ನಮ್ಮಲ್ಲಿನ ಅಸಮತೆಯ ನಡುವೆಯೂ ಸಮಾಜ ಕಟ್ಟುವ ಕಾರ್ಯದಲ್ಲಿ ಒಂದಾಗಬೇಕು- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

Source: sonews | By Staff Correspondent | Published on 24th August 2019, 5:31 PM | Coastal News | Don't Miss |

ಕಾರವಾರ; ಎಲ್ಲ ಕಾಲದಲ್ಲೂ ಅಸಮಾನತೆ ಇದ್ದೇ ಇದೆ. ಐದು ಬೆರಳುಗಳು ಒಂದಕ್ಕೊಂದು ಸಮವಿಲ್ಲದಿದ್ದರೂ ಕೆಲಸ ಮಾಡುವಾಗ ಒಂದಾಗಿ ಕೆಲಸ ಮಾಡುತ್ತವೆ. ಹಾಗೆಯೇ ನಮ್ಮ ನಡುವೆ ಏನೇ ಅಸಮಾನತೆಗಳಿದ್ದರೂ ಸಮಾಜಕಟ್ಟುವ ಕಾರ್ಯದಲ್ಲಿ ಒಂದಾಗಬೇಕು. ಆಗ ಮಾತ್ರ ಸಮಾಜ ಒಳ್ಳೆಯ ಫಲವನ್ನು ಊಟ ಮಾಡಲು ಸಾಧ್ಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಅವರು ಶನಿವಾರ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ `ಮತ್ತೆ ಕಲ್ಯಾಣ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಮಾತನಾಡಿದರು.

12 ನೆಯ ಶತಮಾನದಲ್ಲಿ ಬಸವಣ್ಣ ಕಾಯಕ ಜೀವಿಗಳನ್ನು, ಶ್ರಮ ಜೀವಿಗಳನ್ನು, ತುಳಿತಕ್ಕೊಳಗಾದ, ಅವಮಾನಕ್ಕೊಳಗಾದ ಜನರೆಲ್ಲರನ್ನೂ ಸಂಘಟಿಸಿದರು. ಅದೇ ಅನುಭವ ಮಂಟಪವಾಯಿತು. ಅಲ್ಲಿ ಸಾಮಾನ್ಯರೂ ಅಸಾಮಾನ್ಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಜಾತಿ, ಮತ, ಲಿಂಗ ಮುಂತಾದ ಅಸಮಾನತೆಯ ನಿವಾರಣೆಯ ಬಗ್ಗೆ ಅರಿವು ಮೂಡಿಸುವುದೇ ಮತ್ತೆ ಕಲ್ಯಾಣ. ಸಮಾಜವನ್ನು ತಿದ್ದುವುದಕ್ಕಿಂತ; ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ವ್ಯಕ್ತಿ ಸರಿಯಾದರೆ ದೇಶ, ಜಗತ್ತು ಸರಿಹೋಗುವುದು. ಜಗತ್ತು ಸರಿಯಿಲ್ಲ, ನನ್ನೊಬ್ಬನಿಂದ ಏನಾಗುತ್ತದೆ ಎಂದು ಕೈಕಟ್ಟಿ ಕೂರಬೇಕಿಲ್ಲ. ಒಂದರಿಂದಲೇ ಅನೇಕ ಎನ್ನುವುದನ್ನು ಮರೆಯಬಾರದು. ಬಸವಣ್ಣ ಏಕಾಂಗಿಯಾಗಿ ತನ್ನ ಮನೆಯಿಂದಲೇ ಹೋರಾಟ ಪ್ರಾರಂಭಿಸಿದರು. ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ಜನಿವಾರ ಕಿತ್ತೆಸೆದು ಹೊರನಡೆದರು. ಅವರ ಆ ಪ್ರತಿಭಟನಾ ಶಕ್ತಿಯೇ ಮುಂದೆ ಅವರನ್ನು ಮಹತ್ಮರನ್ನಾಗಿಸಿತು. ಜಗಜ್ಯೋತಿಯನ್ನಾಗಿಸಿತು. ನಕಾರಾತ್ಮಕ ಚಿಂತನೆಗಿಂತ ಸಕಾರಾತ್ಮಕ ಚಿಂತನೆ ಅಗತ್ಯ. ಕ್ರೌರ್ಯಕ್ಕೆ ಬದಲಾಗಿ ಕರುಣೆ ತೋರಬೇಕು. ಆಗ ಸಂಘರ್ಷಗಳು ತಪ್ಪಿ ಅಸಮಾನತೆಗಳ ನಾಶವಾಗುವವು. ಆತ್ಮವಿಶ್ವಾಸ, ನಂಬಿಕೆ ಬಹಳ ಮುಖ್ಯ. ನಂಬಿ ಕರೆದರೆ ಶಿವ ಖಂಡಿತ ಓ ಎನ್ನುವನು. ನಂಬಿಕೆ ಇರಬೇಕೇ ಹೊರತು ಮೂಢನಂಬಿಕೆ ಅಲ್ಲ. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದರು.  

ಅನುಭವ ಮಂಟಪಕುರಿತಂತೆ  ಮಾತನಾಡಿದ ಬಸವರಾಜ ಹೊರಟ್ಟಿ  ಸರಕಾರ ಮಾಡುವ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿದ್ದಾರೆ. ಇಂದು ನಮ್ಮ ನಡುವೆ ಸ್ವಾರ್ಥ ಸ್ವಾಮಿಜಿಗಳೇ ಹೆಚ್ಚು. ವಿಧಾನ ಸಭೆಯಲ್ಲಿರುವುದಕ್ಕಿಂತ ಹೆಚ್ಚಿನ ರಾಜಕಾರಣ ಸ್ವಾಮಿಗಳಲ್ಲಿದೆ. ಕಾರವಾರ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮೊದಲು ಕಡಿಮೆ ಇತ್ತು. ಜಾತ್ಯತೀತ ನಿಲುವಿಗೆ ಕಾರವಾರ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪುನಃಶ್ಚೇತನ ಕಾರ್ಯಕ್ರಮಗಳು ಇರುವಂತೆ `ಮತ್ತೆ ಕಲ್ಯಾಣಅಭಿಯಾನ ಜನಮಾನಸದಲ್ಲಿ ನೆಲೆಯೂರಿದ್ದ ಅನುಭವ ಮಂಟಪವನ್ನು ಮತ್ತೆ ನೆನಪಿಸುತ್ತಿದ್ದಾರೆ. 12 ನೆಯ ಶತಮಾನದಲ್ಲಿ ನಡೆದ `ಅನುಭವ ಮಂಟಪದಲ್ಲಿ ನಡೆದ ವಿಚಾರ ಕ್ರಾಂತಿ ಜಗತ್ತಿಯೇ ಮಾದರಿಯಾದುದು. ಅನುಭವ ಮಂಟಪದ ಮುಖ್ಯ ಉದ್ದೇಶ ಸಮಸಮಾಜ ನಿರ್ಮಾಣ. ಜಗತ್ತಿಗೇ ಮೊಟ್ಟಮೊದಲು ಪ್ರಜಾಪ್ರಭುತ್ವವನ್ನು ಕೊಟ್ಟದ್ದು ಅನುಭವ ಮಂಟಪ. ಈಗ ಕೇಳಿದಂತೆ ಒಮ್ಮೆ ಮಕ್ಕಳು ನನ್ನನ್ನೂ ಪ್ರಶ್ನಿಸಿದ್ದರು. ಮೀಸಲಾತಿಯಲ್ಲಿರುವ ಜನರಿಗೆ ಸಹಾಯ ದೊರೆಯುತ್ತದೆ. ಆದರೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಯಾರು ಸಹಾಯ ಮಾಡುವರು? ನಾವು ಮುಂದುವರಿದ ಜಾತಿಯಲ್ಲಿ ಹುಟ್ಟಿದ್ದೇ ತಪ್ಪೇನು? ನಮ್ಮ ಜಾತಿಯನ್ನು ಬಿಟ್ಟು ನಾವು ಮುಸ್ಲಿಂ, ಕ್ರಿಶ್ಚಿಯನ್ ಆಗಬೇಕೇನು? ನಾವು ಶೇ. 94 ರಷ್ಟು ಅಂಕ ಪಡೆದರೂ ನಮಗೆ ಸೀಟುಗಳು ಸಿಗುವುದಿಲ್ಲ. ಅದೇ ಮೀಸಲಾತಿಯಲ್ಲಿ ಶೇ. 70ರಷ್ಟು ಅಂಕಗಳು ಬಂದರೂ ಅವರಿಗೆ ಸೀಟು ಸಿಗುವುದು. ಇದು ಅನ್ಯಾಯವಲ್ಲವೇಸಾಮಾನ್ಯರಿಗೂ ನ್ಯಾಯ ದೊರಕುವಂತಾಗಲು ನೀವು ಶಾಸಕರಾಗಿ ಏನು ಮಾಡುವಿರಿ? ಎಂದು. ನನಗೂ ಆ ಮಕ್ಕಳು ಕೇಳುವ ಪ್ರಶ್ನೆ ಸರಿಯಿದೆ ಎನ್ನಿಸಿತು. ಅಂಥ ಮಕ್ಕಳಿಗೆ ಒಳ್ಳೆಯದಾಗಲಿ ಎನ್ನುವ ದೃಷ್ಟಿಯಿಂದ ಹೋರಾಟದ ಮುಂಚೂಣಿ ವಹಿಸಿದ್ದೆ. ಮಕ್ಕಳಿಗಾಗುವ ಇಂಥ ಅನ್ಯಾಯವನ್ನು ಸರಿಪಡಿಸಲಾಗದ ಸ್ಥಿತಿಗೆ ನಾವು ಇಂದು ಬಂದಿದ್ದೇವೆ. ಇಂಥ ಅನ್ಯಾಯಗಳನ್ನು ಬಹಳ ದಿನಗಳ ಕಾಲ ತೆಡೆಯಲು ಸಾಧ್ಯವಿಲ್ಲ. ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಸದುದ್ದೇಶ ಇಂದು ತನ್ನ ಆಶಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಹಳ್ಳಿಯಲ್ಲಿ ಹುಟ್ಟಿರುವವರಿಗೆ ಅಂಬೇಡ್ಕರ್ ಮೂಲ ತತ್ವದ ಆಶಯ ಈಡೇರುತ್ತಿಲ್ಲ. ಖ್ಯಾತ ಶಿಕ್ಷಣ ತಜ್ಞ ರಾಧಾಕೃಷ್ಣ 12 ನೆಯ ಶತಮಾನದ ಅನುಭವ ಮಂಟಪವೆ ಮೊದಲ ಸಂಸತ್ತು ಎಂದರು. ಇದೇ ಮಾತನ್ನು ಇಂದು ಬ್ರಿಟೀಷ್ ಪಾರ್ಲಿಮೆಂಟ್ ಸ್ಪೀಕರ್ ಕೂಡ ಹೇಳಿದರು. ಈ ಕಾರಣಕ್ಕೇ ಇಂಗ್ಲೆಂಡಿನಲ್ಲಿ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸಲು ಅವರು ಒಪ್ಪಿರುವುದು.  ಅನುಭವ ಮಂಟಪದಲ್ಲಿ ಶ್ರಮಜೀವಿಗಳ ಬಗ್ಗೆ ಗೌರವ, ಕಾಯಕ ಶ್ರದ್ಧೆ, ಸಮಾನತೆ ಇತ್ತು. ಅಲ್ಲಿ ಪ್ರಧಾನ ಮಂತ್ರಿ ಬಸವಣ್ಣನವರೂ ಇದ್ದರು. ನಾನೂ ಶಾಸಕನಾಗಿ, ಮಂತ್ರಿಯಾಗಿ, ಸಭಾ ಪತಿಯಾಗಿ ಕೆಲಸ ಮಾಡಿದ್ದೇನೆ. ಆದರೆ ಆ ಅನುಭವ ಮಂಟಪದ ಶಿಸ್ತು, ಸಂಯಮ, ಸೌಹಾರ್ಧತೆ, ದೂರಾಲೋಚನೆ, ಸಕಲಜೀವಾತ್ಮರಿಗೂ ಲೇಸಾಗಬೇಕೆಂಬ ಹಂಬಲ, ಸಮಾಜದ ಹಿತದೃಷ್ಟಿಯಿಂದ ಅರ್ಥಪೂರ್ಣ ಚರ್ಚೆಗಳು ನಡೆಯುತ್ತಿಲ್ಲ. ಈಗ ನಮ್ಮ ರಾಜ್ಯದಲ್ಲಿ ಯಾವ ರೀತಿಯ ಚುನಾವಣೆಗಳು ನಡೆಯುತ್ತಿವೆ. ಯಾವ ರೀತಿ ಕಲಾಪಗಳು ನಡೆಯುತ್ತಿವೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದಕ್ಕೆ ಮತದಾರರೂ ಕಾರಣ. ಮೂರೂ ಪಕ್ಷಗಳಿಂದ ಹಣ ತೆಗೆದುಕೊಂಡು ಒಬ್ಬರಿಗೆ ಮತ ಹಾಕಿ, ಇಬ್ಬರಿಗೆ ಟೋಪಿ ಹಾಕುವರುಹೀಗಾಗಿಯೇ ಜನಪ್ರತಿನಿಧಿಗಳೂ ಹೊಣೆಗೇಡಿಗಳಾಗಿ ವರ್ತಿಸುತ್ತಿದ್ದಾರೆ. ಜಾತಿಯನ್ನು ಬಿಟ್ಟು ಮಾತೇ ಇಲ್ಲ ಎನ್ನುವಂತಾಗಿದೆ. ಬಸವಣ್ಣ ಸರಕಾರಿ ಕೆಲಸಕ್ಕೆ ಸರಕಾರಿ ದೀಪ, ವೈಯುಕ್ತಿಕ ಕೆಲಸಕ್ಕೆ ವೈಯುಕ್ತಿಕ ದೀಪ ಬಳಸುತ್ತಿದ್ದರು. ಇಂದಿನ ರಾಜಕಾರಣದಲ್ಲಿ ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬವಣ್ಣ ಪ್ರತಿಯೊಬ್ಬರೂ ದುಡಿದು ತಿನ್ನಿಬೇಕೆಂಬ ಕಾಯಕ ಸಿದ್ಧಾಂತವನ್ನು ಜಾರಿಗೆ ತಂದರು. ಆದರೆ ಇಂದಿನ ಸರಕಾರಗಳು ಅನೇಕ ಭಾಗ್ಯಗಳನ್ನು ಕೊಡುವ ಮೂಲಕ ಸೋಮಾರಿಗಳನ್ನಾಗಿ ಮಾಡುತ್ತಿದೆ. ಅನುಭವ ಮಂಟಪದಲ್ಲಿ 770 ಜನ ಅಮರಗಣಂಗಳು ಇಂದಿನ ಸಂಸತ್ ಸದಸ್ಯರಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದರು.

ವಚನಕಾರ್ತಿಯರ ಸಾಮಾಜಿಕ ನಿಲವು ಕುರಿತಂತೆ ಹೇಮಪಟ್ಟಣಶೆಟ್ಟಿ  ಮಾತನಾಡಿ ರಾಷ್ಟ್ರಪಿತ ಮಹತ್ಮ ಗಾಂಧೀಜಿಯವರೂ ಸಮ ಸಮಾಜದ ಕನಸಿಗೆ ಬಸವಣ್ಣನವರ ಆಲೋಚನೆಯೊಂದೇ ದಾರಿ ಎಂದಿದ್ದರು. ಬಸವಣ್ಣನವರ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ದಿಎನ್ನುವ ವಚನದ ಪ್ರತಿ ಶಬ್ದವೂ ಇಂದಿನ ನಮ್ಮ ಸಂವಿಧಾನದ ಪರಿಚ್ಛೇದಗಳಿಲ್ಲಿವೆ. ಅನುಭವ ಮಂಟಪದಲ್ಲಿ 33 ಜನ ತಳವರ್ಗದ ವಚನಕಾರ್ತಿಯರು ಇದ್ದರು ಎನ್ನುವುದು ಶರಣರು ಮಹಿಳೆಯರಿಗೆ ಎಷ್ಟರಮಟ್ಟಿಗೆ ಗೌರವ ನೀಡುತ್ತಿದ್ದರು ಎನ್ನುವುದನ್ನು ತಿಳಿಸುತ್ತದೆ. ಕುಟುಂಬಕ್ಕೆ ಸೀಮಿತವಾಗಿದ್ದ ಸ್ತ್ರೀ ವೃತ್ತಿಪರತೆಯನ್ನು ತಂದುಕೊಟ್ಟದ್ದು ಶರಣರು. ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕವಾಗಿ ಅಕ್ಕ ಮಹಾದೇವಿ ನಮಗೆ ಕಾಣುತ್ತಾಳೆ. ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ, ಕಾಳವ್ವೆ ಮುಂತಾದವರೆಲ್ಲರೂ ಪ್ರಾತಃಸ್ಮರಣೀಯರೇ.  ಹೆಣ್ಣಿನ ಭಾವ ಭಿತ್ತಿಯನ್ನು ಹೆಣ್ಣೇ ಅಭಿವ್ಯಕ್ತಿಗೊಳಿಸಿದವರು ವಚನಕಾರ್ತಿಯರು. ಹೆಣ್ಣು ದುರ್ಬಲೆ ಮತ್ತು ಪರಾಧೀನತೆಯನ್ನು, ಸ್ತ್ರೀಗೆ ಅಂಟಿಕೊಂಡ ಸೂತಕಗಳನ್ನು ತಿರಸ್ಕರಿಸಿದರು. `ಮೊಲೆ ಮುಡಿ ಬಂದಡೆ ಗಂಡೆಂಬರು ನುಡುವೆ ಸುಳಿವಾತ್ಮ ಹೆಣ್ಣೊ ಗಂಡೋ ಎಂದು ಪ್ರಶ್ನಿಸುವರು. ನಿನ್ನ ಮಾಯೆಗೆ ನಾನು ಅಂಜುವವಳಲ್ಲ ಎನ್ನುವ ಮೂಲಕ ಹೆಣ್ಣಿಗೆ ಗಂಡೂ ಮಾಯೆ ಎಂದರು. `ಗಂಡು ಮೋಹಿಸಿ ಹೆಣ್ಣ ಹಿಡಿದರೆ ಅದು ಒಬ್ಬರ ಒಡವೆ, ಆದರೆ ಹೆಣ್ಣು ಮೋಹಿಸಿ ಗಂಡ ಹಿಡಿದರೆ?’ ಎನ್ನುವ ಮೂಲಕ ಪುರಷರಂತೆ ಸ್ತ್ರೀಯರಿಗೂ ಗುಣಗಳಿರಬೇಕೆಂದರು. ಮೊಳಿಗೆ ಮಾರಯ್ಯನ ಹೆಂಡತಿ ಮಹದೇವಮ್ಮ ತನ್ನ ಪತಿಗೆ ಆಧ್ಯಾತ್ಮಿಕ ಗುರುವೇ ಆಗಿದ್ದಳು. ಪರಧನ, ಪರಸ್ತ್ರೀ, ಪರದೈವಂಗಳಿಗೆ ಎರಗದಿಪ್ಪುದೇ ನೇಮ ಎಂದು ಸತ್ಯಕ್ಕ ಹೇಳುವಳು. ಢಾಂಬಿಕತೆಯನ್ನು ನೇರವಾಗಿ ಖಂಡಿಸುವರು. ಭಿನ್ನ ಅಭಿಪ್ರಾಯಗಳನ್ನು ಅಂಜದೆ ಮಂಡಿಸಿದಳು. ಸತ್ಯಕ್ಕನ ಸ್ವಾಭಿಮಾನದ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಸ್ವಾತಂತ್ರ ನೀಡಿದ್ದು ಅನುಭವ ಮಂಟಪ. ಅದು ಪ್ರಜಾಪ್ರಭುತ್ವದ ನೆಲೆಯೇ ಆಗಿತ್ತು. ಸಂಸಾರ ಹಾಗೂ ವೈರಾಗ್ಯದ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿ ಹಡಿದಳು ಅಕ್ಕ. ಪುರುಷರಂತೆ ಕಾಯಕ-ದಾಸೋಹ ಸಿದ್ಧಾಂತವನ್ನು ಜೀವನಾಡಿಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ಒಡೆಯರ ಇಚ್ಛೆಯಂತೆ ಕಾಯಕ ಮಾಡದೆ; ತನ್ನಿಚ್ಚೆಯ ಕಾಯಕವನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ತನ್ನ ಬದುಕನ್ನು ನಾನೇ ಕಂಡುಕೊಳ್ಳಬೇಕು ಎನ್ನುವ ಸಂದೇಶ ನೀಡಿದರು ಎಂದರು.    

ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ `ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ವೇದಿಕೆಯ ಮೇಲೆ ಡಾ ರಾಮಕೃಷ್ಣ ಗುಂದಿ, ವಿಜಯಾ ಡಿ ನಾಯ್ಕ, ಸುಮಂಗಲಾ ಅಂಗಡಿ ಮುಂತಾದವರಿದ್ದರು.

ಬೆಳಗ್ಗೆ 10 ಗಂಟೆಗೆ ಸರಕಾರಿ ಪಿ ಯು ಕಾಲೇಜಿನಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ಸಹಮತ ವೇದಿಕೆಯ ಸಂಚಾಲಕ ನಾಗರಾಜ ಹರಪನಹಳ್ಳಿ ಆಶಯ ನುಡಿಗಳನ್ನು ಆಡಿದರು. ಮುಂದುವರಿದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಜಿಲ್ಲಾ ರಂಗಮಂದಿರಕ್ಕೆ ಬಂದು ತಲುಪಿದರು.

   

Read These Next

ಆರ್ಯ ವೈಶ್ಯ ಜನಾಂಗದವರಿಗೆ “ನಮೂನೆ-ಜಿ” ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಭ್ಯ

ಕಾರವಾರ: ಕರ್ನಾಟಕ ರಾಜ್ಯ ಸರಕಾರವು ಡಿಸೆಂಬರ್ 16 ರಂದು, ಇನ್ನು ಮುಂದೆ ಆರ್ಯ ವೈಶ್ಯ ಜನಾಂಗದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ...

ಶಾಹೀನ್ ಬಾಗ್ ಪ್ರತಿಭಟನಾಕಾರರ ಕುರಿತಂತೆ ಬಿಜೆಪಿ ಸಂಸದನಿಂದ ಅವಹೇಳನಕಾರಿ ಹೇಳಿಕೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಹೀನ್ ಬಾಗ್ ಪ್ರದೇಶದಲ್ಲಿ ಕಳೆದ ಹಲವಾರು ...