಡಾ. ಮಂಜು, ಪ್ರೋ. ಕುಮಾರಸ್ವಾಮಿ, ಡಾ. ಮಹಾಬಲೇಶ್ವರ ಹೆಗಡೆ, ವಿಜಯಾ ಹೆಗಡೆ, ವಿಶ್ವೇಶ್ವರ ಭಟ್ಟ, ಡಾ.ಸುಭಾಶ್ ಚಂದ್ರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಾಲಚಂದ್ರ, ವಲಯ ಅರಣ್ಯಾಧಿಕಾರಿ ಶಂಕರ ಗೌಡ ಮುಂತಾದವರು ಉಪಸ್ಥಿತರಿದ್ದರು. 
ಇದಕ್ಕೂ ಪೂರ್ವದಲ್ಲಿ ಶಿರಸಿ ಅರಣ್ಯ ಕಾಲೇಜು ವಿದ್ಯಾರ್ಥಿಗಳಿಗೆ ವಲಯ ಅರಣ್ಯಾಧಿಕಾರಿ ಶಂಕರಗೌಡ ಅವರು ಸಾಗರ ರಸ್ತೆಯ ಸಾಲು ಮರದ ತಿಮ್ಮಕ್ಕ ಉದ್ಯಾನವನದ ವಿವರಣೆ, ವಿಶೇಷತೆ ಕುರಿತಾಗಿ ವಿವರಿಸಿದರು. 

ವೃಕ್ಷ ಲಕ್ಷ ಆಂದೋಲನದ ಪ್ರಮುಖ ಗಣಪತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಸ್ವಾಗತಿಸಿದರು. ಕೃಷಿಕ ಸಮಾಜದ ಜಿಲ್ಲಾ ಸಮಿತಿ ಸದಸ್ಯ ಕೇದಾರ ನಾರಾಯಣ ಕೊಲ್ಲೆ ವಂದಿಸಿದರು.
 ವರದಿ: ರಾಧಾಕೃಷ್ಣ ಭಟ್ಕಳ. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...