2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಹೆಬ್ಬೆಟ್ ರಾಮಕ್ಕ’ ವಿಶೇಷ ಸಾಮಾಜಿಕ ಕಾಳಜಿ ಬೀರುವ ಚಲನಚಿತ್ರ

Source: sonews | By Staff Correspondent | Published on 25th October 2018, 10:58 PM | State News | Don't Miss |

ಬೆಂಗಳೂರು: 2017ರ ಕ್ಯಾಲೆಂಡರ್ ವರ್ಷದ ‘ಶುದ್ಧಿ, ಮಾರ್ಚ್-22 ಹಾಗೂ ಪಡ್ಡಾಯಿ’(ತುಳು) ಚಿತ್ರಗಳನ್ನು ಕ್ರಮವಾಗಿ ಪ್ರಥಮ, ದ್ವೀತಿಯ, ತೃತೀಯ ಅತ್ಯುತ್ತಮ ಚಿತ್ರ ಹಾಗೂ ‘ಹೆಬ್ಬೆಟ್ ರಾಮಕ್ಕ’ ವಿಶೇಷ ಸಾಮಾಜಿಕ ಕಾಳಜಿ ಬೀರುವ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು, ಸದಸ್ಯರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಪ್ರಿಯ ಮನರಂಜನಾ ಚಿತ್ರ-‘ರಾಜಕುಮಾರ’, ಅತ್ಯುತ್ತಮ ಮಕ್ಕಳ ಚಿತ್ರ-‘ಎಳೆಯರು ನಾವು ಗೆಳೆಯರು’, ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ-‘ಅಯನ’ ಹಾಗೂ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ‘ಸೋಫಿಯಾ’ (ಕೊಂಕಣಿ) ಚಿತ್ರ ಆಯ್ಕೆಯಾಗಿದೆ ಎಂದರು.

ಮೊದಲನೆ ಅತ್ಯುತ್ತಮ ಚಿತ್ರ-ಶುದ್ಧಿ ನಿರ್ಮಾಪಕ, ನಿರ್ದೇಶಕರಿಗೆ ತಲಾ 1ಲಕ್ಷ ರೂ.ನಗದು, 50 ಗ್ರಾಂ ಚಿನ್ನದ ಪದಕ, ಎರಡನೆ ಅತ್ಯುತ್ತಮ ಚಿತ್ರ-ಮಾರ್ಚ್ 22 ನಿರ್ಮಾಪಕ ಮತ್ತು ನಿರ್ದೇಶಕರಿಗೆ 75 ಸಾವಿರ ರೂ.ನಗದು 100 ಗ್ರಾಂ ಬೆಳ್ಳಿ ಪದಕ, ಮೂರನೆ ಅತ್ಯುತ್ತಮ ಚಿತ್ರ ಪಡ್ಡಾಯಿ ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ 50ಸಾವಿರ ರೂ.ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಚಲನಚಿತ್ರ ಆಯ್ಕೆ ಸಮಿತಿ ಅಧ್ಯಕ್ಷ ಎನ್.ಎಸ್.ಶಂಕರ್ ತಿಳಿಸಿದರು.

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ-ಹೆಬ್ಬೆಟ್ ರಾಮಕ್ಕ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ 75 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ, ಅತ್ಯಂತ ಜನಪ್ರಿಯ ಮನರಂಜನಾ ಚಿತ್ರ ರಾಜಕುಮಾರ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ತಲಾ 50 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಅವರು ಹೇಳಿದರು.

ಅತ್ಯುತ್ತಮ ಮಕ್ಕಳ ಚಿತ್ರ-‘ಎಳೆಯರು ನಾವು ಗೆಳೆಯರು’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತಲಾ 50 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ, ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ-‘ಅಯನ’ ಹಾಗೂ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ‘ಸೋಫಿಯಾ’ (ಕೊಂಕಣಿ) ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತಲಾ 50 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಶಂಕರ್ ಮಾಹಿತಿ ನೀಡಿದರು.

ಅತ್ಯುತ್ತಮ ನಟ-ವಿಶೃತ್ ನಾಯರ್ (ಚಿತ್ರ: ಮಂಜರಿ) ಹಾಗೂ ಅತ್ಯುತ್ತಮ ನಟಿ-ತಾರಾ ಅನುರಾಧ(ಹೆಬ್ಬೆಟ್ ರಾಮಕ್ಕ), ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ(ಲಕ್ಷ್ಮಿ ನಾರಾಯಣರ ಪ್ರಪಂಚಾನೆ ಬೇರೆ), ಅತ್ಯುತ್ತಮ ಪೋಷಕ ನಟಿ-ರೇಖಾ(ಮೂಕ ನಾಯಕ) ತಲಾ 20 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಅವರು ಹೇಳಿದರು.

ಅತ್ಯುತ್ತಮ ಕಥೆ-ಹನುಮಂತ ಹಾಲಿಗೇರಿ(ಕೆಂಗುಲಾಬಿ), ಅಮರೇಶ ನುಗಡೋಣಿ (ನೀರು ತಂದವರು) ತಲಾ 10 ಸಾವಿರ ರೂ.ನಗದು, 50 ಗ್ರಾಂ ಬೆಳ್ಳಿ ಪದಕ, ಅತ್ಯುತ್ತಮ ಚಿತ್ರಕಥೆ-ವೆಂಕಟ್ ಭಾರದ್ವಾಜ್(ಕೆಂಪಿರ್ವೆ), ಅತ್ಯುತ್ತಮ ಸಂಭಾಷಣೆ- ಪ್ರೊ.ಎಸ್.ಜಿ.ಸಿದ್ದರಾಮಯ್ಯ(ಹೆಬ್ಬೆಟ್ ರಾಮಕ್ಕ), ಅತ್ಯುತ್ತಮ ಛಾಯಾಗ್ರಹಣ- ಸಂತೋಷ್ ರೈ ಪಾತಾಜೆ, ಅತ್ಯುತ್ತಮ ಸಂಗೀತ ನಿರ್ದೇಶನ-ಹರಿಕೃಷ್ಣ (ರಾಜಕುಮಾರ), ಅತ್ಯುತ್ತಮ ಸಂಕಲನ-ಹರೀಶ್ ಕೊಮ್ಮೆ(ಮಫ್ತಿ), ಅತ್ಯುತ್ತಮ ಬಾಲನಟ-ಮಾಸ್ಟರ್ ಕಾರ್ತಿಕ್(ರಾಮರಾಜ್ಯ), ಅತ್ಯುತ್ತಮ ಬಾಲನಟಿ-ಶ್ಲಘ ಸಾಲಿಗ್ರಾಮ(ಕಟಕ) ಎಂದು ಶಂಕರ್ ವಿವರಿಸಿದರು.

ಅತ್ಯುತ್ತಮ ಕಲಾ ನಿರ್ದೇಶನ-ಎಸ್.ಎ.ರವಿ(ಹೆಬ್ಬುಲಿ), ಅತ್ಯುತ್ತಮ ಗೀತರಚನೆ- ಜೆ.ಎಂ. ಪ್ರಹ್ಲಾದ್(ಮುತ್ತುರತ್ನದ ಪ್ಯಾಟೆ), ಅತ್ಯುತ್ತಮ ಹಿನ್ನಲೆ ಗಾಯಕ-ತೇಜಸ್ವಿ ಹರಿದಾಸ್(ವಲಸೆ ಬಂದವರೆ), ಅತ್ಯುತ್ತಮ ಹಿನ್ನಲೆ ಗಾಯಕಿ-ಅಪೂರ್ವ ಶ್ರೀಧರ್ (ಅಸಾದುಲ್ಲಾ ದಾಟಿಬಿಟ್ಟ), ಅತ್ಯುತ್ತಮ ನಿರ್ಮಾಣ ನಿರ್ವಾಹಕ-ಸುರೇಶ್ ಕೆ.(ಹೆಬ್ಬುಲಿ) ತಲಾ 20 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ. ತೀರ್ಪುಗಾರರ ವಿಶೇಷ ಪ್ರಶಸ್ತಿ-ಶ್ರೀದರ್ಶನ್(ಮಹಕಾವ್ಯ ಮಿತ್ರ), ಮಿತ್ರ-ಚಿತ್ರ: ರಾಗ ತಲಾ 10 ಸಾವಿರ ರೂ.ನಗದು, 50 ಗ್ರಾಂ ಬೆಳ್ಳಿ ಪದಕ ಎಂದು ಅವರು ಹೇಳಿದರು.

ಸಾಹಿತ್ಯ ವಾರ್ಷಿಕ ಪ್ರಶಸ್ತಿ: ಗಂಗಾಧರ್ ಮೊದಲಿಯಾರ್ ಬರೆದಿರುವ ‘ಸಿನಿಮಾ ಸಮಯ’ ಪುಸ್ತಕವನ್ನು 2017ನೆ ಕ್ಯಾಲೆಂಡರ್ ವರ್ಷದ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಲೇಖಕರಿಗೆ ಹಾಗೂ ಈ ಪುಸ್ತಕದ ಪ್ರಕಾಶರಾಗಿರುವ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಪ್ರಕಾಶಕರಿಗೆ ತಲಾ 20 ಸಾವಿರ ರೂ.ನಗದು ಬಹುಮಾನ, 50 ಗ್ರಾಂ ಬೆಳ್ಳಿ ಪದಕ ನೀಡಲು ನಿರ್ಧರಿಸಲಾಗಿದೆ ಎಂದು ಶಂಕರ್ ತಿಳಿಸಿದರು.

ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ಮಾಣ ನಿರ್ವಾಹಕ ಪ್ರಶಸ್ತಿಯನ್ನು ಆರಂಭಿಸಬೇಕು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಸೇರಿದಂತೆ ಇನ್ನಿತರ ಪ್ರಶಸ್ತಿಗಳ ಆಯ್ಕೆಗಾಗಿ ಪ್ರತ್ಯೇಕ ಆಯ್ಕೆ ಸಮಿತಿ ಇರುತ್ತದೆ. ನಿರ್ಮಾಣ ನಿರ್ವಾಹಕ ಪ್ರಶಸ್ತಿಯನ್ನು ಅದೇ ಸಮಿತಿಯವರು ಆಯ್ಕೆ ಮಾಡಬೇಕು. ಅಲ್ಲದೆ, ಫಿಲಂಫೇರ್ ಸೇರಿದಂತೆ ಇನ್ನಿತರ ಪ್ರಶಸ್ತಿಗಳಲ್ಲಿ ಇರುವಂತೆ ನವ ಹಾಗೂ ನಟಿ ಪ್ರಶಸ್ತಿಗಳನ್ನು ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಆರಂಭಿಸಬೇಕು ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ.

-ಎನ್.ಎಸ್.ಶಂಕರ್, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...